ಅತಿಕಾಮದ ದೌರ್ಬಲ್ಯ: ಲೈಂಗಿಕ ಶೋಷಣೆಯನ್ನೇ ವ್ಯಸನವಾಗಿಸಿಕೊಳ್ಳುವ ಕಾಮಪಿಪಾಸೆಯೂ ರೋಗ, ಚಿಕಿತ್ಸೆಯ ಜೊತೆಗೆ ಶಿಕ್ಷೆಯೂ ಕೊಡಬೇಕು-mental health hassan scandal psychological analysis of behaviour with hypersexuality compulsive sexual behaviour rpr ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅತಿಕಾಮದ ದೌರ್ಬಲ್ಯ: ಲೈಂಗಿಕ ಶೋಷಣೆಯನ್ನೇ ವ್ಯಸನವಾಗಿಸಿಕೊಳ್ಳುವ ಕಾಮಪಿಪಾಸೆಯೂ ರೋಗ, ಚಿಕಿತ್ಸೆಯ ಜೊತೆಗೆ ಶಿಕ್ಷೆಯೂ ಕೊಡಬೇಕು

ಅತಿಕಾಮದ ದೌರ್ಬಲ್ಯ: ಲೈಂಗಿಕ ಶೋಷಣೆಯನ್ನೇ ವ್ಯಸನವಾಗಿಸಿಕೊಳ್ಳುವ ಕಾಮಪಿಪಾಸೆಯೂ ರೋಗ, ಚಿಕಿತ್ಸೆಯ ಜೊತೆಗೆ ಶಿಕ್ಷೆಯೂ ಕೊಡಬೇಕು

Hassan Scandal: ಕರ್ನಾಟಕದಲ್ಲಿ ಇದೀಗ ರಾಜಕಾರಿಣಿಯೊಬ್ಬರ ಲೈಂಗಿಕ ಹಗರಣ ದೊಡ್ಡ ಸದ್ದು ಮಾಡುತ್ತಿದೆ. ಕೆಲವರು ಏಕೆ ಕಾಮ ರಾಕ್ಷಸರಂತೆ ವರ್ತಿಸುತ್ತಾರೆ? ಕಾಮಪಿಪಾಸೆಗೆ ಚಿಕಿತ್ಸೆಯೇ ಇಲ್ಲವೇ? ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿದ ಇಂಥ ಹಲವು ಪ್ರಶ್ನೆಗಳನ್ನು ಮನಃಶಾಸ್ತ್ರದ ಆಯಾಮದಿಂದ ಪರಿಶೀಲಿಸಿದ್ದಾರೆ ಆಪ್ತಸಮಾಲೋಚಕಿ ಡಾ ರೂಪಾ ರಾವ್.

ಅತಿಕಾಮದ ದೌರ್ಬಲ್ಯ: ದುರ್ಬಲರನ್ನು ಅವಕಾಶ ಸಿಕ್ಕಾಗಲೆಲ್ಲಾ ಲೈಂಗಿಕವಾಗಿ ಶೋಷಿಸುವ ಕಾಮಪಿಪಾಸೆಯೂ ರೋಗ
ಅತಿಕಾಮದ ದೌರ್ಬಲ್ಯ: ದುರ್ಬಲರನ್ನು ಅವಕಾಶ ಸಿಕ್ಕಾಗಲೆಲ್ಲಾ ಲೈಂಗಿಕವಾಗಿ ಶೋಷಿಸುವ ಕಾಮಪಿಪಾಸೆಯೂ ರೋಗ

