ಬೆಂಗಳೂರಿನ ಈ 2 ಜಂಕ್ಷನ್‌ಗಳಲ್ಲಿ ಕಡಿಮೆಯಾಯ್ತು ಟ್ರಾಫಿಕ್ ಜಾಮ್; ಸಂಚಾರಿ ಪೊಲೀಸರು ಅನುಸರಿಸಿದ ಮಾರ್ಗ ಹೀಗಿತ್ತು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಈ 2 ಜಂಕ್ಷನ್‌ಗಳಲ್ಲಿ ಕಡಿಮೆಯಾಯ್ತು ಟ್ರಾಫಿಕ್ ಜಾಮ್; ಸಂಚಾರಿ ಪೊಲೀಸರು ಅನುಸರಿಸಿದ ಮಾರ್ಗ ಹೀಗಿತ್ತು

ಬೆಂಗಳೂರಿನ ಈ 2 ಜಂಕ್ಷನ್‌ಗಳಲ್ಲಿ ಕಡಿಮೆಯಾಯ್ತು ಟ್ರಾಫಿಕ್ ಜಾಮ್; ಸಂಚಾರಿ ಪೊಲೀಸರು ಅನುಸರಿಸಿದ ಮಾರ್ಗ ಹೀಗಿತ್ತು

ಬೆಂಗಳೂರಿನ ಇಬ್ಬಲೂರು ಮತ್ತು ಬೆಳ್ಳಂದೂರು ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಸಂಚಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳ್ಳಂದೂರು ಮತ್ತು ಇಬ್ಬಲೂರು ಜಂಕ್ಷನ್‌ಗಳಲ್ಲಿ ಪ್ರತಿನಿತ್ಯ ಕಂಡುಬರುವ ಸಂಚಾರ ದಟ್ಟಣೆ
ಬೆಳ್ಳಂದೂರು ಮತ್ತು ಇಬ್ಬಲೂರು ಜಂಕ್ಷನ್‌ಗಳಲ್ಲಿ ಪ್ರತಿನಿತ್ಯ ಕಂಡುಬರುವ ಸಂಚಾರ ದಟ್ಟಣೆ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಹೊರ ವರ್ತುಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿದೆ. ಏನೆಲ್ಲಾ ಕ್ರಮಗಳನ್ನು ಕೈಗೊಂಡರೂ ದಿನದಿಂದ ದಿನಕ್ಕೆ ಸಮಸ್ಯೆ ಉಲ್ಬಣವಾಗುತ್ತಲೆ ಇರುತ್ತದೆ.

ಬೆಂಗಳೂರಿನ ದಕ್ಷಿಣ ಭಾಗದಿಂದ ಉತ್ತರ ಮತ್ತು ಪೂರ್ವ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾದ ಇಬ್ಬಲೂರು ಮತ್ತು ಬೆಳ್ಳಂದೂರು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಬೆಳ್ಳಂದೂರು ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಇಬ್ಬಲೂರು ಜಂಕ್ಷನ್‌ನಿಂದ ದೇವರಬೀಸನಹಳ್ಳಿ ಜಂಕ್ಷನ್‌ವರೆಗೆ ಸಂಚಾರ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಹೊಸ ಕ್ರಮದಿಂದ ದಟ್ಟಣೆ ಅವಧಿಯಲ್ಲಿ ವಾಹನಗಳು ಸುಗಮವಾಗಿ ಸಂಚರಿಸುತ್ತಿವೆ.

ಸರ್ಜಾಪುರ, ಸಿಲ್ಕ್ ಬೋರ್ಡ್ ಮತ್ತು ಮಾರತ್‌ಹಳ್ಳಿ ಕಡೆಯಿಂದ ಆಗಮಿಸುವ ವಾಹನಗಳು ಇಬ್ಬಲೂರು ಜಂಕ್ಷನ್‌ನಲ್ಲಿ ಸೇರುತ್ತಿದ್ದರಿಂದ ವಿಪರೀತ ವಾಹನ ದಟ್ಟಣೆ ಉಂಟಾಗುತ್ತಿತ್ತು. ಇದೀಗ ಸರ್ಜಾಪುರ ಕಡೆಯಿಂದ ಆಗಮಿಸಿ ಮಾರತ್‌ಹಳ್ಳಿ ಮತ್ತು ಬೆಳ್ಳಂದೂರು ಕಡೆಗೆ ಹೋಗುವ ವಾಹನಗಳು ಇಬ್ಬಲೂರು ಜಂಕ್ಷನ್‌ವರೆಗೂ ಆಗಮಿಸುವ ಅವಶ್ಯಕತೆ ಇರುವುದಿಲ್ಲ.

