Basavaraj Bommai: ಬೆಳೆ ಪರಿಹಾರಕ್ಕಾಗಿ 300 ಕೋಟಿ ರೂಪಾಯಿ ಬಿಡುಗಡೆ, ಕಲಬುರಗಿಯಲ್ಲಿ ಸಿಎಂ ಸ್ಪಷ್ಟನೆ
ಕನ್ನಡ ಸುದ್ದಿ  /  ಕರ್ನಾಟಕ  /  Basavaraj Bommai: ಬೆಳೆ ಪರಿಹಾರಕ್ಕಾಗಿ 300 ಕೋಟಿ ರೂಪಾಯಿ ಬಿಡುಗಡೆ, ಕಲಬುರಗಿಯಲ್ಲಿ ಸಿಎಂ ಸ್ಪಷ್ಟನೆ

Basavaraj Bommai: ಬೆಳೆ ಪರಿಹಾರಕ್ಕಾಗಿ 300 ಕೋಟಿ ರೂಪಾಯಿ ಬಿಡುಗಡೆ, ಕಲಬುರಗಿಯಲ್ಲಿ ಸಿಎಂ ಸ್ಪಷ್ಟನೆ

ಬೆಳೆ ಹಾನಿ ಕುರಿತಂತೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆದುಕೊಂಡು ತಕ್ಷಣ ಪರಿಹಾರ ನೀಡಲಾಗುತ್ತಿದೆ. ಹಿಂದೆಲ್ಲ ಪರಿಹಾರ ನೀಡಲು ವರ್ಷಗಟ್ಟಲೆ ಬೇಕಾಗುತ್ತಿತ್ತು. ಇದೀಗ ಫ್ರೂಟ್ಸ್ ತಂತ್ರಾಂಶದಲ್ಲಿ ನಷ್ಟದ ಮಾಹಿತಿ ನಮೂದಿಸಿದ ಕೂಡಲೆ ರೈತರಿಗೆ ಪರಿಹಾರ ನೀಡಲಾಗುತ್ತಿದೆ ಎಂದು ಸಿಎಂ ಹೇಳಿದರು.

<p>ಸಿಎಂ ಬಸವರಾಜ ಬೊಮ್ಮಾಯಿ</p>
ಸಿಎಂ ಬಸವರಾಜ ಬೊಮ್ಮಾಯಿ

ಕಲಬುರಗಿ: ಕಳೆದ ಜುಲೈ-ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದ ರಾಜ್ಯದಲ್ಲಾದ ಬೆಳೆ ಹಾನಿಗೆ ಕಳೆದ ಒಂದು ವಾರದಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಇಂದು ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನ ರಸ್ತೆಯಲ್ಲಿ 18.50 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ಕಟ್ಟಡ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ತ್ವರಿತ ಪರಿಹಾರ ವಿತರಣೆ

ಬೆಳೆ ಹಾನಿ ಕುರಿತಂತೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆದುಕೊಂಡು ತಕ್ಷಣ ಪರಿಹಾರ ನೀಡಲಾಗುತ್ತಿದೆ. ಹಿಂದೆಲ್ಲ ಪರಿಹಾರ ನೀಡಲು ವರ್ಷಗಟ್ಟಲೆ ಬೇಕಾಗುತ್ತಿತ್ತು. ಇದೀಗ ಫ್ರೂಟ್ಸ್ ತಂತ್ರಾಂಶದಲ್ಲಿ ನಷ್ಟದ ಮಾಹಿತಿ ನಮೂದಿಸಿದ ಕೂಡಲೆ ರೈತರಿಗೆ ಪರಿಹಾರ ನೀಡಲಾಗುತ್ತಿದೆ ಎಂದರು.

ಒಣ ಬೇಸಾಯ ಜಮೀನಿಗೆ ಪ್ರತಿ ಹೆಕ್ಟೇರ್‌ಗೆ 6,800 ರೂ. ಗಳಿಂದ 13,600 ರೂ.ಗಳಿಗೆ, ನೀರಾವರಿ ಪ್ರದೇಶದ ಪ್ರತಿ ಹೆಕ್ಟೇರ್‌ಗೆ 13,000 ರೂ. ಗಳಿಂದ 25,000 ರೂ. ಗಳಿಗೆ ಹಾಗೂ ತೋಟಗಾರಿಕೆ ಪ್ರದೇಶದ ಪ್ರತಿ ಹೆಕ್ಟೇರ್‌ಗೆ 18,000 ರೂ. ಗಳಿಂದ 28,000 ರೂ. ಗಳಿಗೆ ಬೆಳೆ ಪರಿಹಾರ ಹೆಚ್ಚಿಸಲಾಗಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿ ಮೀರಿ ರಾಜ್ಯ ಸರ್ಕಾರ ಅನ್ನದಾತನಿಗೆ ಹೆಚ್ಚಿನ ಪರಿಹಾರ ನೀಡಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಯು.ಕೆ.ಪಿ. ನೀರು ಹಂಚಿಕೆ