Compulsive Sexual Behaviour: ಹಾಸನದ ರಾಜಕಾರಿಣಿಯೊಬ್ಬರು ಇದೀಗ ಮಾಧ್ಯಮಗಳ ಪ್ರೈಮ್‌ಟೈಮ್‌ನಲ್ಲಿ ರಾರಾಜಿಸುತ್ತಿದ್ದಾರೆ. ವಿದೇಶಗಳ ಮಾಧ್ಯಮಗಳಲ್ಲಿಯೂ ಹಾಸನದ ಹೆಸರು ಬಂದಿದೆ. ಇದು ವ್ಯಕ್ತಿಯೊಬ್ಬರ ಸಾಧನೆಗಾಗಿ ಬಂದಿದ್ದರೆ ನಿಜಕ್ಕೂ ಹೆಮ್ಮೆಯಾಗುತ್ತಿತ್ತು. ಆದರೆ ಈಗ ಹಾಸನ ಅಥವಾ ಕರ್ನಾಟಕ ಅಂತರರಾಷ್ಟ್ರೀಯ ಮಟ್ಟದ ಸುದ್ದಿಯಾಗಿರುವುದು ಸಲ್ಲದ ಕಾರಣಕ್ಕೆ. ಈ ಪ್ರಕರಣದ ರಾಜಕೀಯ ಆಯಾಮಗಳ ಬಗ್ಗೆ, ಈ ಪ್ರಕರಣ ಮುಂದಿನ ಬೆಳವಣಿಗೆಗಳ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ಎಲ್ಲೆಡೆ ಬಂದಿವೆ, ಬರುತ್ತಿವೆ. ನನಗೆ ಈ ಬೆಳವಣಿಗೆಯ ಮೂಲಬಿಂದುವಾಗಿರುವ ವ್ಯಕ್ತಿ ಮತ್ತು ಆತನ ಮಾನಸಿಕ ಸ್ಥಿತಿಗತಿಯ ಬಗ್ಗೆಯೇ ಕುತೂಹಲವಿದೆ. ವ್ಯಕ್ತಿಯೊಬ್ಬ ಏಕೆ ಕಾಮಪಿಪಾಸುವಾಗುತ್ತಾನೆ ಎನ್ನುವ ಕುರಿತು ಮನಃಶಾಸ್ತ್ರ ಹಲವು ರೀತಿಯಲ್ಲಿ ವಿಶ್ಲೇಷಿಸುತ್ತದೆ. ಹಾಸನದ ಘಟನೆಯನ್ನು ಹಿನ್ನೆಲೆಯಾಗಿರಿಸಿಕೊಂಡು ಮನಃಶಾಸ್ತ್ರದ ಕೆಲ ಪರಿಕಲ್ಪನೆಗಳನ್ನು ಓದುಗರ ಮುಂದೆ ಇರಿಸಲು ಪ್ರಯತ್ನಿಸಿದ್ದೇನೆ.

ಇಂಥವರದು ಸಾಮಾನ್ಯವಾಗಿ 'ಕಂಪಲ್ಸೀವ್ ಸೆಕ್ಷುವಲ್ ಬಿಹೇವಿಯರ್' ಅಥವಾ 'ಹೈಪರ್ಸೆಕ್ಸುಯಾಲಿಟಿ' ಅಥವಾ 'ಸೆಕ್ಷುವಲ್ ಅಡಿಕ್ಷನ್'. ಈ ಪಾರಿಭಾಷಿಕ ಪದಗಳನ್ನು ಕನ್ನಡಕ್ಕೆ ಅನುವಾದಿಸಿದರೆ 'ಅನ್ನಿಸಿದಾಗಲೆಲ್ಲಾ ಲೈಂಗಿಕ ಕ್ರಿಯೆ ನಡೆಸಬೇಕು ಎನ್ನಿಸುವ ದೌರ್ಬಲ್ಯ' ಅಥವಾ ಅತಿಕಾಮ ಅಥವಾ 'ಕಾಮದ ಚಟ' ಎಂದು ಹೇಳಬಹುದು. ಇಂಥವರಲ್ಲಿ ಕಾಮದ ಜೊತೆಗೆ ಸಾಮಾನ್ಯವಾಗಿ ಎರಡನೇ ಚಟ ಇರುತ್ತದೆ. ಅದು ಮಾದಕವಸ್ತು ಸೇವನೆ (ಡ್ರಗ್ಸ್) ಅಥವಾ ಕುಡಿತ ಇನ್ನಿತರ ಚಟಗಳು ಆಗಬಹುದು.

ಕಾಮವೇಕೆ ಕೆಲವರಿಗೆ ಚಟವಾಗುತ್ತೆ?

ವೈಜ್ಞಾನಿಕವಾಗಿ ಈ ಕಾಯಿಲೆಗೆ ಅಥವಾ ಲಕ್ಷಣಕ್ಕೆ ಇಂಥದ್ದೇ ಕಾರಣ ಎಂದು ಹೇಳಲು ಆಗುವುದಿಲ್ಲ. ಆದರೆ ಈವರೆಗಿನ ಸಂಶೋಧನೆಗಳ ಪ್ರಕಾರ ಈ ಕೆಳಕಂಡ ಸಂಗತಿಗಳು ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.

