Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?
What Is Diplomatic Passport: ಸಂಸದ ಪ್ರಜ್ವಲ್ ರೇವಣ್ಣ ಸುಲಭವಾಗಿ ಭಾರತದಿಂದ ವಿದೇಶಕ್ಕೆ ಪಲಾಯನ ಮಾಡಿದರು. ರಾಜತಾಂತ್ರಿಕ ಪಾಸ್‌ಪೋರ್ಟ್ ನೆರವಿಂದ ಅವರು ಸುಲಭವಾಗಿ ಭಾರತದಿಂದ ತಲೆಮರೆಸಿಕೊಂಡಿದ್ದಾರೆ. ಹಾಗಿದ್ದರೆ ಈ ಪಾಸ್‌ಪೋರ್ಟ್ ವಿಶೇಷಗಳೇನು ಎಂಬುದನ್ನು ತಿಳಿಯಿರಿ.
ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ರಾಜ್ಯ ಬಿಜೆಪಿ ಮುಖಂಡ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಬಂಧನದ ಭೀತಿಯಿಂದ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಭಾರತ ಬಿಟ್ಟು ವಿದೇಶಕ್ಕೆ ಹಾರಲು ಸಂಸದ ಬಳಸಿದ್ದು ರಾಜತಾಂತ್ರಿಕ ಪಾಸ್‌ಪೋರ್ಟ್, ಅಂದರೆ Diplomatic passport. ಇತ್ತ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಹೀಗಾಗಿ ಕಾನೂನು ರೀತಿಯಲ್ಲಿ ತನಿಖೆ ಎದುರಿಸಲು ರೇವಣ್ಣ ಅವರನ್ನು ಮರಳಿ ಭಾರತಕ್ಕೆ ಕರೆತರಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಅಲ್ಲದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.
ಪಲಾಯನ ಮಾಡಲು ರೇವಣ್ಣ ಬಳಸಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಪ್ರಧಾನಿ ಮೋದಿ ಅವರನ್ನು ಸಿಎಂ ಒತ್ತಾಯಿಸಿದ್ದಾರೆ. ಅಂತಾರಾಷ್ಟ್ರೀಯ ಪೊಲೀಸ್ ಏಜೆನ್ಸಿಗಳನ್ನು ಬಳಸಿಕೊಂಡು ತಲೆಮರೆಸಿಕೊಂಡಿರುವ ಸಂಸದರನ್ನು ತ್ವರಿತವಾಗಿ ಭಾರತಕ್ಕೆ ಕರೆತರಲು ಒತ್ತಾಯಿಸಿದ್ದಾರೆ.
ಹಾಗಿದ್ದರೆ, ಪ್ರಜ್ವಲ್ ರೇವಣ್ಣ ವಿದೇಶ ಪಲಾಯನಕ್ಕೆ ಇಷ್ಟು ಸುಲಭ ಅವಕಾಶ ಮಾಡಿಕೊಟ್ಟ ರಾಜತಾಂತ್ರಿಕ ಪಾಸ್‌ಪೋರ್ಟ್ ಎಂದರೆ ಏನು? ಅದನ್ನು ಪಡೆಯೋದು ಹೇಗೆ? ಈ ಪಾಸ್‌ಪೋರ್ಟ್ ಇರುವವರ ಅಧಿಕಾರಗಳು ಯಾವುವು ಎಂಬುದನ್ನು ತಿಳಿಯೋಣ.
