ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನೀರಿನ ಬವಣೆ; ಪೂರ್ವದಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕಡಿಮೆ, ಖಾಲಿ ಮಾಡುತ್ತಿರುವ ಬಾಡಿಗೆದಾರರು, ರಿಯಲ್ ಎಸ್ಟೇಟ್‌ಗೂ ಹೊಡೆತ

ಬೆಂಗಳೂರು ನೀರಿನ ಬವಣೆ; ಪೂರ್ವದಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕಡಿಮೆ, ಖಾಲಿ ಮಾಡುತ್ತಿರುವ ಬಾಡಿಗೆದಾರರು, ರಿಯಲ್ ಎಸ್ಟೇಟ್‌ಗೂ ಹೊಡೆತ

ಬೆಂಗಳೂರು ನೀರಿನ ಬವಣೆ ಈ ಬಾರಿ ತೀವ್ರಗೊಂಡಿದ್ದು, ಬೆಂಗಳೂರು ಪೂರ್ವದಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಅಲ್ಲೆಲ್ಲ ಬಾಡಿಗೆದಾರರು ಮನೆ ಖಾಲಿ ಮಾಡುತ್ತಿದ್ದಾರೆ. ಇನ್ನೊಂದೆಡೆ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಹೊಡೆತ ಬೀಳತೊಡಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ನೀರಿನ ಬವಣೆ; ಪೂರ್ವದಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕಡಿಮೆ, ಖಾಲಿ ಮಾಡುತ್ತಿರುವ ಬಾಡಿಗೆದಾರರು, ರಿಯಲ್ ಎಸ್ಟೇಟ್‌ಗೂ ಹೊಡೆತ
ಬೆಂಗಳೂರು ನೀರಿನ ಬವಣೆ; ಪೂರ್ವದಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕಡಿಮೆ, ಖಾಲಿ ಮಾಡುತ್ತಿರುವ ಬಾಡಿಗೆದಾರರು, ರಿಯಲ್ ಎಸ್ಟೇಟ್‌ಗೂ ಹೊಡೆತ

ಬೆಂಗಳೂರು: ಮಾಹಿತಿ ತಂತ್ರಜ್ಞಾನದ ಪ್ರಮುಖ ಕೇಂದ್ರಗಳಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ ಒಂದು. ಇದೇ ಕಾರಣಕ್ಕೆ ಈ ಭಾಗದಲ್ಲಿ ಬಾಡಿಗೆ ಮನೆಗಳಿಗೂ ತೀವ್ರ ಬೇಡಿಕೆ ಇತ್ತು. ಹಾಗೆಯೇ ಹೂಡಿಕೆದಾರರು ಹೆಚ್ಚು ಬೆಲೆ ತೆತ್ತಾದರೂ ರಾಜ್ಯ ರಾಜಧಾನಿಯ ಈ ಭಾಗದಲ್ಲಿ ಭೂಮಿಗೆ ಬಂಡವಾಳ ಹೂಡಿ ಮನೆ, ಅಪಾರ್ಟ್ ಮೆಂಟ್ ಮತ್ತು ಕಾಂಪ್ಲೆಕ್ಸ್ ಗಳನ್ನು ಕಟ್ಟುತ್ತಿದ್ದರು. ಬಾಡಿಗೆ ಮೂಲಕ ಹಾಕಿದ ಬಂಡವಾಳ ಬರುವ ಗ್ಯಾರಂಟಿ ಇತ್ತು. ಆದರೆ ನೀರಿನ ಕೊರತೆ ಎಲ್ಲ ನಂಬಿಕೆಗಳನ್ನು ಬುಡಮೇಲು ಮಾಡಿದೆ. ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದು, ಭವಿಷ್ಯದ ವರ್ಷಗಳಲ್ಲಿ ನೀರಿನ ಸಮಸ್ಯೆ ಕಾಡುವುದಿಲ್ಲ ಎಂಬ ನಂಬಿಕೆ ಯಾರಲ್ಲೂ ಉಳಿದಿಲ್ಲ.