1) ಬಾಲ್ಯದ ಘಟನೆಗಳು: ತೀರಾ ಚಿಕ್ಕಂದಿನಲ್ಲಿ ಲೈಂಗಿಕ ಕ್ರಿಯೆಯನ್ನು ನೋಡಿದ್ದಲ್ಲಿ, ಅಥವಾ ಯಾರಿಂದಲಾದರೂ ಲೈಂಗಿಕವಾಗಿ ಬಳಸಲ್ಪಟ್ಟಿದ್ದಲ್ಲಿ ಅಂಥವರು ಬೆಳೆದ ನಂತರ ಕಾಮವನ್ನು ಚಟವಾಗಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

2) ನಿರಾಕರಣೆ: ಯಾರಿಂದಲಾದರೂ ಪ್ರೀತಿ ಅಥವಾ ಕಾಮದ ವಿಚಾರವನ್ನು ಅತಿಯಾಗಿ ಬಯಸಿ, ಅದು ನಿರಾಕರಿಸಲ್ಪಟ್ಟಿದ್ದಲ್ಲಿ ಹೀಗಾಗುತ್ತಾರೆ.

3) ವಂಶವಾಹಿ: ಕೆಲವರಲ್ಲಿ ಜನ್ಮಜಾತವಾಗಿ ಈ ಪಿಪಾಸೆ ಬಂದಿರುತ್ತದೆ. ಅದಕ್ಕೆ ಅವರ ವಂಶವಾಹಿಗಳೂ ಕಾರಣ ಇರಬಹುದು.

4) ಇತರ ಮನೋರೋಗಗಳು: ಕಾಮವು ಅತಿಯಾಗಿ ಕಾಡುವ ಹಂತಕ್ಕೆ, ಇತರರನ್ನು ಬಾಧಿಸುವ ಹಂತಕ್ಕೆ ಬೆಳೆಯಲು ಹಲವು ಮನೋರೋಗಗಳೂ ಕಾರಣವಾಗಬಹುದು. ವ್ಯಕ್ತಿಯನ್ನು ಕ್ರಮಬದ್ಧವಾಗಿ ಮಾತನಾಡಿಸದೇ ನಿರ್ದಿಷ್ಟವಾಗಿ ಇಂಥದ್ದೇ ಕಾರಣ ಎಂದು ಹೇಳುವುದು ಕಷ್ಟ.

ಅತಿಕಾಮ ದೌರ್ಬಲ್ಯದ ಮುಖ್ಯ ಲಕ್ಷಣಗಳು

1) ಹುಚ್ಚು ಕಲ್ಪನೆ: ಲೈಂಗಿಕ ಕ್ರಿಯೆ (ಸೆಕ್ಸ್) ಬಗ್ಗೆ ಅತಿ ಎನಿಸುವಂಥ ಹುಚ್ಚು ಕಲ್ಪನೆಗಳು .

2) ನಿಗ್ರಹಿಸಲು ಅಸಾಧ್ಯ: ಕಾಮದ ಆಸೆಯು ಮನಸ್ಸಿನಲ್ಲಿ ಮೂಡಿದ ತಕ್ಷಣ ಅದನ್ನು ತೀರಿಸಿಕೊಳ್ಳಲು ಮುಂದಾಗುತ್ತಾರೆ. ಕಾಮ ನಿಗ್ರಹ ಅಥವಾ ಮುಂದೂಡುವುದು ಇಂಥವರಿಗೆ ಅಸಾಧ್ಯ.

3) ಆತ್ಮರತಿ ನಿರತರು: ತಮ್ಮನ್ನು ತಾವು ಹೊಗಳಿಕೊಳ್ಳುವುದು, ಮುಷ್ಟಿಮೈಥುನ, ಹಸ್ತಮೈಥುನದ ಮೂಲಕ ತಮ್ಮ ಆಸೆ ತೀರಿಸಿಕೊಳ್ಳುವುದು. ಸದಾ ಕಾಮದ ದೃಶ್ಯಗಳನ್ನು ವರ್ಚುವಲ್ (ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕ ಪಾರ್ನ್ ನೋಡುವುದು) ಆಗಿ ನೋಡುವುದು ಇಂಥವರಲ್ಲಿ ಹೆಚ್ಚು.