ಯು.ಕೆ.ಪಿ. ಕೃಷ್ಣಾ ನ್ಯಾಯಾಧಿಕರಣದಲ್ಲಿ ಪ್ರದೇಶಕ್ಕೆ ಹಂಚಿಕೆಯಾದ ನೀರು ಬಳಸಲು ಇನ್ನೂ ಅಧಿಸೂಚನೆ ಹೊರಡಿಸಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ ಸಿಎಂ, ಪ್ರಕರಣ ಸುಪ್ರೀಂ ಕೋರ್ಟ್ ಪೀಠದಲ್ಲಿದ್ದು ಇಬ್ಬರು ನ್ಯಾಯಾಧೀಶರು ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಇದೀಗ ಹೊಸ ಮುಖ್ಯ ನ್ಯಾಯಾಧೀಶರ ನೇಮಕವಾಗಿದ್ದು, ಪೀಠಕ್ಕೆ ಹೊಸ ನ್ಯಾಯಾಧೀಶರನ್ನು ನೇಮಕ ಮಾಡಲು ನಮ್ಮ ವಕೀಲರ ಮೂಲಕ ಕೋರಲಾಗುತ್ತಿದೆ. ನೀರು ಹಂಚಿಕೆಯಾದ ಬಳಿಕ ಆಲಮಟ್ಟಿ ಜಲಾಶಯ ಎತ್ತರ 524 ಮೀಟರ್ ಗೆ ಏರಿಸಿ 9 ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಅಧಿಸೂಚನೆ ಹೊರಡಿಸಿದ ಕೂಡಲೇ ಕಾಲುವೆಗಳ ಮೂಲಕ ನೀರು ಹರಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅತಿ ಹೆಚ್ಚು ಅನುದಾನ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಐತಿಹಾಸಿಕವಾಗಿ 3,000 ಕೋಟಿ ರೂ. ನೀಡಿದ್ದು, ನಾಲ್ಕೇ ತಿಂಗಳಿನಲ್ಲಿ ಅಷ್ಟು ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಕೆಲಸ ಆರಂಭಿಸಿದ್ದೇವೆ. ಈ ವರ್ಷದಲ್ಲಿಯೇ ಇದರ ಅನುಷ್ಠಾನಕ್ಕೆ ಒತ್ತು ನೀಡಿದ್ದೇವೆ. ಬಹುಜನರ ಬೇಡಿಕೆಯಂತೆ ಹೈದರಾಬಾದ್ ಕರ್ನಾಟಕ ಕೋಶ ಸಹ ಇಲ್ಲಿಗೆ ವರ್ಗಾಯಿಸಲಾಗುವುದು ಎಂದರು.

ಶೇ.8ರ ಮೀಸಲಾತಿ ಸಿಗಲಿದೆ

ಕಲ್ಯಾಣ ಕರ್ನಾಟಕ ಭಾಗದವರಿಗೆ ರಾಜ್ಯದ ಇತರೆಡೆ ಶೇ.8ರ ಮೀಸಲಾತಿಯನ್ನು ಶಿಕ್ಷಣ, ಉದ್ಯೋಗ ಮತ್ತು ಮುಂಬಡ್ತಿಯಲ್ಲಿ ನೀಡಲಾಗುವುದು. ಕೆಲವೊಂದು ಅಡಚಣೆಗಳಿತ್ತು. ಅದನ್ನೆಲ್ಲ ಇದೀಗ ನಿವಾರಿಸಲಾಗಿದೆ. ಸ್ಥಳೀಯರಿಗೆ ಕಲ್ಯಾಣ ಕರ್ನಾಟಕ ಹೊರತುಪಡಿಸಿದ ಪ್ರದೇಶದಲ್ಲಿ ಶೇ.8ರಷ್ಟು ಮೀಸಲಾತಿ ನೀಡಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ವಿಮೋಚನೆಯ ಅಮೃತ ವರ್ಷವನ್ನು ವರ್ಷಪೂರ್ತಿ ಆಚರಿಸುವುದಾಗಿ ತಿಳಿಸಿದ ಸಿಎಂ, ಜನಜಾಗೃತಿಗಾಗಿ ಎಲ್ಲ ಜಿಲ್ಲೆಗಳಲ್ಲಿ ರಥಯಾತ್ರೆ ಕೈಗೊಳ್ಳಲಾಗುವುದು ಎಂದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಸ್ಥಾಪಿಸಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದ ಸಿಎಂ, ಕೇಂದ್ರ ಸರ್ಕಾರವು ಕಲಬುರಗಿಯಲ್ಲಿ ಟೆಕ್ಸ್​ಟೈಲ್ ಪಾರ್ಕ್ ನಿರ್ಮಾಣ ಮಾಡಲು ತೀರ್ಮಾನಿಸಿದೆ. ಇದರೊಂದಿಗೆ ರಾಜ್ಯ ಸರ್ಕಾರ ರಾಯಚೂರು ಹಾಗೂ ವಿಜಯಪುರದಲ್ಲಿ ಟೆಕ್ಸ್​ಟೈಲ್ ಪಾರ್ಕ್ ಮಾಡಲು ನಿರ್ಧರಿಸಿದೆ. ಇದರಿಂದ ಕನಿಷ್ಠ 25 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಶೀಘ್ರವೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

Whats_app_banner