2024ರಲ್ಲಿ ಪ್ರಕಟವಾದ ಎಚ್‌ಟಿ ಕಾಡಿನ ಕಥೆಗಳು ಅಂಕಣದಲ್ಲಿ ಗಮನ ಸೆಳೆದ 10 ಬರಹಗಳು; ಕೇರಳ ದುರಂತದಿಂದ ಹುಲಿ ಸಾವಿನವರೆಗೆ
ಕನ್ನಡ ಸುದ್ದಿ  /  ಕರ್ನಾಟಕ  /  2024ರಲ್ಲಿ ಪ್ರಕಟವಾದ ಎಚ್‌ಟಿ ಕಾಡಿನ ಕಥೆಗಳು ಅಂಕಣದಲ್ಲಿ ಗಮನ ಸೆಳೆದ 10 ಬರಹಗಳು; ಕೇರಳ ದುರಂತದಿಂದ ಹುಲಿ ಸಾವಿನವರೆಗೆ

2024ರಲ್ಲಿ ಪ್ರಕಟವಾದ ಎಚ್‌ಟಿ ಕಾಡಿನ ಕಥೆಗಳು ಅಂಕಣದಲ್ಲಿ ಗಮನ ಸೆಳೆದ 10 ಬರಹಗಳು; ಕೇರಳ ದುರಂತದಿಂದ ಹುಲಿ ಸಾವಿನವರೆಗೆ

2024 Memories: ಹಿಂದೂಸ್ತಾನ್‌ ಟೈಂಸ್‌ ಕನ್ನಡದಲ್ಲಿ ಪ್ರಕಟವಾದ ಕಾಡಿನ ಕಥೆಗಳು( Forest Tales) ಎನ್ನುವ ಅಂಕಣದಲ್ಲಿ 2024ರಲ್ಲಿ ಗಮನ ಸೆಳೆದ 10 ಬರಹಗಳ ವಿವರ ಇಲ್ಲಿದೆ.

ಎಚ್‌ಟಿ ಕನ್ನಡದಲ್ಲಿ ಪ್ರಕಟವಾದ ಕಾಡಿನ ಕಥೆಗಳ ಒಂದು ಬರಹದ ಚಿತ್ರಣ
ಎಚ್‌ಟಿ ಕನ್ನಡದಲ್ಲಿ ಪ್ರಕಟವಾದ ಕಾಡಿನ ಕಥೆಗಳ ಒಂದು ಬರಹದ ಚಿತ್ರಣ

2024ರಲ್ಲಿ ಹಿಂದೂಸ್ತಾನ್‌ ಟೈಂಸ್‌ ಕನ್ನಡದಲ್ಲಿ ಪ್ರಕಟವಾದ ಕಾಡಿನ ಕಥೆಗಳಲ್ಲಿ ಗಮನ ಸೆಳೆದ ಬರಹಗಳು

1 . Forest Tales: ಮಂಗನ ಕಾಯಿಲೆಗೆ ಬರಲಿಲ್ಲ ಸೂಕ್ತ ಲಸಿಕೆ, ಮಲೆನಾಡಿಗರ ಭೀತಿಗಿಲ್ಲ ಕೊನೆ; ಇನ್ನೆಷ್ಟು ದಿನ ಕಾಯೋಣ ಸ್ವಾಮಿ( 2024 ಜನವರಿ 19)

