Bengaluru News: ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ, ಬಿಬಿಎಂಪಿ ಕಚೇರಿಗಳಲ್ಲಿ ಬಳಸುವಂತಿಲ್ಲ ಪ್ಲಾಸ್ಟಿಕ್ ಐಟಂಗಳು; ಬಟ್ಟೆ ಬ್ಯಾನರ್‌ಗೆ ಆದ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ, ಬಿಬಿಎಂಪಿ ಕಚೇರಿಗಳಲ್ಲಿ ಬಳಸುವಂತಿಲ್ಲ ಪ್ಲಾಸ್ಟಿಕ್ ಐಟಂಗಳು; ಬಟ್ಟೆ ಬ್ಯಾನರ್‌ಗೆ ಆದ್ಯತೆ

Bengaluru News: ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ, ಬಿಬಿಎಂಪಿ ಕಚೇರಿಗಳಲ್ಲಿ ಬಳಸುವಂತಿಲ್ಲ ಪ್ಲಾಸ್ಟಿಕ್ ಐಟಂಗಳು; ಬಟ್ಟೆ ಬ್ಯಾನರ್‌ಗೆ ಆದ್ಯತೆ

Bengaluru: ಪ್ಲಾಸ್ಟಿಕ್‌ ಬದಲಾಗಿ ಬಟ್ಟೆ ಚೀಲಗಳು ಮತ್ತು ಬಟ್ಟೆ ಬ್ಯಾನರ್ ಗಳನ್ನು ಬಳಸಬಹುದಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

 ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ, ಬಿಬಿಎಂಪಿ ಕಚೇರಿಗಳಲ್ಲಿ ಬಳಸುವಂತಿಲ್ಲ ಪ್ಲಾಸ್ಟಿಕ್ ಐಟಂಗಳು; ಬಟ್ಟೆ ಬ್ಯಾನರ್‌ಗೆ ಆದ್ಯತೆ
ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ, ಬಿಬಿಎಂಪಿ ಕಚೇರಿಗಳಲ್ಲಿ ಬಳಸುವಂತಿಲ್ಲ ಪ್ಲಾಸ್ಟಿಕ್ ಐಟಂಗಳು; ಬಟ್ಟೆ ಬ್ಯಾನರ್‌ಗೆ ಆದ್ಯತೆ

ಬೆಂಗಳೂರು: ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿ ವರ್ಷಗಳೇ ಕಳೆದಿದ್ದರೂ ಸಂಪೂರ್ಣ ಮತ್ತು ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ. ಎಗ್ಗಿಲ್ಲದೆ ಪ್ಲಾಸ್ಟಿಕ್ ಬಳಕೆ ಅವ್ಯಾಹತವಾಗಿ ನಡೆದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿಯೂ ಪ್ಲಾಸ್ಟಿಕ್ ನಿಷೇಧಿಸಲ್ಪಟ್ಟಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ನಿಟ್ಟಿನಲ್ಲಿ ಬಿಬಿಎಂಪಿ ಮತ್ತೊಮ್ಮೆ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಿ ಸುತ್ತೋಲೆ ಹೊರಡಿಸಿದೆ. ಈ ಬಾರಿ ಪಾಲಿಕೆಯು ತನ್ನಿಂದಲೇ ಪ್ಲಾಸ್ಟಿಕ್ ನಿಷೇಧ ಮಾಡುವ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ಬಿಬಿಎಂಪಿಯ ಎಲ್ಲ ಕಚೇರಿಗಳು ಮತ್ತು ಸಭೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದು, ಪ್ಲಾಸ್ಟಿಕ್ ನೀರಿನ ಬಾಟಲ್ ಗಳನ್ನು ಬಳಸುವಂತಿಲ್ಲ. ಬದಲಾಗಿ ಸ್ಟೀಲ್, ಗಾಜಿನ ಲೋಟ ಅಥವಾ ಬಾಟಲ್ ಗಳನ್ನು ಬಳಕೆ ಮಾಡಬಹುದಾಗಿದೆ. ಪ್ಲಾಸ್ಟಿಕ್ ಬ್ಯಾಗ್ ಮತ್ತು ಆಹಾರವನ್ನು ಪ್ಯಾಕಿಂಗ್ ಮಾಡಿದ ಪ್ಲಾಸ್ಟಿಕ್ ಪರಿಕರಗಳನ್ನು ಬಳಸುವಂತಿಲ್ಲ. ಬದಲಾಗಿ ಊಟದ ತಟ್ಟೆ, ಡಬ್ಬ ಅಥವಾ ಕ್ಯಾರಿಯರ್ ಗಳ ಮೂಲಕ ಊಟ ತಿಂಡಿಗಳನ್ನು ತರಿಸುವ ವ್ಯವಸ್ಥೆ ಮಾಡಬಹುದಾಗಿದೆ. ಸಭೆ, ಸಮಾರಂಭಗಳನ್ನು ಹಮ್ಮಿಕೊಂಡಾಗ ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ ಮತ್ತು ಇತರೆ ವಸ್ತುಗಳನ್ನು ಬಳಸುವಂತಿಲ್ಲ. ಬದಲಾಗಿ ಸ್ಟೀಲ್ ಕಟ್ ಲೆರಿ ಬ್ಯಾಂಕ್ ತೆರದು ಅವಶ್ಯಕ ಸಾಮಾನುಗಳನ್ನು ಖರೀದಿಸಿ ಬಳಸಬೇಕು ಎಂದು ಸೂಚನೆ ನೀಡಲಾಗಿದೆ.