ಟ್ರೆಂಡಿಂಗ್​ ಸುದ್ದಿ

ಹಾಗಾಗಿ ಬಂಡವಾಳ ಹೂಡಿಕೆದಾರರು ಐಟಿ ರಾಜಧಾನಿಯ ಪೂರ್ವ ಭಾಗದಿಂದ ಉತ್ತರ ಅಥವಾ ಕೇಂದ್ರ ಭಾಗಕ್ಕೆ ವಲಸೆ ಹೋಗುತ್ತಿದ್ದಾರೆ. ವೈಟ್ ಫೀಲ್ಡ್ ಭಾಗದ ಮಧ್ಯವರ್ತಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಅನಿಸಿಕೆಗಳು ಈ ವಾದವನ್ನು ಪುಷ್ಠೀಕರಿಸುತ್ತಿವೆ. ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕುಸಿಯುತ್ತಿದೆ ಎಂದು ಹೇಳುತ್ತಾರೆ.

ಪೂರ್ವ ಬೆಂಗಳೂರು ನೀರಿಗೆ ಸಮಸ್ಯೆ; ರಿಯಲ್‌ ಎಸ್ಟೇಟ್‌ಗೆ ಹೊಡೆತ

ಎರಡು ತಿಂಗಳ ಹಿಂದೆ ವೈಟ್ ಫೀಲ್ಡ್ ಸುತ್ತಮುತ್ತ ನಿವೇಶನ ಖರೀದಿಸಿ ಮನೆಗಳನ್ನು ಕಟ್ಟಿ ಬಾಡಿಗೆಗೆ ಬಿಡಬೇಕು ಎಂದು ಚಿಂತನೆ ನಡೆಸಿದ್ದ ದಂಪತಿಯೊಬ್ಬರು ಇದೀಗ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ಮುಂದಿನ ವರ್ಷವೂ ಇದೇ ರೀತಿ ಬಿರುಬೇಸಿಗೆ ಆವರಿಸಿ ನೀರಿನ ಸಮಸ್ಯೆ ಎದುರಾದರೆ ಹಾಕಿದ ಬಂಡವಾಳದ ಗತಿ ಏನು ಎಂಬ ಭಯದಿಂದ ಬೆಂಗಳೂರು ಕೇಂದ್ರ ಭಾಗದಲ್ಲೇ ಮನೆ ಕಟ್ಟುವ ನಿರ್ಧಾರಕ್ಕೆ ಬಂದಿದ್ದಾರೆ. ಕೇಂದ್ರ ಭಾಗದಲ್ಲಿ ಕನಿಷ್ಟ ಪಕ್ಷ ಕಾವೇರಿ ನೀರು ಸರಬರಾಜಾಗುತ್ತದೆ ಎಂಬ ನಂಬಿಕೆ ಇವರದ್ದು.

ವೈಟ್ ಫೀಲ್ಡ್ ಭಾಗದ ಎಲ್ಲ ಬಡಾವಣೆಗಳಲ್ಲೂ ಕಾವೇರಿ ನೀರಿನ ಸಂಪರ್ಕ ಇಲ್ಲ. 2007 ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಈ ಭಾಗದ ಪ್ರದೇಶಗಳು ಈಗಲೂ ಕಾವೇರಿ ನೀರಿನ ಸಂಪರ್ಕ ಇಲ್ಲದೆ ಬೋರ್ ವೆಲ್ ನೀರನ್ನೇ ಆಶ್ರಯಿಸಿವೆ. ಆದರೆ ಈ ವರ್ಷ ಅಂತರ್ಜಲ ಕುಸಿತದಿಂದ ಬಹುತೇಕ ಬೋರ್ ವೆಲ್ ಗಳು ಬತ್ತಿ ಹೋಗಿವೆ. ಮೇ 2024ರೊಳಗೆ ಕಾವೇರಿ 5 ನೇ ಹಂತ ಪೂರ್ಣಗೊಳ್ಳುತ್ತದೆ ಎಂದು ಸರ್ಕಾರ ಭರವಸೆ ನೀಡಿತ್ತಾದರೂ ಅಷ್ಟರೊಳಗೆ ಪೂರ್ಣಗೊಳ್ಳುವ ಸಾಧ್ಯತೆಗಳು ಕಡಿಮೆ.