ರಾಜತಾಂತ್ರಿಕ ಪಾಸ್‌ಪೋರ್ಟ್ ಎಂದರೆ…
'ಟೈಪ್ ಡಿ' ಪಾಸ್‌ಪೋರ್ಟ್ ಎಂದೂ ಕರೆಯಲಾಗುವ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಭಾರತೀಯ ರಾಜತಾಂತ್ರಿಕರು, ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರದ ಪರವಾಗಿ ಅಧಿಕೃತ ಪ್ರಯಾಣವನ್ನು ಕೈಗೊಳ್ಳಲು ಅಧಿಕಾರ ಪಡೆಯುವ ಆಯ್ದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಸಂಸದರಾಗಿರುವ ಕಾರಣದಿಂದ ಪ್ರಜ್ವಲ್ ರೇವಣ್ಣ ಅವರು ತಮ್ಮ ಸಾಮಾನ್ಯ ಪಾಸ್‌ಪೋರ್ಟ್ ಜೊತೆಗೆ ರಾಜತಾಂತ್ರಿಕ ಪಾಸ್‌ಪೋರ್ಟ್‌ಗೆ ಅರ್ಹರಾಗಿದ್ದಾರೆ. ಜನಸಾಮಾನ್ಯರಿಗೆ ನೀಡುವ ನೀಲಿ (ಕಪ್ಪು ಬಣ್ಣದಂತೆ ಕಾಣುವ ಗಾಢ ನೀಲಿ) ಬಣ್ಣದ ಪಾಸ್‌ಪೋರ್ಟ್‌ಗೆ ಹೋಲಿಸಿದರೆ ರಾಜತಾಂತ್ರಿಕ ಪಾಸ್‌ಪೋರ್ಟ್‌ನ ಮರೂನ್ ಬಣ್ಣದ್ದಾಗಿರುತ್ತದೆ.
28 ಪುಟ, 5 ವರ್ಷ ಮಾನ್ಯತೆ
ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ನಲ್ಲಿ 28 ಪುಟಗಳಿರುತ್ತದೆ. ಸಾಮಾನ್ಯ ಪಾಸ್‌ಪೋರ್ಟ್ ವಯಸ್ಕರಿಗೆ 10 ವರ್ಷಗಳವರೆಗೆ ಮತ್ತು ಅಪ್ರಾಪ್ತರಿಗೆ ಐದು ವರ್ಷಗಳವರೆಗೆ ಮಾನ್ಯವಾಗಿದ್ದರೆ, ರಾಜತಾಂತ್ರಿಕ ಪಾಸ್‌ಪೋರ್ಟ್ 5 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ಮಾತ್ರ ನೀಡಲಾಗುತ್ತದೆ. ಪಾಸ್‌ಪೋರ್ಟ್ ಹೊಂದಿರುವವರ ಸ್ಥಾನದ ಮೇಲೆ ಅವಧಿ ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ | Hassan Scandal; ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ಧ ಮತ್ತೊಂದು ಕೇಸ್; ಮನೆಗೆಲಸಕ್ಕೆ ಹೋಗಿದ್ದ ಮಹಿಳೆ ನಾಪತ್ತೆ
ರಾಜತಾಂತ್ರಿಕ ಪಾಸ್‌ಪೋರ್ಟ್ ಕೈಯಲ್ಲಿದ್ದರೂ, ನಿಯಮಗಳ ಪ್ರಕಾರ ಅಧಿಕೃತ ಅಥವಾ ಖಾಸಗಿ ಉದ್ದೇಶದಿಂದ ವಿದೇಶ ಪ್ರಯಾಣ ಮಾಡುವ ಮುನ್ನ ರಾಜಕೀಯ ಕ್ಲಿಯರೆನ್ಸ್‌ಗೆ ಅರ್ಜಿ ಸಲ್ಲಿಸಿರಬೇಕು.
ಅಧಿಕೃತ ಪಾಸ್‌ಪೋರ್ಟ್‌ಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
- ರಾಜತಾಂತ್ರಿಕ ಸ್ಥಾನಮಾನ ಹೊಂದಿರುವ ವ್ಯಕ್ತಿಗಳು.
- ಅಧಿಕೃತ ವ್ಯವಹಾರಗಳ ಸಲುವಾಗಿ ವಿದೇಶಗಳಿಗೆ ಪ್ರಯಾಣಿಸಲು ಭಾರತೀಯ ಸರ್ಕಾರವು ನೇಮಿಸಿದ ವ್ಯಕ್ತಿಗಳು.
