Bengaluru Cafe Blast: ಬೆಂಗಳೂರು ದಿ ರಾಮೇಶ್ವರಂ ಕೆಫೆ ಸ್ಫೋಟ, ಇದುವರೆಗಿನ 10 ವಿದ್ಯಮಾನಗಳಿವು
ಬೆಂಗಳೂರಿನ ಕುಂದಲಹಳ್ಳಿಯ ಬ್ರೂಕ್‌ಫೀಲ್ಡ್ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ 10 ಜನ ಗಾಯಗೊಂಡಿದ್ದಾರೆ. ಆರಂಭದಲ್ಲಿ ಸಿಲಿಂಡರ್ ಸ್ಫೋಟ ಇರಬಹುದು ಎಂದು ಶಂಕಿಸಿದ್ದರೂ, ಬಳಿಕ ಇದು ಬಾಂಬ್ (ಐಇಡಿ) ಸ್ಫೋಟ ಎಂದು ಕರ್ನಾಟಕ ಸರ್ಕಾರ ಖಚಿತಪಡಿಸಿದೆ. ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದ ಇದುವರೆಗಿನ 10 ವಿದ್ಯಮಾನಗಳಿವು.
ಬೆಂಗಳೂರು: ಕುಂದಲಹಳ್ಳಿ ಬ್ರೂಕ್‌ಫೀಲ್ಡ್ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಆರೋಪಿಯ ಪತ್ತೆಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಆತನ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸ್ ತನಿಖೆಯಲ್ಲಿ ಮಹತ್ವದ ಪ್ರಗತಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ನಿನ್ನೆ (ಮಾ.1) ಮಧ್ಯಾಹ್ನ ಸಂಭವಿಸಿದ್ದು, 10 ಜನ ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಪ್ರಕರಣದ ಎಲ್ಲ ಆಯಾಮಗಳ ತನಿಖೆ ನಡೆದಿದ್ದು, ಶಂಕಿತ ಆರೋಪಿಯ ಬಂಧನಕ್ಕೆ ಕ್ರಮ ತೆಗೆದುಕೊಂಡಿರುವುದಾಗಿ ಪೊಲೀಸ್ ಇಲಾಖೆ ಹೇಳಿದೆ.
ರಾಮೇಶ್ವರಂ ಕೆಫೆ ಸ್ಫೋಟ ಸಂಭವಿಸಿದ ಕೂಡಲೇ ಅದು ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟ ಆಗಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಸ್ಥಳದಲ್ಲಿ ಸಿಕ್ಕ ಸ್ಫೋಟದ ಚೂರುಗಳ ನಡುವೆ ಬ್ಯಾಟರಿ ಮತ್ತು ಇತರೆ ವಸ್ತುಗಳು ಅದು ಬಾಂಬ್ ಸ್ಫೋಟ ಎಂಬುದರ ಸುಳಿವು ನೀಡಿದ್ದವು. ಇದನ್ನು ಎಫ್‌ಎಸ್‌ಎಲ್ ತಂಡ ಮತ್ತು ಪೊಲೀಸರು ಖಚಿತಪಡಿಸಿದ್ದರು. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.
ಬೆಂಗಳೂರು ಕೆಫೆ ಸ್ಫೋಟ; ಇದುವರೆಗೆ ನಡೆದಿರುವ 10 ವಿದ್ಯಮಾನಗಳಿವು
