Bengaluru Metro: ಹಸಿರು ಮಾರ್ಗದ ಮೆಟ್ರೋ ಸೇವೆ ವ್ಯತ್ಯಯ: ಬೆಂಗಳೂರಲ್ಲಿ ಪ್ರಯಾಣಿಕರ ಪರದಾಟ
Namma metro ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಯಶವಂತಪುರ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಇದರ ಪರಿಣಾಮ ಹಲವು ಕಡೆ ಆಯಿತು. ಇದರಿಂದ ಮೆಟ್ರೋದಲ್ಲಿ ನಿತ್ಯ ಸಂಚರಿಸುವರು ತೊಂದರೆಗೆ ಒಳಗಾದರು.
ಬೆಂಗಳೂರು: ಮಂಗಳವಾರ ಬೆಳ್ಳಂಬೆಳಗ್ಗೆಯೇ ಕೆಲವೆಡೆ ಬೆಂಗಳೂರು ಮೆಟ್ರೋ ಸಂಚಾರದಲ್ಲಿ ಉಂಟಾದ ವ್ಯತ್ಯಯದಿಂದ ಸಾವಿರಾರು ಜನ ತೊಂದರೆಗೆ ಒಳಗಾದರು.
ಸರಿಯಾದ ಸಮಯಕ್ಕೆ ಮೆಟ್ರೋ ಬಾರದೇ ಸಿಕ್ಕ ಮಾರ್ಗದಲ್ಲಿಯೇ ಉಂಟಾದ ಭಾರೀ ನೂಕು ನುಗ್ಗುಲಿನಲ್ಲೇ ಕೆಲವರು ಹೊರಟರು.
ಇನ್ನು ಕೆಲವರಿಗೆ ಸಂಚಾರ ಸಾಧ್ಯವಾಗದೇ ಬಿಎಂಟಿಸಿ ಬಸ್ ಏರಿ ಕಚೇರಿ ತಲುಪಿದರು.
ಬೆಂಗಳೂರಿನ ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ಮಂಗಳವಾರ ವ್ಯತ್ಯಯ ಉಂಟಾಗಿದ್ದರಿಂದಾಗಿ ಸಹಸ್ರಾರು ಪ್ರಯಾಣಿಕರು ಪರದಾಡುವಂತಾಯಿತು.
ಸಮಸ್ಯೆಯಾಗಿದ್ದು ಏಕೆ?
ರೀ-ರೈಲು ಹಳಿ ತಪ್ಪಿದ ಹಿನ್ನೆಲೆಯಲ್ಲಿ ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಯಶಯವಂತಪುರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ನೂಕುನುಗ್ಗಲು ಉಂಟಾಗಿ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ರೈಲು ಸಂಚಾರದಲ್ಲಿ ಅಡಚಣೆಯಾಗಿರುವ ಕಾರಣ ರಾಜಾಜಿನಗರ ಮೆಟ್ರೋ ನಿಲ್ದಾಣವನ್ನು ಸದ್ಯ ಬಿಎಂಆರ್ಸಿಎಲ್ ಬಂದ್ ಮಾಡಿದೆ. ಕೇವಲ ನಾಗಸಂದ್ರದಿಂದ ಯಶವಂತಪುರ ಹಾಗೂ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ವರೆಗೆ ಮಾತ್ರ ಹಸಿರು ಮಾರ್ಗದಲ್ಲಿ ಮಾತ್ರ ಮೆಟ್ರೋ ಸಂಚಾರ ನಡೆಯುತ್ತಿದೆ.
ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ದೋಷವುಂಟಾದಾಗ ರೀ-ರೈಲ್ ಮೂಲಕ ಸರಿಪಡಿಸಲಾಗುತ್ತದೆ. ಯಶವಂತಪುರಕ್ಕೂ ಮುನ್ನ ರೀ-ರೈಲ್ ತಪ್ಪಿ ತೊಂದರೆ ಆಗಿದೆ.
ಬಿಎಂಟಿಸಿ ಅವಲಂಬನೆ
ನಾವು ಕಚೇರಿಗೆ ಹೋಗುವ ಧಾವಂತದಲ್ಲಿರುತ್ತೇವೆ. ಏಕಾಏಕಿ ಹೀಗೆ ಆಗಿ ಬಿಟ್ಟರೆ ಏನು ಮಾಡೋದು. ತಾಂತ್ರಿಕ ತೊಂದರೆಯಾಗಿರಬಹುದು. ಹಾಗೆಂದು ನಮಗೆ ಆದ ವ್ಯತ್ಯಯಕ್ಕೆ ಏನು ಹೇಳೋದು. ಈಗ ತಡವಾದರೂ ಕಚೇರಿ ತಲುಪುತ್ತೇವೆ ಎಂದು ಹಲವಾರು ಮೆಟ್ರೋ ಪ್ರಯಾಣಿಕರು ಗೊಣಗುತ್ತಲೇ ಬಿಎಂಟಿಸಿ ಬಸ್ ಏರಿದರು.
