ಬೆಂಗಳೂರಿನಲ್ಲಿ ಮಾಲ್, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್‌, ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್‌ಗಳ ನೀರಿನ ಬಿಲ್‌ ಏರಿಕೆ; ಕಾರಣ ಇಷ್ಟೇ-bengaluru news bwssb water price hike increase in water bills in silicon city water tariff hike mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಮಾಲ್, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್‌, ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್‌ಗಳ ನೀರಿನ ಬಿಲ್‌ ಏರಿಕೆ; ಕಾರಣ ಇಷ್ಟೇ

ಬೆಂಗಳೂರಿನಲ್ಲಿ ಮಾಲ್, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್‌, ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್‌ಗಳ ನೀರಿನ ಬಿಲ್‌ ಏರಿಕೆ; ಕಾರಣ ಇಷ್ಟೇ

ಸಿಲಿಕಾನ್ ಸಿಟಿ ಜನತೆಗೆ ಇದೀಗ ಮತ್ತೆ ದರ ಏರಿಕೆ ಬಿಸಿ ತಟ್ಟಿದೆ. ಈ ಬಾರಿ ನೀರಿನ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನ ಮಾಲ್‌,ವಾಣಿಜ್ಯ ಸಂಕೀರ್ಣ ಅಪಾರ್ಟ್‌ಮೆಂಟ್‌ ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್ ಹಾಗೂ ಧಾರ್ಮಿಕ ಸ್ಥಳಗಳ ನೀರಿನ ಬಿಲ್‌ ಈ ತಿಂಗಳಿನಿಂದ ಕೊಂಚ ಏರಿಕೆಯಾಗಲಿದೆ. (ವರದಿ:ಎಚ್‌.ಮಾರುತಿ, ಬೆಂಗಳೂರು)

ಬೆಂಗಳೂರಿನಲ್ಲಿ ನೀರಿನ ಬಿಲ್‌ ಈ ತಿಂಗಳಿನಿಂದ ಕೊಂಚ ಏರಿಕೆಯಾಗಲಿದೆ.
ಬೆಂಗಳೂರಿನಲ್ಲಿ ನೀರಿನ ಬಿಲ್‌ ಈ ತಿಂಗಳಿನಿಂದ ಕೊಂಚ ಏರಿಕೆಯಾಗಲಿದೆ.

ಬೆಂಗಳೂರು: ಮಹಾನಗರದ ಮಾಲ್‌, ವಾಣಿಜ್ಯ ಸಂಕೀರ್ಣ ಅಪಾರ್ಟ್‌ಮೆಂಟ್‌ ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್ ಹಾಗೂ ಧಾರ್ಮಿಕ ಸ್ಥಳಗಳ ನೀರಿನ ಬಿಲ್‌ ಈ ತಿಂಗಳಿನಿಂದ ಕೊಂಚ ಏರಿಕೆಯಾಗಲಿದೆ. ಬೆಂಗಳೂರು ಜಲಮಂಡಳಿ ವತಿಯಿಂದ ನಲ್ಲಿಗಳಿಗೆ ಅಳವಡಿಸಲಾಗಿದ್ದ ಏರಿಯೇಟರ್‌ ಶುಲ್ಕವನ್ನು ನೀರಿನ ಬಿಲ್‌ನಲ್ಲಿ ಸೇರ್ಪಡೆ ಮಾಡುತ್ತಿರುವುದರಿಂದ ಬಿಲ್‌ ಮೊತ್ತ ಹೆಚ್ಚಾಗಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ಐದಾರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಆ ಸಂದರ್ಭದಲ್ಲಿ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸಲು ಮತ್ತು ನೀರಿನ ಉಳಿತಾಯ ಮಾಡಲು ಮಾಲ್‌, ವಾಣಿಜ್ಯ ಸಂಕೀರ್ಣ ಅಪಾರ್ಟ್‌ಮೆಂಟ್‌ ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಧಾರ್ಮಿಕ ಸ್ಥಳಗಳನ್ನೊಳಗೊಂಡ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಗೆ ಬಳಸುವ ನಲ್ಲಿಗಳಿಗೆ ಮಾರ್ಚ್‌ 31ರೊಳಗೆ ಏರಿಯೇಟರ್‌ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು.

