ಕನ್ನಡ ಸುದ್ದಿ  /  ಕರ್ನಾಟಕ  /  Swrailway Updates: ಬೇಸಿಗೆಯ ಪ್ರಯಾಣಿಕ ದಟ್ಟಣೆ ನಿವಾರಣೆಗೆ ಕರ್ನಾಟಕದಲ್ಲಿ 9 ವಿಶೇಷ ರೈಲು ಸಂಚಾರ; ಭಾರತೀಯ ರೈಲ್ವೆ ವೇಳಾಪಟ್ಟಿ

SWRailway Updates: ಬೇಸಿಗೆಯ ಪ್ರಯಾಣಿಕ ದಟ್ಟಣೆ ನಿವಾರಣೆಗೆ ಕರ್ನಾಟಕದಲ್ಲಿ 9 ವಿಶೇಷ ರೈಲು ಸಂಚಾರ; ಭಾರತೀಯ ರೈಲ್ವೆ ವೇಳಾಪಟ್ಟಿ

ಬೇಸಿಗೆಯ ಪ್ರಯಾಣಿಕ ದಟ್ಟಣೆ ನಿವಾರಣೆಗೆ ಕರ್ನಾಟಕದಲ್ಲಿ 9 ವಿಶೇಷ ರೈಲು ಸಂಚಾರವನ್ನು ನಿರ್ವಹಿಸುವುದಾಗಿ ನೈಋತ್ಯ ರೈಲ್ವೆ ಪ್ರಕಟಿಸಿದೆ. ಈ ರೈಲು ಸಂಚಾರ ಮೇ 3 ರಿಂದ ಮೇ 18 ರ ನಡುವೆ ಇರಲಿದ್ದು, ಭಾರತೀಯ ರೈಲ್ವೆ ವೇಳಾಪಟ್ಟಿಯ ವಿವರ ಇಲ್ಲಿದೆ.

ಬೇಸಿಗೆಯ ಪ್ರಯಾಣಿಕ ದಟ್ಟಣೆ ನಿವಾರಣೆಗೆ ಕರ್ನಾಟಕದಲ್ಲಿ ಭಾರತೀಯ ರೈಲ್ವೆಯ 9 ವಿಶೇಷ ರೈಲು ಸಂಚಾರ ಇರಲಿದೆ. (ಸಾಂಕೇತಿಕ ಚಿತ್ರ)
ಬೇಸಿಗೆಯ ಪ್ರಯಾಣಿಕ ದಟ್ಟಣೆ ನಿವಾರಣೆಗೆ ಕರ್ನಾಟಕದಲ್ಲಿ ಭಾರತೀಯ ರೈಲ್ವೆಯ 9 ವಿಶೇಷ ರೈಲು ಸಂಚಾರ ಇರಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಬೇಸಿಗೆ ರಜೆಯ ಕಾರಣ ವಿವಿಧೆಡೆ ಪ್ರಯಾಣಿಕ ದಟ್ಟಣೆ ಕಂಡುಬಂದಿರುವ ಕಾರಣ ಭಾರತೀಯ ರೈಲ್ವೆ (Indian Railways) ಕರ್ನಾಟಕದಲ್ಲಿ 9 ವಿಶೇಷ ರೈಲು ಸಂಚಾರವನ್ನು ಪ್ರಕಟಿಸಿದೆ. ಕರ್ನಾಟಕದ ವಿವಿಧ ನಿಲ್ದಾಣಗಳಿಂದ ಮತ್ತು ನಿಲ್ದಾಣಗಳಿಗೆ ಈ ರೈಲು ಸಂಚಾರ ಇರಲಿದೆ. ಬಹುತೇಕ ಎಲ್ಲ ಸಂಚಾರವೂ ಒನ್‌ ವೇ ಆಗಿರಲಿದೆ. ನೈಋತ್ಯ ರೈಲ್ವೆ ನಿರಂತರವಾಗಿ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ನಿರ್ವಹಿಸುತ್ತ ಬಂದಿದ್ದು, ಆಯಾ ದಿನಗಳ ಅಗತ್ಯಗಳಿಗೆ ಅನುಗುಣವಾಗಿ ಮುಂಚಿತವಾಗಿಯೆ ಈ ರೈಲುಗಳ ಸಂಚಾರದ ವಿವರಗಳನ್ನು ಪ್ರಕಟಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಇದರಂತೆ, ಮೇ 3ರಿಂದೀಚೆಗೆ 18ರ ತನಕ ವಿವಿಧ ದಿನಾಂಕಗಳಲ್ಲಿ ಸಂಚರಿಸುವ 9 ವಿಶೇಷ ರೈಲುಗಳ ವೇಳಾಪಟ್ಟಿ ಮತ್ತು ಇತರೆ ವಿವರಗಳನ್ನು ನೈಋತ್ಯ ರೈಲ್ವೆ ನೀಡಿದೆ. ಇದಲ್ಲದೆ, ಒಂದು ರೈಲಿನ ವಿಸ್ತರಣೆಯ ಸಂಚಾರವನ್ನು ಕಡಿತಗೊಳಿಸಿದೆ. ಅಲ್ಲಿ, ಪ್ರಯಾಣಿಕ ದಟ್ಟಣೆ ಕಡಿಮೆಯಾಗಿ ಸಂಚಾರ ನಿರ್ವಹಣೆ ಕಷ್ಟವಾದ ಕಾರಣ ರೈಲ್ವೆ ಈ ಕ್ರಮ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಬೇಸಿಗೆ ರಜೆಯ 9 ವಿಶೇಷ ರೈಲು ಸಂಚಾರದ ವೇಳಾಪಟ್ಟಿ

