ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ತನಿಖೆ ಚುರುಕು; ಪ್ರಮುಖ ಆರೋಪಿಗಳ ಕರೆದೊಯ್ದು ಮಹಜರು ನಡೆಸುತ್ತಿರುವ ಎನ್‌ಐಎ
ಕನ್ನಡ ಸುದ್ದಿ  /  ಕರ್ನಾಟಕ  /  ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ತನಿಖೆ ಚುರುಕು; ಪ್ರಮುಖ ಆರೋಪಿಗಳ ಕರೆದೊಯ್ದು ಮಹಜರು ನಡೆಸುತ್ತಿರುವ ಎನ್‌ಐಎ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ತನಿಖೆ ಚುರುಕು; ಪ್ರಮುಖ ಆರೋಪಿಗಳ ಕರೆದೊಯ್ದು ಮಹಜರು ನಡೆಸುತ್ತಿರುವ ಎನ್‌ಐಎ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ತನಿಖೆ ಚುರುಕುಗೊಂಡಿದ್ದು ಪ್ರಮುಖ ಆರೋಪಿಗಳ ಕರೆದೊಯ್ದು ಸ್ಥಳ ಮಹಜರು ನಡೆಸುತ್ತಿರುವ ಎನ್‌ಐಎ ವಿಚಾರಣೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಳ್ಳುತ್ತಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರಿನ ರಾಮೇಶ್ವರಂ ಕೆಫೆ.
ಬೆಂಗಳೂರಿನ ರಾಮೇಶ್ವರಂ ಕೆಫೆ.

ಬೆಂಗಳೂರು: ನಗರದ ದಿ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ನಡೆದಿದ್ದ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರೋಪಿಗಳಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾನನ್ನು ಚೆನ್ನೈಗೆ ಕರೆದೊಯ್ದು ಮಹಜರು ಪೂರ್ಣಗೊಳಿಸಿದ್ದಾರೆ.

ಇಬ್ಬರೂ ಆರೋಪಿಗಳ ಕಸ್ಟಡಿ ಅವಧಿ ಏಪ್ರಿಲ್ 29ರಂದು ಮುಕ್ತಾಯವಾಗಲಿದ್ದು, ನಿಗದಿತ ಅವಧಿಯಲ್ಲಿ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎನ್‌ಐಎ ತಿಳಿಸಿದೆ.

ಆರೋಪಿಯನ್ನು ನಗರಕ್ಕೆ ವಾಪಸು ಕರೆತಂದ ಎನ್‌ಐಎ

ಇದೇ ವರ್ಷದ ಮಾರ್ಚ್ 1ರಂದು ದಿ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ದುರಂತದ ನಂತರ ಪ್ರಮುಖ ಆರೋಪಿಗಳಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾ ತಲೆಮರೆಸಿಕೊಂಡಿದ್ದರು. ಹಲವು ರಾಜ್ಯಗಳ ವಿವಿಧ ನಗರಗಳಲ್ಲಿ ತೀವ್ರ ತಪಾಸಣೆ ನಡೆಸಿದ ನಂತರ ಇಬ್ಬರೂ ಆರೋಪಿಗಳನ್ನು ಏಪ್ರಿಲ್ 12ರಂದು ಕೊಲ್ಕತ್ತಾ ದಲ್ಲಿ ಬಂಧಿಸಲಾಗಿತ್ತು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಎನ್ ಐ ಎ ಅಧಿಕಾರಿಗಳು, ಮಹಜರು ನಡೆಸಲು ಮತ್ತು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದರು.

ಸ್ಫೋಟ ನಡೆಸುವುದಕ್ಕೂ ಮುನ್ನ ಮುಸಾವೀರ್ ಹಾಗೂ ಅಬ್ದುಲ್ ತಾಹಾ ಜನವರಿಯಲ್ಲಿ ಕೆಲವು ದಿನಗಳ ಅವಧಿಗೆ ಚೆನ್ನೈನ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದರು. ಇಲ್ಲಿ ಕೆಲವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದ್ದವು. ಹೀಗಾಗಿ, ಇಬ್ಬರನ್ನೂ ಚೆನ್ನೈನ ಹೋಟೆಲ್‌ಗೆ ಕರೆದೊಯ್ದು ಮಹಜರು ನಡೆಸಲಾಗಿದೆ ಎಂದು ಎನ್ ಐ ಎ ಮೂಲಗಳು ತಿಳಿಸಿವೆ.

ಚೆನ್ನೈನಲ್ಲೂ ಮಹಜರು ನಡೆಸಿದ ಎನ್‌ಐಎ

ಚೆನ್ನೈ ಹೋಟೆಲ್‌ನಲ್ಲಿ ರೂಂ ಪಡೆಯಲು ಆರೋಪಿಗಳು ಹಿಂದೂ ವ್ಯಕ್ತಿಗಳ ಗುರುತಿನ ಚೀಟಿಗಳನ್ನು ನೀಡಿದ್ದರು. ಈ ಹೋಟೆಲ್‌ ಸಿ.ಸಿ.ಟಿ.ವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಮುಸಾವೀರ್ ಹಾಗೂ ಅಬ್ದುಲ್ ತಾಹಾ ಇಬ್ಬರೂ ಕಂಡು ಬಂದಿದ್ದರು. ಇದೇ ಪುರಾವೆಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಿದಾಗ ಹೋಟೆಲ್‌ನಲ್ಲಿ ತಂಗಿದ್ದ ಬಗ್ಗೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಚೆನ್ನೈಗೆ ಶನಿವಾರ ಇಬ್ಬರೂ ಶಂಕಿತರನ್ನು ಕರೆದೊಯ್ಯಲಾಗಿತ್ತು. ಹೋಟೆಲ್ ಹಾಗೂ ಇತರೆ ಸ್ಥಳಗಳಿಗೆ ಕರೆದು ಕೊಂಡು ಹೋಗಿ ಮಹಜರು ನಡೆಸಲಾಗಿದೆ ಮತ್ತು ಪ್ರತಿಯೊಂದು ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗಿದೆ ಎಂದು ಎನ್ ಐ ಎ ಮೂಲಗಳು ಖಚಿತಪಡಿಸಿವೆ.

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಲಾಗಿದ್ದ ಕಚ್ಚಾ ಬಾಂಬ್ ತಯಾರಿಸಿದ್ದ ಜಾಗವನ್ನೂ ಎನ್ ಐ ಎ ಪತ್ತೆ ಮಾಡಿದೆ. ಆರೋಪಿಗಳನ್ನು ಅಲ್ಲಿಗೂ ಕರೆದೊಯ್ದು ಮಹಜರು ನಡೆಸಿದೆ. ಇವುಗಳ ಆಧಾರದ ಮೇಲೆ ತನಿಖೆ ಮುಂದುವರಿಸಲಾಗಿದೆ. ಮುಸಾವೀರ್ ಹಾಗೂ ಅಬ್ದುಲ್ ತಾಹಾ ಕಸ್ಟಡಿ ಅವಧಿ ಏಪ್ರಿಲ್ 29ರಂದು ಮುಕ್ತಾಯವಾಗಲಿದೆ. ನಿಗದಿತ ಅವಧಿಯಲ್ಲಿ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎನ್‌ಐಎ ತಿಳಿಸಿದೆ.

(ವರದಿ- ಎಚ್. ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner