ಕರ್ನಾಟಕಕ್ಕೆ ಮತ್ತೆ ಆಘಾತ: ತಮಿಳುನಾಡಿಗೆ ಮುಂದಿನ 18 ದಿನ 3000 ಕ್ಯೂಸೆಕ್ ನೀರು ಬಿಡಲು ಆದೇಶ
Cauvery Water Issue: ಮುಂದಿನ 18 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಕರ್ನಾಟಕಕ್ಕೆ ಆದೇಶ ನೀಡಿದೆ.
ಬೆಂಗಳೂರು: ಕಾವೇರಿ ನದಿ ನೀರು ವಿಚಾರದಲ್ಲಿ ತೀವ್ರ ಹೋರಾಟ ನಡೆಸುತ್ತಿರುವ ಕರ್ನಾಟಕಕ್ಕೆ ಮತ್ತೊಮ್ಮೆ ಆಘಾತವಾಗಿದೆ. ಮುಂದಿನ 18 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಆದೇಶ ನೀಡಿದೆ.
ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಇಂದಿನ ಸಭೆಯಲ್ಲಿ ಆದೇಶ ಹೊರಡಿಸಿದೆ. ವಿರೋಧದ ನಡುವೆಯೂ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಇಂದಿನ ಸಭೆಯಲ್ಲಿ ಸಿಡಬ್ಲ್ಯೂಆರ್‌ಸಿ ಆದೇಶ ಹೊರಡಿಸಿದೆ.
ಬರ ಪರಿಸ್ಥಿತಿಗೆ ತುತ್ತಾಗಿರುವ ಕರ್ನಾಟಕದಿಂದ ತಮಿಳುನಾಡಿಗೆ ಸೆಪ್ಟೆಂಬರ್ 26ರ ವರೆಗೆ ಪ್ರತಿದಿನ 5000 ಕ್ಯೂಸೆಕ್ ಕಾವೇರಿ ನದಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿತ್ತು. ಈ ಆದೇಶದ ವಿರುದ್ಧ ಕರ್ನಾಟಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತಾದರೂ ಸರ್ವೋಚ್ಛ ನ್ಯಾಯಾಲಯ ಕೂಡ ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದಿತ್ತು.
ಇದನ್ನು ವಿರೋಧಿಸಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಂದ್, ಪ್ರತಿಭಟನೆಗಳನ್ನು ಮಾಡಲಾಗುತ್ತಿದೆ. ಕಳೆದ ವಾರವಷ್ಟೇ ಮಂಡ್ಯವನ್ನು ಬಂದ್ ಮಾಡಿ ಹೋರಾಟ ನಡೆಸಲಾಗಿತ್ತು. ಇಂದು ( ಸೆಪ್ಟೆಂಬರ್ 26 ರಂದು) ಬೆಂಗಳೂರು ಬಂದ್ ಮಾಡಲಾಗಿದ್ದು, ಸೆ.29 ರಂದು ಇಡೀ ಕರ್ನಾಟಕ ಬಂದ್ ಆಗಲಿದೆ.
ನಿನ್ನೆಯಷ್ಟೇ ಕಾವೇರಿ ವಿವಾದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದರು. ಸೆ.26ರ ನಂತರ ನೀರು ಬಿಡಲ್ಲ ಎಂದು ಮತ್ತೆ ಪ್ರಾಧಿಕಾರಕ್ಕೆ ಹೇಳ್ತೇವೆ ಎಂದು ಸಿಎಂ ತಿಳಿಸಿದ್ದರು.
ಈ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿದ್ದ ಸಿಎಂ ಸಿದ್ದರಾಮಯ್ಯ, ತಮಿಳುನಾಡು ರಾಜ್ಯ ಮೊದಲು ಪ್ರತಿದಿನ 24,000 ಕ್ಯುಸೆಕ್ ನೀರು ಹರಿಸುವಂತೆ ಬೇಡಿಕೆ ಸಲ್ಲಿಸಿತ್ತು, ನಾವು ನಿರಾಕರಿಸಿದ್ದ ಕಾರಣ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಾವು ಬಿಡಬೇಕಾದ ನೀರಿನ ಪ್ರಮಾಣವನ್ನು 7,200 ಕ್ಯುಸೆಕ್ ಗೆ ಇಳಿಸಿತ್ತು. ನೀರಿನ ಕೊರತೆಯಿಂದಾಗಿ ಇಷ್ಟು ಪ್ರಮಾಣದ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ನಮ್ಮ ಅಧಿಕಾರಿಗಳು ವಾದಿಸಿದ ನಂತರ ಪ್ರತಿದಿನ 5,000 ಕ್ಯುಸೆಕ್ ನೀರು ಹರಿಸಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿತ್ತು. ಇದೇ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಒಪ್ಪಿಕೊಂಡು ನಮಗೆ ನೀರು ಬಿಡಲು ಆದೇಶ ನೀಡಿತ್ತು.
5,000 ಕ್ಯುಸೆಕ್ ನೀರು ಕೂಡಾ ಬಿಡಲು ಸಾಧ್ಯ ಇಲ್ಲ ಎಂದು ನಾವು ಸುಪ್ರೀಂ ಕೋರ್ಟ್ ಗೆ ಪರಿಹಾರ ಕೋರಿ ಮೊರೆ ಹೋಗಿದ್ದೆವು. ಆದರೆ ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳೆರಡರ ಅರ್ಜಿಯನ್ನೂ ವಜಾಮಾಡಿರುವ ಕಾರಣ ಸೆಪ್ಟೆಂಬರ್ 26ರ ವರೆಗೆ 5,000 ಕ್ಯುಸೆಕ್ ನೀರು ಹರಿಸುವುದು ನಮಗೆ ಅನಿವಾರ್ಯವಾಯಿತು. ಈಗ 26ರ ನಂತರ ನಾವು ಪ್ರಾಧಿಕಾರವನ್ನು ಮತ್ತೆ ಸಂಪರ್ಕಿಸಿ ಇನ್ನು ನೀರು ಬಿಡಲಾಗುವುದಿಲ್ಲ ಎಂಬ ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುತ್ತೇವೆ ಎಂದು ಹೇಳಿದ್ದರು.