ಕನ್ನಡ ಸುದ್ದಿ  /  ಕರ್ನಾಟಕ  /  ವಿಶ್ವದ ಗಮನ ಸೆಳೆದ ಬೆಂಗಳೂರು ನೀರಿನ ಬಿಕ್ಕಟ್ಟು; ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟವಾದ ವಿಶೇಷ ವರದಿಯಲ್ಲಿನ ಅಂಶಗಳಿವು

ವಿಶ್ವದ ಗಮನ ಸೆಳೆದ ಬೆಂಗಳೂರು ನೀರಿನ ಬಿಕ್ಕಟ್ಟು; ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟವಾದ ವಿಶೇಷ ವರದಿಯಲ್ಲಿನ ಅಂಶಗಳಿವು

ಬೆಂಗಳೂರು ನೀರಿನ ಸಮಸ್ಯೆ ಇದೀಗ ವಿಶ್ವದ ಗಮನ ಸೆಳೆದಿದೆ. ಸಿಲಿಕಾನ್‌ ಸಿಟಿಯ ನೀರಿನ ಬಿಕ್ಕಟ್ಟಿಗೆ ಸಂಬಂಧಿಸಿದ ವಿಶೇಷ ವರದಿಯೊಂದು ದಿ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟವಾಗಿದೆ. ಅವೈಜ್ಞಾನಿಕ ಬೆಳವಣಿಗೆ, ನೀರಿನ ಸಂರಕ್ಷಣೆಯಲ್ಲಿ ವಿಫಲವಾಗಿದ್ದೇ ನೀರಿನ ಅಭಾವಕ್ಕೆ ಕಾರಣ ಎಂದಿರುವ ಈ ವರದಿಯ ಪ್ರಮುಖಾಂಶಗಳು ಇಲ್ಲಿವೆ. (ವರದಿ: ಎಚ್. ಮಾರುತಿ)

ವಿಶ್ವದ ಗಮನ ಸೆಳೆದ ಬೆಂಗಳೂರು ನೀರಿನ ಬಿಕ್ಕಟ್ಟು
ವಿಶ್ವದ ಗಮನ ಸೆಳೆದ ಬೆಂಗಳೂರು ನೀರಿನ ಬಿಕ್ಕಟ್ಟು

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರು ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂದೇ ಜಗತ್ಪ್ರಸಿದ್ಧಿಯಾಗಿದೆ. ಹಾಗೆಯೇ ಭಾರತದ ಐಟಿ ಸಿಟಿಯಲ್ಲಿ ಈ ವರ್ಷ ನೀರಿನ ಸಮಸ್ಯೆಯಾಗಿದೆ ಎನ್ನುವುದು ಈಗ ಜಗತ್ತಿನ ಪ್ರಮುಖ ಸುದ್ದಿಯಾಗಿ ಹೊರಹೊಮ್ಮಿದೆ. ವಿಶ್ವದ ಖ್ಯಾತ ಮಾಧ್ಯಮ ಸಂಸ್ಥೆ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಬೆಂಗಳೂರಿನ ನೀರಿನ ಸಮಸ್ಯೆ ಕುರಿತು ವರದಿಯೊಂದು ಪ್ರಕಟವಾಗಿದೆ. ಜೊತೆಗೆ ನೀರನ್ನು ಸಂರಕ್ಷಿಸುವಲ್ಲಿ ಉದ್ಯಾನ ನಗರ ಹೇಗೆ ವಿಫಲವಾಗಿದೆ ಎಂದೂ ಈ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನ ಅಳಿದುಳಿದ ಕೆರೆಗಳು ಒಣಗಿ ಹೋಗಿವೆ. ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆ ಬಾವಿಗಳು ಬತ್ತಿ ಹೋಗಿವೆ. ನೀರು ಬರುತ್ತಿರುವ ಬೋರ್‌ವೆಲ್‌ಗಳ ಸಮೀಪ ತಮ್ಮ ಒಡಲನ್ನು ತುಂಬಿಸಿಕೊಂಡು ಮನೆ ಮನೆಗೆ ಸರಬರಾಜು ಮಾಡಲು ನೀರಿನ ಟ್ಯಾಂಕರ್‌ಗಳು ಸಾಲುಗಟ್ಟಿ ನಿಂತಿವೆ.

