ಚಾಂಪಿಯನ್ಸ್ ಟ್ರೋಫಿ: ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವೇ ಇಲ್ಲ; ಪಿಸಿಬಿಗೆ ಬಿಸಿಸಿಐ ಮತ್ತೊಮ್ಮೆ ಸ್ಪಷ್ಟನೆ
ICC Champions trophy 2025: ಭಾರತ ತಂಡದ ಆಟಗಾರರ ಸುರಕ್ಷತೆ ಬಿಸಿಸಿಐಗೆ ತುಂಬಾ ಮುಖ್ಯ. ಹೀಗಾಗಿ ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಸದ್ಯ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿ ಹೊರಬರಬೇಕಿದೆ.
ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗೆ ಇಂದು (ಡಿಸೆಂಬರ್ 17) ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಸದ್ಯ ಟೂರ್ನಿ ಆಯೋಜನೆ ಹಾಗೂ ಹೈಬ್ರಿಡ್ ಮಾದರಿ ಬಗ್ಗೆ ಅಂತಿಮ ನಿರ್ಧಾರ ಹೊರಬಂದಿಲ್ಲ. ಭದ್ರತಾ ಕಾರಣಗಳಿಂದಾಗಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಈಗಾಗಲೇ ತನ್ನ ನಿಲುವನ್ನು ಐಸಿಸಿಗೆ ಸ್ಪಷ್ಟಪಡಿಸಿದೆ. ದಿನಕಳೆದಂತೆ, ಚಾಂಪಿಯನ್ಸ್ ಲೀಗ್ ಭವಿಷ್ಯವು ಮಂಕಾಗುತ್ತಿದ್ದು, ಪಾಕಿಸ್ತಾನದಿಂದ ಆತಿಥ್ಯ ಹಕ್ಕು ದೂರವಾದರೂ ಅಚ್ಚರಿಯಿಲ್ಲ. ಈವರೆಗಿನ ವರದಿಗಳ ಪ್ರಕಾರ, ಭಾರತದ ಪಂದ್ಯಗಳನ್ನು ದುಬೈನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಅದುವೇ ಹೈಬ್ರಿಡ್ ಮಾದರಿ. ಆದರೆ ಆತಿಥ್ಯ ಹಕ್ಕು ಪಾಕಿಸ್ತಾನದ ಬಳಿಯೇ ಇದೆಯೋ ಇಲ್ಲವೋ ಎಂಬ ಬಗ್ಗೆ ಐಸಿಸಿ ಇನ್ನೂ ಖಚಿತಪಡಿಸಿಲ್ಲ.
ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸುವ ನಿರೀಕ್ಷೆಯಿತ್ತು. ಆದರೆ ಅದು ಇನ್ನೂ ಹೊರಬಂದಿಲ್ಲ. ಇದೀಗ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಚಾಂಪಿಯನ್ಸ್ ಟ್ರೋಫಿ ಕುರಿತಂತೆ ಭಾರತದ ನಿಲುವನ್ನು ಮತ್ತಷ್ಟು ದೃಢಪಡಿಸಿದ್ದಾರೆ.
ಸುದ್ದಿಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ ಅವರು, “ಬಿಸಿಸಿಐ ಹೈಬ್ರಿಡ್ ಮಾದರಿಗೆ ಆದ್ಯತೆ ನೀಡುತ್ತದೆ. ಆದರೆ ಐಸಿಸಿ ಅಧ್ಯಕ್ಷರು ಈಗಾಗಲೇ ಅದನ್ನು ನೋಡಿಕೊಳ್ಳುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸುತ್ತಿರುವುದರಿಂದ, ಉಭಯ ರಾಷ್ಟ್ರಗಳು ಯಾವುದೇ ವಿರೋಧವಿಲ್ಲದೆ ಕಹಿಯಿಲ್ಲದೆ ಅದನ್ನು ಒಪ್ಪಿಕೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಸೌಹಾರ್ದಯುತ ಪರಿಹಾರ ಕಾಣುವ ನಿರೀಕ್ಷೆ ಇದೆ ಎಂದಿದ್ದಾರೆ.
ಭಾರತೀಯ ಕ್ರಿಕೆಟಿಗರ ಸುರಕ್ಷತೆ ಮುಖ್ಯ
“ನಮ್ಮ ಆಟಗಾರರ ಸುರಕ್ಷತೆ ನಮಗೆ ಮುಖ್ಯ. ಹೀಗಾಗಿ ನಾವು ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ” ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
2026 ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸದಿರಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಐಸಿಸಿ ಅವಕಾಶ ನೀಡಿದೆ ಎಂದು ವರದಿಯಾಗಿದೆ. ಇದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಭಾರತ ಮತ್ತು ಶ್ರೀಲಂಕಾ ಈ ಟೂರ್ನಿಗೆ ಜಂಟಿ ಆತಿಥ್ಯ ವಹಿಸುತ್ತಿದೆ. 2008ರ ಏಷ್ಯಾಕಪ್‌ನಲ್ಲಿ ಭಾಗವಹಿಸಲು ಭಾರತ ಕೊನೆಯದಾಗಿ ಪಾಕಿಸ್ತಾನಕ್ಕೆ ತೆರಳಿತ್ತು. ಆ ನಂತರ ಅಲ್ಲಿಗೆ ಹೋಗಿಲ್ಲ. ಆದರೆ ಪಾಕಿಸ್ತಾನವು ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ಬಂದಿತ್ತು.