ಕನ್ನಡ ಸುದ್ದಿ  /  ಕರ್ನಾಟಕ  /  Mangaluru Dust: ಶ್ವಾಸಕೋಶ ಪ್ರವೇಶಿಸುವಂತಿದೆ ಧೂಳು; ಮಂಗಳೂರಲ್ಲಿ ಜನರ ಆರೋಗ್ಯ ಹಾಳು

Mangaluru Dust: ಶ್ವಾಸಕೋಶ ಪ್ರವೇಶಿಸುವಂತಿದೆ ಧೂಳು; ಮಂಗಳೂರಲ್ಲಿ ಜನರ ಆರೋಗ್ಯ ಹಾಳು

ಮಂಗಳೂರಿನಲ್ಲಿ ಧೂಳು ಹೆಚ್ಚಾಗಿರುವ ಈ ವೇಳೆಯಲ್ಲಿ ಚರ್ಮದ ಉರಿ, ಅಲರ್ಜಿ, ಮೂಗು ಸೋರುವಿಕೆ, ಶ್ವಾಸನಾಳದ ಅಸ್ತಮಾ, ಜಠರದ ಉರಿಯೂತ, ಬೇಧಿ, ಅಜೀರ್ಣ, ಮಲಬದ್ಧತೆ, ಚರ್ಮರೋಗಗಳಂಥ ಪ್ರಕರಣಗಳೂ ಹೆಚ್ಚಾಗಿದ್ದು, ಈ ಕುರಿತು ಹರೀಶ ಮಾಂಬಾಡಿ ಅವರ ವಿಶೇಷ ವರದಿ ಇಲ್ಲಿದೆ.

ಮಂಗಳೂರಲ್ಲಿ ಧೂಳೇ ಧೂಳು (ಎಡಚಿತ್ರ)
ಮಂಗಳೂರಲ್ಲಿ ಧೂಳೇ ಧೂಳು (ಎಡಚಿತ್ರ)

ಮಂಗಳೂರು: ಪ್ರತಿ ವರ್ಷ ಫೆಬ್ರವರಿ ಬಂತೆಂದರೆ ಡಸ್ಟ್ ಅಲರ್ಜಿ ಕಾಡುವವರ ಸಂಖ್ಯೆ ಹೆಚ್ಚಳವಾಗುತ್ತದೆ. ಈ ಬಾರಿ ಕರ್ನಾಟಕ ಕರಾವಳಿಯಲ್ಲಿ ಅಲ್ಲಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು, ಮಂದ ಮಾರುತದೊಂದಿಗೆ ಮಣ್ಣಿನ ಕಣಗಳೂ ಹಾರುವುದು ಕಂಡುಬರುತ್ತಿದ್ದು, ಇದರಿಂದ ಕಣ್ಣುರಿ, ಒಣಕೆಮ್ಮು, ಜ್ವರದಿಂದಾಗಿ ಜನರು ದವಾಖಾನೆಗಳಿಗೆ ಎಡತಾಕುತ್ತಿದ್ದಾರೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಧೂಳಿನ ವಾತಾವರಣ ಹಾಗೂ ಶುಷ್ಕತೆ ಹೆಚ್ಚಿರುವ ಕಾರಣ, ರೋಗಾಣುಗಳು ಕ್ರಿಯಾಶೀಲವಾಗಿ ಸಂಚಾರ ಮಾಡುವ ಹಿನ್ನೆಲೆಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವುದು ಅತಿ ಸುಲಭ. ಕೊರೊನಾ ನೆನಪುಂಟಲ್ಲ, ಚಳಿಗಾಲದಲ್ಲಿ ಮೌನವಾಗಿದ್ದ ಕೊರೊನಾ ವೈರಾಣುಗಳು ಮಾರ್ಚ್ ತಿಂಗಳು ಕಾಲಿಟ್ಟ ಸಂದರ್ಭ, ಹೆಚ್ಚು ವ್ಯಾಪಿಸತೊಡಗಿದ್ದವು. ಹೀಗಾಗಿ ಆರೋಗ್ಯದ ಕುರಿತು ಕಾಳಜಿ ಅತ್ಯಗತ್ಯ. ಅದರಲ್ಲೂ ಅಸ್ತಮಾದಂಥವರು ಇದ್ದರೆ ಮಾಸ್ಕ್ ಧರಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಾಮೂಹಿಕವಾಗಿ ಅಲರ್ಜಿ ಹರಡಿಲ್ಲ:

ಈ ಕುರಿತು ಎಚ್​​ಡಿ ಕನ್ನಡ ಜೊತೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಸಹಜವಾಗಿಯೇ ಬೇಸಿಗೆಯಲ್ಲಿ ಧೂಳು, ಹೊಗೆ, ವಾತಾವರಣದಲ್ಲಿ ಒಣಹವೆ, ವಾಹನಗಳ ಕಾರ್ಬನ್​​ನ ಹೊಗೆಯಿಂದಾಗಿ ಉಸಿರಾಟದ ತೊಂದರೆ ಆಗುತ್ತದೆ. ಇಂಥ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾತಾವರಣದಲ್ಲಿ ಏರುಪೇರಾಗುವ ವೇಳೆ ಸಹಜವಾಗಿಯೇ ಆರೋಗ್ಯದಲ್ಲೂ ಸಮಸ್ಯೆ ಉಂಟಾಗುತ್ತದೆ. ಈ ಕುರಿತು ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ, ದಿಢೀರನೆ ಸಾಮೂಹಿಕವಾಗಿ ಯಾರಿಗೂ ಅಲರ್ಜಿ ಹರಡಿರುವ ಕುರಿತ ಪ್ರಕರಣಗಳು ವರದಿಯಾಗಿಲ್ಲ. ಆದರೆ ಚಳಿಯ ವಾತಾವರಣದಿಂದ ಬಿಸಿಲಿನ ವಾತಾವರಣಕ್ಕೆ ಹೊರಳುವ ಸನ್ನಿವೇಶದಲ್ಲಿ ಧೂಳಿನ ಪ್ರಮಾಣ ಹೆಚ್ಚಳವಾಗಿರುವ ಕಾರಣ ಅದಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಹೊಂದಿರುವವರು ಆಸ್ಪತ್ರೆಗಳಿಗೆ ಬರುತ್ತಿದ್ದಾರೆ ಎಂದರು.

ತಲೆಸುತ್ತುವುದು, ಕೆಮ್ಮು, ಚರ್ಮದ ಅಲರ್ಜಿಗಳು:

ರಣಬಿಸಿಲಿನ ತಿಂಗಳು ಇನ್ನೂ ಬರಬೇಕಷ್ಟೇ. ಆದರೂ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿಂದ ಅಡ್ಡಹೊಳೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ತೆರಳುವವರು ಇದೇ ರಸ್ತೆಯಲ್ಲಿ ಸಾಗುತ್ತಾರೆ. ಅಂತೆಯೇ ಸಾಕಷ್ಟು ಸ್ಥಳೀಯ ಬಸ್​​​ಗಳು ಈ ಮಾರ್ಗದಲ್ಲಿ ಓಡಾಡುತ್ತಿದ್ದು, ತೆರೆದ ಬಾಗಿಲಿನ ಬಸ್ಸುಗಳಲ್ಲಿ ಪ್ರಯಾಣಿಸುವವರು, ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವವರು ಗಾಳಿ ಬಂದೊಡನೆ ಧೂಳಿನ ಸ್ನಾನವನ್ನೂ ಮಾಡಿಸಿಕೊಳ್ಳುವ ಅನಿವಾರ್ಯತೆ ಹೊಂದುತ್ತಾರೆ. ಸಾಮಾನ್ಯವಾಗಿ ಶಾಲಾ ಮಕ್ಕಳು ಇಂಥದ್ದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಮಕ್ಕಳ ತಜ್ಞ ವೈದ್ಯ ಡಾ. ಅಶ್ವಿನ್ ಬಾಳಿಗಾ ಹೇಳುವ ಪ್ರಕಾರ, ಕೊರೊನಾ ಇರುವಾಗ ಹೇಗೆ ನಾವು ಮಾಸ್ಕ್ ಧರಿಸಿ ಹೋಗುತ್ತಿದ್ದೆವೋ ಹಾಗೆಯೇ ಈಗಲೂ ಮಾಸ್ಕ್ ಧರಿಸಿದರೆ ಉತ್ತಮ ಎಂದರು.

