ಕನ್ನಡ ಸುದ್ದಿ  /  ಕರ್ನಾಟಕ  /  ಸಂಪಾದಕೀಯ: ತಲೆಮರೆಸಿಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ ಹಗರಣದ ಸಂತ್ರಸ್ತೆಯರು, ವ್ಯವಸ್ಥೆಯ ಮೇಲೆ ಭರವಸೆ ಹುಟ್ಟುವುದು ಸುಲಭವಲ್ಲ

ಸಂಪಾದಕೀಯ: ತಲೆಮರೆಸಿಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ ಹಗರಣದ ಸಂತ್ರಸ್ತೆಯರು, ವ್ಯವಸ್ಥೆಯ ಮೇಲೆ ಭರವಸೆ ಹುಟ್ಟುವುದು ಸುಲಭವಲ್ಲ

Editorial: ಸಹಾಯ ಕೇಳಿಕೊಂಡು ಬಂದವರಿಗೆ ಬಂದೂಕು ತೋರಿಸಿ ಅತ್ಯಾಚಾರ ಎಸಗಿದ ಆರೋಪಿಯ ಬಗ್ಗೆ ದಾಕ್ಷಿಣ್ಯ ತೋರಿದರೆ ಅದು ಕರ್ನಾಟಕದ ಇತಿಹಾಸದಲ್ಲಿಯೇ ಕಪ್ಪುಚುಕ್ಕೆಯಾಗಿ ಉಳಿಯುತ್ತದೆ. ಅಪರಾಧಿಗೆ ಶಿಕ್ಷೆಯಾಗದಿದ್ದರೆ ಭವಿಷ್ಯದ ತಲೆಮಾರುಗಳು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ.

ಹಾಸನದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ಹಗರಣದ ಸಂತ್ರಸ್ತರು ತಲೆಮರೆಸಿಕೊಳ್ಳುತ್ತಿದ್ದು, ನ್ಯಾಯದಾನ ವ್ಯವಸ್ಥೆಯ ಬಗ್ಗೆ ಅವರಲ್ಲಿ ಭರವಸೆ ಹುಟ್ಟಿಸುವ ಕೆಲಸ ಆಗಬೇಕಿದೆ -ಸಂಪಾದಕೀಯ
ಹಾಸನದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ಹಗರಣದ ಸಂತ್ರಸ್ತರು ತಲೆಮರೆಸಿಕೊಳ್ಳುತ್ತಿದ್ದು, ನ್ಯಾಯದಾನ ವ್ಯವಸ್ಥೆಯ ಬಗ್ಗೆ ಅವರಲ್ಲಿ ಭರವಸೆ ಹುಟ್ಟಿಸುವ ಕೆಲಸ ಆಗಬೇಕಿದೆ -ಸಂಪಾದಕೀಯ (ANI)