- ಭಾರತೀಯ ವಿದೇಶಿ ಸೇವೆಗಳು (IFS) ಶಾಖೆಯ A ಮತ್ತು B ಶಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು.
- ಭಾರತೀಯ ವಿದೇಶಾಂಗ ಸೇವೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಉದ್ಯೋಗದಲ್ಲಿರುವ ಅಧಿಕಾರಿಗಳ ಸಂಬಂಧಿಕರು ಮತ್ತು ಕುಟುಂಬದ ಸದಸ್ಯರು ಶಿಕ್ಷಣ ಅಥವಾ ವ್ಯವಹಾರದಂಥ ಉದ್ದೇಶಗಳಿಗಾಗಿ ವಿದೇಶಕ್ಕೆ ಪ್ರಯಾಣಿಸಲು ಈ ಪಾಸ್‌ಪೋರ್ಟ್ ಪಡೆಯಬಹುದು.
- ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಗಳು.
ರಾಜತಾಂತ್ರಿಕ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಹೇಗೆ?
ಸರ್ಕಾರದ ನಿಯಮಗಳ ಪ್ರಕಾರ, ಅಧಿಕೃತ ಪಾಸ್‌ಪೋರ್ಟ್ ಪಡೆಯಲು ಸಾಮಾನ್ಯವಾಗಿ ದೆಹಲಿಯ ಪಟಿಯಾಲ ಹೌಸ್‌ನಲ್ಲಿರುವ ವಿದೇಶಾಂಗ ಸಚಿವಾಲಯದ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ (ಪಿಎಸ್‌ಪಿ) ವಿಭಾಗದಲ್ಲಿ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತದೆ. ಆದರೂ, ಅರ್ಜಿದಾರರ ವಿಳಾಸಕ್ಕೆ ಬರುವ ಪಾಸ್‌ಪೋರ್ಟ್ ಕಚೇರಿಯಲ್ಲಿ ಅರ್ಜಿ ಸಲ್ಲಿಸು ಆಯ್ಕೆಯೂ ಇದೆ.
ಪ್ರಯೋಜನಗಳೇನು?
ಭಾರತ ಸರ್ಕಾರವನ್ನು ಪ್ರತಿನಿಧಿಸುವ ವ್ಯಕ್ತಿಗಳಿಗೆ ಇದು ಅಧಿಕೃತ ಗುರುತಿನ ದಾಖಲೆಯಂತೆ ಕಾರ್ಯನಿರ್ವಹಿಸುತ್ತದೆ. ಈ ಪಾಸ್‌ಪೋರ್ಟ್ ಹೊಂದಿರುವ ವ್ಯಕ್ತಿಗಳು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಕೆಲವೊಂದು ವಿಶೇಷ ಸವಲತ್ತುಗಳು ಮತ್ತು ವಿನಾಯಿತಿಗಳಿಗೆ ಅರ್ಹರಾಗಿರುತ್ತಾರೆ. ಇದೇ ವೇಳೆ ಪಾಸ್‌ಪೋರ್ಟ್ ಹೊಂದಿರುವ ದೇಶದಲ್ಲಿ ಎದುರಾಗುವ ಬಂಧನ ಮತ್ತು ಕೆಲವು ಕಾನೂನು ಪ್ರಕ್ರಿಯೆಗಳಿಂದ ವಿನಾಯಿತಿ ಕೂಡಾ ಪಡೆಯಲು ಸಾಧ್ಯವಾಗುತ್ತದೆ.
