ಕನ್ನಡ ಸುದ್ದಿ  /  Karnataka  /  Bangalore News Bangalore Water Board Requests Authorities To Reserve Cauvery Dams Water For Bangalorians Mrt

Bangalore News: ಕಾವೇರಿ ಅಣೆಕಟ್ಟುಗಳ ನೀರನ್ನು ಬೆಂಗಳೂರಿಗೆ ಮೀಸಲಿಡಲು ಮನವಿ; ಉದ್ಯಾನ ನಗರಕ್ಕೆ ಬೇಕಿದೆ ಮಾಸಿಕ 1.6 ಟಿಎಂಸಿ ನೀರು

ಬೆಂಗಳೂರಿನಲ್ಲಿ ಈ ಬಾರಿ ನೀರಿನ ಸಮಸ್ಯೆ ಮಿತಿ ಮೀರಿದೆ. ಈ ಕಾರಣದಿಂದ ಬೇಸಿಗೆ ಮುಗಿಯುವವರೆಗೂ ಕಾವೇರಿ ಜಲಾಶಯದ ನೀರನ್ನು ಬೆಂಗಳೂರಿಗೆ ಮೀಸಲಿಡುವಂತೆ ಕೋರಲಾಗುತ್ತಿದೆ.(ವರದಿ: ಎಚ್‌.ಮಾರುತಿ, ಬೆಂಗಳೂರು)

ಕಾವೇರಿ ಕೊಳ್ಳದ ಜಲಾಶಯದ ನೀರನ್ನು ಬೆಂಗಳೂರಿಗೆ ಮೀಸಲಿಡುವ ಕೋರಿಕೆ ಸಲ್ಲಿಸಲಾಗುತ್ತಿದ.
ಕಾವೇರಿ ಕೊಳ್ಳದ ಜಲಾಶಯದ ನೀರನ್ನು ಬೆಂಗಳೂರಿಗೆ ಮೀಸಲಿಡುವ ಕೋರಿಕೆ ಸಲ್ಲಿಸಲಾಗುತ್ತಿದ.

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ಅಣೆಕಟ್ಟುಗಳಲ್ಲಿ ಇರುವ ನೀರನ್ನು ಅದ್ಯತೆಯಾಗಿ ಕುಡಿಯುವ ಉದ್ದೇಶಕ್ಕಾಗಿ ಮೀಸಲಿಡಬೇಕೆಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬಯಸಿದೆ. ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತದೆ. ಕಾವೇರಿ ನೀರು ಬಾರದೆ ನಳಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಕುಸಿದಿರುವುದರಿಂದ ಬೋರ್ ವೆಲ್ ಗಳಲ್ಲೂ ನೀರು ಅಲಭ್ಯವಾಗಿದೆ.

ಬೆಂಗಳೂರಿಗೆ ಪ್ರತಿದಿನ 1,450 ಎಂ ಎಲ್ ಡಿ ಕಾವೇರಿ ನೀರು ಲಭ್ಯವಾಗುತ್ತಿದೆ. ಜೊತೆಗೆ ಕಾವೇರಿ 5 ನೇ ಹಂತ ಏಪ್ರಿಲ್ ವೇಳೆಗೆ ಪೂರ್ಣಗೊಂಡರೆ 775 ಎಂ ಎಲ್ ಡಿ ನೀರು ಲಭ್ಯವಾಗಲಿದೆ.

700 ಎಂ ಎಲ್ ಡಿ ನೀರಿಗಾಗಿ ಬೋರ್ ವೆಲ್ ಗಳನ್ನು ಅವಲಂಬಿಸಲಾಗಿದೆ. ಜೊತೆಗೆ ಅಂತರ್ಜಲ ಮಟ್ಟವೂ ಕುಸಿದಿದ್ದು, ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟವೂ ಮೊದಲ ಬಾರಿಗೆ ಇಷ್ಟು ಮಟ್ಟಿಗೆ ಕುಸಿದಿದೆ. ಇದರಿಂದಾಗಿ ಅನಿವಾರ್ಯವಾಗಿ ಕಾವೇರಿ ನೀರಿನತ್ತಲೇ ಮುಖ ಮಾಡುವ ಸ್ಥಿತಿಯೂ ನಿರ್ಮಾಣವಾಗಿದೆ. ಇದರಿಂದ ಆಡಳಿತ ಮಂಡಳಿ ಸಂಬಂಧಪಟ್ಟ ಇಲಾಖೆಯನ್ನು ಕೋರಲು ಮುಂದಾಗಿದೆ.

ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ಜಲಾಶಯಗಳಲ್ಲಿ ಸಂಗ್ರಹವಿರುವ ನೀರನ್ನು ಬೆಂಗಳೂರಿನ ಬಳಕೆಗೆ ಮಾತ್ರ ಮೀಸಲಿಟ್ಟರೆ ಅನುಕೂಲವಾಗುತ್ತದೆ. ಕೃಷಿ ಉದ್ದೇಶಕ್ಕೆ ಬಳಸಿದರೆ ನಗರದಲ್ಲಿ ಹಾಹಾಕಾರ ಉಂಟಾಗುತ್ತದೆ. ಜೂನ್ ವರೆಗೆ ನಿರ್ವಹಣೆ ಮಾಡುವುದು ಹೇಗೆ ಎಂಬ ಆತಂಕ ಜಲ ಮಂಡಳಿಯನ್ನು ಕಾಡುತ್ತಿದೆ. ಜಲ ಮಂಡಳಿಯು ಈಗಾಗಲೇ ಕಾವೇರಿ ನೀರಾವರಿ ನಿಗಮಕ್ಕೆ ಎರಡು ಪತ್ರಗಳನ್ನು ಬರೆದು ಮಾರ್ಚ್ ಅಂತ್ಯದವರೆಗೆ ಮಾಸಿಕ 1.6 ಟಿಎಂಸಿ ನೀರನ್ನು ಮೀಸಲಿಡಬೇಕು ಮತ್ತು ಏಪ್ರಿಲ್ ನಿಂದ ಪ್ರತಿ ತಿಂಗಳು 2.42 ಟಿಎಂಸಿ ನೀರನ್ನು ಮೀಸಲಿಡಬೇಕು ಎಂದು ಮನವಿ ಮಾಡಿಕೊಂಡಿದೆ.

ಕೃಷಿಗೆ ಬಳಸದಿದ್ದರೆ ಕಷ್ಟಪಟ್ಟು ಬೆಂಗಳೂರಿನ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿದೆ. ಆದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಬೆಳೆದು ನಿಂತಿರುವ ಫಸಲನ್ನು ಉಳಿಸಿಕೊಳ್ಳಲು ನೀರು ಬಿಡುಗಡೆ ಮಾಡಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ.

ಈಗಾಗಲೇ ಮಂಡ್ಯದ ಕೆಆರ್‌ಎಸ್‌ನಲ್ಲಿ ನಡೆದಿದ್ದ ಕಾವೇರಿ ನೀರು ಸಲಹಾ ಸಮಿತಿ ಸಭೆಯಲ್ಲಿ ಕುಡಿಯಲು ಬಿಟ್ಟು ಬೇರೆ ಕಾರಣಗಳಿಗೆ ನೀರನ್ನು ಹರಿಸುವುದಿಲ್ಲ ಎನ್ನುವ ತೀರ್ಮಾನವನ್ನು ಮಾಡಲಾಗಿದೆ. ಈವರೆಗೂ ನೀರಾವರಿಗೆ ನೀರನ್ನು ಹರಿಸಿಲ್ಲ. ಇತ್ತೀಚೆಗೆ ಕೃಷ್ಣಾ ನದಿ ಜಲಾಶಯಗಳಿಂದ ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ನೀರು ಬಿಡುಗಡೆ ಮಾಡಲಾಗಿತ್ತು.

ಕಾವೇರಿ ನದಿಯಿಂದ ತಮಿಳುನಾಡಿಗೆ ಪ್ರತಿ ತಿಂಗಳು ನೀರು ಬಿಡಬೇಕು. ಆವಿಯಾಗಿ ಹೋಗುವ ನೀರು ಮತ್ತು ಡೆಡ್ ಸ್ಟೋರೇಜ್ ಗಾಗಿ ಉಳಿಯುವ ನೀರನ್ನು ಲೆಕ್ಕ ಹಾಕಿದರೆ ಸಹಜವಾಗಿಯೇ ಕೊರತೆ ಉಂಟಾಗುತ್ತದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ನೀರು ಉಳಿಸಿ ಅಭಿಯಾನ ಆರಂಭಿಸಲು ನಿರ್ಧಾರ ಮಾಡಿದೆ ಎಂದು ಗೊತ್ತಾಗಿದೆ. ನೀರನ್ನು ಮರು ಬಳಕೆ ಮಾಡುವಂತೆ ಕೈಗಾರಿಕೆಗಳಿಗೆ ಮನವಿ ಮಾಡಲಾಗುವುದು. ಹಾಗೆಯೇ ಸಾರ್ವಜನಿಕರು ಮನೆಗಳಲ್ಲಿ ನೀರನ್ನು ಉಳಿಸುವಂತೆ, ವಾಹನಗಳನ್ನು ಶುಚಿಗೊಳಿಸದಂತೆ ಮತ್ತು ಸಾಧ್ಯವಾದರೆ ಮರು ಬಳಕೆ ಮಾಡುವಂತೆ ಜಲ ಮಂಡಳಿ ಅಭಿಯಾನ ಆರಂಭಿಸಲಿದೆ. ಇದಕ್ಕಾಗಿ ಈಗಾಗಲೇ ಯೋಜನೆಯನ್ನೂ ರೂಪಿಸಿಕೊಂಡಿದೆ.

ಕಾವೇರಿ ಜಲಾನಯನ ಪ್ರದೇಶದ ಕೆ ಆರ್ ಎಸ್, ಹಾರಂಗಿ, ಕಬಿನಿ ಮತ್ತು ಹೇಮಾವತಿ ಅಣೆಕಟ್ಟುಗಳಲ್ಲಿ ಒಳಹರಿವು ಕಡಿಮೆಯಾಗಿದೆ. ಬೆಂಗಳೂರು ಮತ್ತು ಭಾಗಗಳಿಗೆ ಪ್ರತಿ ತಿಂಗಳು 3.5 ಟಿಎಂಸಿ ನೀರು ಅವಶ್ಯಕತೆ ಇದೆ ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ.

(ವರದಿ: ಎಚ್. ಮಾರುತಿ, ಬೆಂಗಳೂರು)

IPL_Entry_Point