4) ಬಹು ಸಂಗಾತಿಗಳು: ಇಂಥವರು ತೀರಾ ಸಹಜ ಎನ್ನುವಂತೆ ಹಲವು ಸಂಗಾತಿಗಳೊಂದಿಗೆ ಕಾಮ ಸಂಬಂಧ ಬೆಳೆಸುತ್ತಾರೆ. ಈ ಪ್ರವೃತ್ತಿಯನ್ನು ವೈಜ್ಞಾನಿಕವಾಗಿ 'ಸೆಕ್ಷುವಲ್ ಪ್ರಾಮಿಸ್‌ಕ್ಯುಟಿ' (sexual promiscuity) ಎಂದು ಕರೆಯುತ್ತಾರೆ.

5) ತಮ್ಮದೇ ಕ್ರಿಯೆಯ ಪುನರಾವರ್ತಿತ ವೀಕ್ಷಣೆ: ತಾವು ಪಾಲ್ಗೊಂಡಿದ್ದ ಲೈಂಗಿಕ ಕ್ರಿಯೆಯನ್ನೇ ರೆಕಾರ್ಡ್ ಮಾಡಿಕೊಂಡು, ಅದನ್ನೇ ಮತ್ತೆಮತ್ತೆ ನೋಡಿ ಉದ್ರೇಕ ಹೊಂದುತ್ತಾರೆ. ಇದು ಕೂಡ ಅತಿಕಾಮ ದೌರ್ಬಲ್ಯದ ಲಕ್ಷಣವೇ ಆಗಿದೆ.

ಅತಿಕಾಮದ ದೌರ್ಬಲ್ಯಕ್ಕೆ ಕಾರಣವಾಗುವ ಕರಾಳ ತ್ರಿವಳಿ ವ್ಯಕ್ತಿತ್ವ ದೋಷಗಳು

ಅತಿಕಾಮದ ದೌರ್ಬಲ್ಯ ಇರುವವರಲ್ಲಿ ಸಾಮಾನ್ಯವಾಗಿ 'ಡಾರ್ಕ್ ಟ್ರಯಾಡ್' ಎನ್ನುವ (ಕರಾಳ ತ್ರಿವಳಿ) ವ್ಯಕ್ತಿತ್ವ ದೋಷಗಳು ಕಾಣಿಸುತ್ತವೆ. ನಾರ್ಸಿಸಿಸ್ಟಿಕ್, ಸೈಕೋಪಾತ್, ಮತ್ತು ಮಾಚಿವೆಲಿಯನಿಸಮ್ ಎನ್ನುವ ವ್ಯಕ್ತಿತ್ವ ದೋಷಗಳನ್ನು ಕರಾಳ ತ್ರಿವಳಿಗಳು ಎಂದು ಕರೆಯುತ್ತಾರೆ. ಪ್ರತ್ಯೇಕ ಪ್ರತ್ಯೇಕವಾಗಿಯೂ ಇವು ಒಬ್ಬನ ವ್ಯಕ್ತಿತ್ವಕ್ಕೆ ಮಸಿಬಳಿಯುತ್ತವೆ. ಆದರೆ ಇದು ಮೂರೂ ಒಬ್ಬನಲ್ಲಿಯೇ ಇದ್ದರೆ? ಅವರ ಹಿಡಿತಕ್ಕೆ ಸಿಕ್ಕವರ ಪರಿಸ್ಥಿತಿ ಊಹಿಸಿಕೊಳ್ಳಿ.

1) ನಾರ್ಸಿಸಿಸ್ಟಿಕ್ (narcissist): ಈ ಸ್ವಭಾವ ಇರುವವರು ತಮ್ಮನ್ನು ಬಿಟ್ಟರೆ ಉಳಿದವರೆಲ್ಲರೂ ನಗಣ್ಯ ಎನ್ನುವಂತೆ ವರ್ತಿಸುತ್ತಾರೆ. ತಮಗೆ ತಾವು ಅತಿಯಾಗಿ ಪ್ರಾಮುಖ್ಯ ಕೊಟ್ಟುಕೊಳ್ಳುತ್ತಾರೆ.

2) ಸೈಕೋಪಾತ್ (psychopath): ಮಾನಸಿಕವಾಗಿ ತಮ್ಮನ್ನು ತಾವು ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಇರುವವರು. ಇವರಿಗೆ ತಾವು ಏನು ಮಾಡುತ್ತಿದ್ದೇವೆ ಎನ್ನುವುದೇ ತಿಳಿಯುವುದಿಲ್ಲ. ಇಂಥವರಿಗೆ ಸುತ್ತಲೂ ಇರುವವರಿಗೆ ವಿಪರೀತ ಹಿಂಸೆಯಾಗುತ್ತದೆ. ಅದನ್ನೂ ಇವರು ನಿರ್ಲಕ್ಷಿಸುತ್ತಾರೆ.