ನಿಗದಿತ ಕಾಲಮಿತಿಯಲ್ಲಿ ಏರಿಯೇಟರ್‌ ಅಳವಡಿಸಿಕೊಳ್ಳದಿದ್ದರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯಿದೆ ಅನ್ವಯ ಜಲಮಂಡಳಿಯಿಂದಲೇ ಏರಿಯೇಟರ್‌ ಅಳವಡಿಸಿ ಅದಕ್ಕೆ ತಗುಲುವ ವೆಚ್ಚವನ್ನು ಗ್ರಾಹಕರಿಂದಲೇ ವಸೂಲಿ ಮಾಡುವುದಾಗಿಯೂ ಸೂಚನೆ ನೀಡಲಾಗಿತ್ತು.

ಸುದೀರ್ಘ ಸಮಯದ ಅವಕಾಶ ನೀಡಿದ್ದರೂ ಹಲವಾರು ಕಟ್ಟಡಗಳಲ್ಲಿ ಏರಿಯೇಟರ್‌ ಅಳವಡಿಸಿರಲಿಲ್ಲ. ನೀರಿನ ಉಳಿತಾಯ ಮತ್ತು ಸದ್ಬಳಕೆಯ ದೃಷ್ಟಿಯಿಂದ ಜಲಮಂಡಳಿಯೇ ಅತ್ಯುತ್ತಮ ಗುಣಮಟ್ಟದ ಏರಿಯೇಟರ್‌ಗಳನ್ನು ಗ್ರಾಹಕರ ಅನುಮತಿಯ ಮೇರೆಗೆ ಅಳವಡಿಸಿದೆ. ಏರಿಯೇಟರ್‌ ಹಾಗೂ ಅದನ್ನು ಅಳವಡಿಸುವ ಸೇವಾ ಶುಲ್ಕವಾಗಿ ಪ್ರತಿ ನಲ್ಲಿಗೂ 50 ರೂಪಾಯಿ ಶುಲ್ಕ ನಿಗದಿಪಡಿಸಲಾಗಿತ್ತು. ಗ್ರಾಹಕರು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಅಳವಡಿಸಿಕೊಂಡಿರುವಂತಹ ನಲ್ಲಿಗಳ ಸಂಖ್ಯೆಗೆ ಅನುಗುಣವಾಗಿ ನೀರಿನ ಬಿಲ್‌ನಲ್ಲಿ ಮೊತ್ತವನ್ನು ಸೇರ್ಪಡೆ ಮಾಡಲಾಗಿದೆ. ಈ ಸಂಬಂಧ ಅನುಮಾನಗಳಿದ್ದರೆ 1916 ಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದೂ ತಿಳಿಸಿದೆ.

ತೊರೆಕಾಡನಹಳ್ಳಿ ನೀರು ಸಂಸ್ಕರಣಾ ಘಟಕ ಸಿದ್ಧ: ಶೀಘ್ರ ಲೋಕಾರ್ಪಣೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಕಾವೇರಿ 5ನೇ ಹಂತದ ಯೋಜನೆಯಡಿಯಲ್ಲಿ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ (ಟಿ.ಕೆ.ಹಳ್ಳಿ)ಯಲ್ಲಿ ನೀರು ಸಂಸ್ಕರಣಾ ಘಟಕ ನಿರ್ಮಿಸಿದ್ದಾರೆ. ಇದು ಏಷ್ಯಾದಲ್ಲಿಯೇ ಅತಿ ದೊಡ್ಡ ಘಟಕವಾಗಿದೆ. ಶೀಘ್ರದಲ್ಲೇ ಈ ಘಟಕ ಕಾರ್ಯಾಚರಣೆ ಮಾಡಲಿದ್ದು, 225 ಎಂಎಲ್‌ಡಿ ನೀರನ್ನು ಸರಬರಾಜು ಮಾಡುವ ಸಾಮರ್ಥ್ಯ ಹೊಂದಿದೆ.