ಮಲೆನಾಡು, ಕರಾವಳಿಗೆ ಹೊಂದಿಕೊಂಡ ಜಿಲ್ಲೆಗಳ ಜನರಿಗೆ ಅರಣ್ಯವಾಸವೇ ನೈಜ ಬದುಕು. ಕಷ್ಟವೋ ಸುಖವೋ ಅವರಿಗೆ ಅರಣ್ಯ ವಾಸದ ಸುಖವೇ ಬೇಕು. ಇಲ್ಲದಿದ್ದರೆ ಆಗದು. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಮೈಸೂರು, ಚಾಮರಾಜನಗರ ಜಿಲ್ಲೆಯ ಪಶ್ಚಿಮ ಘಟ್ಟದ ಸೆರಗಿನಲ್ಲಿ ಶತಮಾನಗಳಿಂದ ನೆಲೆಸಿರುವ ಜನರಿಗೆ ಇಂದಿಗೂ ಕಾಡೇ ಆಸರೆ. ಅದೇ ಎಲ್ಲವೂ. ಈ ಭಾಗದಲ್ಲಿ ಕಾಡುತ್ತಿರುವ ಮಂಗನ ಕಾಯಿಲೆ ಮಾತ್ರ ಆಗಾಗ ಮನೆ ಬಿಡುವಂತೆ ಮಾಡಿ ಬಿಡುತ್ತದೆ. ಕಾಡಿನ ಸೆಳೆತ, ಮನೆಯ ಆಕರ್ಷಣೆ ಮತ್ತೆ ಅಲ್ಲಿ ಕರೆ ತಂದು ಬಿಡುತ್ತದೆ.

2. ಕರ್ನಾಟಕ ರಾಜ್ಯ ಪಕ್ಷಿ ನೀಲಕಂಠನಿಗೆ ರಾಮಮಂದಿರ ಉದ್ಘಾಟನೆ ದಿನ ನಮನ, ಚಂಬಲ್‌ ಕಣಿವೆ ಕಾಡಲ್ಲಿ ಗೌರವ, ರಾಮಾಯಣಕ್ಕೂ ಉಂಟು ನಂಟು ( 2024 ಜನವರಿ 25)

ಉತ್ತರಪ್ರದೇಶದ ಐತಿಹಾಸಿಕ ನಗರಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಸಡಗರ ಜೋರಾಗಿದ್ದರೆ ಅಲ್ಲಿಂದ ಒಂದು ಸಾವಿರ ಕಿ.ಮಿ ದೂರದ ಚಂಬಲ್‌ ಜನ ನೀಲಕಂಠ ಹಕ್ಕಿಯನ್ನು ಹುಡುಕುತ್ತಿದ್ದರು.

ಅಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಖುಷಿಯಲ್ಲಿತ್ತು. ಅಯೋಧ್ಯೆಯಲ್ಲಿದ್ದವರು ಬಾಲರಾಮನ ಮೂರ್ತಿ ದರ್ಶನ ಮಾಡುವ ತವಕದಲ್ಲಿದ್ದರೆ, ಮನೆಯಲ್ಲಿಯೇ ಕೂತವರು ಮಾಧ್ಯಮಗಳ ಮೂಲಕ ರಾಮನನ್ನು ಕಣ್ತುಂಬಿಕೊಳ್ಳುತ್ತಿದ್ದರು. ಅದೇ ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶದ ಹಲವಾರು ಗ್ರಾಮಗಳ ಜನ ಹಕ್ಕಿಯೊಂದರ ದರ್ಶನ ಮಾಡುವ ಭಕ್ತಿಭಾವದಲ್ಲಿದ್ದರು. ಇದಕ್ಕಾಗಿ ಅವರು ಮಧ್ಯಪ್ರದೇಶ- ಉತ್ತರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಚಂಬಲ್‌ ವನ್ಯಜೀವಿ ಉದ್ಯಾನವನದ ಕಡೆ ತೆರಳಿದ್ದರು. ಕಾಡಿನಲ್ಲಿ ಹಕ್ಕಿಯನ್ನು ಕಾಣಬೇಕು. ದೂರದಿಂದಲೇ ನಮಸ್ಕರಿಸಿ ಆ ಹಕ್ಕಿಯಲ್ಲಿ ರಾಮನನ್ನು ಕಾಣಬೇಕು ಎನ್ನುವುದು ಅವರ ಉದ್ದೇಶವಾಗಿತ್ತು.

