Srinivas Prasad Death: ಚಾಮರಾಜನಗರ ಸಂಸದ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ, 5 ದಶಕ ರಾಜಕಾರಣ ನಡೆಸಿದ ಮುತ್ಸದ್ದಿ
ಚಾಮರಾಜನಗರ ಸಂಸದ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ವಿಧಿವಶರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದ ಬಳಿಕ ಅವರು ಇಂದು (ಏಪ್ರಿಲ್ 29) ಕೊನೆಯುಸಿರೆಳೆದರು. 5 ದಶಕ ಕಾಲ ರಾಜಕಾರಣ ನಡೆಸಿದ ದಲಿತ ನಾಯಕ, ಕೇಂದ್ರ ಸರ್ಕಾರದ ವಾಜಪೇಯಿ ಸಂಪುಟದಲ್ಲಿ ಸಚಿವರೂ ಆಗಿದ್ದರು.
ಬೆಂಗಳೂರು: ಚಾಮರಾಜನಗರ ಸಂಸದ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ವಿಧಿವಶರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದ ಬಳಿಕ ಅವರು ಇಂದು (ಏಪ್ರಿಲ್ 29) ನಸುಕಿನ ವೇಳೆ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು. 5 ದಶಕ ಕಾಲ ರಾಜಕಾರಣ ನಡೆಸಿದ ದಲಿತ ನಾಯಕ, ಕೇಂದ್ರ ಸರ್ಕಾರದ ವಾಜಪೇಯಿ ಸಂಪುಟದಲ್ಲಿ ಸಚಿವರೂ ಆಗಿದ್ದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಗಳ ಕಾರಣ ಏಪ್ರಿಲ್ 22 ರಂದು ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀನಿವಾಸ್ ಪ್ರಸಾದ್ ಅವರಿಗೆ ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲಿದ್ದರು. ಆದ್ದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದೇ ಕಾರಣಕ್ಕೆ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿತ್ತು. ಆದಾಗ್ಯೂ, ಇಂದು (ಏಪ್ರಿಲ್ 29) ನಸುಕಿನ 1.20ರ ವೇಳೆಗೆ ಅವರಿಗೆ ತೀವ್ರ ಹೃದಯಾಘಾತವಾಯಿತು. ಇದರಿಂದಾಗಿ ಅವರು ವಿಧಿವಶರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಮೈಸೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಶ್ರೀನಿವಾಸ್ ಪ್ರಸಾದ್ ಅವರ ಮೈಸೂರಿನ ಜಯಲಕ್ಷ್ಮೀಪುರ ನಿವಾಸಕ್ಕೆ ಶ್ರೀನಿವಾಸ್ ಪ್ರಸಾದ್ ಪಾರ್ಥಿವ ಶರೀರ ತರಲಾಗಿದೆ. ಅಲ್ಲಿಇಂದು ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಮೈಸೂರಿಗೆ ಪಾರ್ಥಿವ ಶರೀರ ತರಲಾಗಿದ್ದು, ಈಗಾಗಲೇ ಅವರ ಮನೆಗೆ ಗಣ್ಯರು, ಅಪಾರ ಸಂಖ್ಯೆಯ ಬೆಂಬಲಿಗರು ಆಗಮಿಸತೊಡಗಿದ್ದಾರೆ. ಕುಟುಂಬ ಸದಸ್ಯರು ಅವರ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ವಿ ಶ್ರೀನಿವಾಸ್ ಪ್ರಸಾದ್ ಎಂಬ ಹೆಸರಿನಿಂದ ಪರಿಚಿತರಾಗಿರುವ ವೆಂಕಟಯ್ಯ ಶ್ರೀನಿವಾಸ್ ಪ್ರಸಾದ್ ಅವರು ನಂಜನಗೂಡು ಕ್ಷೇತ್ರವನ್ನು ಪ್ರತಿನಿಧಿಸುವ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು ಮತ್ತು ಚಾಮರಾಜನಗರ ಕ್ಷೇತ್ರದಿಂದ ಆರು ಬಾರಿ ಲೋಕಸಭೆಯ ಸದಸ್ಯರಾಗಿದ್ದರು. ಪ್ರಸಾದ್ ಅವರು ಮಾರ್ಚ್ 17 ರಂದು ತಮ್ಮ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದರು.
ವಿ ಶ್ರೀನಿವಾಸ್ ಪ್ರಸಾದ್ ಯಾರು?
