ಕನ್ನಡ ಸುದ್ದಿ  /  Karnataka  /  Business News Byju S Vacates 4 Lakh Sq Ft Office Space In Bengaluru In An Attempt To Cut Costs Says Report Uks

ಬೆಂಗಳೂರಿನ 4 ಲಕ್ಷ ಚದರ ಅಡಿ ಕಚೇರಿ ತೆರವುಗೊಳಿಸಿದ ಬೈಜುಸ್; ಆರ್ಥಿಕ ಸಂಕಷ್ಟ ನಿವಾರಣೆಗೆ ವೆಚ್ಚ ಕಡಿತದ ಕ್ರಮ

ಬೆಂಗಳೂರಿನ 4 ಲಕ್ಷ ಚದರ ಅಡಿ ಕಚೇರಿ ತೆರವುಗೊಳಿಸಿದ ಬೈಜುಸ್ ಈಗ ಆರ್ಥಿಕ ಸಂಕಷ್ಟ ನಿವಾರಣೆಗೆ ವೆಚ್ಚ ಕಡಿತದ ಕ್ರಮವನ್ನು ಅನುಸರಿಸಿದೆ. ಈ ನಡುವೆ, ಪ್ರಮುಖ ಹೂಡಿಕೆದಾರರ ಗುಂಪು, ಕಂಪನಿಯ ಸ್ಥಾಪಕ ಸಿಇಒ ಬೈಜು ರವೀಂದ್ರನ್ ಮತ್ತು ಅವರ ಕುಟುಂಬ ಸದಸ್ಯರನ್ನು ಆಡಳಿತ ಮಂಡಳಿಯಿಂದ ಪದಚ್ಯುತಗೊಳಿಸುವಂತೆ ಆಗ್ರಹಿಸಿದೆ.

ಬೆಂಗಳೂರಿನ 4 ಲಕ್ಷ ಚದರ ಅಡಿ ಕಚೇರಿ ತೆರವುಗೊಳಿಸಿದ ಬೈಜುಸ್, ಆರ್ಥಿಕ ಸಂಕಷ್ಟ ನಿವಾರಣೆಗೆ ವೆಚ್ಚ ಕಡಿತದ ಕ್ರಮ ತೆಗೆದುಕೊಂಡಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರಿನ 4 ಲಕ್ಷ ಚದರ ಅಡಿ ಕಚೇರಿ ತೆರವುಗೊಳಿಸಿದ ಬೈಜುಸ್, ಆರ್ಥಿಕ ಸಂಕಷ್ಟ ನಿವಾರಣೆಗೆ ವೆಚ್ಚ ಕಡಿತದ ಕ್ರಮ ತೆಗೆದುಕೊಂಡಿದೆ. (ಸಾಂಕೇತಿಕ ಚಿತ್ರ)

ಮುಂಚೂಣಿಯಲ್ಲಿದ್ದ ಎಡ್‌ಟೆಕ್‌ ಸಂಸ್ಥೆ ಬೈಜುಸ್‌ ಆರ್ಥಿಕ ಸಂಕಷ್ಟದಲ್ಲಿದ್ದು, ಇದೀಗ ವೆಚ್ಚ ಕಡಿತದ ಕ್ರಮವಾಗಿ ಬೆಂಗಳೂರಿನ 4 ಲಕ್ಷ ಚದರ ಅಡಿ ಕಚೇರಿ ತೆರವುಗೊಳಿಸಿದೆ. ಪ್ರೆಸ್ಟೀಜ್‌ ಟೆಕ್‌ ಪಾರ್ಕ್‌ನಲ್ಲಿದ್ದ ಈ ಕಚೇರಿಯ ಬಾಡಿಗೆ ಬಾಕಿಯನ್ನು ಸರಿದೂಗಿಸಲು ಠೇವಣಿಯನ್ನು ಬಳಸಿಕೊಂಡು ಈ ವರ್ಷ ಆರಂಭದಲ್ಲಿ ಮಾಡಿದ್ದ ಗುತ್ತಿಗೆಯನ್ನು ಕೊನೆಗೊಳಿಸಿದೆ.

