ಒಂಟಿಮನೆಗೆ ಸಶಸ್ತ್ರಧಾರಿ ನಕ್ಸಲೀಯರ ಭೇಟಿ, ಮಲೆನಾಡಿನಲ್ಲಿ ಮತ್ತೆ ಚುರುಕಾದ ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  ಒಂಟಿಮನೆಗೆ ಸಶಸ್ತ್ರಧಾರಿ ನಕ್ಸಲೀಯರ ಭೇಟಿ, ಮಲೆನಾಡಿನಲ್ಲಿ ಮತ್ತೆ ಚುರುಕಾದ ಪೊಲೀಸರು

ಒಂಟಿಮನೆಗೆ ಸಶಸ್ತ್ರಧಾರಿ ನಕ್ಸಲೀಯರ ಭೇಟಿ, ಮಲೆನಾಡಿನಲ್ಲಿ ಮತ್ತೆ ಚುರುಕಾದ ಪೊಲೀಸರು

Chikkmagalur: ನಕ್ಸಲ್ ಚಟುವಟಿಕೆಗಳಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ ಪ್ರಮುಖ ಹೆಸರುಗಳಲ್ಲಿ ಮೋಸ್ಟ್ ವಾಂಟೆಡ್ ನಕ್ಸಲೀಯರು ಎಂದೇ ಹೇಳಲಾಗಿರುವ ಮುಂಡಗಾರು ಲತಾ, ಜಯಣ್ಣ ಮತ್ತಿತರ ತಂಡ ಮಲೆನಾಡಿನಲ್ಲಿ ಸಕ್ರಿಯವಾಗಿ ಶಸ್ತ್ರಸಜ್ಜಿತವಾಗಿ ಓಡಾಡುತ್ತಿದ್ದಾರೆ. ನಕ್ಸಲ್ ತುಂಗಾ ತಂಡದ ನಾಯಕತ್ವವನ್ನು ಮುಂಡಗಾರು ಲತಾ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ.

ಒಂಟಿಮನೆಗೆ ಸಶಸ್ತ್ರಧಾರಿ ನಕ್ಸಲೀಯರ ಭೇಟಿ, ಮಲೆನಾಡಿನಲ್ಲಿ ಮತ್ತೆ ಚುರುಕಾದ ಪೊಲೀಸರು (ಸಾಂದರ್ಭಿಕ ಚಿತ್ರ)
ಒಂಟಿಮನೆಗೆ ಸಶಸ್ತ್ರಧಾರಿ ನಕ್ಸಲೀಯರ ಭೇಟಿ, ಮಲೆನಾಡಿನಲ್ಲಿ ಮತ್ತೆ ಚುರುಕಾದ ಪೊಲೀಸರು (ಸಾಂದರ್ಭಿಕ ಚಿತ್ರ) (PC: HT File Photo)

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೇಗುಂದಿ ಗ್ರಾಮದ ಒಂಟಿಮನೆಗೆ ಈ ತಂಡ ಭೇಟಿ ನೀಡಿದ್ದು ದೃಢಪಟ್ಟ ಬಳಿಕ ಪೊಲೀಸರು ಚುರುಕುಗೊಂಡಿದ್ದಾರೆ. ಕಡೆಗುಂಡಿ, ಯಡಗುಂದಕ್ಕೆ ಮುಂಡಗಾರು ಲತಾ ತಂಡದವರು ಭೇಟಿ ನೀಡಿದ್ದು, ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೇಗೌಡರ ಮನೆಯಲ್ಲಿ ಗನ್ ತೋರಿಸಿ ಊಟ ಮಾಡಿದ್ದಾರೆ ಎನ್ನಲಾಗಿದೆ. ನಕ್ಸಲರು ಭೇಟಿ ನೀಡಿದ್ದ ಮನೆಯಲ್ಲಿ ಮೂರು ಬಂದೂಕುಗಳು ಪತ್ತೆಯಾಗಿವೆ. ಈ ಘಟನೆಯ ಬಳಿಕ ಪೊಲೀಸರು ಅಲ್ಲಲ್ಲಿ ನಾಕಾಬಂದಿ ಹಾಕಿದ್ದು, ವಾಹನಗಳ ತೀವ್ರ ತಪಾಸಣೆ ನಡೆಯುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ಕೂಡ ವಿಚಾರಣೆ ನಡೆಸಲಾಗುತ್ತಿದೆ. ಕಾಫಿನಾಡಿನಲ್ಲಿ ಮತ್ತೆ ನಕ್ಸಲರ ಸಂಚಾರ ಸಾರ್ವಜನಿಕರನ್ನೂ ಆತಂಕಿತಗೊಳಿಸಿದೆ.

ಮನೆಗೆ ಬಂದು ಬಂದೂಕು ತೋರಿಸಿ ಊಟ ಮಾಡಿದರು

ಸುಬ್ಬಗೌಡೆ ಎಂಬವರ ಮನೆಗೆ ಆಗಮಿಸಿದ ನಕ್ಸಲೀಯರು ಬಂದೂಕು ತೋರಿಸಿ ಬೆದರಿಸಿ ಅಲ್ಲೇ ಅಡುಗೆ ಮಾಡಿ ಊಟ ಮಾಡಿದ್ದರು ಎನ್ನಲಾಗಿದೆ. ಈ ಕುರಿತು ಚಿಕ್ಕಮಗಳೂರು ಜಿಲ್ಲೆಯ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದರ ವಿವರ ಹೀಗಿದೆ. ಎಎನ್ ಎಫ್ (ನಕ್ಸಲ್ ನಿಗ್ರಹ ದಳ) ಅಧಿಕಾರಿ ನೀಡಿದ ದೂರಿನಂತೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಡೇಗುಂದಿ ಗ್ರಾಮದ ಅರಣ್ಯ ವ್ಯಾಪ್ತಿಯ ಸುಬ್ಬಗೌಡ ಅವರ ಒಂಟಿಮನೆಯಲ್ಲಿ ನಕ್ಸಲೀಯರಾದ ಮುಂಡಗಾರು ಲತಾ, ಜಯಣ್ಣ ಹಾಗೂ ಇತರರ ಅನುಮಾನಾಸ್ಪದ ಚಲನವಲನ ಕಂಡುಬಂದ ಮೇರೆಗೆ ನೀಡಿದ ದೂರಿನನ್ವಯ ಜಯಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 32/2024 329(4),351(2), 61(2),147, r/w 3(5) BNS 3&25 Arms act, 110(B),13,16, 18,20,38 UAPA 1967 (ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ. ಕೊಪ್ಪ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ. ಸ್ಥಳದಲ್ಲಿ ದೊರೆತ ಮೂರು ಎಸ್ ಬಿ ಎಂ ಎಲ್ ಬಂದೂಕುಗಳು ಹಾಗೂ ಅದಕ್ಕೆ ಸಂಬಂಧಿಸಿದ ಮದ್ದುಗುಂಡುಗಳನ್ನು ವಶಪಡಿಸಿಕೊಂಡು ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಘಟನೆ ನಡೆದ ಸ್ಥಳವಾದ ಕಡೆಗುಂದಿ ಗ್ರಾಮದ ಸುಬ್ಬೆಗೌಡರ ಮನೆಯ ವ್ಯಾಪ್ತಿಯ ಪ್ರದೇಶದಲ್ಲಿ ಪರಾರಿಯಾಗಿರುವ ನಕ್ಸಲರಾದ ಮುಂಡಗಾರು ಲತಾ, ಜಯಣ್ಣ ಹಾಗೂ ಇನ್ನಿತರರ ಬಂಧನಕ್ಕಾಗಿ ನಕ್ಸಲ್ ನಿಗ್ರಹದಳದ ವಿಶೇಷ ತಂಡದಿಂದ ತೀವ್ರ ಶೋಧಕಾರ್ಯ ನಡೆಯುತ್ತಿದೆ.

ನಕ್ಸಲ್ ಪರ ಸಹಾನುಭೂತಿಯವರ ವಿಚಾರಣೆ

ಮಲೆನಾಡಿನಲ್ಲಿ ನಕ್ಸಲೀಯರ ಓಡಾಟದ ಕುರಿತು ಮಾಹಿತಿಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಮತ್ತು ಪೊಲೀಸ್ ಇಲಾಖೆ ನಕ್ಸಲ್ ಪರ ಸಹಾನುಭೂತಿ ಇರುವ ಇಬ್ಬರನ್ನು ಶೃಂಗೇರಿ ಪೊಲೀಸ್ ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದ್ದಾರೆ. ಕಡೇಗುಂದಿಯ ಸುಬ್ಬಗೌಡರ ಮನೆಗೆ ನಕ್ಸಲರು ಬಂದು ಹೋದ ಬೆನ್ನಲ್ಲಿ ಅವರು ಬಿಟ್ಟುಹೋದ ಮೂರು ಎಸ್.ಬಿ.ಎಂ.ಎಲ್. ಬಂದೂಕು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಲೆನಾಡಿನಲ್ಲಿ ಹದಿನಾರು ವರ್ಷಗಳ ಬಳಿಕ ನಕ್ಸಲ್ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎನ್ನಲಾಗಿದೆ. ಚಿಕ್ಕಮಗಳೂರು ಎಸ್‌ಪಿ ವಿಕ್ರಂ ಆಮಟೆ, ಎಎನ್‌ಎಫ್ ಎಸ್‌ಪಿ ಜಿತೇಂದ್ರ ನೇತೃತ್ವದಲ್ಲಿ ಕಡೆಗುಂಡಿ ಗ್ರಾಮದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

Whats_app_banner