3) ಮಾಚಿವೆಲಿಯನಿಸಮ್ (machiavellianism): ಅಧಿಕಾರಕ್ಕಾಗಿ ಅಥವಾ ತಾವು ಅಂದುಕೊಂಡಿದ್ದು ಸಾಧಿಸಲು, ತಮಗೆ ಬೇಕಾದ್ದನ್ನು ಪಡೆದುಕೊಳ್ಳಲು ಏನು ಬೇಕಾದರೂ ಮಾಡುವ ಮನಃಸ್ಥಿತಿ.

ಈ ಕರಾಳ ತ್ರಿವಳಿಗಳ ಪೈಕಿ 'ಸೈಕೋಪಾತ್' ವ್ಯಕ್ತಿತ್ವದವರಲ್ಲಿಯೇ ಅತಿಕಾಮದ ದೌರ್ಬಲ್ಯ ಹೆಚ್ಚಾಗಿ ಕಾಣಿಸುತ್ತದೆ. ಸೈಕೋಪಾತ್‌ಗಳಿಗೆ ತಮ್ಮ ಮೇಲೆಯೇ, ತಮ್ಮ ನಡವಳಿಕೆ ಮೇಲೆಯೇ ನಿಯಂತ್ರಣ ಇರುವುದಿಲ್ಲ. ಹೀಗಾಗಿ ನೆಗೆಟಿವ್ ಭಾವನೆಗಳೂ ಹೆಚ್ಚು. ಮೇಲಿನ ಮೂರು ವ್ಯಕ್ತಿತ್ವ ದೋಷಗಳೊಂದಿಗೆ 'ಬೈಪೋಲಾರ್ ಡಿಸಾರ್ಡರ್' (ಹಠಾತ್ ಬದಲಾಗುವ ವರ್ತನೆಗಳು) ಸಹ ಅತಿಕಾಮ ದೌರ್ಬಲ್ಯ ಇರುವವರಲ್ಲಿ ಕಾಣಿಸುತ್ತದೆ. ಇಂಥ ವ್ಯಕ್ತಿತ್ವ ದೌರ್ಬಲ್ಯಗಳ ಜೊತೆಗೆ ಕುಡಿತ ಅಥವಾ ಮಾದಕದ್ರವ್ಯ (ಡ್ರಗ್ಸ್) ವ್ಯಸನವೂ ಸಾಮಾನ್ಯವಾಗಿ ಇರುತ್ತದೆ.

ಹಣ, ಯೌವ್ವನ, ಅಧಿಕಾರದ ಮದ

ಅಧಿಕಾರವನ್ನು ಕೆಲವರು ಸೇವೆ ಮಾಡಲು ಸಿಗುವ ಅವಕಾಶ ಎಂದುಕೊಳ್ಳುತ್ತಾರೆ. ಇತರರಿಗೆ ತಮ್ಮಿಂದ ಆದಷ್ಟು ಒಳಿತು ಮಾಡಲು ಪ್ರಯತ್ನಿಸುತ್ತಾರೆ. ಕೆಲವರು ಮಾತ್ರ ಅಧಿಕಾರವನ್ನು ತಮ್ಮ ಎದುರಾಳಿಗಳನ್ನು ತುಳಿಯಲು, ಅಸಹಾಯಕರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಲು, ಶೋಷಿಸಲು ಉಪಯೋಗಿಸುತ್ತಾರೆ. ತಮ್ಮ ಬಳಿ ಸಹಾಯ ಕೇಳಿಕೊಂಡು ಬರುವವರನ್ನೂ ಇಂಥವರು ಬಿಡುವುದಿಲ್ಲ. ಅಧಿಕಾರದ ಜೊತೆಗೆ ಹಣ ಮತ್ತು ಯೌವ್ವನವೂ ಜೊತೆಗಿದ್ದಾಗ ಅವರ ಪಾಪಕೃತ್ಯಗಳಿಗೆ ಮೇರೆಯೇ ಇರುವುದಿಲ್ಲ. ಇದನ್ನು ಮನಃಶಾಸ್ತ್ರದಲ್ಲಿ 'ಅಂಟಾಗೊನಿಸ್ಟಿಕ್ ನಾರ್ಸಿಸಿಸ್ಟಿಕ್' ವ್ಯಕ್ತಿತ್ವ ದೋಷ ಎಂದು ಕರೆಯುತ್ತಾರೆ.

