Mandya Sahitya Sammelana: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಮಂಡ್ಯ ಜಿಲ್ಲೆಯಾದ್ಯಂತ ಮೂರು ದಿನ ಉಚಿತ ಸಾರಿಗೆ ವ್ಯವಸ್ಥೆ
ಮಂಡ್ಯದಲ್ಲಿ ಶುಕ್ರವಾರದಿಂದ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಲಿದೆ. ಮಂಡ್ಯ ಜಿಲ್ಲಾದ್ಯಂತ ಕನ್ನಡಾಭಿಮಾನಿಗಳನ್ನು ಕರೆ ತರಲು ಉಚಿತ ಸಾರಿಗೆ ಬಸ್ ಸೇವೆ ವ್ಯವಸ್ಥೆ ಮಾಡಲಾಗಿದೆ.
ಮಂಡ್ಯ: ಮಂಡ್ಯ ಜಿಲ್ಲೆಯ ನಾನಾ ಭಾಗಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಕನ್ನಡಾಭಿಮಾನಿಗಳು ಆಗಮಿಸಿ ಮೂರು ದಿನಗಳೂ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅದು ಮಂಡ್ಯ ಜಿಲ್ಲೆಯವರಿಗೆ ಮಾತ್ರ ಈ ಸಾರಿಗೆ ಸೇವೆ ಇರಲಿದೆ. ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಸಂಖ್ಯೆಯಲ್ಲಿ ಕೆಎಸ್ ಆರ್ ಟಿಸಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ಮೂರು ದಿನ 7 ತಾಲೂಕು ಕೇಂದ್ರಗಳಿಂದ ಸಮ್ಮೇಳನ ನಡೆಯುವ ಸ್ಥಳಕ್ಕೆ 15 ವಿಶೇಷ ವಾಹನಗಳನ್ನು ಒಳಗೊಂಡಂತೆ 105 ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಮತ್ತು ಬೆಂಗಳೂರಿನಿಂದ ಪ್ರತಿ 30 ನಿಮಿಷಕ್ಕೆ ಒಂದರಂತೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಮಂಡ್ಯ ನಗರದ ವಿವಿಧ ಸ್ಥಳಗಳಿಂದ ಸಮ್ಮೇಳನದ ಸ್ಥಳಕ್ಕೆ ಜನರನ್ನು ಕರೆತರಲು 15 ವಾಹನಗಳ ಸಾರಿಗೆ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಲಾಗಿದೆ. ಮೊದಲನೆಯದಾಗಿ ಮಂಡ್ಯ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ, ನಂದಾ ಸರ್ಕಲ್, ಫ್ಯಾಕ್ಟರಿ ಸರ್ಕಲ್, ಸ್ವರ್ಣಸಂದ್ರ, ಮಾಂಡವ್ಯ ಕಾಲೇಜ್, ಉಮ್ಮಡಹಳ್ಳಿ ಗೇಟ್, ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ.
ಎರಡನೆಯದಾಗಿ ಮಂಡ್ಯ ಬಸ್ ನಿಲ್ದಾಣದಿಂದ ಕೋರ್ಟ್ ನಿಲ್ದಾಣ- ವಿಶ್ವವಿದ್ಯಾಲಯ- ಕಲ್ಲಹಳ್ಳಿ- ವಿ.ವಿ.ನಗರ-ಶನೇಶ್ವರ ದೇವಸ್ಥಾನ-ಚಾಮುಂಡೇಶ್ವರಿ ದೇವಸ್ಥಾನ-ಕನ್ನಿಕಾ ಪರಮೇಶ್ವರಿ ದೇವಸ್ಥಾನ-ಕರ್ನಾಟಕ ಬಾರ್ ಸರ್ಕಲ್-ಹೊಸಹಳ್ಳಿ ಸರ್ಕಲ್-ಬೆ.ರಾಮಣ್ಣ ಸರ್ಕಲ್-ಎಂವಿಜಿ ಬೇಕರಿ-ನಂದಾ ಸರ್ಕಲ್-ಫ್ಯಾಕ್ಟರಿ ಸರ್ಕಲ್-ಸ್ವರ್ಣಸಂದ್ರ-ಮಾಂಡವ್ಯ ಕಾಲೇಜ್-ಉಮ್ಮಡಹಳ್ಳಿ ಗೇಟ್-ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ.
ಮೂರನೇಯದಾಗಿ ಹುಣಸೇಮರ-ಕಾಳಿಕಾಂಬ ದೇವಸ್ಥಾನ-ನಂದಾ ಸರ್ಕಲ್-ಫ್ಯಾಕ್ಟರಿ ಸರ್ಕಲ್-ಗುತ್ತಲು ಕಾಲೋನಿ-ಜಯಲಕ್ಷ್ಮಿ ಟಾಕೀಸ್-ಅರಕೇಶ್ವರ ದೇವಸ್ಥಾನ-ಉಮ್ಮಡಹಳ್ಳಿ ಗೇಟ್-ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ.
ನಾಲ್ಕನೇಯದಾಗಿ ಸತ್ವ ಪಾರ್ಕಿಂಗ್ ಸ್ಥಳದಿಂದ ಉಮ್ಮಡಹಳ್ಳಿ ಗೇಟ್-ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ. ಮತ್ತು ಅದೇ ಮಾರ್ಗದಲ್ಲಿ ವಾಪಸ್ ಆಗಲಿದೆ.
ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಚಲುವರಾಯಸ್ವಾಮಿ ಸ್ಯಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದಲ್ಲಿ ನಿರ್ಮಿಸಿರುವ ವೇದಿಕೆಗಳ ನಿರ್ಮಾಣ ಕಾರ್ಯದ ಸಿದ್ಧತೆ ಪರಿಶೀಲನೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಸಮ್ಮೇಳನಕ್ಕೆ ಆಗಮಿಸುವ 7 ತಾಲೂಕು ಕೇಂದ್ರಗಳಿಂದ 15 ಉಚಿತ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಮಂಡ್ಯ ನಗರದಿಂದ ಕೂಡ ಬಸ್ ಗಳು ಸಮ್ಮೇಳನದ ಸ್ಥಳಕ್ಕೆ ಉಚಿತವಾಗಿ ಕರೆತರಲಿವೆ.
ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳದಿಂದ ಕೂಡ ಉಚಿತ ಸಾರಿಗೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಬೆಂಗಳೂರಿನಿಂದ 30 ನಿಮಿಷಕ್ಕೆ ಒಂದು ವಿಶೇಷ ಬಸ್ ಸಂಚರಿಸಲಿದೆ ಎನ್ನುವುದು ಸಚಿವರ ವಿವರಣೆ.