ಥಿಂಕ್ ಆಂಡ್ ಲರ್ನ್‌ ಕಂಪನಿಯ ಬ್ರ್ಯಾಂಡ್ ಆಗಿರುವ ಬೈಜುಸ್‌, ಮೂರೂವರೆ ವರ್ಷಗಳ ಹಿಂದೆ ಪ್ರೆಸ್ಟೀಜ್ ಗ್ರೂಪ್‌ ಜೊತೆಗೆ ಕಚೇರಿ ಸ್ಥಳಕ್ಕಾಗಿ ಗುತ್ತಿಗೆ ಒಪ್ಪಂದ ಮಾಡಿಕೊಂಡಿತ್ತು. ಇದರಂತೆ ತಿಂಗಳಿಗೆ 4 ಕೋಟಿ ರೂಪಾಯಿ ಪಾವತಿ ಮಾಡುತ್ತಿತ್ತು. ಈಗ ಈ ಗುತ್ತಿಗೆ ಕೊನೆಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಬೈಜುಸ್ ಮತ್ತು ಪ್ರೆಸ್ಟೀಜ್ ಗ್ರೂಪ್‌ ನಡುವಿನ ಗುತ್ತಿಗೆ ಒಪ್ಪಂದ ಜನವರಿಯಲ್ಲಿ ಕೊನೆಗೊಂಡಿದೆ. ಕಂಪನಿಯು ಬಾಡಿಗೆಗಳನ್ನು ಸರಿಹೊಂದಿಸಲು ಮತ್ತು ಸ್ವಲ್ಪ ವಿನಾಯಿತಿ ತೋರಲು ಪ್ರಯತ್ನಿಸಿದೆ. ಆದರೆ ಬೈಜಿಸ್‌ ಸರಿಯಾಗಿ ಪಾವತಿಗಳನ್ನು ಮಾಡದ ಕಾರಣ, ಕಚೇರಿ ಸ್ಥಳ ತೆರವುಗೊಳಿಸುವಂತೆ ವಿನಂತಿಸಬೇಕಾಯಿತು. ಈ ವಿಚಾರವನ್ನು ಪ್ರೆಸ್ಟೀಜ್ ಆಫೀಸ್ ವೆಂಚರ್ಸ್‌ನ ಸಿಇಒ ಜಗ್ಗಿ ಮರ್ವಾಹಾ ಅವರು ಖಚಿತಪಡಿಸಿದ್ದಾರೆ.

ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿರುವ ಕಚೇರಿ ವಿವಾದ

ಇದೇ ರೀತಿ ಇತರೆ ಭೂಮಾಲೀಕರ ಜೊತೆಗಿನ ವಿವಾದವನ್ನು ಕೂಡ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಕಂಪನಿ ಕೆಲಸ ಮಾಡುತ್ತಿದೆ. ಇನ್ನೊಂದೆಡೆ, ಕಲ್ಯಾಣಿ ಡೆವಲಪರ್ಸ್‌ ಕೂಡ ಬೆಂಗಳೂರಿನ ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿರುವ 500,000 ಚದರ ಅಡಿ ಕಚೇರಿ ಸ್ಥಳಕ್ಕಾಗಿ ಬಾಡಿಗೆ ಪಾವತಿಸಲು ವಿಫಲವಾದ ಕಾರಣಕ್ಕಾಗಿ ಬೈಜುಸ್‌ಗೆ ಲೀಗಲ್‌ ನೋಟಿಸ್ ಕಳುಹಿಸಿದ್ದಾರೆ. ಈ ಗುತ್ತಿಗೆಯು 2025 ಮಾರ್ಚ್‌ ತನಕ ಲಾಕ್‌ ಇನ್‌ ಅವಧಿಯನ್ನು ಹೊಂದಿದೆ.