ಇಂಥವರಲ್ಲಿ ವಿಪರೀತ ಅಹಂಕಾರ ಇರುತ್ತದೆ. ಇನ್ನೊಬ್ಬರ ಕಷ್ಟದ ಪರಿಸ್ಥಿತಿಯನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಬೇಕಾದಂತೆ ಯಾವುದೇ ಹಿಂಜರಿಕೆ, ಮುಲಾಜು, ಪಾಪಪ್ರಜ್ಞೆ ಇಲ್ಲದೆ ಬಳಸಿಕೊಳ್ಳುತ್ತಾರೆ. ಆರೋಗ್ಯಕರ ಚರ್ಚೆಗಳಲ್ಲಿ ಇವರಿಗೆ ಆಸಕ್ತಿಯೇ ಇರುವುದಿಲ್ಲ. ಸದಾ ಜಗಳದ ಮನಃಸ್ಥಿತಿ ತುಂಬಿರುತ್ತದೆ.

ಮೇಲಿನ ಮೂರು ವ್ಯಕ್ತಿತ್ವ ದೋಷಗಳೊಂದಿಗೆ ಹಣ, ಯೌವ್ವನ, ಅಧಿಕಾರದ ಮದ ಇರುವವರು ಎಷ್ಟು ಸಂಗಾತಿಗಳೊಂದಿಗೂ ಬೇಕಾದರೂ ದೈಹಿಕ ಸಂಪರ್ಕ ಹೊಂದಬಲ್ಲರು. ಅವರಿಗೆ ಕಷ್ಟವಾದರೂ ಸರಿ, ಈ ಚಟವನ್ನು ಬಿಡಲಾರರು. ಇದೂ ಒಂದು ಮನಃಸ್ಥಿತಿ.

ಸಣ್ಣದರಲ್ಲಿ ಗುರುತಿಸಲು, ತಡೆಯಲು ಸಾಧ್ಯವಿಲ್ಲವೇ

ಇದೀಗ ಹಾಸನದ ಪ್ರಕರಣವನ್ನು ಪ್ರಸ್ತಾಪಿಸಿ ಕೆಲವರು ಇಂಥ ಪ್ರವೃತ್ತಿಯನ್ನು ಸಣ್ಣದರಲ್ಲಿ ಗುರುತಿಸಲು, ಸರಿಪಡಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಮಕ್ಕಳಲ್ಲಿ ಅಥವಾ ಹದಿಹರೆಯದವರಲ್ಲಿ ಇಂಥ ಲಕ್ಷಣಗಳು ಕಂಡು ಬರುತ್ತಿದೆಯೇ ಎಂದು ಪರಿಶೀಲಿಸಬೇಕು.

1) ಓರಗೆಯ ಇನ್ನಿತರ ಮಕ್ಕಳ ಮೇಲೆ ವಿಪರೀತ ಡಾಮಿನೇಟ್ ಮಾಡಲು ಮುಂದಾಗುವ ಪ್ರವೃತ್ತಿ.

2) ವಿಪರೀತ ಸ್ವರತಿಯಲ್ಲಿ (ತಮ್ಮ ಖಾಸಗೀ ಅಂಗಗಳನ್ನು ಪ್ರಚೋದಿಸಿಕೊಳ್ಳುವುದು). ಅತಿಯಾದ ಅಶ್ಲೀಲ ಪದಗಳನ್ನು ಬಳಸುವುದು ಇತ್ಯಾದಿ.

3) ಇಂಥ ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ ಸೈಕೋ ಥೆರಪಿ ಕೊಡಿಸಬೇಕು.

4) ಯೋಗ ಮತ್ತು ಧ್ಯಾನಗಳ ಮೂಲಕ ದೇಹ ಮತ್ತು ಮನಸ್ಸನ್ನು ತಣಿಸುವುದು, ದಣಿಸುವುದು, ಮುದಗೊಳಿಸುವುದು ಸಹ ಅತ್ಯಗತ್ಯ. ಎಷ್ಟೋ ಮಾನಸಿಕ ಸಮಸ್ಯೆಗಳು ಇದರಿಂದ ಪರಿಹಾರವಾಗುತ್ತವೆ.

