ಕನ್ನಡ ಸುದ್ದಿ  /  ಕರ್ನಾಟಕ  /  ದಕ್ಷಿಣ ಕನ್ನಡ ಸಂಸದ ಕ್ಯಾ ಬ್ರಿಜೇಶ್ ಚೌಟ ಕನ್ನಡದಲ್ಲಿ ಪ್ರಮಾಣವಚನ; ತುಳುನಾಡಿನ ದೈವದೇವರ ಸ್ಮರಣೆ

ದಕ್ಷಿಣ ಕನ್ನಡ ಸಂಸದ ಕ್ಯಾ ಬ್ರಿಜೇಶ್ ಚೌಟ ಕನ್ನಡದಲ್ಲಿ ಪ್ರಮಾಣವಚನ; ತುಳುನಾಡಿನ ದೈವದೇವರ ಸ್ಮರಣೆ

ಕರ್ನಾಟಕ ವಿಧಾನಸಭೆಯಷ್ಟೇ ಅಲ್ಲ, ಕೇರಳ ವಿಧಾನಸಭೆಯಲ್ಲೂ ತುಳು ಭಾಷೆ ಆಗಾಗ ಮೊಳಗುವುದುಂಟು. ಇದೀಗ ಲೋಕಸಭೆಯಲ್ಲೂ ಕನ್ನಡದ ಜೊತೆಗೆ ತುಳು ಭಾಷೆಯಲ್ಲಿ ಕ್ಯಾ ಬ್ರಿಜೇಶ್ ಚೌಟ ಪ್ರಮಾಣವಚನ ಸ್ವೀಕರಿಸಿರುವುದು ಗಮನ ಸೆಳೆದಿದೆ. (ವರದಿ: ಹರೀಶ ಮಾಂಬಾಡಿ)

ಲೋಕಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ ಬ್ರಿಜೇಶ್ ಚೌಟ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಇದೇ ವೇಳೆ ತುಳುನಾಡಿನ ದೈವದೇವರ ಸ್ಮರಣೆ ಮಾಡಿದ್ದಾರೆ.
ಲೋಕಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ ಬ್ರಿಜೇಶ್ ಚೌಟ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಇದೇ ವೇಳೆ ತುಳುನಾಡಿನ ದೈವದೇವರ ಸ್ಮರಣೆ ಮಾಡಿದ್ದಾರೆ.

ಮಂಗಳೂರು: ದೆಹಲಿಯ ಪಾರ್ಲಿಮೆಂಟ್ ಭವನದ ಲೋಕಸಭೆಯಲ್ಲಿ ಸೋಮವಾರ (ಜೂನ್ 24) ನೂತನವಾಗಿ ಆಯ್ಕೆಯಾದ ಸದಸ್ಯರ ಪ್ರಮಾಣವಚನ ಸ್ವೀಕರಿಸುವ ಸಂದರ್ಭ ದಕ್ಷಿಣ ಕನ್ನಡ ಸಂಸದರಾಗಿ ಆಯ್ಕೆಯಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ (Brijesh Chowta) ತುಳುನಾಡಿನ ದೈವದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದರು. ಕನ್ನಡ ಭಾಷೆಯಲ್ಲೇ ಪ್ರಮಾಣವಚನ ಸ್ವೀಕರಿಸಿದ ಚೌಟ (Brijesh Chowta Takes Oath in Kannada), ಇದೇ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡುವ ಬದಲು ಹೊಸಮುಖಕ್ಕೆ ಬಿಜೆಪಿ ಹೈಕಮಾಂಡ್ ಅವಕಾಶ ನೀಡಿದಾಗ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದ ದಕ್ಷಿಣ ಕನ್ನಡದ ಕ್ಯಾ.ಬ್ರಿಜೇಶ್ ಚೌಟ ಹೆಸರು ಮುನ್ನಲೆಗೆ ಬಂದಿತ್ತು.

