Nandini Milk Price: ಮತ್ತೆ ನಂದಿನಿ ಹಾಲಿನ ಬೆಲೆ ಹೆಚ್ಚಳ ಸಾಧ್ಯತೆ; ಮುಖ್ಯಮಂತ್ರಿಗೆ ಪಶುಸಂಗೋಪನಾ ಇಲಾಖೆ ಪ್ರಸ್ತಾವ
ಕನ್ನಡ ಸುದ್ದಿ  /  ಕರ್ನಾಟಕ  /  Nandini Milk Price: ಮತ್ತೆ ನಂದಿನಿ ಹಾಲಿನ ಬೆಲೆ ಹೆಚ್ಚಳ ಸಾಧ್ಯತೆ; ಮುಖ್ಯಮಂತ್ರಿಗೆ ಪಶುಸಂಗೋಪನಾ ಇಲಾಖೆ ಪ್ರಸ್ತಾವ

Nandini Milk Price: ಮತ್ತೆ ನಂದಿನಿ ಹಾಲಿನ ಬೆಲೆ ಹೆಚ್ಚಳ ಸಾಧ್ಯತೆ; ಮುಖ್ಯಮಂತ್ರಿಗೆ ಪಶುಸಂಗೋಪನಾ ಇಲಾಖೆ ಪ್ರಸ್ತಾವ

KMF Nandini: 'ಪ್ರತಿ 6 ತಿಂಗಳಿಗೆ ಒಮ್ಮೆ ಶೇ 5ರಷ್ಟು ಗರಿಷ್ಠ ಮಾರಾಟ ದರ ಹೆಚ್ಚಳಕ್ಕೆ ಅವಕಾಶ ನೀಡಬೇಕು' ಎಂಬ ಪ್ರಸ್ತಾವವನ್ನು ಪಶುಸಂಗೋಪನಾ ಇಲಾಖೆಯು ಮುಖ್ಯಮಂತ್ರಿಗೆ ಸಲ್ಲಿಸಿದೆ.

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕರ್ನಾಟಕದ ಜನಪ್ರಿಯ ಬ್ರಾಂಡ್ 'ನಂದಿನಿ' ಮತ್ತೆ ಹಾಲಿನ ಬೆಲೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಕೆಎಂಎಫ್ ಪರವಾಗಿ ಪಶು ಸಂಗೋಪನಾ ಇಲಾಖೆಯು ಈ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿದೆ. 'ಪ್ರತಿ 6 ತಿಂಗಳಿಗೆ ಒಮ್ಮೆ ಶೇ 5ರಷ್ಟು ಗರಿಷ್ಠ ಮಾರಾಟ ದರ ಹೆಚ್ಚಳಕ್ಕೆ ಅವಕಾಶ ನೀಡಬೇಕು' ಎಂಬ ಪ್ರಸ್ತಾವವನ್ನು ಪಶುಸಂಗೋಪನಾ ಇಲಾಖೆಯು ಮುಖ್ಯಮಂತ್ರಿಗೆ ಸಲ್ಲಿಸಿದೆ. ಜನವರಿ 1ರಿಂದ ದರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಪಶು ಸಂಗೋಪನಾ ಇಲಾಖೆಯು ಸಲ್ಲಿಸಿರುವ ಪ್ರಸ್ತಾವದ ಬಗ್ಗೆ ಮಾರ್ಧಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್, 'ರಾಜ್ಯದಲ್ಲಿ ಸದ್ಯಕ್ಕೆ ನಂದಿನಿ ಬೆಲೆ ಹೆಚ್ಚಿಸುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ' ಎಂದು ಸ್ಪಷ್ಟಪಡಿಸಿದರು.

