ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸೀಟ್ ಬ್ಲಾಕಿಂಗ್ ಹಗರಣ; 10 ಮಂದಿ ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು
KEA engineering seat blocking: ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಿಬ್ಬಂದಿ ಒಳಗೊಂಡಂತೆ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಹಗರಣದಲ್ಲಿ ಪ್ರತಿಷ್ಠಿತ ಕಾಲೇಜುಗಳು ಭಾಗಿಯಾಗಿರುವ ಶಂಕೆ ಇದೆ.
ಬೆಂಗಳೂರು: ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಿಬ್ಬಂದಿ ಒಳಗೊಂಡಂತೆ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಹಗರಣದಲ್ಲಿ ಪ್ರತಿಷ್ಠಿತ ಕಾಲೇಜುಗಳು ಭಾಗಿಯಾಗಿರುವ ಶಂಕೆ ಇದೆ. 2024-2025ನೇ ಸಾಲಿನ ವಿವಿಧ ಪದವಿಪೂರ್ವ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಪಟ್ಟಂತೆ ಸೀಟ್ ಬ್ಲಾಕಿಂಗ್ ಹಗರಣದ ಬಗ್ಗೆ ಕೆಇಎ ಅಧಿಕಾರಿಗಳು ನವೆಂಬರ್ 13 ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಮೂರು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯನ್ನು ವಿಚಾರಣೆ ನಡೆಸಿ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. "ನಾವು ಎಂಟು ಜನರನ್ನು ಬಂಧಿಸಿದ್ದೇವೆ ಮತ್ತು ಅವರಲ್ಲಿ ಒಬ್ಬರು ಕೆಇಎ ಸಿಬ್ಬಂದಿಯಾಗಿದ್ದಾರೆ. ಇತರರಲ್ಲಿ ಮಧ್ಯವರ್ತಿಗಳು ಮತ್ತು ಕೆಲವು ಎಂಜಿನಿಯರಿಂಗ್ ಕಾಲೇಜುಗಳ ಕೆಲವು ಸಿಬ್ಬಂದಿ ಸೇರಿದ್ದಾರೆ" ಎಂದು ಅವರು ಹೇಳಿದರು. ಇದೀಗ ಬಂದ ವರದಿಗಳ ಪ್ರಕಾರ ಬಂಧನಕ್ಕೆ ಒಳಪಟ್ಟ ಆರೋಪಿಗಳ ಸಂಖ್ಯೆ 10 ಆಗಿದೆ. ಆರೋಪಿಗಳನ್ನು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಂತರ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಹಗರಣದ ಕಿಂಗ್ಪಿನ್ ಹರ್ಷ, ರವಿಶಂಕರ್, ಪುನೀತ್, ಶಶಿಕುಮಾರ್, ಪುರುಷೋತ್ತಮ್, ಪ್ರಕಾಶ್, ಅವಿನಾಶ್ ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳು ಕೆಇಎನ ಸಿಬ್ಬಂದಿ ಅವಿನಾಶ್ ಎಂಬವರ ಸಹಾಯದಿಂದ ಪಾಸ್‌ವರ್ಡ್ ಪಡೆದು ಸೀಟು ಬ್ಲಾಕಿಂಗ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧೀಕಾರದ ಕೌನ್ಸಿಲಿಂಗ್‌ಗೆ ಆಯ್ಕೆಯಾಗಿ ಕಾಲೇಜು ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳ ಸೀಟುಗಳು ಮತ್ತು ಸರಕಾರದ ಅಡಿಯಲ್ಲಿ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆದ ಬಳಿಕ ದಾಖಲಾತಿ ಪಡೆಯದೆ ಇದ್ದ ವಿದ್ಯಾರ್ಥಿಗಳನ್ನು ಈ ಆರೋಪಿಗಳು ಬ್ಲಾಕ್ ಮಾಡುತ್ತಿದ್ದರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.