ಕಚೇರಿಗಳಲ್ಲಿ ಇತರೆ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳಾದ ಪ್ಲಾಸ್ಟಿಕ್ ಸ್ಟಿಕ್ ಹೊಂದಿರುವ ಇಯರ್ ಬಡ್, ಬಲೂನ್ ಗಳಿಗೆ ಪ್ಲಾಸ್ಟಿಕ್ ಸ್ಟಿಕ್ ಗಳು, ಕ್ಯಾಂಡಿ ಸ್ಟಿಕ್ ಗಳು, ಐಸ್ ಕ್ರೀಂ ಪ್ಲಾಸ್ಟಿಕ್ ಸ್ಟಿಕ್ ಗಳು, ಅಲಂಕಾರಿಕ ಕಾರ್ಯಗಳಿಗೆ ಬಳಸುವ ಥರ್ಮೋಕೋಲ್ ಗಳನ್ನು ಉಪಯೋಗಿಸುವಂತಿಲ್ಲ.

ಸಭೆ ಸಮಾರಂಭಗಳಿಗೆ ಉಪಯೋಗಿಸಬಹುದಾದ ಪ್ಯಾಕಿಂಗ್ ಪ್ಲಾಸ್ಟಿಕ್, ಅದರಲ್ಲೂ ಸ್ವಿಟ್ ಬಾಕ್ಸ್ ಮತ್ತು ಆಹ್ವಾನ ಪತ್ರಿಕೆಗಳ ಮೇಲೆ ಸಿಗರೇಟ್ ಪ್ಯಾಕ್ ಗಳ ಮೇಲೆ ಬಳಸುವ ತೆಳುವಾದ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವಂತಿಲ್ಲ. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳು ಮತ್ತು ಥರ್ಮೋಕೋಲ್ ನಿಂದ ಉತ್ಪತ್ತಿಯಾಗುವ ಮತ್ತು ಬಳಸುವ ವಸ್ತುಗಳು ಹಾಗೂ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್ ಗಳನ್ನು ಬಳಸುವಂತಿಲ್ಲ. ಬದಲಾಗಿ ಬಟ್ಟೆ ಚೀಲಗಳು ಮತ್ತು ಬಟ್ಟೆ ಬ್ಯಾನರ್ ಗಳನ್ನು ಬಳಸಬಹುದಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ಬಿಬಿಎಂಪಿಯ ಎಲ್ಲ ಕಚೇರಿಗಳಿಗೂ ಸೂಕ್ತ ಕ್ರಮಕ್ಕೆ ಈ ಸುತ್ತೋಲೆಯನ್ನು ಕಳುಹಿಸಲಾಗಿದೆ.

ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಲು ಕೇಂದ್ರ ಸರಕಾರ ಪ್ಲಾಸ್ಟಿಕ್ ನಿಷೇಧ ಕಾಯಿದೆಯನ್ನು ಹೊರಡಿಸಿದೆ. ಈ ಅಧಿಸೂಚನೆಯನ್ವಯ ಏಕ ಬಳಕೆಯ ಪ್ಲಾಸ್ಟಿಕ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ. ಆದರೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಆಯುಕ್ತರು ಮತ್ತೊಂದು ಸುತ್ತೋಲೆ ಹೊರಡಿಸಿದ್ದಾರೆ. ಈ ಹಿಂದೆ ರಾಜ್ಯ ಸರಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ 11-03-2016 ಮತ್ತು 30-06-2022ರಲ್ಲಿ ಸುತ್ತೋಲೆ ಹೊರಡಿಸಿತ್ತು.

ದಶಕದ ಹಿಂದೆ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು. ನಿರಂತರವಾಗಿ ಅಂಗಡಿಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ನಿಷೇಧಿತ ಪ್ಲಾಸ್ಟಿಕ್ ಪರಿಕರಗಳನ್ನು ವಶಡಿಸಿಕೊಳ್ಳಲಾಗುತ್ತಿತ್ತು. ಸಣ್ಣ ಅಂಗಡಿಗಳಲ್ಲೂ ಪ್ಲಾಸ್ಟಿಕ್ ಕವರ್ ಗಳನ್ನು ನೀಡಲು ಹೆದರುತ್ತಿದ್ದರು. ಬದಲಾಗಿ ಪೇಪರ್ ಕವರ್ ಗಳನ್ನು ಬಳಸುತ್ತಿದ್ದರು. ಹಳೇ ಪೇಪರ್ ಗಳಿಂದ ಮಾಡಿದ ಕವರ್ ಗಳಿಗೆ ಬೇಡಿಕೆಯೂ ಹೆಚ್ಚಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಈ ಕ್ರಮ ನಿಂತೇ ಹೋಗಿತ್ತು. ಇದೀಗ ಬಿಬಿಎಂಪಿ ಮತ್ತೆ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧಿಸುವ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ತನ್ನ ಕಚೇರಿ ಸಭೆ ಸಮಾರಂಭಗಳಿಂದಲೇ ಪ್ಲಾಸ್ಟಿಕ್ ನಿಷೇಧಕ್ಕೆ ಮುನ್ನುಡಿ ಬರೆಯಲು ಹೊರಟಿರುವ ಕ್ರಮವನ್ನು ಬೆಂಗಳೂರಿನ ನಾಗರೀಕರು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ. ಎಷ್ಟರ ಮಟ್ಟಿಗೆ ಜಾರಿಗೆ ಎಂದು ಕಾದು ನೋಡಬೇಕಿದೆ.

(ವರದಿ: ಎಚ್.ಮಾರುತಿ)

Whats_app_banner