CT Ravi: ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ; ಇತ್ತೀಚಿನ 7 ಮುಖ್ಯ ವಿದ್ಯಮಾನಗಳಿವು
ಕನ್ನಡ ಸುದ್ದಿ  /  ಕರ್ನಾಟಕ  /  Ct Ravi: ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ; ಇತ್ತೀಚಿನ 7 ಮುಖ್ಯ ವಿದ್ಯಮಾನಗಳಿವು

CT Ravi: ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ; ಇತ್ತೀಚಿನ 7 ಮುಖ್ಯ ವಿದ್ಯಮಾನಗಳಿವು

CT Ravi: ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಪ್ರಕರಣ ಗಂಭೀರವಾಗಿದೆ. ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ. ಇತ್ತೀಚಿನ 7 ಮುಖ್ಯ ವಿದ್ಯಮಾನ ವಿವರ ಇಲ್ಲಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ; ಇತ್ತೀಚಿನ ಏಳು ವಿದ್ಯಮಾನಗಳ ವಿವರ ಈ ವರದಿಯಲ್ಲಿದೆ. ಸಿಟಿ ರವಿ ವಿರುದ್ಧ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿ 19 ರಂದು ಪ್ರತಿಭಟನೆ ನಡೆಸಿದಾಗ ತೆಗೆದ ಫೋಟೋ (ಎಡಚಿತ್ರ). ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಜಾಮೀನು ಪಡೆದು ಬಂದ ಬಳಿಕ ನಿನ್ನೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದಾಗ ತೆಗೆದ ಚಿತ್ರ (ಬಲ ಚಿತ್ರ)
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ; ಇತ್ತೀಚಿನ ಏಳು ವಿದ್ಯಮಾನಗಳ ವಿವರ ಈ ವರದಿಯಲ್ಲಿದೆ. ಸಿಟಿ ರವಿ ವಿರುದ್ಧ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿ 19 ರಂದು ಪ್ರತಿಭಟನೆ ನಡೆಸಿದಾಗ ತೆಗೆದ ಫೋಟೋ (ಎಡಚಿತ್ರ). ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಜಾಮೀನು ಪಡೆದು ಬಂದ ಬಳಿಕ ನಿನ್ನೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದಾಗ ತೆಗೆದ ಚಿತ್ರ (ಬಲ ಚಿತ್ರ) (Agencies)

CT Ravi: ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಳದ ವಿಧಾನಮಂಡಲ ಅಧಿವೇಶನದ ಕೊನೇದಿನ (ಡಿಸೆಂಬರ್ 19) ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಪ್ರಕರಣ ಗಂಭೀರವಾಗಿದೆ. ಸದನದ ಒಳಗೆ ನಡೆದ ಘಟನೆಯಾದರೂ, ದೃಢೀಕರಿಸುವ ಆಡಿಯೋ, ವಿಡಿಯೋ ದಾಖಲೆಗಳು ಇಲ್ಲದ ಕಾರಣ ಸಭಾಪತಿಗಳು ಇಬ್ಬರಿಗೂ ಬುದ್ದಿ ಹೇಳಿ ಪ್ರಕರಣ ಕೈಬಿಡುವಂತೆ ತಿಳಿಹೇಳಿದ್ದರು. ಇನ್ನೊಂದೆಡೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹಿರೇಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಕಾರಣ ಎಫ್‌ಐಆರ್ ದಾಖಲಾಗಿದೆ. ಕೂಡಲೇ ರವಿ ಅವರನ್ನು ಪೊಲೀಸರು ಬಂಧಿಸಿದ ಬಳಿಕ ರಾಜಕೀಯ ಹೈಡ್ರಾಮಾ ನಡೆದಿತ್ತು. ಲಕ್ಷ್ಮೀಹೆಬ್ಬಾಳ್ಕರ್, ಡಿಕೆ ಶಿವ ಕುಮಾರ್‌ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರ ವಿರುದ್ಧ ಸಿಟಿ ರವಿ ಕೂಡ ಪೊಲೀಸ್‌ ದೂರು ನೀಡಿದರು. ಡಿಸೆಂಬರ್ 20 ರಂದು ಕರ್ನಾಟಕ ಹೈಕೋರ್ಟ್ ಅವರಿಗೆ ಜಾಮೀನು ನೀಡಿ ಬಿಡುಗಡೆ ಆದೇಶಿಸಿತ್ತು. ಈ ನಡುವೆ ಕೆಲವು ವಿದ್ಯಮಾನಗಳಾಗಿದ್ದು ಅವುಗಳನ್ನು ಗಮನಿಸಿದರೆ, ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ ಎಂಬುದು ಸ್ಪಷ್ಟ. ಅವುಗಳ ಕಡೆಗೊಂದು ನೋಟ ಇಲ್ಲಿದೆ.

ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿಗೆ ಸಂಕಷ್ಟ ಮುಗಿದಿಲ್ಲ; 7 ಮುಖ್ಯ ವಿದ್ಯಮಾನಗಳು

1) ಪರಿಷತ್‌ನ ಅಧಿಕೃತ ದಾಖಲೆಯಲ್ಲಿ ಇಲ್ಲ: ವಿಧಾನ ಪರಿಷತ್‌ ಸದನದ ಒಳಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಎಂಎಲ್‌ಸಿ ಸಿಟಿ ರವಿ ಅವರು ಅವಾಚ್ಯ ಪದ ಬಳಕೆ ಮಾಡಿದರು ಎಂಬ ಆರೋಪಕ್ಕೆ ಸೂಕ್ತ ಅಧಿಕೃತ ದಾಖಲೆಗಳು ಲಭ್ಯ ಇಲ್ಲ. ಹೀಗಾಗಿ ಈ ಪ್ರಕರಣ ಇಲ್ಲೇ ಬಿಡುವುದು ವಾಸಿ. ಮಾತುಗಳ ಮೇಲೆ ಹಿಡಿತ ಇರಲಿ ಎಂದು ಇಬ್ಬರಿಗೂ ಸಭಾಪತಿ ಬಸವರಾಜ ಹೊರಟ್ಟಿ ಡಿಸೆಂಬರ್ 19ರಂದು ತಿಳಿ ಹೇಳಿದ್ದರು.

2) ಎಥಿಕ್ಸ್ ಕಮಿಟಿಗೆ ಪ್ರಕರಣ: ಅವಾಚ್ಯ ಪದ ಬಳಕೆ ಕೇಸ್‌ನಲ್ಲಿ ಸಿಟಿ ರವಿ ವಿರುದ್ಧ ಸಾಕ್ಷ್ಯಗಳಿವೆ ಎಂದು ಹೇಳುತ್ತಿರುವ ಕಾರಣ ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಿನ್ನೆ (ಡಿಸೆಂಬರ್ 22) ಸ್ಪಷ್ಟಪಡಿಸಿದರು. ಸದನ ಮುಂದೂಡಿದ ಕೂಡಲೇ ಒಂದೆರಡು ಸೆಕೆಂಡ್‌ನಲ್ಲಿ ನಮ್ಮ ಚಾನೆಲ್‌ಗಳ ರೆಕಾರ್ಡಿಂಗ್ ನಿಲ್ಲುತ್ತವೆ. ನಾನು, ನಮ್ಮ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಸೇರಿ ಪರಿಶೀಲನೆ ನಡೆಸಿದ್ದೇವೆ. ಅವಾಚ್ಯ ಪದ ಬಳಕೆಯಾಗಿರುವುದು ನಮ್ಮ ಚಾನೆಲ್‌ಗಳಲ್ಲಿ ದಾಖಲಾಗಿಲ್ಲ. ಖಾಸಗಿ ಚಾನೆಲ್‌ನವರ ಬಳಿ ದಾಖಲೆ ಇದೆ ಎಂದು ಹೇಳಿದ್ದಾರೆ. ಅವುಗಳನ್ನು ಕೊಟ್ಟರೆ ಪರಿಶೀಲಿಸುತ್ತೇವೆ. ನಮ್ಮದೇ ಆದ ನಿಯಮಗಳನ್ನು ಅನುಸರಿಸಿ ಪರಿಶೀಲಿಸಲಾಗುವುದು. ಎಥಿಕ್ಸ್ ಕಮಿಟಿಗೆ ಕಳುಹಿಸುತ್ತೇವೆ. ಅದು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದರು.