ಹಲವು ದೇಶಗಳು ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತವೆ. ಕೆಲವೊಮ್ಮೆ ವೀಸಾ ಇಲ್ಲದೆಯೂ ಪ್ರವೇಶ ನೀಡುತ್ತವೆ. ವಿಮಾನ ನಿಲ್ದಾಣಗಳಲ್ಲಿಯೂ ಅವರೂ ಹೆಚ್ಚುವರಿ ತಪಾಸಣೆಯಿಲ್ಲದೆ ಮುಂದುವರೆಯಬಹುದು. ಹೀಗಾಗಿ ಇದು ಪ್ರಯಾಣದ ವ್ಯವಸ್ಥೆಗಳನ್ನು ಸರಳ ಮತ್ತು ಸುಗಮಗೊಳಿಸುತ್ತದೆ. ಈ ಪಾಸ್‌ಪೋರ್ಟ್ ಭಾರತೀಯ ಸರ್ಕಾರದ ಅಧಿಕೃತ ಪ್ರಾತಿನಿಧ್ಯವನ್ನು ಸೂಚಿಸುತ್ತದೆ.
ಸಂಸದರ ನಿಯಮ ಹೇಳುವುದೇನು?
ವಿದೇಶಾಂಗ ಇಲಾಖೆಯ ಪಾಸ್‌ಪೋರ್ಟ್ ಮತ್ತು ವೀಸಾ ವಿಭಾಗವು ಸಂಸದರಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡುತ್ತದೆ. ರಾಜ್ಯಸಭಾ ಸೆಕ್ರೆಟರಿಯೇಟ್ ಹೊರಡಿಸಿದ ಬುಲೆಟಿನ್ ಪ್ರಕಾರ, “ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸುವ ಸದಸ್ಯರು, www.epolclearance.gov.in ಮೂಲಕ ನೇರವಾಗಿ ವಿದೇಶಾಂಗ ಸಚಿವಾಲಯಕ್ಕೆ ಪೂರ್ವ ರಾಜಕೀಯ ಕ್ಲಿಯರೆನ್ಸ್‌ಗಾಗಿ ಅರ್ಜಿ ಸಲ್ಲಿಸಬೇಕು. ಅಲ್ಲದೆ ವಿದೇಶಕ್ಕೆ ತೆರಳುವ ಮೊದಲು ಅಗತ್ಯವಾದ ರಾಜಕೀಯ ಅನುಮತಿಯನ್ನು ಪಡೆಯಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರವಾಸ ಅಥವಾ ಸ್ನೇಹಿತರ ಭೇಟಿಯಂಥ ಖಾಸಗಿ ಭೇಟಿಗಳಿಗೆ ಈ ನಿಯಮವು ಅನ್ವಯಿಸುತ್ತದೆ. ಒಂದು ವೇಳೆ ಅಧಿಕೃತ ಭೇಟಿಯಾದರೆ, ವಿದೇಶಾಂಗ ಇಲಾಖೆಯಿಂದ ರಾಜಕೀಯ ಅನುಮತಿ ಪಡೆಯಬೇಕಾಗುತ್ತದೆ.
ಪಾಸ್‌ಪೋರ್ಟ್ ರದ್ದು ಆಗುತ್ತಾ?
ಹೌದು. ಪಾಸ್‌ಪೋರ್ಟ್ ಕಾಯಿದೆಯ ಪ್ರಕಾರ, ಪಾಸ್‌ಪೋರ್ಟ್ ಪ್ರಾಧಿಕಾರವು ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಪಾಸ್‌ಪೋರ್ಟ್ ಅಥವಾ ಪ್ರಯಾಣದ ದಾಖಲೆಯನ್ನು ರದ್ದುಗೊಳಿಸಬಹುದು. ಪಾಸ್‌ಪೋರ್ಟ್ ಹೊಂದಿರುವವರ ಪ್ರಯಾಣದ ದಾಖಲೆ ಸರಿಯಿಲ್ಲ ಎಂದು ಪ್ರಾಧಿಕಾರಕ್ಕೆ ತಿಳಿದುಬಂದರೆ, ಪ್ರಾಧಿಕಾರವು ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳಬಹುದು.