ಕನ್ನಡ ಸುದ್ದಿ  /  ಕರ್ನಾಟಕ  /  ಸಂಪಾದಕೀಯ: ಸಂತ್ರಸ್ತರ ಮೇಲೆ ಪ್ರಶ್ನೆಗಳ ದಾಳಿ, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಬಿಚ್ಚಿಕೊಳ್ಳುತ್ತಿದೆ ಸಮಾಜದ ಕರಾಳ ಮುಖ

ಸಂಪಾದಕೀಯ: ಸಂತ್ರಸ್ತರ ಮೇಲೆ ಪ್ರಶ್ನೆಗಳ ದಾಳಿ, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಬಿಚ್ಚಿಕೊಳ್ಳುತ್ತಿದೆ ಸಮಾಜದ ಕರಾಳ ಮುಖ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ: ನಮ್ಮ ಸಮಾಜವು ಸಂತ್ರಸ್ತ ಮಹಿಳೆಯರನ್ನು ಹೇಗೆ ಕಾಣುತ್ತಿದೆ? ಅವರ ಬಗ್ಗೆ ಏನು ಮಾತನಾಡುತ್ತಿದೆ ಎನ್ನುವುದು ಎಲ್ಲ ಪ್ರಜ್ಞಾವಂತರಿಗೆ ಇರಿಸುಮುರಿಸು ಉಂಟು ಮಾಡುವಂತಿದೆ. ಸಂತ್ರಸ್ತರನ್ನು ವಿಚಾರಣೆಯೇ ಇಲ್ಲದೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರ್ವಥಾ ಸರಿಯಲ್ಲ.

ಪ್ರಜ್ವಲ್ ರೇವಣ್ಣ ವಿರುದ್ಧ ಕರ್ನಾಟಕದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಮತ್ತೊಂದೆಡೆ ಲೈಂಗಿಕ ಹಗರಣದ ಸಂತ್ರಸ್ತರನ್ನೇ ಅನುಮಾನಿಸುವ ಪ್ರಶ್ನೆಗಲು ಸಮಾಜದ ಕರಾಳ ಮುಖವನ್ನು ಅನಾವರಣಗೊಳಿಸುತ್ತಿವೆ.
ಪ್ರಜ್ವಲ್ ರೇವಣ್ಣ ವಿರುದ್ಧ ಕರ್ನಾಟಕದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಮತ್ತೊಂದೆಡೆ ಲೈಂಗಿಕ ಹಗರಣದ ಸಂತ್ರಸ್ತರನ್ನೇ ಅನುಮಾನಿಸುವ ಪ್ರಶ್ನೆಗಲು ಸಮಾಜದ ಕರಾಳ ಮುಖವನ್ನು ಅನಾವರಣಗೊಳಿಸುತ್ತಿವೆ.

ಸಂತ್ರಸ್ತ ಮಹಿಳೆಯರ ನಿಂದನೆ ಅಕ್ಷಮ್ಯ: ಹೊಯ್ಸಳರ ನಾಡು ಹಾಸನ ಹಲವು ಮೌಲಿಕ ಕೊಡುಗೆಗಳನ್ನು ಕರ್ನಾಟಕಕ್ಕೆ ಕೊಟ್ಟಿದೆ. ಬಯಲುಸೀಮೆ, ಅರೆಮಲೆನಾಡು, ಮಲೆನಾಡು ಸಂಸ್ಕೃತಿಯ ಈ ಜಿಲ್ಲೆಯು ಆತಿಥ್ಯಕ್ಕೆ, ಅಪರಿಚಿತರನ್ನೂ ಪ್ರೀತಿಯಿಂದ ಕಾಣುವ ಮಾನವೀಯತೆಯ ಹೆಸರುವಾಸಿ. ಆದರೆ ಕಳೆದ ಕೆಲ ದಿನಗಳಿಂದ ಹಾಸನ ಜಿಲ್ಲೆಯ ಸಲ್ಲದ ಕಾರಣಕ್ಕೆ ಸುದ್ದಿಯಲ್ಲಿದೆ. ಬಸ್ಸು, ರೈಲುಗಳಲ್ಲಿ, ಮದುವೆ ಮನೆಗಳಲ್ಲಿ, ದೇವಸ್ಥಾನಗಳಲ್ಲಿ,, ಹಳ್ಳಿಗಳ ಅರಳಿಕಟ್ಟೆಗಳ ಮೇಲೆ... ಹೀಗೆ ಎಲ್ಲಿಯೇ ನಾಲ್ಕು ಜನ ಸೇರಿದರೂ ಅದದೇ ವಿಚಾರ ಚರ್ಚೆಗೆ ಬರುತ್ತಿದೆ. 'ಎಲ್ಲ ಗೊತ್ತಿದ್ದೂ ಬಿಜೆಪಿಯವರು ಪ್ರಜ್ವಲ್‌ ರೇವಣ್ಣಗೆ ಟಿಕೆಟ್ ಕೊಡಲು ಒಪ್ಪಿದ್ದು ಏಕೆ?' ಎನ್ನುವಲ್ಲಿಯಿಂದ ಹಿಡಿದು, '4 ವರ್ಷ ಸುಮ್ಮನಿದ್ದವರು ಈಗ ದೂರು ಕೊಟ್ಟಿದ್ದು ಏಕಂತೆ. ಆ ಹೆಂಗಸರೂ ಸರಿಯಿಲ್ಲ' ಎನ್ನುವವರೆಗೂ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ ಸೇರಿದಂತೆ ಭಾರತೀಯ ಭಾಷೆಗಳ ಹಲವು ಪತ್ರಿಕೆಗಳಲ್ಲಿ ಸಂಪಾದಕೀಯಗಳು ಪ್ರಕಟವಾಗಿವೆ. ವಿದೇಶದ ಮಾಧ್ಯಮಗಳಲ್ಲಿಯೂ ಸುದ್ದಿ ಬಿತ್ತರವಾಗಿದೆ.

ಟ್ರೆಂಡಿಂಗ್​ ಸುದ್ದಿ

ಹಾಸನದ ಬಿಜೆಪಿ-ಜೆಡಿಎಸ್‌ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇನ್ನೂ ಆರೋಪಿ ಸ್ಥಾನದಲ್ಲಿಯೇ ಇದ್ದಾರೆ. ಪ್ರಕರಣದ ತನಿಖೆ ನಡೆಸಲು ಕರ್ನಾಟಕ ಸರ್ಕಾರವು ಎಸ್‌ಐಟಿ ರಚಿಸಿದೆ. ಪ್ರಜ್ವಲ್ ರೇವಣ್ಣ ಪರ ವಕೀಲರು ಸಹ ತನ್ನ ಕಕ್ಷೀದಾರರ ಪರವಾಗಿ ಪ್ರತಿಕ್ರಿಯಿಸಿದ್ದಾರೆ. ಸಹಜವಾಗಿಯೇ ಈ ಪ್ರಕರಣಕ್ಕೆ ರಾಜಕೀಯದ ಬಣ್ಣ ಬಂದಿದೆ. ಜೆಡಿಎಸ್‌ ಜೊತೆಗೆ ಬಿಜೆಪಿಗೂ ಕಾಂಗ್ರೆಸ್‌ ಖಾರವಾದ ಪ್ರಶ್ನೆಗಳನ್ನು ಕೇಳಿದೆ. ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಕ್ಷದ ಪರವಾಗಿ ನಿಲುವು ಸ್ಪಷ್ಟಪಡಿಸಿದ್ದಾರೆ. ತನಿಖೆ ಮತ್ತು ರಾಜಕೀಯ ಮುಂದಿನ ದಿನಗಳಲ್ಲಿ ತಮ್ಮದೇ ಆದ ಹಾದಿ ಹಿಡಿಯಲಿವೆ. ಜೆಡಿಎಸ್‌ನ ಮತ್ತೋರ್ವ ಮುಂಚೂಣಿ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರಕರಣದಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಪ್ರಶ್ನೆ ಇಷ್ಟೇ ಅಲ್ಲ. ನಮ್ಮ ಸಮಾಜವು ಸಂತ್ರಸ್ತ ಮಹಿಳೆಯರನ್ನು ಹೇಗೆ ಕಾಣುತ್ತಿದೆ? ಅವರ ಬಗ್ಗೆ ಏನು ಮಾತನಾಡುತ್ತಿದೆ ಎನ್ನುವುದು ಎಲ್ಲ ಪ್ರಜ್ಞಾವಂತರಿಗೆ ಇರಿಸುಮುರಿಸು ಉಂಟು ಮಾಡುವಂತಿದೆ. ಸಂತ್ರಸ್ತರನ್ನು ವಿಚಾರಣೆಯೇ ಇಲ್ಲದೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ, ಸ್ವಹಿತಾಸಕ್ತಿಯಿಂದ ಅವರೇ ಆರೋಪಿಗೆ ಬಲೆ ಬೀಸಿದರು ಎನ್ನುವ, ಇವೆಲ್ಲವೂ ಪ್ರತಿಪಕ್ಷದ ಚಿತಾವಣೆಯಿಂದ ಆದ ಹನಿಟ್ರಾಪ್ ಎನ್ನುವ ಕಥನವನ್ನು ಅತ್ಯಂತ ವ್ಯವಸ್ಥಿತವಾಗಿ ಹರಿಬಿಡಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸುತ್ತಿರುವ ಇಂಥ ಕಥನಗಳನ್ನೇ ಹಲವರು ನಿಜವೆಂದು ನಂಬಿ ಆರೋಪಿಯ ಸಮರ್ಥನೆಗೆ ಮತ್ತು ಸಂತ್ರಸ್ತೆಯ ಚಾರಿತ್ರ್ಯವಧೆಗೆ ಇಳಿಯುತ್ತಿರುವುದು ತಪ್ಪು ಮತ್ತು ಅಸಮರ್ಥನೀಯ.

