BJP Rath Yatra: ಕಾಂಗ್ರೆಸ್, ಜೆಡಿಎಸ್ ಗೆ ಸೆಡ್ಡು; ರಾಜ್ಯದ ನಾಲ್ಕು ದಿಕ್ಕುಗಳಿಂದ ಬಿಜೆಪಿ ರಥಯಾತ್ರೆಗೆ ತಯಾರಿ
ಫೆಬ್ರವರಿ ಅಂತ್ಯದಲ್ಲಿ ರಾಜ್ಯದ ನಾಲ್ಕು ದಿಕ್ಕುಗಳಿಂದ ರಥಯಾತ್ರೆ ಆರಂಭಿಸಲು ರೂಪರೇಷೆ ಸಿದ್ಧತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
![ಮಲ್ಲೇಶ್ವರಂ ನ ಬಿಜೆಪಿಯ ಜಗನ್ನಾಥ ಭವನದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಶಿವಕುಮಾರ ಸ್ವಾಮೀಜಿ ಮತ್ತು ಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ವೈ ಇದ್ದಾರೆ ಮಲ್ಲೇಶ್ವರಂ ನ ಬಿಜೆಪಿಯ ಜಗನ್ನಾಥ ಭವನದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಶಿವಕುಮಾರ ಸ್ವಾಮೀಜಿ ಮತ್ತು ಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ವೈ ಇದ್ದಾರೆ](https://images.hindustantimes.com/kannada/img/2023/01/20/960x540/cm_bommai_in_bjp_meeting_1674225600498_1674225639172_1674225639172.jpg)
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಥಯಾತ್ರೆಗಳ ಮೂಲಕ ಈಗಾಗಲೇ ಜನ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದು, ಇದೀಗ ಈ ಎರಡು ಪಕ್ಷಗಳಿಗೆ ಸೆಡ್ಡು ಹೊಡೆಯಲು ಬಿಜೆಪಿ ಮುಂದಾಗಿದೆ.
ಇವತ್ತು (ಜ.20, ಶುಕ್ರವಾರ) ಮಲ್ಲೇಶ್ವರಂನಲ್ಲಿರುವ ಭಾರತೀಯ ಜನತಾ ಪಕ್ಷದ ಜಗನ್ನಾಥ ಭವನದಲ್ಲಿ ರಾಜ್ಯ ಬಿಜೆಪಿಯ ಪ್ರಮುಖ ನಾಯಕರ ಸಭೆ ನಡೆದಿದೆ. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ.
ಫೆಬ್ರವರಿ ಅಂತ್ಯದಲ್ಲಿ ರಾಜ್ಯದ ನಾಲ್ಕು ದಿಕ್ಕುಗಳಿಂದ ರಥಯಾತ್ರೆ ಆರಂಭಿಸಲು ರೂಪರೇಷೆ ಸಿದ್ಧತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಸಭೆ ನಡೆದಿದೆ. ಬರುವ ಈ ತಿಂಗಳ ಮುಂದಿನ ದಿನಗಳಲ್ಲಿ ಹಾಗೂ ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು, ಅಧಿವೇಶನದ ಜೊತೆ ಜೊತೆಗೆ ಪಕ್ಷದ ಸಂಘಟನೆ, ಫೆಬ್ರವರಿ ಅಂತ್ಯದವರೆಗೆ ಜನ ಸಂಕಲ್ಪ ಯಾತ್ರೆ ಮುಂದುವರೆಸುವುದು. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಣಾಳಿಕೆ ಸಿದ್ದ ಪಡಿಸುವುದು. ರಾಷ್ಟ್ರೀಯ ನಾಯಕರ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಾಳೆ (ಜ.21, ಶನಿವಾರ) ಪ್ರಾರಂಭವಾಗುವ ಬೂತ್ ಮಟ್ಟದ ವಿಜಯಸಂಕಲ್ಪ ಯಾತ್ರೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಭಾಗವಹಿಸಲು ಬರುತ್ತಿದ್ದಾರೆ. ವಿಜಯ ಯಾತ್ರೆ ಅರಂಭಿಸುತ್ತಿದ್ದಾರೆ. ನಾನು ತುಮಕೂರಿನಲ್ಲಿ ಯಾತ್ರೆಯನ್ನು ಆರಂಭಿಸುತ್ತಿದ್ದೇನೆ ಎಂದು ತಿಳಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಪಟ್ಟಿಯನ್ನು ಮನೆಮನೆಗೆ ತಲುಪಿಸುವುದು, ತಾಲ್ಲೂಕು ಮಟ್ಟದ ಸಮ್ಮೇಳನಗಳು, ಹಲವು ಮೋರ್ಚಾಗಳ ಜಿಲ್ಲಾ ಮಟ್ಟದ ಸಮಾವೇಶಗಳನ್ನು ಎಲ್ಲೆಡೆ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪಕ್ಷದ ಸಂಘಟನೆ, ಜನಸಂಪರ್ಕದ ಬಗ್ಗೆ ಚರ್ಚೆ
ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಚುನಾವಣೆ ತಯಾರಿ, ಪಕ್ಷದ ಸಂಘಟನೆ ಹಾಗೂ ಜನಸಂಪರ್ಕದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ನಾವು ಈಗ ಪ್ರಾಥಮಿಕ ಹಂತದ ಚರ್ಚೆ ಮಾಡಿದ್ದೇವೆ. ಮುಂದಿನ ಹಂತದಲ್ಲಿ ಯಡಿಯೂರಪ್ಪ ಅವರ ಜೊತೆ ಚರ್ಚಿಸುತ್ತೇವೆ ಎಂದರು.
ಹಾವೇರಿಯಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಹೋಗುತ್ತಾರೆ ಎಂಬ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷದಲ್ಲಿ ಯಾರು ಉಳಿಯಲಿದ್ದಾರೆ ಎಂಬುದನ್ನು ಅವರು ಗಮನಿಸಲಿ. ಅವರು ಹತಾಶೆಯಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ತಿರುಗೇಟು ನೀಡಿದ್ದಾರೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)