Lok Sabha Elections2024: ಕರ್ನಾಟಕದಲ್ಲಿ ಹೊಸ ಮೈತ್ರಿ ಕಾಲ, 3 ಪಕ್ಷಗಳಿಗೆ ನಿರ್ಣಾಯಕ ಈ ಚುನಾವಣೆ
Karnataka politics ಚುನಾವಣೆ ಎಂದರೆ ಕರ್ನಾಟಕದಲ್ಲಿ ಭಿನ್ನವೇ. ಒಂದೊಂದು ಚುನಾವಣೆಯಲ್ಲಿ ಒಂದು ಪಕ್ಷ ಕೈ ಹಿಡಿಯುವ ಮತದಾರ ಈ ಬಾರಿ ಲೋಕಸಭೆ ಚುನಾವಣೆಗೆ ಯಾರ ಪರ ಇರುವನು ಎನ್ನುವ ಕುತೂಹಲವಿದೆ.(ವಿಶೇಷ ವರದಿ: ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: 2019 ರ ಲೋಕಸಭೆಗೆ ನಡೆದ ಚುನಾವಣೆ ದಿನಾಂಕಕ್ಕೆ ಹೋಲಿಸಿದರೆ ಮೊದಲ ಹಂತದ ಚುನಾವಣೆಗೆ ಕೇವಲ 40 ದಿನಗಳು ಮಾತ್ರ ಉಳಿದಿವೆ. ಇದುವರೆಗೂ ಬಿಜೆಪಿ ಜೆಡಿಎಸ್ ಮೈತ್ರಿ ಕೂಟ ಅಥವಾ ಕಾಂಗ್ರೆಸ್ ಇದುವರೆಗೂ ಅಭ್ಯರ್ಥಿಗಳ ಪಟ್ಟಿ ಆಖೈರು ಮಾಡಿಲ್ಲ. ಅವರನ್ ಬಿಟ್ ಇವರ್ಯಾರು ಎನ್ನುವ ಹಂತದಲ್ಲಿಯೇ ಇವೆ. ಆದರೆ ಅಭ್ಯರ್ಥಿಗಳು ಇಲ್ಲದಿದ್ದರೂ ಈಗಾಗಲೇ ಮೂರೂ ಪಕ್ಷಗಳ ಮುಖಂಡರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿಯು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದೊಂದಿಗೆ ನೇರ ಹಣಾಹಣಿಗೆ ಇಳಿದಿದೆ. ಇದು ಬಿಜೆಪಿಯ ಚುನಾವಣಾ ತಂತ್ರವಲ್ಲದೆ ಮತ್ತೇನೂ ಅಲ್ಲ. ಈ ಮೂಲಕ ಬಿಜೆಪಿ, ಕಾಂಗ್ರೆಸ್ ವರಿಷ್ಠರ ತಲೆಬೇನೆಯನ್ನು ಹೆಚ್ಚಿಸಿದೆ.
ಜೊತೆಗೆ ಇದುವರೆಗೂ ಬೇರು ಬಿಡಲಾಗದ ಹಳೇ ಮೈಸೂರು ಭಾಗದಲ್ಲಿ ನೆಲೆ ಕಂಡುಕೊಳ್ಳಲು ಹವಣಿಸುತ್ತಿದೆ. ಪ್ರಾದೇಶಿಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡ ಸಂದರ್ಭಗಳಲ್ಲಿ ಬಿಜೆಪಿಗೆ ಹೆಚ್ಚಿನ ಲಾಭ ಆಗಿದೆಯೇ ಹೊರತು ಸಣ್ಣ ಪಕ್ಷಕ್ಕೆ ಅಲ್ಲ ಎನ್ನುವುದು ಸಾಬೀತಾಗಿದೆ.
ದೇಶದಲ್ಲಿ ವಿಷನ್ 370 ಗುರಿ ತಲುಪಲು ರಾಜ್ಯದಲ್ಲಿ ಕಳೆದ ಬಾರಿ ಗೆದ್ದಷ್ಟು ಸ್ಥಾನಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಅಧಿಕಾರದಲ್ಲಿ ಇರುವುದರಿಂದ ಗರಿಷ್ಠ ಮಟ್ಟದ ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್ ಪಕ್ಷಕ್ಕೆ ಮುಖ್ಯವಾಗಿದೆ. ಅಸ್ತಿತ್ವ ಉಳಿಸಿಕೊಳ್ಳುವುದು ಜೆಡಿಎಸ್ ಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಹೀಗೆ ಈ ಚುನಾವಣೆ ಮೂರೂ ಪಕ್ಷಗಳಿಗೆ ಮುಖ್ಯವಾಗಿದೆ.
ಈ ಬಾರಿಯ ಫಲಿತಾಂಶ ರಾಜ್ಯದ ದೀರ್ಘಕಾಲೀನ ರಾಜಕೀಯದ ಮೇಲೆ ಪ್ರಭಾವ ಬೀರಲಿದೆ ಎಂದು ಚುನಾವಣಾ ತಜ್ಞರು ಅಭಿಪ್ರಾಯಪಡುತ್ತಾರೆ.