ರಾಜಕಾರಣ ಈಗಾಗಲೇ ಮೌಲ್ಯ ಕಳೆದುಕೊಂಡಿದೆ. ಈ ಹಿಂದೆ ಬೆಳಕಿಗೆ ಬಂದ ಹಲವು ಲೈಂಗಿಕ ಹಗರಣಗಳ ತನಿಖೆ ದಿಕ್ಕುತಪ್ಪಿದ್ದು ಜನರ ನೆನಪಿನಿಂದ ಮಾಸಿಲ್ಲ. ಅಂಥ ಕೆಲ ರಾಜಕಾರಿಣಿಗಳು ಮತ್ತೆ ಚುನಾವಣೆಗೆ ನಿಂತು ಗೆಲುವು ಸಾಧಿಸಿದ್ದನ್ನು, ಆ ಗೆಲುವನ್ನು ತಮ್ಮ ಶುದ್ಧ ಚಾರಿತ್ರ್ಯದ ಪ್ರತೀಕ ಎಂದು ಬಿಂಬಿಸಿಕೊಂಡಿದ್ದನ್ನೂ ಜನರು ಮರೆತಿಲ್ಲ. ಪ್ರಜ್ವಲ್ ರೇವಣ್ಣ ಪ್ರಕರಣ ಸಹ ಈ ಹಾದಿ ಹಿಡಿಯಬಾರದು. ಆರೋಪಿಯ ವಿರುದ್ಧದ ದೂರುಗಳ ವಿಸ್ತೃತ ತನಿಖೆ ಸಮರ್ಪಕವಾಗಿ ಆಗಬೇಕು. ಇದೇ ಹೊತ್ತಿಗೆ ಸಂತ್ರಸ್ತೆಯರಿಗೆ ಸರ್ಕಾರವು ರಕ್ಷಣೆಯ ಧೈರ್ಯ ಕೊಡಬೇಕು. ಸಮಾಜವು ಆಸರೆಯಾಗಿ ನಿಲ್ಲಬೇಕು. ತಪ್ಪು-ಸರಿ, ಆ ಹೆಣ್ಣುಮಗಳು ಆ ರೀತಿ ನಡೆದುಕೊಳ್ಳುವ ಸಂದರ್ಭ ಏಕೆ ಬಂತು ಎನ್ನುವ ಚರ್ಚೆಗಳಿಗೆ ಇದು ಸಮಯವಲ್ಲ. ಜನ್ಮಜಾತವಾಗಿ ಬಂದ ಪ್ರಭಾವ ಮತ್ತು ಅಧಿಕಾರವನ್ನು ಬೇಕಾಬಿಟ್ಟಿ ಬಳಸಿದವರನ್ನು ಎದುರಿಸಿ ನಿಲ್ಲುವುದು ಎಲ್ಲರಿಂದಲೂ ಸಾಧ್ಯವಿಲ್ಲ ಎನ್ನುವುದು ನಮ್ಮ ಸಮಾಜಕ್ಕೆ ಅರ್ಥವಾಗಬೇಕು.

ಈ ಪ್ರಕರಣದಲ್ಲಿ ಈಗಾಗಲೇ ಆರೋಪಿಯಿಂದ ನೋವು ಅನುಭವಿಸಿರುವ ಹೆಂಗಸರ ಮೇಲೆ ನಡೆಯುತ್ತಿರುವ ಚಾರಿತ್ರ್ಯವಧೆಯ ಪ್ರಯತ್ನ ಸರ್ವಥಾ ಸರಿಯಲ್ಲ. ಇದು ನೊಂದವರ ಮೇಲೆ ಚಪ್ಪಡಿ ಎಳೆದಂತೆ. ಸಾಮಾಜಿಕ ಮಾಧ್ಯಮಗಳ ಸಂದೇಶಗಳನ್ನು ಪೂರ್ವಾಪರ ವಿವೇಚನೆಯಿಲ್ಲದೆ ನಂಬುವುದು ಮತ್ತು ಹಂಚಿಕೊಳ್ಳುವುದರಿಂದ ದೂರ ಇರಬೇಕು. ಈ ಪ್ರಕರಣವನ್ನು ನೆಪ ಮಾಡಿಕೊಂಡು ಸಂತ್ರಸ್ತೆಯರನ್ನು ಮತ್ತಷ್ಟು ಶೋಷಿಸುವವರ ಬಗ್ಗೆ ಸರ್ಕಾರವೂ ಕಠಿಣ ನಿಲುವು ತಳೆಯಬೇಕು.

IPL_Entry_Point