3 . ರಾಮಾಯಣ ಕಾಲದ 6 ಕಾಡುಗಳ ಪೈಕಿ ಒಂದು ಕರ್ನಾಟಕದಲ್ಲಿ ಇಂದಿಗೂ ಇದೆ; ಹಸಿರು ಪ್ರೀತಿಯ ಮಹಾಕಾವ್ಯ -ಕಾಡಿನ ಕಥೆಗಳು ( 202 ಏಪ್ರಿಲ್‌ 18)

ರಾಮಾಯಣದ ಕಾಡುಗಳು: ರಾಮಾಯಣ ಎಂದರೆ ಅದೊಂದು ಧಾರ್ಮಿಕ ಕಥನ. ರಾಮ, ಸೀತೆ, ಹನುಮಂತ ಸಹಿತ ನೂರಾರು ಪಾತ್ರಗಳ ಕಥಾನಕ ಎಂದೇ ಹೇಳುವುದುಂಟು. ರಾಮಾಯಣ ಆಧರಿಸಿ ಅದೆಷ್ಟು ಸಾಹಿತ್ಯ, ರೂಪಕಗಳು ಬಂದಿವೆ. ರಾಮಾಯಣ ಎಂದರೆ ಅಷ್ಟೇ ಅಲ್ಲ. ಅದೊಂದು ಸುಂದರ ಅರಣ್ಯಗಳನ್ನೊಂಡ, ಆಯುರ್ವೇದ ಸಸ್ಯ ಸಂಪತ್ತಿನ ಭಂಡಾರವೂ ಹೌದು. ಇದನ್ನು ಹಲವರು ಸಂಶೋಧನೆಗೂ ಬಳಸಿಕೊಂಡಿದ್ದಾರೆ.

4 . Forest Tales: ಕಾಡು ಸೇರಿವೆ ನಾಡಾನೆ, ಮಠ- ದೇಗುಲಗಳಲ್ಲೀಗ ಯಾಂತ್ರಿಕ ಗಜ ಸೇವೆ, ಕೇರಳದಲ್ಲಿ ರಾಮನ್‌- ಮೈಸೂರಲ್ಲಿ ಶಿವ !( 2024 ಏಪ್ರಿಲ್‌ 09)

ದಶಕದ ಹಿಂದಿನ ನೆನಪು, ಮೈಸೂರಿನ ಮುಖ್ಯ ರಸ್ತೆಯಲ್ಲಿ ಏಕಾಏಕಿ ಆನೆ ಓಡಿ ಬಂದಿತು. ಜನ ಅದನ್ನು ಹಿಂಬಾಲಿಸಿದರು. ಸಿಬ್ಬಂದಿಯೂ ಹಿಂದೆಯೇ ಓಡಿದರು. ವಾಹನಗಳು ಪಕ್ಕದಲ್ಲಿಯೇ ಸಂಚರಿಸಿದರು. ಒಂದು ಗಂಟೆಯ ನಂತರ ಆನೆಯನ್ನು ಸರಪಳಿ ಹಾಕಿ ಹಿಡಿಯಲಾಯಿತು. ಆನೆಯಿಂದ ಯಾರಿಗೂ ಅನಾಹುತ ಆಗಲಿಲ್ಲ. ಆದರೆ ಆನೆ ಹೀಗೆ ಓಡಿ ಬಂದಿದ್ದು ಎಲ್ಲಿಂದ ಎಂದು ನೋಡಿದಾಗ ಅದು ಮೈಸೂರು ಅರಮನೆಯ ದಿಕ್ಕನ್ನು ತೋರಿಸಿತ್ತು. ಮೈಸೂರು ಅರಮನೆ ಎಂದರೆ ಎಂತಹ ಆಕರ್ಷಣೆ. ನಾವು ಅಲ್ಲಿ ಇರಬಾರದೇ ಎಂದು ಬಯಸುವವರು ಅಧಿಕ. ಆನೆಗೂ ಅರಮನೆಯ ಆತಿಥ್ಯವೇ ಇದ್ದಿರಬೇಕು ಎಂದು ನಾವು ಖಂಡಿತಾ ಭಾವಿಸಿಕೊಳ್ಳುತ್ತೇವೆ. ಅರಮನೆಯ ವಾಸದಿಂದ ಕಸಿವಿಸಿಕೊಂಡು ಓಡಿ ಬಂದಿದ್ದ ಇಂದಿರಾ ಆನೆ ವರ್ತನೆ ಹೀಗೆಕೇ ಎಂದು ಅಲ್ಲಿನ ಆನೆ ಮನೆಯ ಮಾವುತರು, ಕವಾಡಿಗರನ್ನು ಕೇಳಿದರೆ ಅವರು ಹೇಳಿದ್ದು ಆನೆಗೆ ಅರಮನೆ ಸಹವಾಸ ಬೇಡ ಎನ್ನಿಸುತ್ತದೆ. ಇಲ್ಲಿ ಅವುಗಳಿಗೆ ಸಾಂಗತ್ಯವೇ ಇಲ್ಲ. ಸಂಗಾತಿಯೇ ಇಲ್ಲದೇ ಯಾರು ತಾನೆ ಇರಬಲ್ಲರು. ಅರಮನೆಯಲ್ಲಿ ಆರು ಹೆಣ್ಣಾನೆಗಳಿವೆ. ಒಂದಾದರೂ ಗಂಡಾನೆ ಬೇಡವೇ. ಕೊನೆಗೆ ಅರಮನೆಯವರಿಗೆ ಈ ಮಾಹಿತಿ ಕಿವಿಗೆ ಬಿದ್ದು ಎಲ್ಲ ಆನೆಗಳನ್ನೂ ಕಾಡಿಗೆ ಕಳುಹಿಸುವ ತೀರ್ಮಾನಕ್ಕೆ ಬಂದರು. ವರ್ಷಕ್ಕೆ ಒಮ್ಮೆ ದಸರಾ ಆನೆಗಳೊಂದಿಗೆ ಜತೆಯಾಗುತ್ತಿದ್ದ ಮೈಸೂರು ಅರಮನೆ ಆನೆಗಳಿಗೆ ಅರಣ್ಯ ಸೇರಿದ ಖುಷಿ. ಇಂದಿರಾ ಅರಮನೆ ಬಿಟ್ಟು ಓಡಿದ್ದು ಏನೆಲ್ಲಾ ಬದಲಾವಣೆಗೆ ನಾಂದಿ ಹಾಡಿತು.