ಗಗನಚುಂಬಿ ಅಪಾರ್ಟ್‌ಮೆಂಟ್‌ಗಳಿಗೆ ಈ ಟ್ಯಾಂಕರ್‌ಗಳ ನೀರು ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಗಿದೆ. 50-2000 ಮನೆಗಳಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಇರುವ ಜನಸಂಖ್ಯೆ ಎಷ್ಟು? ಎಷ್ಟು ನೀರಿನ ಅವಶ್ಯಕತೆ ಇದೆ ಎಂದು ಊಹಿಸುವುದು ಕಷ್ಟವಾಗುತ್ತದೆ. ಪ್ರತಿದಿನ ಟ್ಯಾಂಕರ್ ನೀರಿಗೆ 50 ಕರೆಗಳನ್ನು ಸ್ವೀಕರಿಸುತ್ತೇನೆ. ಆದರೆ 15 ಟ್ಯಾಂಕರ್ ನೀರು ಮಾತ್ರ ಲಭ್ಯವಾಗುತ್ತಿದೆ ಎಂದು ಟ್ಯಾಂಕರ್ ಮಾಲೀಕರೊಬ್ಬರು ಹೇಳುತ್ತಾರೆ.

ಹೆಸರಿಗೆ ಬೆಂಗಳೂರು ದಕ್ಷಿಣ ಏಷ್ಯಾದ ಸಿಲಿಕಾನ್ ವ್ಯಾಲಿ. ಆದರೆ ನೀರಿನ ಸಮಸ್ಯೆಯನ್ನು ಸಾಫ್ಟ್‌ವೇರ್ ಬಗೆಹರಿಸುವುದಿಲ್ಲ ಎನ್ನುವುದು ವಿಪರ್ಯಾಸ. ಸಾವಿರಾರು ಮಕ್ಕಳಿರುವ ಶಾಲೆ, ಕಚೇರಿ, ಕೈಗಾರಿಕೆಗಳಲ್ಲಿ ನೀರಿನ ಕೊರತೆ ಇದೆ. ಮನೆಗಳಲ್ಲಿ ಬಕೆಟ್‌ಗಳಲ್ಲಿ ತುಂಬಿಸಿಕೊಂಡು ಸ್ನಾನ ಮಾಡುವ ಪರಿಸ್ಥಿತಿ ಇದೆ. ಅದೆಷ್ಟೋ ಶಾಲೆ ಮತ್ತು ಮನೆಗಳಲ್ಲಿ ಕಲುಷಿತ ನೀರು ಕುಡಿದು ಆಸ್ಪತ್ರೆಗೆ ದಾಖಲಾಗಿರುವ ಉದಾಹರಣೆಗಳು ಕಣ್ಣ ಮುಂದಿವೆ.

ನಿಜಕ್ಕೂ ಬೆಂಗಳೂರಿನಲ್ಲಿ ನೀರಿನ ಕೊರತೆ ಇದೆಯೇ?

