ಕನ್ನಡ ಸುದ್ದಿ  /  Karnataka  /  Cauvery Row Will Not Release Water To Tamil Nadu After September 26 Siddaramaiah Govt To Tell The Cauvery Authority Mgb

Cauvery Row: ಸೆ.26ರ ನಂತರ ತಮಿಳುನಾಡಿಗೆ ನೀರು ಬಿಡಲ್ಲ ಅಂತ ಕಾವೇರಿ ಪ್ರಾಧಿಕಾರಕ್ಕೆ ಹೇಳ್ತೇವೆ; ಸಿಎಂ ಸಿದ್ದರಾಮಯ್ಯ

CM Siddaramaiah over Cauvery row: ಸುಪ್ರೀಂ ಕೋರ್ಟ್ ಅರ್ಜಿ ವಜಾಮಾಡಿರುವ ಕಾರಣ ಸೆಪ್ಟೆಂಬರ್ 26ರ ವರೆಗೆ ತಮಿಳುನಾಡಿಗೆ 5,000 ಕ್ಯುಸೆಕ್ ನೀರು ಹರಿಸುವುದು ನಮಗೆ ಅನಿವಾರ್ಯವಾಗಿದೆ. ಸೆ.26ರ ನಂತರ ನೀರು ಬಿಡಲ್ಲ ಎಂದು ಪ್ರಾಧಿಕಾರಕ್ಕೆ ಹೇಳ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

 ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಬಂದ್ ಕರೆ ಹಿನ್ನೆಲೆಯಲ್ಲಿ ಕಾವೇರಿ ವಿವಾದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದು, ಈ ಬಗ್ಗೆ ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅರ್ಜಿ ವಜಾಮಾಡಿರುವ ಕಾರಣ ಸೆಪ್ಟೆಂಬರ್ 26ರ ವರೆಗೆ 5,000 ಕ್ಯುಸೆಕ್ ನೀರು ಹರಿಸುವುದು ನಮಗೆ ಅನಿವಾರ್ಯವಾಗಿದೆ. ಸೆ.26ರ ನಂತರ ನೀರು ಬಿಡಲ್ಲ ಎಂದು ಮತ್ತೆ ಪ್ರಾಧಿಕಾರಕ್ಕೆ ಹೇಳ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್​ಗಳು ಹೀಗಿವೆ..

ಮಳೆ ಕೊರತೆಯಿಂದಾಗಿ ಉದ್ಭವವಾಗಿರುವ ಕಾವೇರಿ ನೀರು ಹಂಚಿಕೆ ವಿವಾದವನ್ನು ರಾಜ್ಯದ ರೈತರ ಹಿತರಕ್ಷಣೆಗೆ ಅಡ್ಡಿಯಾಗದಂತೆ ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ವಿವಾದ ಈಗ ನ್ಯಾಯಾಂಗ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಂಗಳದಲ್ಲಿರುವುದರಿಂದ ಸಂವಿಧಾನಕ್ಕೆ ಬದ್ಧವಾಗಿರುವ ಸರ್ಕಾರ ಜವಾಬ್ದಾರಿಯುತವಾಗಿ ವರ್ತಿಸಬೇಕಾಗುತ್ತದೆ.

ನೆಲ-ಜಲ-ಭಾಷೆಯ ಹಿತರಕ್ಷಣೆಯ ವಿಷಯ ಬಂದಾಗ ರಾಜಕೀಯ ಪಕ್ಷವಾಗಿ ಯೋಚನೆ ಮಾಡದೆ ನಾವೆಲ್ಲ ಕನ್ನಡಿಗರು ಎಂಬ ವಿಶಾಲ ಮನೋಭಾವವನ್ನು ತೋರಿಸಬೇಕು. ಕಾವೇರಿ ನದಿ ನೀರಿನ ವಿವಾದ ಇದೇ ಮೊದಲ ಸಲ ಹುಟ್ಟಿಕೊಂಡದ್ದಲ್ಲ. ದಶಕಗಳ ಕಾಲದಿಂದ ಇದು ನಡೆಯುತ್ತಿದೆ. ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ಕೂಡಾ ಸತ್ಯ ಮತ್ತು ಸ್ಪಷ್ಟವಾಗಿದೆ. ಈಗ ನನ್ನ ರಾಜೀನಾಮೆ ಕೇಳುತ್ತಿರುವ ವಿರೋಧ ಪಕ್ಷಗಳು, ಸರ್ವ ಪಕ್ಷ ಸಭೆಯಲ್ಲಿ ಯಾಕೆ ಇದೇ ಮಾತು ಹೇಳಿಲ್ಲ?

ಹಿಂದೆಲ್ಲ ಕಾವೇರಿ ನದಿನೀರಿನ ವಿವಾದ ಹುಟ್ಟಿಕೊಂಡಾಗ ಎಲ್ಲ ರಾಜಕೀಯ ಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಪಕ್ಕಕ್ಕಿಟ್ಟು ಒಗ್ಗಟ್ಟಿನಿಂದ ನಡೆದುಕೊಂಡಿವೆ. ಈ ವರೆಗಿನ ಎಲ್ಲ ಪಕ್ಷಗಳ ಸರ್ಕಾರಗಳು ಅನಿವಾರ್ಯವಾಗಿ ನ್ಯಾಯಾಲಯದ ಆದೇಶ ಪಾಲನೆ ಮಾಡಿರುವ ಇತಿಹಾಸ ಕೂಡಾ ನಮ್ಮ ಕಣ್ಣ ಮುಂದಿದೆ. ಈಗಿನ ವಿವಾದವನ್ನು ರಾಜ್ಯದ ಹಿತ ಮತ್ತು ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗದಂತೆ ಸೂಕ್ಷ್ಮವಾಗಿ ನಿರ್ವಹಿಸಬೇಕಾಗಿದೆ. ರಾಜ್ಯ ಸರ್ಕಾರ ಆ ಪ್ರಯತ್ನದಲ್ಲಿದೆ. ನಾವು ಈಗಾಗಲೇ ಕಾನೂನು ಮತ್ತು ನೀರಾವರಿ ತಜ್ಞರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಅವರ ಸಲಹೆ ಮೇರೆಗೆ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇವೆ.

ರೈತರ ಆಕ್ರೋಶವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಬಂದ್-ಪ್ರತಿಭಟನೆ ಮಾಡುವ ರೈತರು ಮತ್ತು ಕನ್ನಡ ಹೋರಾಟಗಾರರ ಹಕ್ಕನ್ನೂ ನಾನು ಗೌರವಿಸುತ್ತೇನೆ, ಅವರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲ. ಇದೇ ವೇಳೆ ಕೆಲವು ರಾಜಕೀಯ ನಾಯಕರು ತಪ್ಪು ಮಾಹಿತಿ ಮೂಲಕ ಜನರನ್ನು ಪ್ರಚೋದಿಸುವ ಕೆಲಸವನ್ನೂ ಮಾಡುತ್ತಿರುವುದೂ ಸರ್ಕಾರದ ಗಮನಕ್ಕೆ ಬಂದಿದೆ. ನಮ್ಮ ಪ್ರಜ್ಞಾವಂತ ರೈತ ಮತ್ತು ಕನ್ನಡ ಹೋರಾಟಗಾರರು ಇಂತಹ ರಾಜಕೀಯ ದುರುದ್ದೇಶಪೂರಿತ ಅಪಪ್ರಚಾರಕ್ಕೆ ಬಲಿಯಾಗದೆ ಬಂದ್ -ಪ್ರತಿಭಟನೆಯನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿಯುತವಾಗಿ ನಡೆಸಬೇಕೆಂದು ಕೋರುತ್ತೇನೆ.

ತಮಿಳುನಾಡು ರಾಜ್ಯ ಮೊದಲು ಪ್ರತಿದಿನ 24,000 ಕ್ಯುಸೆಕ್ ನೀರು ಹರಿಸುವಂತೆ ಬೇಡಿಕೆ ಸಲ್ಲಿಸಿತ್ತು, ನಾವು ನಿರಾಕರಿಸಿದ್ದ ಕಾರಣ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಾವು ಬಿಡಬೇಕಾದ ನೀರಿನ ಪ್ರಮಾಣವನ್ನು 7,200 ಕ್ಯುಸೆಕ್ ಗೆ ಇಳಿಸಿತ್ತು. ನೀರಿನ ಕೊರತೆಯಿಂದಾಗಿ ಇಷ್ಟು ಪ್ರಮಾಣದ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ನಮ್ಮ ಅಧಿಕಾರಿಗಳು ವಾದಿಸಿದ ನಂತರ ಪ್ರತಿದಿನ 5,000 ಕ್ಯುಸೆಕ್ ನೀರು ಹರಿಸಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿತ್ತು. ಇದೇ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಒಪ್ಪಿಕೊಂಡು ನಮಗೆ ನೀರು ಬಿಡಲು ಆದೇಶ ನೀಡಿತ್ತು.