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತನಿಖೆ ಚುರುಕಾಗಿದೆ. ಆದರೆ ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಸಂತ್ರಸ್ತೆಯರು 'ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ' ಎಂದು ಪೊಲೀಸರಲ್ಲಿ ಗೋಗರೆಯುತ್ತಿರುವುದು, ತಲೆಮರೆಸಿಕೊಳ್ಳಲು ಪ್ರಯತ್ನಿಸುತ್ತಿರುವ ವ್ಯವಸ್ಥೆಯ ಬಗ್ಗೆ ಸಮಾಜ ಎಷ್ಟು ಅಪನಂಬಿಕೆ ಹೊಂದಿದೆ ಎನ್ನುವುದಕ್ಕೆ ಸಾಕ್ಷಿ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯನ್ನೇ ಅಪರಾಧಿಯಂತೆ ಬಿಂಬಿಸುವುದು, ಆಕೆಯ ನಡವಳಿಕೆಯಲ್ಲಿಯೇ ದೋಷ ಹುಡುಕುವುದು ನಮ್ಮ ಸಮಾಜದ ದೊಡ್ಡ ಪಿಡುಗು. ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ಅನುಭವಿಸುವ ಹಿಂಸೆಗಿಂತಲೂ ನಂತರ ಸಮಾಜ ಕೊಡುವ ಹಿಂಸೆ ಸಂತ್ರಸ್ತರನ್ನು ಹೈರಾಣಾಗಿಸುತ್ತದೆ. ಇದೀಗ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಇದು ಮರುಕಳಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಸಂತ್ರಸ್ತೆಯರಿಗೆ ರಕ್ಷಣೆಯ ಭರವಸೆ ಕೊಡುವುದರೊಂದಿಗೆ 'ನಿಮ್ಮೊಂದಿಗೆ ನಾವಿದ್ದೇವೆ' ಎನ್ನುವ ಅಭಯವನ್ನೂ ಅಧಿಕಾರದಲ್ಲಿರುವವರು ಕೊಡಬೇಕಿದೆ. ಕೆಲವು ಸಂದರ್ಭದಲ್ಲಿ ಕೆಲ ಮಾತನ್ನು ಬಾಯಿಬಿಟ್ಟು ಆಡಲೇಬೇಕು, ಆಡಿದಂತೆ ನಡೆದುಕೊಳ್ಳಬೇಕು, ಸೂಕ್ತ ಉದಾಹರಣೆಗಳ ಮೇಲ್ಪಂಕ್ತಿ ಹಾಕಿಕೊಡದಿದ್ದರೆ ವ್ಯವಸ್ಥೆಯ ಬಗ್ಗೆ ಸರ್ಕಾರದ ಬಗ್ಗೆ ಸಂತ್ರಸ್ತ ಮಹಿಳೆಯರಿಗೆ ಭರವಸೆ ಮೂಡುವುದಿಲ್ಲ.

ಕರ್ನಾಟಕದ ಪ್ರಮುಖ ರಾಜಕಾರಿಣಿ ಎನಿಸಿದ್ದ ಎಚ್‌.ಡಿ.ರೇವಣ್ಣ ಇದೀಗ ಬಂಧನದಲ್ಲಿದ್ದಾರೆ. ಮುಖ್ಯ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ನೊಟೀಸ್ ಹೊರಡಿಸಲಾಗಿದೆ. ತನಿಖೆ ಚುರುಕುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್‌ಐಟಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ವಿಚಾರದಲ್ಲಿ ನಮ್ಮದು ಕಠಿಣ ನಿಲುವು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರಬರೆದಿದ್ದಾರೆ. ಈ ಪತ್ರದಲ್ಲಿ ಅವರು ದೇವರಾಜೇಗೌಡ ಮತ್ತು ಅಮಿತ್ ಶಾ ಅವರನ್ನೂ ಉಲ್ಲೇಖಿಸಿದ್ದಾರೆ.

'ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಅವರು 2023ರ ಡಿಸೆಂಬರ್‌ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದರು. ಪ್ರಜ್ವಲ್‌ ಅವರಿಂದ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆದಿರುವ ಮಾಹಿತಿ ಈ ಪತ್ರದಲ್ಲಿತ್ತು. ಈ ಮಾಹಿತಿಯಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಸಾಮೂಹಿಕ ಅತ್ಯಾಚಾರಿಯ ಪರ ಮತ ಯಾಚಿಸಿರುವುದು ಆಘಾತಕಾರಿ ವಿಚಾರ. ಕೇಂದ್ರ ಸರ್ಕಾರವು ಪ್ರಜ್ವಲ್‌ ವಿದೇಶಕ್ಕೆ ಪರಾರಿಯಾಗಲು ಸಹಕಾರ ನೀಡಿದೆ. ಆರೋಪಿಯನ್ನು ರಕ್ಷಿಸುತ್ತಿರುವ ಪ್ರಧಾನಿ ಮತ್ತು ಗೃಹ ಸಚಿವರನ್ನು ಕಟುವಾಗಿ ಖಂಡಿಸಬೇಕಿದೆ' ಎನ್ನುವ ಸಾಲುಗಳ ಜೊತೆಗೆ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯವ ವಿಚಾರವೂ ರಾಹುಲ್ ಗಾಂಧಿ ಅವರ ಪತ್ರದಲ್ಲಿದೆ.