1) ಎಸ್‌ಎಂವಿಟಿ ಬೆಂಗಳೂರು- ವಿಜಯನಗರ- ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ಸ್ಪೆಷಲ್ - ರೈಲು ಸಂಖ್ಯೆ 06231/06232. (1 ಟ್ರಿಪ್) ರೈಲು ತುಮಕೂರು, ಚಿತ್ರದುರ್ಗ, ಹೊಸಪೇಟೆ, ಗದಗ, ಬಾಗಲಕೋಟೆಯಾಗಿ ವಿಜಯಪುರಕ್ಕೆ ಹೋಗಲಿದೆ. ರೈಲು ಸಂಖ್ಯೆ 06231 ಎಸ್‌ಎಂವಿಟಿ ಬೆಂಗಳೂರು- ವಿಜಯನಗರ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿನಿಂದ ಮೇ 6 ರಂದು ರಾತ್ರಿ 7 ಕ್ಕೆ ಬಿಟ್ಟು, ಮಾರನೇ ದಿನ (ಮೇ 7) ಬೆಳಗ್ಗೆ 10.30ಕ್ಕೆ ವಿಜಯಪುರ ತಲುಪಲಿದೆ. ಇದೇ ರೀತಿ ವಿಜಯನಗರ- ಎಸ್ಎಂವಿಟಿ ಬೆಂಗಳೂರು ರೈಲು (ರೈಲು ಸಂಖ್ಯೆ 06232) ವಿಜಯಪುರದಿಂದ ಮೇ 7ರಂದು ರಾತ್ರಿ 7ಕ್ಕೆ ಬಿಟ್ಟು ಮಾರನೆ ದಿನ (ಮೇ 8) ಬೆಳಗ್ಗೆ 11.15ಕ್ಕೆ ಬೆಂಗಳೂರು ತಲುಪಲಿದೆ.

2) ಯಶವಂತಪುರ- ಬೀದರ್- ಯಶವಂತಪುರ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಸಂಖ್ಯೆ 06227/06228 (1 ಟ್ರಿಪ್ ) ರೈಲು ಯಲಹಂಕ, ರಾಯಚೂರು, ಕಲಬುರಗಿಯಾಗಿ ಬೀದರ್ ತಲುಪಲಿದೆ. ಯಶವಂತಪುರ- ಬೀದರ್ (ರೈಲು ಸಂಖ್ಯೆ 06227) ಮೇ 6 ರಂದು ರಾತ್ರಿ 11ಕ್ಕೆ ಯಶವಂತಪುರದಿಂದ ಬಿಟ್ಟು ಮಾರನೆ ದಿನ (ಮೇ 7) ಮಧ್ಯಾಹ್ನ 11ಕ್ಕೆ ಬೀದರ್ ತಲುಪಲಿದೆ. ಇದೇ ರೀತಿ ಬೀದರ್- ಯಶವಂತಪುರ ಎಕ್ಸ್‌ಪ್ರೆಸ್ ಸ್ಪೆಷಲ್ (ರೈಲು ಸಂಖ್ಯೆ 06228) ಬೀದರ್‌ನಿಂದ ಮೇ 7ಕ್ಕೆ ಮಧ್ಯಾಹ್ನ ನಂತರ 2.10ಕ್ಕೆ ಹೊರಟು ಮಾರನೇ ದಿನ (ಮೇ 8) ಮುಂಜಾನೆ 04.15ಕ್ಕೆ ಯಶವಂತಪುರ ತಲುಪಲಿದೆ.