5. Forest Tales: ತಂಬಾಕು ಬೆಳೆಗಾರರಿಗೆ ಆಸರೆಯಾದ ವನತೋಟಗಾರಿಕೆಯ ಲಕ್ಷ್ಮಣ ರೇಖೆ, ನಿವೃತ್ತ ಅರಣ್ಯಾಧಿಕಾರಿ ಪ್ರಕೃತಿ ಪ್ರೀತಿಗೆ ಪಿಂಚಣಿ ಮೀಸಲು(2024 ಮೇ 31)

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ರೈತ ದಿನೇಶ್‌ ಕುಟುಂಬ ತಲೆಮಾರುಗಳಿಂದಲೂ ತಂಬಾಕು ಬೆಳೆಯುತ್ತಿದೆ. ಸಮೀಪವೇ ಅರಣ್ಯ. ಕಾಡು ಪ್ರಾಣಿಗಳ ಉಪಟಳ ಬೇರೆ. ಪರ್ಯಾಯವಿಲ್ಲದೇ ತಂಬಾಕು( Tobacco) ಬೆಳೆಯುವಲ್ಲಿ ಕುಟುಂಬ ನಿರತವಾಯಿತು. ದರವೂ ಸಿಗುತ್ತಿತ್ತು. ಎಷ್ಟು ದಿನ ಇದೇ ತಂಬಾಕು ಬೆಳೆಯೋದು ಎನ್ನುವ ಪ್ರಶ್ನೆ ಅವರನ್ನು ಕಾಡುತ್ತಲೇ ಇತ್ತು. ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ಬೆಳೆಗೆ ಮಿತಿ ಹೇರಲಿದೆ ಎನ್ನುವ ಮಾತುಗಳು ಕೆಲವು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಒಮ್ಮೆ ಪಿರಿಯಾಪಟ್ಟಣಕ್ಕೆ ನಿವೃತ್ತ ಅಧಿಕಾರಿಯೊಬ್ಬರು ಬರುತ್ತಾರೆ. ಅವರು ಈ ಭಾಗದಲ್ಲಿಯೇ 70 ರ ದಶಕದಲ್ಲಿ ಕೆಲಸ ಮಾಡಿದವರೇ. ಅವರು ತಂಬಾಕು ಪರ್ಯಾಯ ಬೆಳೆಗಳ ಬಗ್ಗೆ ಹೇಳುತ್ತಾರೆ. ಮಾರ್ಗದರ್ಶನ ಮಾಡಿಸಿ ಸಸಿಗಳನ್ನೂ ಕೊಡುತ್ತಾರೆ ಎನ್ನುವುದು ದಿನೇಶ್‌ ಅವರ ಕಿವಿ ಮೇಲೆ ಬಿದ್ದಿತ್ತು. ಕಾರ್ಯಕ್ರಮಕ್ಕೆ ಹೋದರೆ ನಿಜಕ್ಕೂ ಅದು ಅವರ ನಿರೀಕ್ಷೆಯಂತೆಯೇ ಬದಲಾವಣೆಯನ್ನು ಬಿತ್ತಿತ್ತು.