ಬೆಂಗಳೂರಿನಲ್ಲಿ ನೀರಿನ ಕೊರತೆ ಇಲ್ಲ. ಸಿಯಾಟಲ್‌ನಲ್ಲಿ ಆಗುವಷ್ಟೇ ಮಳೆ ಬೆಂಗಳೂರಿನಲ್ಲೂ ಸುರಿಯುತ್ತದೆ. ಕೆಟ್ಟ ಆಡಳಿತ ವ್ಯವಸ್ಥೆ ಈ ಪರಿಸ್ಥಿತಿಗೆ ಕಾರಣವಾಗಿದೆ. ಬೆಂಗಳೂರು ತಂತ್ರಜ್ಞಾನದಲ್ಲಿ ದಾಪುಗಾಲು ಹಾಕುತ್ತಿದೆ. 90ರ ದಶಕದಲ್ಲಿ ಕೇವಲ 15 ಮಿಲಿಯನ್ ಜನಸಂಖ್ಯೆ ಇತ್ತು. ಆಗ ಪರಿಸರ ಸಮತೋಲನ ವ್ಯವಸ್ಥೆ ಸಮರ್ಪಕವಾಗಿತ್ತು. ನಂತರದ ವರ್ಷಗಳಲ್ಲಿ ಬೆಂಗಳೂರು ಅವೈಜ್ಞಾನಿಕವಾಗಿ ವೇಗವಾಗಿ ಬೆಳೆಯುತ್ತಾ ಹೋಯಿತು. ಆದರೆ ನೀರಿನ ನಿವರ್ಹಣೆ ಅತ್ಯಂತ ಕೆಟ್ಟದಾಗಿತ್ತು ಎಂದು ಈ ಪತ್ರಿಕೆ ತಿಳಿಸಿದೆ. ಕಾಲಕಾಲಕ್ಕೆ ಬೆಂಗಳೂರಿನ ಜಲ ಮತ್ತು ಪರಿಸರ ತಜ್ಞರು ಮುನ್ನೆಚ್ಚರಿಕೆಗಳನ್ನು ನೀಡುತ್ತಾ ಬಂದಿದ್ದರೂ ಯಾರೂ ಗಮನ ಹರಿಸಲಿಲ್ಲ. ಈಗ? 50 ಕಿಮೀ ದೂರದ ಕಾವೇರಿ ನದಿಯಿಂದ ಬೆಂಗಳೂರಿಗೆ 2 ಸಾವಿರ ಅಡಿ ಎತ್ತರಕ್ಕೆ ನೀರು ತರಲಾಗುತ್ತದೆ. ಕಾವೇರಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ಪರ್ಯಾಯ ಮಾರ್ಗಗಳತ್ತ ಆಡಳಿತಶಾಹಿ ವ್ಯವಸ್ಥೆ ಚಿಂತಿಸಲೇ ಇಲ್ಲ.

16ನೇ ಶತಮಾನದಲ್ಲಿ ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ನೀರಿನ ಲಭ್ಯತೆಯನ್ನು ನೋಡಿಕೊಂಡೇ ಈ ನಗರವನ್ನು ಕಟ್ಟಿದ್ದರು. ಜೊತೆಗೆ ನೂರಾರು ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಕೃಷಿಗೆ ನೀರಾವರಿ ವ್ಯವಸ್ಥೆ ಇತ್ತು. ಸಾಂಪ್ರದಾಯಿಕ ಎಂಜಿನಿಯರಿಂಗ್‌ ವ್ಯವಸ್ಥೆಯಲ್ಲೇ ಇಷ್ಟೆಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಈಗ ಅಚ್ಚರಿಪಡುವಂತಹ ತಂತ್ರಜ್ಞಾನ ಕೈಗೆಟಕುತ್ತದೆ. ಆದರೆ ನೀರಿನ ಮೂಲಗಳಿಲ್ಲ.

ಜಲಮಂಡಳಿಯ ಶೇ 70 ರಷ್ಟು ಆದಾಯ ಕಾವೇರಿ ನೀರನ್ನು ಬೆಂಗಳೂರಿಗೆ ತರಲು ವಿದ್ಯುಚ್ಚಕ್ತಿಗೆ ವ್ಯಯವಾಗುತ್ತದೆ. ಆದರೂ ಅರ್ಧ ಬೆಂಗಳೂರಿಗೆ ಮಾತ್ರ ನೀರು ಒದಗಿಸುವ ಸಾಮರ್ಥ್ಯ ಮಾತ್ರ ಮಂಡಳಿಗೆ ಇದೆ. ಸರ್ಕಾರದ ಬೋರ್ 14,000 ವೆಲ್‌ಗಳಲ್ಲಿ ಅರ್ಧದಷ್ಟು ಬತ್ತಿ ಹೋಗಿವೆ. ತಜ್ಞರ ಪ್ರಕಾರ 4.50 ಲಕ್ಷದಿಂದ 5 ಲಕ್ಷದಷ್ಟು ಖಾಸಗಿ ಬೋರ್‌ವೆಲ್‌ಗಳಿವೆ. ಇವುಗಳಿಂದ ಆಗುವ ದುಷ್ಪರಿಣಾಮ ಕುರಿತು ಚಿಂತನೆ ನಡೆಸುವವರು ಯಾರು? ಈ ಪ್ರಮಾಣದ ಬೋರ್‌ವೆಲ್‌ಗಳಿಗೆ ಅನುಮತಿ ನೀಡಿದ್ದು ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲ.

IPL_Entry_Point