ಕಣ್ಣಿನ ಅಲರ್ಜಿ, ತಲೆಸುತ್ತು, ಮೂಗಿನಲ್ಲಿ ರಕ್ತ ಸುರಿಯುವುದು, ಅತಿಯಾದ ಸೂರ್ಯಕಿರಣಗಳಿಂದ ಚರ್ಮ ಸಮಸ್ಯೆಗಳು ಚರ್ಮದ ಅಲರ್ಜಿಗಳು, ಶ್ವಾಸಕೋಶ ತೊಂದರೆಗಳು, ಬೆವರುಗುಳ್ಳೆ, ಕೀವು ತುಂಬಿದ ಗುಳ್ಳೆಗಳು, ಉಷ್ಣದ ಕೆಮ್ಮು, ಅಂಗೈ-ಅಂಗಾಲು ಉರಿ, ಉರಿಮೂತ್ರ, ಸರ್ಪಸುತ್ತು, ಮಲಬದ್ಧತೆಯಿಂದ ಆಸ್ಪತ್ರೆಗೆ ಬರುವವರು ಹೆಚ್ಚಾಗುತ್ತಿದ್ದಾರೆ ಎಂದು ಹಳ್ಳಿಯಲ್ಲಿ ಕ್ಲಿನಿಕ್ ಹೊಂದಿರುವ ವೈದ್ಯ ಡಾ. ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಚರ್ಮದ ಉರಿ, ಅಲರ್ಜಿ, ಮೂಗು ಸೋರುವಿಕೆ, ಶ್ವಾಸನಾಳದ ಅಸ್ತಮಾ, ಜಠರದ ಉರಿಯೂತ, ಬೇಧಿ, ಅಜೀರ್ಣ, ಮಲಬದ್ಧತೆ, ಚರ್ಮರೋಗಗಳಂಥ ಪ್ರಕರಣಗಳೂ ಕಂಡುಬರುತ್ತಿವೆ ಎಂದು ಮಂಗಳೂರಿನ ಕೆಲ ವೈದ್ಯರು ಮಾಹಿತಿ ನೀಡಿದ್ದಾರೆ. ರಸ್ತೆಯ ಧೂಳು ಮುಖ, ಕಣ್ಣುಗಳ ಮೇಲೆ ಆವರಿಸಿ ತೊಂದರೆ ಸೃಷ್ಟಿಸುತ್ತವೆ. ಹಲವು ಸೋಂಕುಗಳೂ ಇದರಿಂದ ಕಾಣಿಸಿಕೊಳ್ಳುತ್ತವೆ. ಕಣ್ಣಿಗೆ ಬೀಳುವ ಧೂಳನ್ನು ಕಣ್ಣೀರು ಶುಚಿಗೊಳಿಸಬಹುದು ಆದರೆ, ವಿಪರೀತ ಧೂಳು ಇದ್ದರೆ ಅದೂ ಸಾಧ್ಯವಿಲ್ಲ. ಹೀಗಾಗಿ ನಾವೂ ಸಾಕಷ್ಟು ಮುಂಜಾಗರೂಕತೆ ವಹಿಸಬೇಕಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point