ಅತ್ಯಾಧುನಿಕ ಪಂಪಿಂಗ್‌ ಸ್ಟೇಷನ್‌ ಆಗಿರುವ ಈ ಘಟಕ ಜಪಾನ್‌ ಯಂತ್ರೋಪಕರಣಗಳು ಮತ್ತು ಫ್ರೆಂಚ್‌ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಕೋವಿಡ್‌ ಕಾರಣಕ್ಕಾಗಿ ಈ ಘಟಕ ನಿರ್ಮಾಣ ತಡವಾಗಿದ್ದು, ಈ ತಿಂಗಳಲ್ಲೇ ಲೋಕಾರ್ಪಣೆಯಾಗುವ ಸಾಧ್ಯತೆಗಳಿವೆ.

ಕಾವೇರಿ 5ನೇ ಹಂತದ ಯೋಜನೆಗೆ ಮಂಡ್ಯದಿಂದ ಬೆಂಗಳೂರಿಗೆ ನೀರು

ಕಾವೇರಿ 5ನೇ ಹಂತದ ಯೋಜನೆ 5,550 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, 110 ಹಳ್ಳಿಗಳಿಗೆ ನೀರು ಒದಗಿಸಲಿದೆ. ಬೆಂಗಳೂರಿನಿಂದ ಸುಮಾರು 95 ಕಿ.ಮೀ. ದೂರವಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಟಿ.ಕೆ.ಹಳ್ಳಿಯಿಂದ ಬೆಂಗಳೂರಿಗೆ 920 ಮೀ. ಎತ್ತರಕ್ಕೆ ಶುದ್ಧ ನೀರನ್ನು ಪಂಪ್‌ ಮಾಡಲಿದೆ. ಪಂಪ್‌ಗಳು 2-3 ಮೀಟರ್‌ ಆಳವಿರುವ ಸಾಮಾನ್ಯ ಪಂಪಿಂಗ್‌ ಸ್ಟೇಷನ್‌ಗಿಂತ ಭಿನ್ನವಾಗಿ 7-8 ಮೀಟರ್‌ ಆಳದ ಕೊಳದಿಂದ ನೀರೆತ್ತಲಿವೆ.

ನೀರು ಸಂಸ್ಕರಣಾ ತಂತ್ರಜ್ಞಾನವನ್ನು ಅವಶ್ಯಕತೆ ಮತ್ತು ಕಾವೇರಿ ನದಿಯಿಂದ ಪಡೆಯುವ ನೀರಿನ ಪರಿಸ್ಥಿತಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. 3,500 ಎಚ್‌ಪಿ ಸಾಮರ್ಥ್ಯದ ಪ್ರತಿ ಪಂಪ್‌ಗಳು ನದಿಯಿಂದ 150 ಎಂಎಲ್‌ಡಿ ನೀರೆತ್ತುವ ಮೂಲಕ ಬೆಂಗಳೂರಿಗೆ ಮೂರು ಹಂತಗಳಲ್ಲಿ ಪಂಪ್‌ ಮಾಡುತ್ತವೆ.

ಮೂರು ಹಂತಗಳೆಂದರೆ ತೊರೆಕಾಡನಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಿಂದ ನೀರು ಪಂಪ್‌ ಆಗಲಿದೆ. ಪ್ರತಿ ಹಂತಕ್ಕೆ 6 ಪಂಪ್‌ಗಳು ಕೆಲಸ ಮಾಡಲಿದ್ದು, ಪಂಪ್‌ಗಳ ಸಾಮರ್ಥ್ಯ 3,500 ಎಚ್‌ಪಿಗಳಷ್ಟಿದೆ. ಪ್ರತಿ ಪಂಪ್‌ 150 ಎಂಎಲ್‌ಡಿ ನೀರೆತ್ತುವ ಸಾಮರ್ಥ್ಯ ಹೊಂದಿದೆ. ಕೊಳವೆಗಳ ವ್ಯಾಸ 3 ಮೀಟರ್ ಇದ್ದು, ಪೈಪ್‌ಲೈನ್‌ ಉದ್ದ 70 ಕಿ.ಮೀ ಇದೆ.