ಪೋಷಕರ, ಹಿರಿಯರ ಜವಾಬ್ದಾರಿ ಏನು

ಮಕ್ಕಳಲ್ಲಿ ಇಂಥ ಪ್ರವೃತ್ತಿ ಕಂಡು ಬಂದರೆ ಏನು ಮಾಡಬೇಕು ಎನ್ನುವ ಪ್ರಶ್ನೆ ಹಲವರಲ್ಲಿದೆ. ಇಂಥ ಪ್ರಶ್ನೆ ಕೇಳುವವರಲ್ಲಿ ತಮ್ಮ ಮಕ್ಕಳು ಇನ್ನೊಬ್ಬರ ಶೋಷಣೆಯ ವಸ್ತುವಾಗಬಾರದು ಎನ್ನುವ ಕಾಳಜಿಯೂ ಇರುವುದನ್ನು ಗಮನಿಸಿರುವೆ. ಕೆಲವರು ತಮ್ಮ ಮಕ್ಕಳು ಶೋಷಕರಾಗಬಾರದು ಎನ್ನುವ ಎಚ್ಚರದಿಂದ ಕೇಳಿದ್ದಾರೆ.

1) ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಿ. ಅವರು ಕೇಳಿದ್ದೆಲ್ಲ ಕೊಡಿಸಿದರಷ್ಟೇ ನೀವು ಅವರನ್ನು ಪ್ರೀತಿಸುತ್ತಿದ್ದೀರಿ ಎಂದು ಅರ್ಥವಲ್ಲ. ಅದರ ಜೊತೆಗೆ ಅವರ ಗೆಳೆಯರು, ಗೆಳತಿಯರು, ಅವರ ಮೇಲೆ ಯಾವ ವಿಷಯದ ಪ್ರಭಾವ ಯಾರಿಂದ ಆಗುತ್ತಿದೆ, ಅವರ ಆಸಕ್ತಿ ಹಾಗೂ ಕುತೂಹಲ ಎಲ್ಲಿದೆ ಎಂಬುದನ್ನು ಅರಿಯಬೇಕು.

2) ಮಕ್ಕಳಿಗೆ ಆರೋಗ್ಯಕರ ಹಾಗೂ ಅನಾರೋಗ್ಯಕರ ಟಚ್ ಬಗ್ಗೆ ಹೇಳಿಕೊಡಬೇಕು. (ಗುಡ್ ಟಚ್, ಬ್ಯಾಡ್ ಚಟ್)

3) ದೊಡ್ಡವರ ಮೊಬೈಲಿನಲ್ಲಿ ಪಾರ್ನ್ ಚಿತ್ರ ಹಾಗು ವಿಡಿಯೋಗಳಿದ್ದಲ್ಲಿ ಅದನ್ನು ಮಕ್ಕಳ ಕೈಗೆ ಕೊಡಬಾರದು.

4) ದೊಡ್ಡವರು ತಮ್ಮ ಪ್ರವೃತ್ತಿಯ ಮೇಲೆ ನಿಗಾ ಇಟ್ಟುಕೊಳ್ಳಬೇಕು. ಅಶ್ಲೀಲ ವಿಡಿಯೊಗಳನ್ನು ತಾವೂ ನೋಡಬಾರದು. 'ಹಿರಿಯ ನಾಗನ ನಂಜು ಮರಿಯ ನಾಗನ ಪಾಲಿಗೆ' ಅನ್ನುವ ಹಾಗೇ ದೊಡ್ಡವರು ಮಾಡಿದ ತಪ್ಪಿಗೆ ಮಕ್ಕಳು ಚಟದಾಸರಾಗಿ ಹೋಗಬಹುದು.

5) ಸಣ್ಣ ಮಕ್ಕಳು ಅಶ್ಲೀಲ ಪದ ಉಪಯೋಗಿಸಿದರೆ ಖುಷಿ ಪಡುವ ಹೆತ್ತವರನ್ನು ನೋಡಿರುವೆ. ಇದು ತಪ್ಪು. ಇಂಥ ಸಂದರ್ಭದಲ್ಲಿ ಕೂಡಲೇ ಮಗುವಿಗೆ ಅಂತಹ ಪದಗಳ ಬಳಕೆ ತಪ್ಪು ಎಂದು ಹೇಳಿಕೊಡಬೇಕು.