6. Forest Tales: ಹುಲಿ ಹೆಜ್ಜೆ; 11 ವರ್ಷದ ಅಂತರದಲ್ಲೇ ಭಾರತದಲ್ಲಿ 1348 ಹುಲಿಗಳ ಸಾವು, ಕರ್ನಾಟಕಕ್ಕೆ ಮೂರನೇ ಸ್ಥಾನ, ಕಾರಣವಾದರೂ ಏನು? (2024 ಜುಲೈ 29)

ಜುಲೈ 29 ಅಂತರಾಷ್ಟ್ರೀಯ ಹುಲಿ ದಿನ(International Tiger Day 2024). ಪ್ರತಿ ವರ್ಷ ಹುಲಿಯ ಸಂರಕ್ಷಣೆ, ಅದರ ಆಗುಹೋಗುಗಳ ಸುತ್ತಲೇ ಈ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿಯೂ ಹುಲಿ ದಿನ ಯಥಾರೀತಿ ಜಾಗೃತಿ ಚಟುವಟಿಕೆಗಳೊಂದಿಗೆ ಹುಲಿ ಹೆಜ್ಜೆ ಗುರುತು ಇರುವ ಹದಿನೈದಕ್ಕೂ ಹೆಚ್ಚು ರಾಜ್ಯಗಳಲ್ಲಿ ಹುಲಿ ದಿನ ಆಚರಣೆಯಂತೂ ಆಗಿದೆ. ಭಾರತದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯೇನೋ ಕಂಡು ಬಂದಿದೆ. ಖುಷಿಯನ್ನು ಇಷ್ಟಕ್ಕೆ ಸೀಮಿತ ಮಾಡಿಕೊಳ್ಳುವ ಅಗತ್ಯವೇನಿಲ್ಲ. ಏಕೆಂದರೆ ಹುಲಿಗಳ ಸಾವಿನ ಸಂಖ್ಯೆಯೂ ಭಾರತದಲ್ಲಿ ಏರುಗತಿಯಲ್ಲೇ ಇದೆ. ಒಂದು ದಶಕದ ಅಂತರದಲ್ಲಿ ಭಾರತದಲ್ಲಿ ಅಂದಾಜು 1348 ಹುಲಿಗಳು ಸಾವನ್ನಪ್ಪಿವೆ. ಇದರಲ್ಲಿ ಸಹಜ ಸಾವಿನ ಪ್ರಕರಣಗಳ ಸಂಖ್ಯೆ ಅಧಿಕವಾಗಿದ್ದರೂ ಬೇರೆ ಬೇರೆ ಕಾರಣಗಳಿಂದಲೂ ಹುಲಿಗಳು ಜೀವ ಕಳೆದುಕೊಂಡಿವೆ. ಇದು ಕೂಡ ಚರ್ಚಾಸ್ಪದ ವಿಚಾರವೇ.