ಬೆಂಗಳೂರು ಕೇಂದ್ರ, ಉತ್ತರದ ಕಡೆಗೆ ಜನರ ಚಿತ್ತ

ಬೆಂಗಳೂರು ಕೇಂದ್ರ ಭಾಗದಲ್ಲಿ ಸಂಪೂರ್ಣವಾಗಿ ಕಾವೇರಿ ನೀರಿನ ಸರಬರಾಜು ಇದೆ. ಉತ್ತರ ಭಾಗದ ಹೆಣ್ಣೂರು, ಹೆಬ್ಬಾಳ ಭಾಗದಲ್ಲೂ ಕಾವೇರಿ ನೀರಿನ ಸಂಪರ್ಕ ಚೆನ್ನಾಗಿದೆ. ಆದ್ದರಿಂದ ಈ ಭಾಗಕ್ಕೆ ವಲಸೆ ಹೋಗಲು ತೀರ್ಮಾನಿಸಿದ್ದಾರೆ.

ವೈಟ್ ಫೀಲ್ಡ್ ಪ್ರದೇಶದಲ್ಲಿ ಭೂಮಿಯ ಬೆಲೆ ವರ್ಷದಿಂದ ವರ್ಷಕ್ಕೆ ಗಗನಕ್ಕೇರುತ್ತಿದೆ. ಆದರೆ ನೀರಿನ ಸಮಸ್ಯೆ ಹೊಡೆತ ನೀಡಿರುವುದರಲ್ಲಿ ಸಂಶಯವಿಲ್ಲ. ಅಪಾರ್ಟ್ ಮೆಂಟ್ ಗಳಲ್ಲಿ ನಿರ್ವಹಣಾ ವೆಚ್ಚ ಹೆಚ್ಚುತ್ತಿದೆ. ಈಗಾಗಲೇ ನಿಗದಿಯಾಗಿರುವ ವೆಚ್ಚದ ಜೊತೆಗೆ ನೀರಿಗಾಗಿಯೇ ಪ್ರತ್ಯೇಕವಾಗಿ 3-4 ಸಾವಿರ ರೂ ತೆರಬೇಕಾಗಿದೆ. ಅಪಾರ್ಟ್ ಮೆಂಟ್ ನಿವಾಸಿಗಳು ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಬಾಡಿಗೆ ಮನೆಗಳಿಗೆ ಬೇಡಿಕೆ ಕುಸಿದಿರುವುದಂತೂ ನಿಜ ಎಂದು ಮಧ್ಯವರ್ತಿಯೊಬ್ಬರು ಹೇಳುತ್ತಾರೆ.

ಮೊದಲೆಲ್ಲಾ ಮನೆಗಳಿಗೆ ಬಾಡಿಗೆಗೆ ಮನೆ ಹುಡುಕಾಟ ನಡೆಸುವವರು ಬೇರೆ ಬೇರೆ ಸೌಲಭ್ಯ ಸವಲತ್ತುಗಳನ್ನು ಕೇಳುತ್ತಿದ್ದರು. ಆದರೆ ಈಗ ನೀರಿನ ವ್ಯವಸ್ಥೆ ಬಿಟ್ಟು ಬೇರೇನೂ ಕೇಳುವುದಿಲ್ಲ ಎನ್ನುತ್ತಾರೆ. ನಾವು ವೈಟ್ ಫೀಲ್ಡ್ ನಿವಾಸಿಗಳು, ಅಲ್ಲಿ ಮನೆ ಇದೆ, ಅಪಾರ್ಟ್ ಮೆಂಟ್ ಇದೆ, ನಿವೇಶನ ಇದೆ ಎಂದು ಗರ್ವದಿಂದ ಹೇಳಿಕೊಳ್ಳುತ್ತಿದ್ದವರೆಲ್ಲಾ ಇಂದು ಸಪ್ಪೆಮೋರೆ ಹಾಕಿಕೊಳ್ಳುತ್ತಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)

IPL_Entry_Point