3) ಪೊಲೀಸರ ನಡೆ ನಿಗೂಢ: ಸಿಟಿ ರವಿ ಅವರನ್ನು ತರಾತುರಿಯಲ್ಲಿ ಬಂಧಿಸುವಂತಹ ಅಗತ್ಯ ಏನಿತ್ತು ಎಂದು ಹೈಕೋರ್ಟ್‌ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಕೂಡಲೇ ಅವರನ್ನು ಬಿಡುಗಡೆ ಮಾಡಿ ಎಂದು ತಾಕೀತು ಮಾಡಿತ್ತು. ಜಾಮೀನು ನೀಡಿದ ಬಳಿಕ ವಿಚಾರಣೆಯನ್ನು ಮುಂದೂಡಿತ್ತು. ಜಾಮೀನು ಪಡೆದು ಹೊರ ಬಂದ ಸಿಟಿ ರವಿ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದರು. ಅಲ್ಲಿ 500 ಕಿ.ಮೀ ಪೊಲೀಸರು ಸುತ್ತಾಡಿಸಿದ ವಿವರ ನೀಡಿದ ಅವರು ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದಾರೆ. ನನ್ನ ಹಕ್ಕುಚ್ಯುತಿ ಆಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಪೊಲೀಸರ ವಿರುದ್ಧ ಮತ್ತು ಅವರಿಗೆ ಸೂಚನೆ ನೀಡಿದವರ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದರು.

4) ಗೃಹ ಸಚಿವರ ಗಮನಕ್ಕೆ ಬಾರದೇ ನಡೆಯಿತಾ: ವಿಧಾನ ಪರಿಷತ್ ಕಲಾಪ ಮುಂದೂಡಿದ ಬಳಿಕ ಈ ಪ್ರಕರಣ ಸಭಾಪತಿಯವರ ಕೊಠಡಿಗೆ ವರ್ಗಾವಣೆಯಾಗುತ್ತಿದ್ದಂತೆ ಲಕ್ಷ್ಮೀ ಹೆಬ್ಬಾಳ್ಕರ್ ಜತೆಗೆ ಹೋಗಿದ್ದ ಪ್ರಭಾವಿ ಸಚಿವರು ಪೊಲೀಸ್‌ ಇಲಾಖೆಯ ಪ್ರಭಾವಿ ಅಧಿಕಾರಿಗಳಿಗೆ ಕೆಲವು ಮಾರ್ಗದರ್ಶನ ನೀಡಿದ್ದರು. ಇದ್ಯಾವುದೂ ಗೃಹ ಸಚಿವರ ಗಮನಕ್ಕೆ ಇರಲಿಲ್ಲ. ಅದಾಗಿ, ಲಕ್ಷ್ಮೀ ಹೆಬ್ಬಾಳ್ಕರ್‌ ಬೆಂಬಲಿಗರು ಸುವರ್ಣ ಸೌಧಕ್ಕೆ ಒಳನುಗ್ಗಿದ್ದು, ಪೊಲೀಸರು ಬಂದು ಸಿಟಿ ರವಿ ಅವರನ್ನು ಬಂಧಿಸಿದ್ದು ಎಂದು ಕಾಂಗ್ರೆಸ್‌ ಪಕ್ಷದ ಕೆಲವು ಮೂಲಗಳು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