5,000 ಕ್ಯುಸೆಕ್ ನೀರು ಕೂಡಾ ಬಿಡಲು ಸಾಧ್ಯ ಇಲ್ಲ ಎಂದು ನಾವು ಸುಪ್ರೀಂ ಕೋರ್ಟ್ ಗೆ ಪರಿಹಾರ ಕೋರಿ ಮೊರೆ ಹೋಗಿದ್ದೆವು. ಆದರೆ ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳೆರಡರ ಅರ್ಜಿಯನ್ನೂ ವಜಾಮಾಡಿರುವ ಕಾರಣ ಸೆಪ್ಟೆಂಬರ್ 26ರ ವರೆಗೆ 5,000 ಕ್ಯುಸೆಕ್ ನೀರು ಹರಿಸುವುದು ನಮಗೆ ಅನಿವಾರ್ಯವಾಯಿತು. ಈಗ 26ರ ನಂತರ ನಾವು ಪ್ರಾಧಿಕಾರವನ್ನು ಮತ್ತೆ ಸಂಪರ್ಕಿಸಿ ಇನ್ನು ನೀರು ಬಿಡಲಾಗುವುದಿಲ್ಲ ಎಂಬ ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುತ್ತೇವೆ.

ಸಮಿತಿ ಮತ್ತು ಪ್ರಾಧಿಕಾರದ ಆದೇಶಗಳನ್ನು ಸುಪ್ರೀಂ ಕೋರ್ಟ್ ನಲ್ಲಿ ನಾವು ಪ್ರಶ್ನಿಸಿದ್ದರೂ ನಮ್ಮ ವಿರುದ್ಧವಾಗಿಯೇ ಆದೇಶ ಬಂದಿರುವುದರಿಂದ ನಮಗೆ ಹಿನ್ನಡೆಯಾಗಿದೆ. ಪ್ರಾಧಿಕಾರದ ಆದೇಶದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿರುವ ಕಾರಣದಿಂದಾಗಿ ಅನಿವಾರ್ಯವಾಗಿ ಸೆಪ್ಟೆಂಬರ್ 26ರ ವರೆಗೆ ನೀರು ಹರಿಸಬೇಕಾಗಿದೆ.

ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರ ಸೂಕ್ತ ದಾಖಲೆಗಳೊಂದಿಗೆ ನಮ್ಮ ವಾದವನ್ನು ಮಂಡಿಸಿಲ್ಲ ಎನ್ನುವ ಆರೋಪ ಸತ್ಯಕ್ಕೆ ದೂರವಾದುದ್ದು. ಪ್ರಾಧಿಕಾರದ ಮುಂದೆ ನಮ್ಮ ಅಧಿಕಾರಿಗಳು ಎಲ್ಲ ದಾಖಲೆಗಳೊಂದಿಗೆ ರಾಜ್ಯದ ನಿಲುವನ್ನು ಮಂಡಿಸಿದ್ದಾರೆ. ಅದೇ ರೀತಿ ಸುಪ್ರೀಂ ಕೋರ್ಟ್ ನಲ್ಲಿ ಕೂಡಾ ನಮ್ಮ ಹಿರಿಯ ವಕೀಲರು ಬಲವಾಗಿ ವಾದ ಮಾಡಿದ್ದಾರೆ. ನೆಲ-ಜಲ-ಭಾಷೆಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡಲು ಹೋಗದೆ ಒಮ್ಮತದಿಂದ ಒಗ್ಗಟ್ಟಾಗಿ ಎದುರಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಪ್ರಯತ್ನ ಮಾಡಬೇಕು. ಇಂತಹದ್ದೊಂದು ಪರಂಪರೆ ಕರ್ನಾಟಕಕ್ಕೆ ಇದೆ. ಈ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೇಲೆ ಇದೆ.