6) ಯೋಗ, ಧ್ಯಾನ, ಆಟ, ದೈಹಿಕ ಶ್ರಮ, ನೈತಿಕ ಮೌಲ್ಯಗಳು, ಉತ್ತಮ ಚಿಂತನೆ ಹಾಗೂ ಉತ್ತಮ ಹವ್ಯಾಸಗಳನ್ನು ಮಕ್ಕಳಲ್ಲಿ ಬೆಳೆಸಬೇಕು .

7) ಮಕ್ಕಳು ಹತ್ತುಹನ್ನೊಂದು ವಯಸ್ಸಿಗೆ ಬರುತ್ತಿದ್ದಂತೆ ಮಡಿವಂತಿಕೆ ಇಲ್ಲದೆ, ಹಾಗೆಯೇ ಅಪಾಯಕಾರಿಯಲ್ಲದ ಭಾಷೆಯಲ್ಲಿ ಮುಕ್ತವಾಗಿ ಲೈಂಗಿಕ ಶಿಕ್ಷಣದ ಮಾಹಿತಿ ಕೊಡಬೇಕು.

ಕಾಮಾಪರಾಧಿಗಳನ್ನು ಸಮಾಜ ಹೇಗೆ ನಿರ್ವಹಿಸಬೇಕು

ಕಾಮದ ವಿಚಾರದಲ್ಲಿ ಪರಸ್ಪರ ಒಪ್ಪಿಗೆ ಇದ್ದಾಗ ನೈತಿಕಯ ಪ್ರಶ್ನೆ ಬಿಟ್ಟರೆ ಇತರ ಸಮಸ್ಯೆಗಳು ಹೆಚ್ಚು ಇರುವುದಿಲ್ಲ. ಆದರೆ ಅತಿಕಾಮವು ಸ್ವತಃ ಅಂಥ ವ್ಯಕ್ತಿಗೆ ಹಾಗೂ ಸುತ್ತಲೂ ಇರುವವರಿಗೆ ಕಾಡುವ ಪಿಡುಗಾಗಿ ಪರಿವರ್ತನೆಯಾದರೆ ಅದು ಅಪಾಯ. ಅಂಥ ಅರ್ಜ್ (ನಿಯಂತ್ರಣವಿಲ್ಲದ ಆಸೆ) ಇರುವವರು ತಮ್ಮ ಸಮೀಪದಲ್ಲಿರುವ ಯಾರನ್ನು ಬೇಕಾದರೂ ಲೈಂಗಿಕವಾಗಿ ಬಳಸಿಕೊಳ್ಳಬಲ್ಲರು. ದುರ್ಬಲರನ್ನು ಲೈಂಗಿಕವಾಗಿ ಶೋಷಿಸಬಲ್ಲರು. ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡು ತಮ್ಮ ಸುಖ ತೀರಿಸಿಕೊಳ್ಳುವುದು ಇಂಥವರ ಪ್ರವೃತ್ತಿ. ಇದನ್ನು ಕ್ಷಮಿಸುವುದು, ಅಂಥವರ ಅಧಿಕಾರ ಗೌರವಿಸುವುದು ಅಥವಾ ಪ್ರಭಾವಕ್ಕೆ ಮಣಿಯುವುದು ಸಮಾಜದ ಆರೋಗ್ಯಕ್ಕೆ ಮಾರಕ. ಇಂಥ ಕ್ರೂರಿಗಳಿಗೆ ಮಾನವೀಯ ದೃಷ್ಟಿಯಿಂದ ಉತ್ತಮ ಮಾನಸಿಕ ಚಿಕಿತ್ಸೆ ಕೊಡಿಸಬೇಕು. ಅದರೆ ಜೊತೆಗೆ ಮಾಡಿರುವ ಅಪರಾಧ ಕೃತ್ಯಗಳ ಸಮರ್ಪಕ ವಿಚಾರಣೆ ನಡೆಸಿ, ಕಾನೂನು ಪ್ರಕಾರ ಕಠಿಣ ಶಿಕ್ಷೆಯನ್ನೂ ನಮ್ಮ ನ್ಯಾಯದಾನ ವ್ಯವಸ್ಥೆ ಕೊಡಬೇಕು.

ಕಾಳಜಿ ಅಂಕಣ. ಡಾ ರೂಪಾ ರಾವ್
ಕಾಳಜಿ ಅಂಕಣ. ಡಾ ರೂಪಾ ರಾವ್

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

mysore-dasara_Entry_Point