ಬಿಜೆಪಿ ಮುಖಂಡರಾದ ಅವರು ಚಾಮರಾಜನಗರ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದರು. ಪ್ರಸಾದ್ ಅವರು 1974ರ ಮಾರ್ಚ್ 17 ರಂದು ತಮ್ಮ ರಾಜಕೀಯ ಬದುಕು ಶುರುಮಾಡಿದರು. ಈ ವರ್ಷ ಅವರ ರಾಜಕೀಯ ಬದುಕಿನ ಸುವರ್ಣ ಮಹೋತ್ಸವ ಆಚರಿಸಿದರು. ಅದೇ ದಿನ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದು ವಿಶೇಷ.
ಶ್ರೀನಿವಾಸ್ ಪ್ರಸಾದ್ ಅವರ ರಾಜಕೀಯ ಪ್ರವೇಶ ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಮೂಲಕ ಆಗಿತ್ತು. ಚುನಾವಣಾ ರಾಜಕೀಯ ಪ್ರವೇಶಕ್ಕೂ ಇದೇ ಚುನಾವಣೆ ಮೊದಲನೇಯದಾಗಿತ್ತು. ಅವರು ಬಾಲ್ಯದಿಂದ 1972 ರವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದರು ಮತ್ತು ಜನಸಂಘ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಲ್ಲಿ ಸಕ್ರಿಯರಾಗಿದ್ದರು. ಬಳಿಕ ಕಾಂಗ್ರೆಸ್ ಸೇರಿದ್ದರು. ಶ್ರೀನಿವಾಸ್ ಪ್ರಸಾದ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಬೇರ್ಪಟ್ಟ ನಂತರ ಸಂಯುಕ್ತ ಜನತಾ ದಳಕ್ಕೆ ಸೇರಿದರು ಮತ್ತು ನಂತರ ಅವರು ಕಾಂಗ್ರೆಸ್‌ಗೆ ಮರಳಿದರು. 2013 ರಲ್ಲಿ ನಂಜನಗೂಡಿನಿಂದ ಶಾಸಕರಾಗಿ ಆಯ್ಕೆಯಾದರು. ನಂತರ ಅವರು 24 ಡಿಸೆಂಬರ್ 2016 ರಂದು ಬಿಜೆಪಿ ಸೇರಿದ ಪರಿಣಾಮ ನಂಜನಗೂಡಿನಲ್ಲಿ 2017ರಲ್ಲಿ ಉಪಚುನಾವಣೆ ನಡೆಯಿತು. ಅದರಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಎದುರು ಸೋತಿದ್ದರು. ಅದಾಗಿ, ಅವರು 2019 ರಲ್ಲಿ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿಯ ಸಂಸದರಾಗಿ ಆಯ್ಕೆಯಾದರು.
ಆದಾಗ್ಯೂ, ಚುನಾವಣೆ ಸಂದರ್ಭದಲ್ಲಿ ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಅವರ ನಿವಾಸ ರಾಜಕೀಯ ಚಟುವಟಿಕೆಗಳಿಂದ ಕೂಡಿರುತ್ತಿತ್ತು. ಈ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು.
ಇವಲ್ಲದರ ನಡುವೆ, ಶ್ರೀನಿವಾಸ್ ಪ್ರಸಾದ್ ಅವರು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ 2013 ರಿಂದ 2016 ರವರೆಗೆ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು. ಅವರು ಜೆಡಿಯು ಸದಸ್ಯರಾಗಿ 1999-2004 ರವರೆಗೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿದ್ದರು.
ಶ್ರೀನಿವಾಸ್ ಪ್ರಸಾದ್ ಅವರು ಒಟ್ಟು 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು, ಎಂಟು ಬಾರಿ ಗೆದ್ದಿದ್ದಾರೆ. ಅವರು ಚಾಮರಾಜನಗರ ಕ್ಷೇತ್ರದಿಂದ ಒಂಬತ್ತು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಆರರಲ್ಲಿ ವಿಜಯಶಾಲಿಯಾಗಿದ್ದರು. ಪತ್ನಿ ಭಾಗ್ಯಲಕ್ಷ್ಮಿ ಮತ್ತು ಮೂವರು ಪುತ್ರಿಯರನ್ನು (ಪ್ರತಿಮಾ ಪ್ರಸಾದ್, ಪೂರ್ಣಿಮಾ ಮತ್ತು ಪೂನಂ) ಶ್ರೀನಿವಾಸ್ ಪ್ರಸಾದ್ ಅಗಲಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.