3) ಯಶವಂತಪುರ - ವಿಜಯನಗರ - ಯಶವಂತಪುರ ಎಕ್ಸ್‌ಪ್ರೆಸ್‌ ಸ್ಪೆಷಲ್ ರೈಲು ಸಂಖ್ಯೆ 07319/ 07320 (1 ಟ್ರಿಪ್‌) ರೈಲು ಅರಸೀಕರೆ, ದಾವಣಗೆರೆ, ಹುಬ್ಬಳ್ಳಿ ಬೆಳಗಾವಿ ಮಾರ್ಗವಾಗಿ ಸಂಚರಿಲಿದೆ. ಯಶವಂತಪುರ - ವಿಜಯನಗರ (ರೈಲು ಸಂಖ್ಯೆ 07319) ಯಶವಂತಪುರದಿಂದ ಮೇ 6 ರಂದು ರಾತ್ರಿ 9.55ಕ್ಕೆ ಹೊರಟು ಮಾರನೇ ದಿನ (ಮೇ 7) ಬೆಳಗ್ಗೆ 10.30ಕ್ಕೆ ವಿಜಯನಗರ ತಲುಪಲಿದೆ. ಇದೇ ರೀತಿ ವಿಜಯನಗರ - ಯಶವಂತಪುರ ಎಕ್ಸ್‌ಪ್ರೆಸ್‌ ಸ್ಪೆಷಲ್ (ರೈಲು ಸಂಖ್ಯೆ 07320) ರೈಲು ಮೆ 7 ರಂದು ಸಂಜೆ 4.30ಕ್ಕೆ ವಿಜಯನಗರದಿಂದ ಹೊರಟು ಮಾರನೇ ದಿನ (ಮೇ 8) ಮುಂಜಾನೆ 5.25ಕ್ಕೆ ಯಶವಂತಪುರ ತಲುಪಲಿದೆ.

4. ಮೈಸೂರು - ತಾಳಗುಪ್ಪ- ಮೈಸೂರು ಎಕ್ಸ್‌ಪ್ರೆಸ್‌ ಸ್ಪೆಷಲ್ ರೈಲು ಸಂಖ್ಯೆ - 07373/ 07374 ರೈಲು ಕೆಎಸ್‌ ಆರ್ ಬೆಂಗಳೂರು, ತುಮಕೂರು, ಬೀರೂರು, ಶಿವಮೊಗ್ಗ ಪಟ್ಟಣ ಮೂಲಕ ಸಂಚರಿಸಲಿದೆ. ಮೈಸೂರು - ತಾಳಗುಪ್ಪ ಎಕ್ಸ್‌ಪ್ರೆಸ್‌ ಸ್ಪೆಷಲ್ (ರೈಲು ಸಂಖ್ಯೆ - 07373) ರೈಲು ಮೇ 6 ರಂದು ರತ್ರಿ 9.30ಕ್ಕೆ ಮೈಸೂರಿಂದ ಹೊರಟು ಮಾರನೇ ದಿನ ಬೆಳಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದೆ. ಇದೇ ರೀತಿ ತಾಳಗುಪ್ಪ- ಮೈಸೂರು ಎಕ್ಸ್‌ಪ್ರೆಸ್‌ ಸ್ಪೆಷಲ್ (ರೈಲು ಸಂಖ್ಯೆ - 07374) ರೈಲು ತಾಳಗುಪ್ಪದಿಂದ ಮೇ 7 ರಂದು ಸಂಜೆ 6.30ಕ್ಕೆ ಹೊರಟು ಮಾರನೇ ದಿನ ಮುಂಜಾನೆ 4 ಗಂಟೆಗೆ ಮೈಸೂರು ತಲುಪಲಿದೆ.

5. ಬೆಳಗಾವಿ ಯಶವಂತಪರ ಒನ್ ವೇ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಸಂಖ್ಯೆ 07317 ಹುಬ್ಬಳ್ಳಿ, ಅರಸೀಕರೆ, ತುಮಕೂರು ಮಾರ್ಗವಾಗಿ ಸಂಚರಿಸಲಿದೆ. ಇದು ಮೇ 6 ರಂದು ಬೆಳಗ್ಗೆ 8ಕ್ಕೆ ಬೆಳಗಾವಿ ಬಿಟ್ಟು ಯಶವಂತಪುರಕ್ಕೆ ಅದೇ ದಿನ ರಾತ್ರಿ 8ಕ್ಕೆ ತಲುಪಲಿದೆ.

6. ಬೆಳಗಾವಿ - ಮೈಸೂರು ಒನ್‌ ವೇ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 07375 ಮೇ 6 ರಂದು ಬೆಳಗ್ಗೆ 8.45ಕ್ಕೆ ಬೆಳಗಾವಿ ಬಿಟ್ಟು ಹುಬ್ಬಳ್ಳಿ, ಹಾಸನ ಮಾರ್ಗವಾಗಿ ಅದೇ ದಿನ ರಾತ್ರಿ 8.15ಕ್ಕೆ ಮೈಸೂರು ತಲುಪಲಿದೆ.

7. ಮೈಸೂರು -ಕಾರವಾರ ಒನ್‌ ವೇ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 06241 ಮೈಸೂರಿನಿಂದ ಮೇ 6 ರಂದು ರಾತ್ರಿ 8.15ಕ್ಕೆ ಹೊರಟು ಕೆಎಸ್‌ಆರ್ ಬೆಂಗಳೂರು, ಹಾಸನ, ಸುಬ್ರಹ್ಮಣ್ಯ ರಸ್ತೆ, ಬೈಂದೂರು ಮಾರ್ಗವಾಗಿ ಮಾರನೇ ದಿನ ಮಧ್ಯಾಹ್ನ 1ಕ್ಕೆ ಕಾರವಾರ ತಲುಪಲಿದೆ.

8. ಕಾರವಾರ - ಮೈಸೂರು ಒನ್‌ವೇ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 06242 ಮೇ 7ರಂದು ರಾತ್ರಿ 10ಕ್ಕೆ ಕಾರವಾರದಿಂದ ಹೊರಟು ಬೈಂದೂರು, ಮಂಗಳೂರು ಜಂಕ್ಷನ್, ಸುಬ್ರಹ್ಮಣ್ಯ ರೋಡ್, ಹಾಸನ ಮೂಲಕ ಮೈಸೂರಿಗೆ ಮೇ 8 ರಂದು ಸಂಜೆ 6.25ಕ್ಕೆ ತಲುಪಲಿದೆ.

9. ಎಸ್‌ಎಂವಿಟಿ ಬೆಂಗಳೂರು- ಸಂಬಾಲ್‌ಪುರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ಸ್ಪೆಷಲ್ ರೈಲು ಸಂಖ್ಯೆ 08321/ 08322 ( 2ಟ್ರಿಪ್‌) ರೈಲು ರಾಯಗಡ, ವಿಜಯನಗರಂ, ರಾಜಮಂಡ್ರಿ, ರೇಣಿಗುಂಟ ಮಾರ್ಗವಾಗಿ ಸಂಚರಿಸಲಿದೆ. ಎಸ್‌ಎಂವಿಟಿ ಬೆಂಗಳೂರು- ಸಂಬಾಲ್‌ಪುರ (ರೈಲು ಸಂಖ್ಯೆ 08321) ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಮೇ 9 ಮತ್ತು 16 ರಂದು ಮುಸ್ಸಂಜೆ 6.45ಕ್ಕೆ ಸಂಬಾಲ್‌ಪುರದಿಂದ ಹೊರಟು ಮಾರನೇ ದಿನ ರಾತ್ರಿ 11.30ಕ್ಕೆ ಎಸ್‌ಎಂವಿಟಿ ಬೆಂಗಳೂರಿಗೆ ತಲುಪಲಿದೆ. ಇದೇ ರೀತಿ, ಸಂಬಾಲ್‌ಪುರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ಸ್ಪೆಷಲ್ ರೈಲು (ರೈಲು ಸಂಖ್ಯೆ 08322) ಎಸ್‌ಎಂವಿಟಿ ಬೆಂಗಳೂರಿನಿಂದ ಮೇ 11 ಮತ್ತು 18ರಂದು ಮಧ್ಯ ರಾತ್ರಿ 1.15ಕ್ಕೆ ಹೊರಟು ಸಂಬಾಲ್‌ಪುರಕ್ಕೆ ಮಾರನೇ ದಿನ ಮುಸ್ಸಂಜೆ 6.30ಕ್ಕೆ ತಲುಪಲಿದೆ.

ಎರಡು ರೈಲುಗಳ ಸಂಚಾರ ವಿಸ್ತರಣೆ ಕಡಿತ

ಕಾರ್ಯಾಚರಣೆ ತೊಂದರೆ ಕಾರಣ ಮಾರಿಕುಪ್ಪಂ - ಬೈಯಪ್ಪನಹಳ್ಳಿ ರೈಲು (ರೈಲು ಸಂಖ್ಯೆ 01778) ಮತ್ತು ಬೈಯಪ್ಪನಹಳ್ಳಿ- ಮಾರಿಕುಪ್ಪಂ ರೈಲು (ರೈಲು ಸಂಖ್ಯೆ 01779) ಗಳ ಸಂಚಾರವನ್ನು ಕೃಷ್ಣರಾಜಪುರಂ (ಕೆ ಆರ್ ಪುರಂ)ಗೆ ಮೊಟಕುಗೊಳಿಸಲಾಗಿದೆ. ಇದು ಏಪ್ರಿಲ್ 30ರ ತನಕ ಅನ್ವಯವಾಗುವಂತೆ ತೆಗೆದುಕೊಂಡ ನಿರ್ಧಾರವನ್ನು ಈಗ ಮುಂದಿನ ಆದೇಶದ ತನಕ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

IPL_Entry_Point