7 . ಕಾಡಿನ ಕಥೆಗಳು: ಹಿಮಾಲಯ ಕೇರಳದಂತೆ ಕರ್ನಾಟಕದಲ್ಲೂ ಅರಣ್ಯ ನಾಶದ ಆತಂಕ; ನಮ್ಮಲ್ಲೂ ಸೃಷ್ಟಿಯಾಗಬಹುದು ಪರಿಸರ ಹಾಟ್‌ಸ್ಪಾಟ್‌ ಗಳು !(2024 ಆಗಸ್ಟ್‌ 20)

ಸಿಕ್ಕಿಂನಲ್ಲಿ ದೊಡ್ಡ ಗುಡ್ಡವೊಂದು ಕುಸಿದು ಕೆಳಗಡೆಯಿದ್ದ ವಿದ್ಯುತ್‌ ಘಟಕವೇ ನಾಮಾವೇಶವಾಗಿ ಹೋಯಿತು.ಅಲ್ಲಿದ್ದವರು ಗುಡ್ಡ ಕುಸಿತದ ಭಯದ ಜತೆಯಲ್ಲಿಯೇ ವಿದ್ಯುತ್‌ ಘಟಕದಿಂದ ಏನಾದರು ಆಗಬಹುದೇನೋ ಎನ್ನುವ ಭಯದಲ್ಲಿ ಜೀವ ಕೈಯಲ್ಲಿಯೇ ಅಲ್ಲಿಂದ ಓಡಿದರು. ಸಿಕ್ಕಿಂನಲ್ಲಿ ಈಗಂತೂ ಭೂಕುಸಿತಗಳು ಸಾಮಾನ್ಯ. ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಂತೂ ಭೂಕುಸಿತಗಳು ಲೆಕ್ಕವಿಲ್ಲದಷ್ಟು. ಪ್ರಮುಖ ರಸ್ತೆಗಳ ಮೇಲೆಯೇ ಕುಸಿತಗಳು ಸಂಭವಿಸಿ ಜೀವವನ್ನು ಕಳೆದುಕೊಂಡವರು ಅದೆಷ್ಟೋ. ಭಾರೀ ಮಳೆ ಅಂದರೆ ಅವರಿಗೆಲ್ಲಾ ಇನ್ನಿಲ್ಲದ ಭಯ.

8 . ಕಾಡಿನ ಕಥೆಗಳು: ಹವಾಮಾನ ವೈಪರಿತ್ಯ ಪರಿಣಾಮ ಎಲ್ಲಿಗೆ ಬಂತು ನೋಡಿ, ಆಫ್ರಿಕಾದಲ್ಲಿ ಆನೆ ಮಾತ್ರವಲ್ಲ ನೀರಾನೆ, ಜೀಬ್ರಾ, ಕಾಡು ಕೋಣದ ಆಹಾರವೂ ರೆಡಿ( 2024 ಸೆಪ್ಟಂಬರ್‌ 17)

ನಮ್ಮಲ್ಲಿ ವಿಪರೀತ ಬರ. ಆಹಾರವೂ ಇಲ್ಲ. ನೀರು ಇಲ್ಲ. ಜನರಿಗೆ ಆಹಾರ ಕೊಡಲು ಆನೆ ಸಹಿತ ಹಲವು ವನ್ಯಜೀವಿಗಳನ್ನು ಕೊಲ್ಲದೇ ಪರ್ಯಾಯ ಮಾರ್ಗವೇ ಇಲ್ಲ. ಇದರಿಂದ ಆನೆ, ಕಾಡೆಮ್ಮೆ, ಜೀಬ್ರಾಗಳನ್ನು ಕೊಂದು ಆಹಾರವಾಗಿ ಬಳಸಬಹುದು.. ಹೀಗೊಂದು ಆದೇಶ ನಮೀಬಿಯಾ ದೇಶಗಳಲ್ಲಿ ಕೆಲ ದಿನಗಳ ಹಿಂದೆ ಹೊರ ಬಿದ್ದಿತು. ಇದನ್ನು ಗಮನಿಸಿದ ಜಿಂಬಾಬ್ವೆ ದೇಶ ಕೂಡ ಇದೇ ಹಾದಿ ಹಿಡಿಯಿತು. ಇಂತಹ ಆದೇಶಗಳು ಹೊರ ಬಿದ್ದಿರುವುದು ಆಫ್ರಿಕಾದ ದೇಶಗಳಲ್ಲಿ. ನಮೀಬಿಯಾದಲ್ಲಿ ಸೆಪ್ಟಂಬರ್‌ ಆರಂಭದಲ್ಲಿಯೇ ಆನೆಗಳ ಹತ್ಯೆ ಮಾಡಿ ಆಹಾರವಾಗಿ ಬಳಸುವ ಆದೇಶ ಪ್ರಕಟವಾಯಿತು. ಈಗ ಜಿಂಬಾಬ್ವೆ ಸರದಿ. ನಮೀಬಿಯಾದಲ್ಲಿ 700 ವನ್ಯಪ್ರಾಣಿಗಳನ್ನು ಕೊಲ್ಲಲು ಅನುಮತಿ ಕೊಡಲಾಗಿದೆ. ಗಿ 83 ಆನೆಗಳು, 30 ನೀರಾನೆ, 60 ಎಮ್ಮೆ, 50 ಕೃಷ್ಣಮೃಗ, 100 ಕಾಡೆಮ್ಮೆ ಮತ್ತು 300 ಜೀಬ್ರಾಗಳನ್ನು ಕೊಂದು ಆಹಾರವನ್ನು ಬಳಕೆ ಮಾಡಲಾಗುತ್ತಿದೆ. ಈಗ ಜಿಂಬಾಬ್ವೆ ಕೂಡ ನಮೀಬಿಯಾ ಹಾದಿ ಹಿಡಿದಿದೆ. ಅಲ್ಲಿಯೂ ಕಾಡಾನೆಗಳು ಸೇರಿ ಹಲವು ವನ್ಯಜೀವಿಗಳನ್ನು ಕೊಲ್ಲಲು ಸೂಚಿಸಲಾಗಿದೆ.