ಕಲ್ಯಾಣಿ ಡೆವಲಪರ್ಸ್‌ಗೆ ಒಟ್ಟು 10 ತಿಂಗಳ ಬಾಡಿಗೆ ಬಾಕಿ ಇದೆ. ಏಳು ತಿಂಗಳ ಬಾಡಿಗೆಯನ್ನು ಅವರು ಠೇವಣಿ ಹಣದೊಂದಿಗೆ ಹೊಂದಿಸಿದ್ದಾರೆ ಎಂದು ಈ ವಿದ್ಯಮಾನದ ಅರಿವು ಇರುವಂಥವರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾಗಿ ವರದಿ ಹೇಳಿದೆ.

ಬೈಜುಸ್‌ 2022 ಮತ್ತು 2023ರ ನಡುವೆ ಐಬಿಸಿ ನಾಲೆಜ್ ಪಾರ್ಕ್‌ನಲ್ಲಿದ್ದ 4 ಲಕ್ಷ ಚದರ ಅಡಿ ಕಚೇರಿ ಖಾಲಿ ಮಾಡಿ ಕಲ್ಯಾಣಿ ಟೆಕ್ ಪಾರ್ಕ್‌ಗೆ ಸ್ಥಳಾಂತರಿಸಿ ಕಾರ್ಯಾಚರಣೆ ಮುಂದುವರಿಸಿತ್ತು. ಆದರೆ ಈ ಸ್ಥಳದಲ್ಲಿ ಈಗ ಕಾರ್ಯಾಚರಣೆ ನಡೆಯುತ್ತಿಲ್ಲ ಎಂದು ಮೂಲಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.

ಬೈಜು ರವೀಂದ್ರನ್‌ ಪದಚ್ಯುತಿಗೆ ಹೂಡಿಕೆದಾರರ ಆಗ್ರಹ

ಬೈಜುಸ್ ಆರ್ಥಿಕ ಸಂಕಷ್ಟದ ನಡುವೆ, ಎಡ್‌ಟೆಕ್‌ ಕಂಪನಿಯ ಪ್ರಮುಖ ಹೂಡಿಕೆದಾರರ ಗುಂಪು, ಕಂಪನಿಯ ಸ್ಥಾಪಕ ಸಿಇಒ ಬೈಜು ರವೀಂದ್ರನ್ ಮತ್ತು ಅವರ ಕುಟುಂಬ ಸದಸ್ಯರನ್ನು ಆಡಳಿತ ಮಂಡಳಿಯಿಂದ ಪದಚ್ಯುತಗೊಳಿಸುವಂತೆ ಆಗ್ರಹಿಸಿದೆ. ಇದಕ್ಕಾಗಿ ಶುಕ್ರವಾರ ಅಸಾಧಾರಣ ಸಾಮಾನ್ಯ ಸಭೆ (ಇಜಿಎಂ) ಯನ್ನು ಕರೆದಿದೆ ಎಂದು ಮೂಲಗಳು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಇಜಿಎಂ ಎಂದು ಕರೆಯಲ್ಪಡುವ ಷೇರುದಾರರಿಗೆ ಬೈಜುಸ್‌ನಲ್ಲಿ ಶೇಕಡ 30ಕ್ಕಿಂತ ಹೆಚ್ಚು ಪಾಲಿದೆ. ಬೈಜು ರವೀಂದ್ರನ್ ಮತ್ತು ಕುಟುಂಬ ಸದಸ್ಯರ ಬಳಿ ಶೇಕಡ 26 ಪಾಲು ಇದೆ. ರವೀಂದ್ರನ್‌, ಅವರ ಪತ್ನಿ ದಿವ್ಯಾ ಗೋಕುಲ್‌ನಾಥ್‌, ಸಹೋದರ ರಿಜು ರವೀಂದ್ರನ್‌ ಕೂಡ ಪಾಲುದಾರರು. ಇವರು ಇರುವಂತಹ ಥಿಂಕ್‌ ಆಂಡ್ ಲರ್ನ್‌ ಸಂಸ್ಥೆಯ ಆಡಳಿತ ಮಂಡಳಿ ವಜಾಗೊಳಿಸವುದಕ್ಕೆ ಇಜಿಎಂ ನೋಟಿಸ್‌ ನೀಡಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)