ಕ್ಷೀರಭಾಗ್ಯ ಯೋಜನೆಯಡಿ ಹಾಲಿನ ಪುಡಿಯನ್ನು ಪೂರೈಸಲಾಗುತ್ತಿದೆ. ಪ್ರತಿ ಕೆಜಿ ಹಾಲಿನ ಪುಡಿಗೆ ಪ್ರಸ್ತುತ 300 ರೂಪಾಯಿ ದರ ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೀರಭಾಗ್ಯ ಯೋಜನೆಯಡಿ ಪೂರೈಸುವ ಪ್ರತಿ ಕೆಜಿ ಹಾಲಿನ ಪುಡಿಗೆ 400 (ಜಿಎಸ್‌ಟಿ ಪ್ರತ್ಯೇಕ) ರೂಪಾಯಿ ದರ ನಿಗದಿಪಡಿಸಬೇಕು ಎಂದು ಪಶುಸಂಗೋಪನಾ ಇಲಾಖೆ ಹೇಳಿದೆ.

ಪ್ರಸ್ತುತ ಕರ್ನಾಟಕದಲ್ಲಿ ನಂದಿನಿ ಬ್ರಾಂಡ್ ಅಡಿಯಲ್ಲಿ ಕೆಎಂಎಫ್ ಹಾಲು ಮಾರಾಟ ಮಾಡುತ್ತಿದೆ. ಜಿಡ್ಡಿನ ಅಂಶ ಆಧರಿಸಿ ಬೆಲೆಯಲ್ಲಿ ವ್ಯತ್ಯಾಸವಿದೆ. ಸರಾಸರಿ ದರವು 47 ರೂಪಾಯಿ ಇದೆ. ಇತರ ಬ್ರಾಂಡ್‌ಗಳ ಹಾಲಿನ ದರ ಹೆಚ್ಚಾಗಿದೆ ಎಂದು ಪಶುಸಂಗೋಪನಾ ಇಲಾಖೆಯು ಬೆಲೆಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ.

'2022ರ ಮಾರ್ಚ್‌ನಿಂದ 2023ರ ಫೆಬ್ರುವರಿ ಅವಧಿಯಲ್ಲಿ ಭಾರತದ ಪ್ರಸಿದ್ಧ ಹಾಲಿನ ಬ್ರಾಂಡ್ ಅಮೂಲ್ ಪ್ರತಿ ಲೀಟರ್ ಹಾಲಿಗೆ 12 ರೂಪಾಯಿ ಹೆಚ್ಚಿಸಿತ್ತು. ಕೆಎಂಎಫ್‌ ಮಾತ್ರ ನಂದಿನಿ ಬ್ರಾಂಡ್‌ನ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಿತ್ತು' ಎಂದು ಸಚಿವರು ತಿಳಿಸಿದರು.

'ಬೆಲೆಏರಿಕೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆಯೇ' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಹಾಲಿನ ಒಕ್ಕೂಟಗಳು ಉತ್ಪಾದನಾ ವೆಚ್ಚದ ಬಗ್ಗೆ ಮಾಹಿತಿ ನೀಡಿ, ಬೆಲೆ ಹೆಚ್ಚಿಸುವಂತೆ ಅಹವಾಲು ಸಲ್ಲಿಸಿವೆ. ನಂದಿನಿ ಹಾಲನ್ನು ಸಹ ಕೆಲ ರಾಜ್ಯಗಳಲ್ಲಿ ಹೆಚ್ಚಿನ ಬೆಲೆಗೆ ಮಾರಲಾಗುತ್ತಿದೆ. ಹಾಲು ಉತ್ಪಾದಕರ ಹಿತವನ್ನು ಗಮನದಲ್ಲಿರಿಸಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಒಕ್ಕೂಟಗಳು ಸಹ ತಮ್ಮ ಪರಿಸ್ಥಿತಿ ಕುರಿತು ಅಹವಾಲು ಸಲ್ಲಿಸಿವೆ. ಈ ವರ್ಷ ಮುಗಿಯಲಿ, ಮುಂದಿನ ವರ್ಷ ನೋಡೋಣ' ಎಂದು ಹೇಳಿದರು.

Whats_app_banner