5) ಪ್ರಾಸ್ಟಿ*ಟ್‌ vs ಫ್ರಸ್ಟೇಟ್‌: ವಿಧಾನ ಪರಿಷತ್ ಕಲಾಪದ ಸದನದಲ್ಲಿ ಸದಸ್ಯ ಸಿಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ವಾಕ್ಸಮರ ನಡೆದ ಸಂದರ್ಭದಲ್ಲಿ ಬಳಕೆಯಾದ ಅವಾಚ್ಯ ಪದ ಯಾವುದು ಎಂಬುದು ಸ್ಪಷ್ಟವಿಲ್ಲ. ಲಕ್ಷ್ಮೀಹೆಬ್ಬಾಳ್ಕರ್ ಮತ್ತು ಕಾಂಗ್ರೆಸ್ ಸದಸ್ಯರು ಮಾಡಿರುವ ಆರೋಪದಂತೆ, ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪ್ರಾಸ್ಟಿ*ಟ್‌ ಪದ ಬಳಸಿದ್ದರು. ಇನ್ನೊಂದೆಡೆ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಸಿಟಿ ರವಿ ಅವರು ತಾನು ಹೇಳಿದ್ದು “ಫ್ರಸ್ಟೇಟ್‌” ಎಂದು, ಅವರಿಗೆ ಅದೇಕೆ ಹಾಗೆ ಕೇಳಿತೋ ಗೊತ್ತಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಆಡಿದ ಮಾತುಗಳು ಮತ್ತೆ ವೈರಲ್ ಆಗಿವೆ. ವಿಶೇಷವಾಗಿ ವಿಧಾನ ಸೌಧದಲ್ಲಿ “ಪಾಕಿಸ್ತಾನ್ ಜಿಂದಾಬಾದ್‌” ಘೋ‍ಷಣೆ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ಸ್ಪಷ್ಟೀಕರಣ ಮತ್ತು ಜಯಮಾಲಾ ಅವರ ಬಗ್ಗೆ ಹೇಳಿದ ಮಾತುಗಳು ಮತ್ತೆ ಗಮನಸೆಳೆದಿವೆ. ಸಿಟಿ ರವಿ ಕೂಡ ಈ ಹಿಂದೆ ಸಿದ್ರಾಮುಲ್ಲಾ ಖಾನ್ ಎಂಬಿತ್ಯಾದಿ ಹೇಳಿಕೆ ನೀಡಿದ ವಿಡಿಯೋ ವೈರಲ್ ಆಗಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಿಟಿ ರವಿ ಬಾಯಿ ಸರಿ ಇಲ್ಲ, ಕೊಳಕು ಬಾಯಿ ಈ ಹಿಂದೆ ಸಿದ್ರಾಮುಲ್ಲಾ ಖಾನ್ ಎಂದು ಹೇಳಿದ್ದವರು ಅವರೇ ಅಲ್ಲವೇ, ಚಿಕ್ಕಮಗಳೂರಿನವರು ಸಂಸ್ಕಾರವಂತರು. ಆದರೆ ಸಿಟಿ ರವಿ ಹೀಗೇಕಾದರೋ ಎಂದು ಹೇಳಿದ್ದರು.

6) ನ್ಯಾಯಾಂಗ ತನಿಖೆಗೆ ಆಗ್ರಹ: ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಸಿಟಿ ರವಿ ಬೆನ್ನಿಗೆ ನಿಂತ ಬಿಜೆಪಿ ನಾಯಕರು ಪ್ರಕರಣದ ನ್ಯಾಯಾಂಗ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ. ಪೊಲೀಸರ ನಡೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡೆ ಎಲ್ಲವೂ ಅನುಮಾನಸ್ಪದವಾಗಿದೆ. ಈ ವಿದ್ಯಮಾನದಲ್ಲಿ ಗಮನಿಸಬೇಕಾದ ಅಂಶ ಎಂದರೆ ಬಿಜೆಪಿಯೊಳಗಿನ ಬಣ ಜಗಳ ತಣ್ಣಗಾಗಿ ಎಲ್ಲರೂ ಸಿಟಿ ರವಿ ಬೆಂಬಲಕ್ಕೆ ನಿಂತದ್ದು. ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಅವರ ಬೆಂಬಲಿಗರು, ಅದೇ ರೀತಿ ಅವರ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್‌ ಮತ್ತು ಬೆಂಬಲಿಗರು ಕೂಡ ಒಟ್ಟಾಗಿ ಸರ್ಕಾರದ ಮೇಲೆ ಮುಗಿಬಿದ್ದರು.

7) ಇದು ಕ್ರಿಮಿನಲ್ ಅಪರಾಧ ಎಂದ ಸಿಎಂ: ವಿಧಾನ ಪರಿಷತ್ ಕಲಾಪ ಮುಂದೂಡಲ್ಪಟ್ಟ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಬಿಜೆಪಿ ಸದಸ್ಯ ಸಿಟಿ ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂಬುದಕ್ಕೆ ಆಡಿಯೋ ಮತ್ತು ವಿಡಿಯೋ ಸಾಕ್ಷಿಗಳಿವೆ. ಘಟನೆಗೆ ಹಲವು ಎಂಎಲ್‌ಸಿಗಳು ಸಾಕ್ಷಿಗಳಾಗಿದ್ದಾರೆ. ಇದು ಕ್ರಿಮಿನಲ್ ಅಪರಾಧ. ಪೊಲೀಸ್ ಕೇಸ್ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ಹೀಗಿರುವಾಗ ಅವರೇಕೆ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಿದ್ದಾರೆ?" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ (ಡಿಸೆಂಬರ್ 22) ಪುನರುಚ್ಚರಿಸಿದ್ದಾರೆ.

Whats_app_banner