ವಿಭಿನ್ನ ತಂತ್ರಗಾರಿಕೆ
ಎಂದಿನಂತೆ ಬಿಜೆಪಿ ಪ್ರಧಾನಿ ಮೋದಿ ನಾಮಬಲ, ಹಿಂದುತ್ವ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವ ಮೂಲಕ ಗೆಲ್ಲುವ ತಂತ್ರಕ್ಕೆ ಮೊರೆ ಹೋಗಿದೆ.
ಆದರೆ ಕಾಂಗ್ರೆಸ್ ಭಿನ್ನ ಹಾದಿ ಹಿಡಿದಿದೆ. ರಾಷ್ಟ್ರೀಯ ವಿಷಯಗಳಿಗಿಂತ ಸ್ಥಳೀಯ ವಿಷಯಗಳಿಗೆ ಒತ್ತು ನೀಡುತ್ತಿದೆ. ಐದು ಗ್ಯಾರಂಟಿಗಳನ್ನು ನಂಬಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಜಿ ಎಸ್ ಟಿ ನಷ್ಟ ಕುರಿತು ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 19 ಸ್ಥಾನಗಳಿಗೆ ಜೆಡಿಎಸ್ ಕುಸಿದಿದೆ. ಈ ಬಾರಿ 3-4 ಸ್ಥಾನಗಳನ್ನು ಗೆಲ್ಲುವ ಮೂಲಕ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ.
ರಾಜ್ಯ ಸಚಿವರು ಲೋಕಸಭೆಗೆ ಹೋಗಲು ಆಸಕ್ತಿ ತೋರುತ್ತಿಲ್ಲ. ಜೊತೆಗೆ ಮೂರೂ ಪಕ್ಷಗಳ ಶಾಸಕರು ರಾಜ್ಯ ರಾಜಕಾರಣದಲ್ಲಿ ಉಳಿದುಕೊಳ್ಳಲು ಬಯಸಿದ್ದು ರಿಸ್ಕ್ ಬೇಡ ಎನ್ನುತ್ತಿದ್ದಾರೆ.
ಬಿಜೆಪಿಗೆ ಸವಾಲು
ಬಿಜೆಪಿ ಈ ಬಾರಿಯೂ 25 ಸ್ಥಾನಗಳನ್ನು ಉಳಿಸಿಕೊಳ್ಳುವುದೇ ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ. ಬಿಜೆಪಿ ಸಂಸದರ ಕಾರ್ಯವೈಖರಿಗೆ ಆ ಪಕ್ಷದೊಳಗಿನ ಕಾರ್ಯಕರ್ತರೇ ತಿರುಗಿ ಬಿದ್ದಿದ್ದಾರೆ. ಹತ್ತಕ್ಕೂ ಹೆಚ್ಚು ಸಂಸದರ ಶೂನ್ಯ ಸಂಪಾದನೆ ಹಿನ್ನೆಡೆ ಆಗಲಿದೆ ಎಂದು ಆ ಪಕ್ಷದ ಮುಖಂಡರು ಅಭಿಪ್ರಾಯಪಡುತ್ತಾರೆ.
ಇನ್ನು ದೇಶದ ಮತದಾರರ ಮೂಡ್ ಒಂದು ರೀತಿಯದ್ದಾದರೆ ರಾಜ್ಯದ ಮತದಾರರದ್ದು ಭಿನ್ನ ಹಾದಿಯಾಗಿರುತ್ತದೆ ಎನ್ನುವುದು ಎರಡು ದಶಕಗಳ ಫಲಿತಾಂಶ ತೋರಿಸುತ್ತಿದೆ.
ಕಳೆದ ನಾಲ್ಕು ಚುನಾವಣೆಗಳಲ್ಲಿ 2008-2009, 2013-2014 ರಲ್ಲಿ ನಡೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಭಿನ್ನ ಫಲಿತಾಂಶ ನೀಡುತ್ತಾ ಬಂದಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮರುವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಆರಿಸಿದ್ದಾರೆ.
ಇದೀಗ ಅಂತಹುದೇ ಮತ್ತೊಂದು ಸನ್ನಿವೇಶ ಎದುರಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಬಹುಮತ ಕೊಟ್ಟ ರಾಜ್ಯದ ಬುದ್ದಿವಂತ ಮತದಾರ 40 ದಿನಗಳಲ್ಲಿ ಎದುರಾಗುವ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಜೈ ಅನ್ನಲಿದ್ದಾನೆ ? ಉತ್ತರವನ್ನು ಫಲಿತಾಂಶವೇ ಹೇಳಬೇಕು.
(ವಿಶೇಷ ವರದಿ: ಎಚ್. ಮಾರುತಿ, ಬೆಂಗಳೂರು)