ರೀ-ರೈಲ್ ವಾಹನವನ್ನು ಹಳಿಗೆ ತರಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಹೈಡ್ರಾಲಿಕ್ ಪವರ್ ಬಳಸಿ ಬೆಳಗ್ಗೆಯಿಂದಲೂ ರೀ ರೈಲನ್ನು ಹಳಿಗೆ ತರಲೂ ಪ್ರಯತ್ನಿಸಲಾಗುತ್ತಿದೆ. ಆದರೆ ಇನ್ನೂ ಸಾಧ್ಯವಾಗಿಲ್ಲ. ಮೆಟ್ರೋದ ಹಲವಾರು ತಂತ್ರಜ್ಞರ ತಂಡವೇ ಅಲ್ಲಿ ಬೀಡು ಬಿಟ್ಟು ಸಮಸ್ಯೆಯನ್ನು ಬೇಗನೇ ಬಗೆಹರಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂದಿತು.
ದೆಹಲಿಯ ಇಂಜಿನಿಯರಿಂಗ್ ಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕವೂ ಸಮಸ್ಯೆಗೆ ಪರಿಹಾರ ಹುಡುಕಿದ್ದಾರೆ ಇಂಜಿನಿಯರ್ ಗಳು.
ಸರಿಯಾಗಲಿದೆ ಸಂಚಾರ
ತಾಂತ್ರಿಕ ತೊಂದರೆಯಿಂದ ಹೀಗೆ ಆಗಿದೆ. ಅದನ್ನು ಸರಿಪಡಿಸುವ ಕೆಲಸ ನಿರಂತರವಾಗಿ ನಡೆದಿದೆ. ತಾಂತ್ರಿಕ ದೋಷ ನಮ್ಮ ಕೈಯಲ್ಲೂ ಇಲ್ಲ. ಪ್ರಯಾಣಿಕರಿಗೆ ತೊಂದರೆಯಾಗಿರುವುದು ನಿಜ. ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಒಂದೇ ಟ್ರ್ಯಾಕ್ ನಲ್ಲಿ ಮೆಟ್ರೋ ಸಂಚಾರಕ್ಕೆ ಇಂಜಿನಿಯರುಗಳ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ಅರ್ಧಗಂಟೆಗೊಂದು ಮೆಟ್ರೋ ರೈಲು ನಿಲ್ದಾಣಕ್ಕೆ ಬರುತ್ತಿದೆ. ಹೀಗಾಗಿ, ಸಾವಿರಾರು ಪ್ರಯಾಣಿಕರು ಗಂಟೆ ಗಟ್ಟಲೆ ಮೆಟ್ರೋ ನಿಲ್ದಾಣದಲ್ಲೇ ಜಮಾಯಿಸಿದ್ದರು. ಯಶವಂತಪುರ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಗಿತ್ತು.
ಬಿಎಂಟಿಸಿ ತ್ವರಿತ ಸೇವೆ
ಮೆಟ್ರೋ ರೈಲು ಬಾರದ ಕಾರಣ ಬಿಎಂಟಿಸಿ ಬಸ್ ಗಳ ಮೊರೆ ಹೋಗಿದ್ದಾರೆ ಪ್ರಯಾಣಿಕರು. ಮತ್ತೊಂದು ಕಡೆ ಹೆಚ್ಚುವರಿ ಫೀಡರ್ ಬಸ್ಗಳನ್ನು ಬಿಎಂಟಿಸಿ ಒದಗಿಸಿದೆ. ಯಶವಂತಪುರದಿಂದ ಹೆಚ್ಚುವರಿ ಬಸ್ಗಳನ್ನು ಪ್ರಯಾಣಿಕರ ಅನುಕೂಲಕಕಾಗಿ ಯಶವಂತಪುರ ಮೆಟ್ರೋ ನಿಲ್ದಾಣದಿಂದ ಸೇವೆ ನೀಡಲಾಗುತ್ತಿದೆ.
ನಮಗೆ ಮೆಟ್ರೋದಿಂದ ಬಂದ ಮಾಹಿತಿ ಹಾಗೂ ಪ್ರಯಾಣಿಕರ ರಶ್ ನೋಡಿಕೊಂಡು ಯಶವಂತಪುರ ಮೆಟ್ರೋದಿಂದ ಹೆಚ್ಚುವರಿ ಬಸ್ ಒದಗಿಸಿದ್ದೇವೆ. ತಾಂತ್ರಿಕ ದೋಷ ಸರಿಯಾಗಿ ಮೆಟ್ರೋ ಸೇವೆ ಸರಿಯಾಗುವರೆಗೂ ಹೆಚ್ಚಿನ ಬಸ್‌ಗಳು ಇರಲಿವೆ. ಜನತೆ ಗಾಬರಿಯಾಗುವುದು ಬೇಡ ಎಂದು ಬಿಎಂಟಿಸಿ ಅಧಿಕಾರಿಗಳು ಅಭಯ ನೀಡಿದರು.
( ವರದಿ: ಅಕ್ಷರಾ ಕಿರಣ್ ಬೆಂಗಳೂರು)