9. ಕಾಡಿನ ಕಥೆಗಳು: ಮೈಸೂರು ದಸರಾ ಜಂಬೂ ಸವಾರಿ ಗೆಲ್ಲಿಸಿದ ಅಭಿಮನ್ಯು ಆತ್ಮವಿಶ್ವಾಸ, ಮಾವುತ ವಸಂತನ ಮಾಸದ ನಗು; ನಿಮಗೊಂದು ಸಲಾಂ( 2024 ಅಕ್ಟೋಬರ್‌ 16)

ಅಸಂಖ್ಯಾತ ಜನ ಅಲ್ಲಿ ಸೇರಿದ್ದರು.ಕರ್ನಾಟಕದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಗಣ್ಯಾತಿ ಗಣ್ಯರು ಆಸೀನರಾಗಿದ್ದರು. ಸುಮಾರು ಐದು. ಕಿ.ಮಿ. ಉದ್ದಕ್ಕೂ ಲಕ್ಷಾಂತರ ಮಂದಿ ಕಾತರದಿಂದ ಕಾಯುತ್ತಿದ್ದರು. ಜಂಬೂ ಸವಾರಿ ಸುಸೂತ್ರವಾಗಿ ಮುಗಿದು ಬಿಡಲಿ ಎಂದು ಮನದಲ್ಲಿಯೇ ಅಂದುಕೊಂಡವೂ ಇದ್ದರು. ಗಣ್ಯರು, ಜನರ ಆಶಯದಂತೆಯೇ ದಸರಾ ಸುಸೂತ್ರವಾಗಿ ನಡೆದು ಹೋಯಿತು. ಚಿನ್ನದ ಅಂಬಾರಿ ಹೊತ್ತು ಅದರಲ್ಲಿ ಚಾಮುಂಡೇಶ್ವರಿ ತಾಯಿ ವಿಗ್ರಹದೊಂದಿಗೆ ಹೆಜ್ಜೆ ಹಾಕಿದ ಅಭಿಮನ್ಯು ಎಂದ ಧೀರ- ಶೂರನೂ ಗೆಲ್ಲಿಸಿಯೇ ಬಿಟ್ಟ. ಇದರ ಹಿಂದೆ ಇದ್ದ ವಸಂತ ಎಂಬ ಮಾವುತ ಅಭಿಮನ್ಯುವಿನ ಮೇಲೆ ಕುಳಿತುಕೊಂಡು ಅಂಬಾರಿ ಆರಂಭಗೊಳ್ಳುವ ಮುನ್ನ ಹೊರ ಹೊಮ್ಮಿಸಿದ ನಗು, ಮಾರ್ಗದುದ್ದಕ್ಕೂ ಜನರೆಡೆ ನಗುಮುಖದೊಂದಿಗೆ ಕೈಬಿಸಿದ ವಸಂತರ ಛಾತಿ ನಿಜಕ್ಕೂ ಗ್ರೇಟ್‌. ಮೈಸೂರು ದಸರಾದಲ್ಲಿ ಸೇರಿದ್ದ ಲಕ್ಷಾಂತರ ಜನರ ನಡುವೆ ಅಭಿಮನ್ಯು ಆತ್ಮವಿಶ್ವಾಸದ ಹೆಜ್ಜೆ, ಮಾವುತ ವಸಂತ ಗೆಲ್ಲುವ ಛಾತಿಯ ಆ ನಗು ಎರಡಕ್ಕೂ ಬೆಲೆ ಕಟ್ಟಲಾಗದು.