ಮಂಗಳೂರು ಮಹಾನಗರದ ಮಧ್ಯೆಯೇ ಕಂಬಳದ ಕರೆ ನಿರ್ಮಿಸಿ ಮಂಗಳೂರು ಕಂಬಳವನ್ನು ಯಶಸ್ವಿಯಾಗಿ ಕೆಲ ವರ್ಷಗಳಿಂದ ಆಯೋಜನೆ ಮಾಡುತ್ತಾ ಬಂದಿರುವ ಕ್ಯಾ. ಬ್ರಿಜೇಶ್ ಚೌಟ, ತುಳು ಭಾಷೆ, ಸಂಸ್ಕೃತಿಯ ಕುರಿತು ಅಪಾರ ಅಭಿಮಾನವನ್ನು ಇಟ್ಟುಕೊಂಡವರು. ಟಿಕೆಟ್ ನೀಡಿದ ಸಂದರ್ಭ ಪ್ರಥಮವಾಗಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯೇ ತುಳುನಾಡ ದೈವದೇವರನ್ನು ಪ್ರಸ್ತಾಪಿಸಿದ್ದ ಚೌಟ, ನೆಲದ ಸಂಸ್ಕೃತಿಯ ಉಳಿವಿಗೆ ಆದ್ಯತೆ ನೀಡುವುದಾಗಿ ಹೇಳಿಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳ ಭಾಗ ಅಂತೆಯೇ ಕೇರಳದ ಕಾಸರಗೋಡು ಪ್ರದೇಶದಲ್ಲಿ ಹೆಚ್ಚಿನ ಜನರು ತುಳು ಭಾಷಿಗರಾಗಿದ್ದು, ಇಲ್ಲಿನ ದೈವಾರಾಧನೆ, ದೇವಸ್ಥಾನಗಳ ವ್ಯವಸ್ಥೆ, ಆಚರಣೆಗಳು ಹಾಗೂ ಭಾಷೆ, ಕಂಬಳ, ಯಕ್ಷಗಾನ, ನಾಟಕ, ಸಂಸ್ಕೃತಿಯಲ್ಲಿ ತುಳುಬದುಕು ಹಾಸುಹೊಕ್ಕಾಗಿದೆ. ಈ ಹಿನ್ನೆಲೆಯಲ್ಲಿ ತುಳುನಾಡಿನ ದೈವದೇವರ ಹೆಸರಲ್ಲಿ ಬ್ರಿಜೇಶ್ ಚೌಟ ಪ್ರಮಾಣವಚನ ಸ್ವೀಕರಿಸಿದ್ದು, ಸಹಜವಾಗಿಯೇ ತುಳುಭಾಷಿಗರಿಗೆ ಸಂತಸ ತಂದಿದೆ. ಇದೀಗ ಸಾಮಾಜಿಕ ಮಾಧ್ಯಮಗಳಲ್ಲೂ ಗಮನ ಸೆಳೆಯುತ್ತಿದೆ.

ಟ್ರೆಂಡಿಂಗ್​ ಸುದ್ದಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಹೀಗೆ

“ನಾನು ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಸಭೆಯ ಸದಸ್ಯನಾಗಿ ಚುನಾಯಿತನಾದವನಾಗಿ ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ದೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದೂ, ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿಹಿಡಿಯುತ್ತೇನೆಂದೂ ಮತ್ತು ನಾನು ಈಗ ವಹಿಸಿಕೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆಂದೂ, ದೈವ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ” ಎಂದು ಹೇಳಿ ನಂತರ “ಮಾತೆರೆಗ್ಲಾ ಸೊಲ್ಮೆಲು” ಎಂದು ಸಂಸತ್ತನ್ನು ಅಭಿನಂದಿಸಿದರು.

ತುಳುನಾಡಿಗೆ, ತುಳುಭಾಷೆಗೆ ದಕ್ಷಿಣ ಕನ್ನಡದ ನೂತನ ಸಂಸತ ಬ್ರಿಜೇಶ್ ಚೌಟ ಅವರು ಸಲ್ಲಿಸಿದ ಈ ಗೌರವ ಸಾಮಾಜಿಕ ಜಾಲತಾಣದಲ್ಲಿಯೂ ಸುದ್ದಿ ಮಾಡಿದೆ ಹಾಗೂ ಭಾರಿ ಮೆಚ್ಚುಗೆ ಪಡೆದಿದೆ. (ವರದಿ: ಹರೀಶ ಮಾಂಬಾಡಿ)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)