ಚುನಾವಣೆ ಸಂದರ್ಭದಲ್ಲಿ ಏನು ಮಾಡಿದರೂ ಅದಕ್ಕೆ ರಾಜಕೀಯ ಬಣ್ಣ ಬರುವುದು ಸಹಜ. ಆದರೆ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ರಾಜಕೀಯ ಸಂಗತಿಗಳನ್ನು ಉಲ್ಲೇಖಿಸುವ ಅಗತ್ಯ ಇರಲಿಲ್ಲ. ಈ ಸಾಲುಗಳು ಪತ್ರ ಬರೆದ ಉದ್ದೇಶದಲ್ಲಿಯೇ ರಾಜಕೀಯ ಹಿತಾಸಕ್ತಿ ಇರುವ ಅನುಮಾನ ಮೂಡಿಸುತ್ತದೆ.

ಎಸ್‌ಐಟಿ ರಚಿಸಿ ಅಧಿಕಾರಿಗಳು ಕಠಿಣವಾಗಿ ವರ್ತಿಸುವಂತೆ ಸೂಚನೆ ನೀಡಿರುವ ಸಿದ್ದರಾಮಯ್ಯ ಸರಿಯಾದ ಹೆಜ್ಜೆ ಇಟ್ಟಿದ್ದಾರೆ. ಎಚ್‌.ಡಿ.ರೇವಣ್ಣ ಬಂಧನ, ಅಪಹೃತ ಸಂತ್ರಸ್ತೆಯ ರಕ್ಷಣೆಯಿಂದಾಗಿ ಕರ್ನಾಟಕ ಪೊಲೀಸರು ಈ ಪ್ರಕರಣದಲ್ಲಿ ನಿರ್ದಾಕ್ಷಿಣ್ಯವಾಗಿ ವರ್ತಿಸಬಲ್ಲರು. ಸಂತ್ರಸ್ತರಿಗೆ ನ್ಯಾಯ ದೊರಕಿಸಲು ನೆರವಾಗಬಲ್ಲರು ಎನ್ನುವ ಭರವಸೆ ಮೂಡಿಸಿದ್ದಾರೆ. ಆಗಿರುವುದು ಘೋರ ಅನ್ಯಾಯ, ಸಹಾಯ ಕೇಳಿಕೊಂಡು ಬಂದವರಿಗೆ ಬಂದೂಕು ತೋರಿಸಿ ಅತ್ಯಾಚಾರ ಎಸಗಿದ ಆರೋಪಿಯ ಬಗ್ಗೆ ದಾಕ್ಷಿಣ್ಯ ತೋರಿದರೆ ಅದು ಕರ್ನಾಟಕದ ಇತಿಹಾಸದಲ್ಲಿಯೇ ಕಪ್ಪುಚುಕ್ಕೆಯಾಗಿ ಉಳಿಯುತ್ತದೆ. ಭವಿಷ್ಯದ ತಲೆಮಾರುಗಳೂ ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ.

ರಾಜಕಾರಿಣಿಗಳು ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ತನಿಖೆಯ ವಿಚಾರದಲ್ಲಿ ರಾಜಕೀಯ ಎಂದಿಗೂ ಬೆರೆಸಬಾರದು. ಇಂಥ ಬೆಳವಣಿಗೆಗಳು ಒಟ್ಟಾರೆ ಅಪರಾಧದ ಸ್ವರೂಪಕ್ಕೆ ಬೇರೆಯೇ ಬಣ್ಣ ಕೊಡುತ್ತದೆ. ಇದು ರಾಜಕೀಯ ಮೇಲಾಟಕ್ಕೆ ಸಂದರ್ಭವಲ್ಲ. ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ನೀಡುವುದು, ಅಪರಾಧ ನಿರೂಪಿಸಿ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡುವ ಮೂಲಕ ಕರ್ನಾಟಕದ ಘನತೆ ಎತ್ತಿ ಹಿಡಿಯಲು ರಾಜಕಾರಣ ಅಡ್ಡಿಯಾಗದಿರಲಿ.

IPL_Entry_Point