ಮಂಗಳೂರು ಶೈಲಿಯ ತೊಂಡೆಕಾಯಿ-ಕಡಲೆಕಾಳು ಸುಕ್ಕ ಮಾಡುವುದು ತುಂಬಾ ಸಿಂಪಲ್: ಅನ್ನದ ಜತೆ ತಿನ್ನಲು ರುಚಿಕರವಾಗಿರುತ್ತೆ ಈ ಖಾದ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  ಮಂಗಳೂರು ಶೈಲಿಯ ತೊಂಡೆಕಾಯಿ-ಕಡಲೆಕಾಳು ಸುಕ್ಕ ಮಾಡುವುದು ತುಂಬಾ ಸಿಂಪಲ್: ಅನ್ನದ ಜತೆ ತಿನ್ನಲು ರುಚಿಕರವಾಗಿರುತ್ತೆ ಈ ಖಾದ್ಯ

ಮಂಗಳೂರು ಶೈಲಿಯ ತೊಂಡೆಕಾಯಿ-ಕಡಲೆಕಾಳು ಸುಕ್ಕ ಮಾಡುವುದು ತುಂಬಾ ಸಿಂಪಲ್: ಅನ್ನದ ಜತೆ ತಿನ್ನಲು ರುಚಿಕರವಾಗಿರುತ್ತೆ ಈ ಖಾದ್ಯ

ತೊಂಡೆಕಾಯಿ ಹಾಗೂ ಕಡಲೆಕಾಳಿನ ಪಲ್ಯವನ್ನು ತಿಂದಿರಬಹುದು. ಎಂದಾದರೂ ಇದರ ಸುಕ್ಕ ರೆಸಿಪಿಯನ್ನು ಟ್ರೈ ಮಾಡಿದ್ದೀರಾ.ಮಂಗಳೂರು ಭಾಗದಲ್ಲಿ ಬಹಳ ಜನಪ್ರಿಯವಾಗಿರುವ ಈ ಖಾದ್ಯ ತಯಾರಿಸುವುದು ತುಂಬಾನೇ ಸಿಂಪಲ್. ಅನ್ನಜ ಜತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇಲ್ಲಿದೆ ತೊಂಡೆಕಾಯಿ-ಕಡಲೆಕಾಳಿನ ಸುಕ್ಕ ರೆಸಿಪಿ.

ಮಂಗಳೂರು ಶೈಲಿಯ ತೊಂಡೆಕಾಯಿ-ಕಡಲೆಕಾಳು ಸುಕ್ಕ ರೆಸಿಪಿ
ಮಂಗಳೂರು ಶೈಲಿಯ ತೊಂಡೆಕಾಯಿ-ಕಡಲೆಕಾಳು ಸುಕ್ಕ ರೆಸಿಪಿ (PC: Slurrp)

ಬಹುತೇಕ ಮಂದಿ ಹೇಳುವ ಮಾತು ಏನೆಂದರೆ ಈ ಮಂಗಳೂರಿನವರು ಮಾಂಸಾಹಾರಿ ಖಾದ್ಯಗಳು ಅದರಲ್ಲೂ ಮೀನಿನ ಖಾದ್ಯಗಳನ್ನು ಬಹಳ ರುಚಿಕರವಾಗಿ ತಯಾರಿಸುತ್ತಾರೆ. ಆದರೆ, ಸಸ್ಯಾಹಾರ ಖಾದ್ಯಗಳು ಮಾತ್ರ ಅಷ್ಟು ಚೆನ್ನಾಗಿ ಮಾಡುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಕರಾವಳಿಯಲ್ಲಿ ಸಸ್ಯಾಹಾರಿ ಖಾದ್ಯಗಳನ್ನು ಕೂಡ ಬಹಳ ರುಚಿಕರವಾಗಿ ತಯಾರಿಸಲಾಗುತ್ತದೆ. ಇದು ಅಲ್ಲಿನ ಕೆಂಪಕ್ಕಿ ಅನ್ನದ ಜತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ನೀವು ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆ ಕಡೆಗಳಿಗೆ ಪ್ರವಾಸಕ್ಕೆ ಹೋಗಿದ್ದರೆ ಅಲ್ಲಿ ತೊಂಡೆಕಾಯಿ ಹಾಗೂ ಕಡಲೆಕಾಳಿನ ಪಲ್ಯವನ್ನು ತಿಂದಿರಬಹುದು. ಅನ್ನದ ಜತೆ ತಿನ್ನಲು ಇದು ತುಂಬಾ ರುಚಿಕರವಾಗಿರುತ್ತದೆ. ಮಾಂಸಾಹಾರದಲ್ಲಿ ಚಿಕನ್ ಸುಕ್ಕ, ಏಡಿ, ಸುಕ್ಕ ಅಥವಾ ಸೀಗಡಿ ಸುಕ್ಕ ಸವಿದಿರಬಹುದು. ತೊಂಡೆಕಾಯಿ ಹಾಗೂ ಕಡಲೆಕಾಳಿನ ಸುಕ್ಕ ಟೇಸ್ಟ್ ಮಾಡಿದ್ದೀರಾ? ಮಂಗಳೂರು ಭಾಗದಲ್ಲಿ ಕಡ್ಲೇ-ಮನೊಲಿ ಸುಕ್ಕ ಎಂದೇ ಈ ಪಾಕವಿಧಾನವನ್ನು ಕರೆಯಲಾಗುತ್ತದೆ. ಇಲ್ಲಿದೆ ರೆಸಿಪಿ ಮಾಡುವ ವಿಧಾನ.