1) ಬೆಂಗಳೂರಿನ ಕುಂದಲಹಳ್ಳಿ ಬ್ರೂಕ್‌ಫೀಲ್ಡ್‌ನ ದಿ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ (ಮಾ.1) ಮಧ್ಯಾಹ್ನ 1 ಗಂಟೆ ಸುಮಾರಿಗೆ ನಿಗೂಢ ಸ್ಫೋಟ ಸಂಭವಿಸಿತ್ತು. ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟ ಆಗಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಬಳಿಕ ಎಫ್‌ಎಸ್‌ಎಲ್ ತಂಡಕ್ಕೆ ಕರೆ ಕಳುಹಿಸಿದರು. ಅವರು ಬಂದು ಸಾಕ್ಷ್ಯಗಳನ್ನು ಕಲೆಹಾಕಿದರು. ಅಲ್ಲಿ ಬ್ಯಾಟರಿ ಮತ್ತು ಇತರೆ ಅವಶೇಷಗಳು ಸಿಕ್ಕಿದ್ದವು. ವಿವರಕ್ಕೆ ಈ ಕೊಂಡಿ ಕ್ಲಿಕ್ ಮಾಡಿ
2) ಈ ನಡುವೆ, ನಿಗೂಢ ಸ್ಫೋಟ ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟ ಅಲ್ಲ ಎಂಬುದನ್ನು ದಿ ರಾಮೇಶ್ವರಂ ಕೆಫೆ ಮಾಲೀಕರು ಪ್ರತಿಪಾದಿಸುತ್ತಲೇ ಇದ್ದರು. 10 ಸೆಕೆಂಡ್ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದೆ. ಈ ಸ್ಫೋಟಕ್ಕೆ ಬ್ಯಾಗ್ ಕಾರಣ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಗಾಯಾಳುಗಳ ಆರೈಕೆ ವಿಚಾರದಲ್ಲಿ ಕಾಳಜಿ ತೋರಿದ ಅವರು, ದುರಂತಕ್ಕೆ ಸಂಬಂಧಿಸಿ ಕಳವಳ ವ್ಯಕ್ತಪಡಿಸಿದರು. ವಿವರಕ್ಕೆ ಈ ಕೊಂಡಿ ಕ್ಲಿಕ್ ಮಾಡಿ
3) ನಿಗೂಢ ಸ್ಫೋಟಕ್ಕೆ ತತ್ತರಿಸಿ ಹೋಗಿದ್ದ ರಾಮೇಶ್ವರಂ ಕೆಫೆ ಬಹುತೇಕ ಆಹಾರ ಪ್ರಿಯರ ಅಚ್ಚುಮೆಚ್ಚಿನ ಕೇಂದ್ರವಾಗಿತ್ತು. ಅಲ್ಲಿಗೆ ಅನೇಕ ಸೆಲೆಬ್ರಿಟಿಗಳು ಹೋಗುತ್ತಿರುತ್ತಾರೆ. ಅಲ್ಲಿ ಆಹಾರ ಸೇವಿಸುತ್ತ ಅದರ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಕೂಡ ಮಾಡುತ್ತಾರೆ. ಇದೇ ರೀತಿ ಈ ಕೆಫೆಗೆ ಸೆಲೆಬ್ರಿಟಿ ಕಾರ್ತಿಕ್ ಆರ್ಯನ್ ಕೂಡ ಬಂದಿದ್ರು. ಈ ಕೆಫೆ ಯಾಕೆ ಇಷ್ಟು ಜನಪ್ರಿಯವಾಯಿತು - ವಿವರಕ್ಕೆ ಈ ಕೊಂಡಿ ಕ್ಲಿಕ್ ಮಾಡಿ
4) ಬೆಂಗಳೂರಿನ ಐಟಿಪಿಎಲ್ ಮೇನ್ ರೋಡ್‌ನಲ್ಲಿರುವ ಬ್ರೂಕ್‌ಫೀಲ್ಡ್‌ನ ದಿ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾ.1) ಮಧ್ಯಾಹ್ನ ನಿಗೂಢ ಸ್ಫೋಟ ಸಂಭವಿಸಿದಾಗ ಗೊಂದಲದ ಸನ್ನಿವೇಶ ಸೃಷ್ಟಿಯಾಗಿತ್ತು. ತತ್‌ಕ್ಷಣಕ್ಕೆ ಸ್ಥಳಕ್ಕೆ ತೆರಳಿದ ಮಾಧ್ಯಮ ಪ್ರತಿನಿಧಿಗಳು ಸಂಗ್ರಹಸಿದ ವಿಡಿಯೋ ತುಣುಕುಗಳು ಪ್ರಸಾರವಾಗಿದ್ದವು. ಈ ಪೈಕಿ ಆಯ್ದವುಗಳ ಚಿತ್ರನೋಟ ಹೀಗಿದೆ ಕ್ಲಿಕ್ ಮಾಡಿ.
5) ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ 4.45ರ ಹೊತ್ತಿಗೆ ಸೋಷಿಯಲ್ ಮೀಡಿಯಾದಲ್ಲೊಂದು ವಿಡಿಯೋ ಶೇರ್ ಆಯಿತು. ಅದು ಸ್ಫೋಟದ ಹೊತ್ತಿಗೆ ಕೆಫೆಯಲ್ಲಿ ಆಹಾರ ಸೇವಿಸಲು ಬಂದಿದ್ದ ಕುಮಾರ್ ಅಲಂಕೃತ್ ಎಂಬುವವರು ಶೇರ್ ಮಾಡಿದ್ದ ವಿಡಿಯೋ. ಅದು ಸ್ಫೋಟ ಸಂಭವಿಸಿದ ಬಳಿಕ ಕೆಫೆಯೊಳಗೆ ತುಂಬಿಕೊಂಡ ಹೊಗೆ, ಅಲ್ಲಿಂದ ಹೊರಬರುತ್ತಿರುವ ಗ್ರಾಹಕರ ದೃಶ್ಯವನ್ನು ಹೊಂದಿತ್ತು. ವಿಡಿಯೋ ಮತ್ತು ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
6) ರಾಮೇಶ್ವರಂ ಕೆಫೆ ಸ್ಫೋಟ ಸಿಲಿಂಡರ್ ಸ್ಫೋಟ ಅಲ್ಲ, ಅದೊಂದು ಬಾಂಬ್ ಬ್ಲಾಸ್ ಎಂದು ಡಿಜಿಪಿ ಅಲೋಕ್ ಮೋಹನ್ ಶುಕ್ರವಾರ ಸಂಜೆ ವೇಳೆಗೆ ಖಚಿತ ಪಡಿಸಿದರು. ಎಫ್‌ಎಸ್‌ಎಲ್ ತಂಡ ಮತ್ತು ಪೊಲೀಸರ ತಂಡ ಸ್ಥಳಪರಿಶೀಲನೆ ಮಾಡಿದ್ದು, ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಇದರ ವಿಶ್ಲೇಷಣೆ ಮಾಡಿದ ಬಳಿಕ ಸಿಲಿಂಡರ್ ಸ್ಫೋಟ ಅಥವಾ ಬಾಯ್ಲರ್ ಸ್ಫೋಟದ ಸಾಧ್ಯತೆ ಅಲ್ಲಗಳೆಯಲಾಗಿದೆ. ಇದು ಬಾಂಬ್ ಸ್ಪೋಟ ಎಂಬುದು ಖಚಿತವಾಗಿದೆ ಎಂದು ಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದರು. ವಿವರ ಓದಿಗಾಗಿ ಕ್ಲಿಕ್ ಮಾಡಿ.
7) ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯ ಬಹಿರಂಗವಾಯಿತು. 1.02 ನಿಮಿಷದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು, ಎರಡು ಸ್ಫೋಟದ ದೃಶ್ಯಗಳಿವೆ ಅದರಲ್ಲಿ. ಮೊದಲನೇಯದ್ದು ಲಘು ಪ್ರಮಾಣದ ಸ್ಫೋಟವಾದರೆ, ಇನ್ನೊಂದು ಸ್ವಲ್ಪ ತೀವ್ರತೆಯೊಂದಿಗೆ ಕೂಡಿತ್ತು. ಸಿಸಿಟಿವಿ ವಿಡಿಯೋ ತುಣಕು ಮತ್ತು ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
8) ಬೆಂಗಳೂರು ರಾಮೇಶ್ವರ ಕೆಫೆ ಸ್ಫೋಟದ ತನಿಖೆ ತೀವ್ರಗೊಂಡಿದೆ. ಅದು ಲಘು ಪ್ರಮಾಣದ ಐಇಡಿ ಸ್ಫೋಟ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ದುರಂತದಲ್ಲಿ 8 ಜನರಿಗೆ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಖಚಿತವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸಂಜೆ ಮೈಸೂರಿನಲ್ಲಿ ತಿಳಿಸಿದರು. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ.
9) ರಾಮೇಶ್ವರಂ ಕೆಫೆ ಸ್ಫೋಟದ ಕುರಿತು ಎನ್‌ಐಎಗೆ ಮಾಹಿತಿ ನೀಡಲಾಗಿದೆ ಎಂದು ಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದು, ಅವರು ಕೂಡ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅವರ ತಂಡವೂ ಸ್ಥಳಕ್ಕೆ ಆಗಮಿಸಲಿದೆ ಎಂದು ಹೇಳಿದರು. ವಿವರ ವರದಿಗೆ ಕ್ಲಿಕ್ ಮಾಡಿ.
10) ಬೆಂಗಳೂರು ಕೆಫೆ ಸ್ಫೋಟಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆಯಲ್ಲಿ ಶಂಕಿತ ಆರೋಪಿಯ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಖಚಿತವಾಗಿದೆ. ಪೊಲೀಸರು ಶಂಕಿತ ಆರೋಪಿಯ ಚಹರೆ ಗುರುತಿಸಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದರ ವಿವರ ವರದಿಗೆ ಇಲ್ಲಿ ಕ್ಲಿಕ್ ಮಾಡಿ.
(This copy first appeared in Hindustan Times Kannada website. To read more like this please logon to kannada.hindustantimes.com)