ಇಬ್ಬಲೂರು ಜಂಕ್ಷನ್‌ಗೂ ಮುನ್ನ ಸಿಗುವ ಬೆಳ್ಳಂದೂರು ಗೇಟ್ ಬಳಿ ಬಳ ಭಾಗಕ್ಕೆ ತಿರುಗಿ ಬೆಳ್ಳಂದೂರು ಜಂಕ್ಷನ್‌ ತಲುಪಿ ಮಾರತ್‌ಹಳ್ಳಿ ಕಡೆಗೆ ಪ್ರಯಾಣಿಸಬಹುದು. ಬೆಳ್ಳಂದೂರು ಗೇಟ್ ಮತ್ತು ಬೆಳ್ಳಂದೂರು ಜಂಕ್ಷನ್‌ ನಡುವೆ 1 ಕಿಮೀ ಅಂತರವಿದೆ. ಸರ್ಜಾಪುರ ಕಡೆಯಿಂದ ಆಗಮಿಸಿ ಎಚ್‌ಎಸ್‌ಆರ್‌ ಲೇಔಟ್ ಕಡೆಗೆ ಹೋಗುವ ವಾಹನಗಳು ಮಾತ್ರ ಇಬ್ಬಲೂರು ಜಂಕ್ಷನ್‌ ಪ್ರವೇಶಿಸಬೇಕಾಗುತ್ತದೆ. ಇದರಿಂದ ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿರುವುದು ಕಂಡು ಬಂದಿದೆ.

ಬೆಳ್ಳಂದೂರು ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಎರಡು ಸೇತುವೆಗಳ ನಡುವಿನ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಇದಕ್ಕೂ ಮುನ್ನ ಸಿಲ್ಕ್ ಬೋರ್ಡ್ ಕಡೆಯಿಂದ ಆಗಮಿಸಿ ಇಕೋ ವರ್ಲ್ಡ್, ಸಕ್ರ ಆಸ್ಪತ್ರೆ, ಇಕೊಸ್ಪೇಸ್‌, ಇಂಟೆಲ್ ಮತ್ತು ಗ್ಲೋಬಲ್ ಟೆಕ್‌ ಪಾರ್ಕ್‌ ಸೇರಿದಂತೆ ಐ.ಟಿ ಪಾರ್ಕ್‌ಗಳಿಗೆ ವಾಹನಗಳು ತೆರಳಲು ಸರ್ವೀಸ್ ರಸ್ತೆಯ ಮೂಲಕ ಸಾಗಬೇಕಿತ್ತು. ಅವಳಿ ಮೇಲ್ಸೇತುವೆಗಳ ಮಧ್ಯದ ರಸ್ತೆಯನ್ನು ಸಂಚಾರ ದಟ್ಟಣೆ ಉಂಟಾಗುವ ಬೆಳಗ್ಗೆ ಮತ್ತು ಸಂಜೆಯ ವೇಳೆ ತೆರವು ಮಾಡಿ ಒನ್ ವೇ ಮಾಡಲಾಗಿದೆ.

ಇದರಿಂದ ಮಾರತ್‌ಹಳ್ಳಿ ಸೇರಿದಂತೆ ವಿವಿಧ ಕಡೆಗೆ ವಾಹನಗಳು ಶೀಘ್ರವಾಗಿ ತೆರಳುವುದಕ್ಕೆ ಅವಕಾಶವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಿನದ ಉಳಿದ ಸಮಯದಲ್ಲಿ ಮೆಟ್ರೋ ಕಾಮಗಾರಿ ಮುಂದುವರೆಯುತ್ತದೆ. ಈ ಕ್ರಮದಿಂದ ಸಂಚಾರ ದಟ್ಟಣೆ ಇಳಿಮುಖವಾಗಿದ್ದು, ಸಾಧಕ ಬಾಧಕಗಳನ್ನು ಕುರಿತು ಅಧ್ಯಯನ ನಡೆದ ನಂತರ ಎರಡೂ ಭಾಗಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ದೇವರಬೀಸನಹಳ್ಳಿ ಜಂಕ್ಷನ್‌ನಲ್ಲೂ ಅವಳಿ ಮೇಲ್ಸೇತುವೆಗಳ ಮಧ್ಯದ ರಸ್ತೆಯನ್ನು ಸಂಚಾರ ದಟ್ಟಣೆ ಉಂಟಾಗುವ ಬೆಳಗ್ಗೆ ಮತ್ತು ಸಂಜೆಯ ವೇಳೆ ತೆರವು ಮಾಡಲಾಗಿದೆ. ಇಲ್ಲಿಯೂ ಸಂಚಾರ ದಟ್ಟಣೆ ಕಡಿಮೆಯಾಗಿದೆ.

Whats_app_banner