ತೊಂಡೆಕಾಯಿ-ಕಡಲೆಕಾಳಿನ ಸುಕ್ಕ ರೆಸಿಪಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು: ತೊಂಡೆಕಾಯಿ- 1 ಕಪ್, ಕಡಲೆಕಾಳು (ಕಪ್ಪು ಕಡಲೆ ಅಥವಾ ಕಾಬೂಲ್ ಕಡಲೆ ಕೂಡ ತೆಗೆದುಕೊಳ್ಳಬಹುದು)- 1 ಅಥವಾ ಮುಕ್ಕಾಲು ಕಪ್, ತೆಂಗಿನ ತುರಿ- 1 ಕಪ್, ತೆಂಗಿನಎಣ್ಣೆ ಅಥವಾ ಯಾವುದೇ ಅಡುಗೆ ಎಣ್ಣೆ- ಬೇಕಾಗುವಷ್ಟು, ಬ್ಯಾಡಗಿ ಮೆಣಸು- 10, ಕೊತ್ತಂಬರಿ ಬೀಜ- 2 ಟೀ ಚಮಚ, ಮೆಂತ್ಯ ಕಾಳು- 4 ರಿಂದ 5 ಕಾಳು, ಜೀರಿಗೆ- 1 ಟೀ ಚಮಚ, ಬೆಳ್ಳುಳ್ಳಿ- 4, ಅರಿಶಿನ- ಅರ್ಧ ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಒಗ್ಗರಣೆ ಮಾಡಲು, ಈರುಳ್ಳಿ- 1, ಸಾಸಿವೆ, ಬೆಳ್ಳುಳ್ಳಿ- 2, ಒಣ ಮೆಣಸಿನಕಾಯಿ- 1, ಕರಿಬೇವಿನ ಎಲೆಗಳು.

ಮಾಡುವ ವಿಧಾನ: ಮೊದಲಿಗೆ ಕಾಬೂಲ್ ಕಡಲೆ ಅಥವಾ ಕಪ್ಪು ಕಡಲೆಕಾಳನ್ನು ನೀರಿನಲ್ಲಿ ನೆನೆಸಿಡಬೇಕು. 2 ರಿಂದ 3 ಗಂಟೆ ನೆನೆದ ನಂತರ ಅದನ್ನು ಸ್ಟೌವ್ ಮೇಲೆ ಪಾತ್ರೆಯಿಟ್ಟು ನೀರು ಹಾಕಿ ಬೇಯಲು ಬಿಡಿ.

- ಈ ವೇಳೆ ತೊಂಡೆಕಾಯಿಯನ್ನು ಸ್ವಚ್ಛಗೊಳಿಸಿ ಕತ್ತರಿಸಿ. ನಾಲ್ಕು ಭಾಗಗಳಾಗಿ ಕತ್ತರಿಸಿ.

- ಕಡ್ಲೇಕಾಳು ಬೆಂದ ನಂದರ ಕತ್ತರಿಸಿದ ತೊಂಡೆಕಾಯಿಯನ್ನು ಅದಕ್ಕೆ ಸೇರಿಸಿ ಒಟ್ಟಿಗೆ ಬೇಯಿಸಿ.

- ಇನ್ನೊಂದೆಡೆ ಮಸಾಲೆಗೆ ಸಿದ್ಧ ಮಾಡಿಕೊಳ್ಳಬೇಕು.

- ಇದಕ್ಕಾಗಿ ಸ್ಟೌವ್ ಮೇಲೆ ಒಂದು ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬ್ಯಾಡಗಿ ಮೆಣಸನ್ನು ಹುರಿದು ಪಕ್ಕಕ್ಕೆ ಇರಿಸಿ.

- ನಂತರ ಕೊತ್ತಂಬರಿ ಬೀಜ, ಮೆಂತ್ಯ ಕಾಳು, ಜೀರಿಗೆ, ಬೆಳ್ಳುಳ್ಳಿ ಹಾಕಿ ಹುರಿಯಿರಿ. ಖಾರ ಜಾಸ್ತಿ ಬೇಕು ಅಂತಿದ್ದರೆ ಖಾರದ ಮೆಣಸಿನಕಾಯಿಯನ್ನು ಸೇರಿಸಬಹುದು.

- ನಂತರ ತೆಂಗಿನಕಾಯಿಯನ್ನು 1 ಕಪ್ ಆಗುವಷ್ಟು ತುರಿಯಿರಿ. ಇದನ್ನು ಸಹ ಸ್ವಲ್ಪ ಹುರಿಯಿರಿ. ಹುರಿಯುವಾಗ ಅರಿಶಿನ ಸೇರಿಸಿ ಹುರಿದುಕೊಳ್ಳಿ.

- ಹುರಿದ ತೆಂಗಿನತುರಿಯನ್ನು ಮಿಕ್ಸಿಯಲ್ಲಿ 1 ಸುತ್ತು ತಿರುಗಿಸಬಹುದು.

- ನಂತರ ಹುರಿದಿಟ್ಟ ಮಸಾಲೆಗಳನ್ನು ಪುಡಿ ಪುಡಿಯಾಗಿ ಮಿಕ್ಸಿಯಲ್ಲಿ ರುಬ್ಬಿ. ನೀರು ಸೇರಿಸಬೇಡಿ. ಪೌಡರ್ ರೀತಿ ಬರಬೇಕು.

- ಪುಡಿ ಮಾಡಿದ ಮಸಾಲೆ ಹಾಗೂ ತೆಂಗಿನತುರಿಯನ್ನು ಮಿಶ್ರಣ ಮಾಡಿಕೊಳ್ಳಿ.

- ತೊಂಡೆಕಾಯಿ ಬೇಯುವ ಹಂತಕ್ಕೆ ಬಂದಾಗ ಉಪ್ಪು ಹಾಕಬೇಕು.

- ನಂತರ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಬೆಳ್ಳುಳ್ಳಿ, ಒಣಮೆಣಸಿನಕಾಯಿ, ಸಾಸಿವೆ, ಕರಿಬೇವಿನ ಎಲೆಗಳು ಹಾಗೂ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ.

- ಇವೆಲ್ಲಾ ಫ್ರೈ (ಹುರಿದ) ಮಾಡಿದ ನಂತರ ಮಿಶ್ರಣ ಮಾಡಿರುವ ಮಸಾಲೆ ಪುಡಿ ಹಾಗೂ ತೆಂಗಿನತುರಿಯನ್ನು ಸೇರಿಸಿ ಫ್ರೈ ಮಾಡಿ. ಈ ವೇಳೆ ಸ್ಟೌವ್ ಸಣ್ಣ ಉರಿಯಲ್ಲಿರಲಿ.

- ನಂತರ ಬೆಂದಿರುವ ತೊಂಡೆಕಾಯಿ ಹಾಗೂ ಕಡಲೆಕಾಳಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೀರು ಹಾಕುವ ಅಗತ್ಯವಿಲ್ಲ

- ಮಸಾಲೆ ಹಾಗೂ ಬೇಯುತ್ತಿರುವಾಗ ತೊಂಡೆಕಾಯಿ ಹಾಗೂ ಕಡಲೆಕಾಳಿಗೆ ಮೊದಲೇ ಉಪ್ಪು ಹಾಕಿರಬೇಕು. ಉಪ್ಪು ಕಡಿಮೆಯಾಗಿದ್ದರೆ ಮತ್ತೆ ಹಾಕಬಹುದು. ಇಷ್ಟು ಮಾಡಿದರೆ ರುಚಿಕರವಾದ ತೊಂಡೆಕಾಯಿ-ಕಡಲೆಕಾಳಿನ ಸುಕ್ಕ ಸವಿಯಲು ಸಿದ್ಧ.

Whats_app_banner