10. ಕಾಡಿನ ಕಥೆಗಳು: ಕೇರಳ ವಯನಾಡಿನಲ್ಲಿ ಮತ ಹಿತಕ್ಕಾಗಿ ಅಜ್ಜಿ- ಅಪ್ಪ ಅರಣ್ಯ, ವನ್ಯಜೀವಿ ರಕ್ಷಣೆಗೆ ಹಾಕಿಕೊಟ್ಟ ಮಾದರಿ ಮರೆತ ಪ್ರಿಯಾಂಕಗಾಂಧಿ( 2024 ನವೆಂಬರ್‌ 26)

ಬಂಡೀಪುರ ಹುಲಿ ಸಂರಕ್ಷಿತ ಧಾಮದ ಕರ್ನಾಟಕ ಹಾಗೂ ಕೇರಳ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಈಗಿರುವ ವಾಹನಗಳ ರಾತ್ರಿ ಸಂಚಾರ ನಿಷೇಧ ತೆರವು ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸುತ್ತೇನೆ, ಕೇರಳದ ವಯನಾಡು ಭಾಗದವರು ಕರ್ನಾಟಕ ಭಾಗಕ್ಕೆ ರಾತ್ರಿ ಸಂಚಾರಕ್ಕೆ ಹೋಗಲು ಆಗುತ್ತಿರುವ ತೊಂದರೆ ನನ್ನ ಗಮನದಲ್ಲಿದೆ. ಇದಕ್ಕೆ ಪರಿಹಾರ ಕೊಡಿಸುತ್ತೇನೆ ಎಂದು ಆ ನಾಯಕಿ ಹೇಳಿಕೆಯನ್ನು ನೀಡಿದರು. ಭಾರೀ ಚಪ್ಪಾಳೆಯನ್ನು ಗಿಟ್ಟಿಸಿದರು. ಅಲ್ಲಿಯೇ ಇದ್ದ ಕರ್ನಾಟಕದ ಜವಾಬ್ದಾರಿಯುತ ಸ್ಥಾನದ ನಾಯಕ ಕಾಂಗ್ರೆಸ್‌ನ ಅನೂಚಾನ ಪರಂಪರೆಯಂತೆ, ನಮ್ಮ ನಾಯಕಿ ಬಂಡೀಪುರ ಅರಣ್ಯದಲ್ಲಿನ ರಾತ್ರಿ ಸಂಚಾರದ ನಿಷೇಧ ವಿಚಾರ ಪ್ರಸ್ತಾಪಿಸಿದ್ದಾರೆ. ಇದನ್ನು ಸರ್ಕಾರದ ಹಂತದಲ್ಲಿ ಚರ್ಚಿಸಿ ಪರಿಹಾರವನ್ನು ನೀಡುತ್ತೇವೆ. ನಮ್ಮ ನಾಯಕಿ ನೀಡಿದ ಭರವಸೆಯನ್ನು ಈಡೇರಿಸಲು ನಾವು ಬದ್ದರಾಗಿದೇವೆ ಎಂದು ಹೇಳಿಕೆ ನೀಡಿದರು. ಅವರ ಮಾತಿಗೂ ಭಾರೀ ಕರತಾಡನ.

Whats_app_banner