ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ ಅರಣ್ಯಕಾಂಡ: ಆಸೆ ಹುಟ್ಟಿಸಿದ ಮಾಯಾಜಿಂಕೆಗೆ ಮನಸೋತ ಸೀತೆ, ವಿಯೋಗದ ದುಃಖದಲ್ಲಿ ಕುಸಿದ ಶ್ರೀರಾಮ -ಶ್ರೀರಾಮನವಮಿ ವಿಶೇಷ

ರಾಮಾಯಣ ಅರಣ್ಯಕಾಂಡ: ಆಸೆ ಹುಟ್ಟಿಸಿದ ಮಾಯಾಜಿಂಕೆಗೆ ಮನಸೋತ ಸೀತೆ, ವಿಯೋಗದ ದುಃಖದಲ್ಲಿ ಕುಸಿದ ಶ್ರೀರಾಮ -ಶ್ರೀರಾಮನವಮಿ ವಿಶೇಷ

ರಾಮಾಯಣದಲ್ಲಿ ಅರಣ್ಯಕಾಂಡದ ಮಹತ್ವ: ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರ ವನವಾಸದ ಜೀವನವನ್ನು ಅರಣ್ಯಕಾಂಡದಲ್ಲಿ ಚಿತ್ರಿಸಲಾಗಿದೆ. ಈ ಸಮಯದಲ್ಲಿ ಅವರು ಪಟ್ಟ ಕಷ್ಟಗಳು ಹಲವು. ಸೀತೆಯ ಅಪಹರಣದವರೆಗೂ ಈ ಭಾಗದಲ್ಲಿ ಕತೆಯು ಸಾಗುತ್ತದೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)

ಅರಣ್ಯಕಾಂಡ: ಆಸೆ ಹುಟ್ಟಿಸಿದ ಮಾಯಾಜಿಂಕೆಗೆ ಮನಸೋತ ಸೀತೆ, ವಿಯೋಗದ ದುಃಖದಲ್ಲಿ ಕುಸಿದ ಶ್ರೀರಾಮ
ಅರಣ್ಯಕಾಂಡ: ಆಸೆ ಹುಟ್ಟಿಸಿದ ಮಾಯಾಜಿಂಕೆಗೆ ಮನಸೋತ ಸೀತೆ, ವಿಯೋಗದ ದುಃಖದಲ್ಲಿ ಕುಸಿದ ಶ್ರೀರಾಮ (Image Courtesy: Wikimedia Commons)

ಅರಣ್ಯಕಾಂಡದ ಕಥೆ: ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾಗಿ ಸಕಲ ವೈಭೋಗ ಅನುಭವಿಸಬೇಕಿದ್ದ ಶ್ರೀರಾಮನು ಪಿತೃವಾಕ್ಯ ಪರಿಪಾಲನೆಯ ಸಂಕಲ್ಪ ಮಾಡಿ ಕಾಡಿಗೆ ಬರುತ್ತಾನೆ. ಅವನೊಂದಿಗೆ ಹೆಂಡತಿ ಸೀತೆ ಮತ್ತು ತಮ್ಮ ಲಕ್ಷ್ಮಣರೂ ಕಾಡು ಸೇರುತ್ತಾರೆ. ಋಷಿಗಳ ಮಾತಿನಂತೆ ಚಿತ್ರಕೂಟದ ಕಡೆ ಪ್ರಯಾಣ ಬೆಳೆಸುತ್ತಾರೆ. ದಶರಥ ಮಹಾರಾಜನು ಪುತ್ರ ವಿಯೋಗದ ಕೊರಗಿನಲ್ಲಿಯೇ ಪ್ರಾಣತ್ಯಾಗ ಮಾಡುತ್ತಾನೆ. ದೀರ್ಘಕಾಲದ ಪ್ರಯಾಣದಲ್ಲಿ ಇದ್ದ ಭರತನು ಶತ್ರುಘ್ನನ ಒಡಗೂಡಿ ಮರಳಿ ಅಯೋಧ್ಯೆಗೆ ಬರುತ್ತಾನೆ. ಇಡೀ ಅಯೋಧ್ಯಾ ನಗರಿಯಲ್ಲಿ ಶೋಕ ಮತ್ತು ಮೌನ ಮನೆ ಮಾಡಿರುತ್ತದೆ. ಇದರಿಂದ ಆತಂಕಗೊಂಡ ಭರತನು ಎದುರಾದ ಜನರನ್ನು ಆದ ಅನಾಹುತದ ಬಗ್ಗೆ ಕೇಳುತ್ತಾನೆ.

ಕೊನೆಗೆ ತಾಯಿಯಾದ ಕೈಕೇಯಿಯಿಂದ ತಂದೆಯ ಮರಣದ ವಿಚಾರವು ತಿಳಿಯುತ್ತದೆ. ಹಾಗೆಯೇ ಮಗನಿಗೆ ಧೈರ್ಯ ತುಂಬುವ ಪ್ರಯತ್ನವನ್ನು ಮಾಡುತ್ತಾಳೆ. ಆದರೂ ಈ ಆಘಾತದಿಂದ ಚೇತರಿಸಿಕೊಳ್ಳದ ಸೋದರರಿಬ್ಬರು ಮೂರ್ಛೆ ಹೋಗುತ್ತಾರೆ. ಆರೈಕೆಯಿಂದ ಎಚ್ಚರಗೊಂಡ ಭರತನು ಶ್ರೀರಾಮನ ಪಟ್ಟಾಭಿಷೇಕವನ್ನು ವೀಕ್ಷಿಸಲು ಬಂದೆ ಎಂದು ತಿಳಿಸುತ್ತಾನೆ. ನಡೆದ ವೃತ್ತಾಂತವನ್ನು ಕೇಳಿದ ಭರತನು ವನವಾಸಕ್ಕೆ ತೆರಳಲು ಶ್ರೀರಾಮನು ಮತ್ತು ಅತ್ತಿಗೆ ಹೇಗೆ ಒಪ್ಪಿಗೆ ಸೂಚಿಸಿದರು ಎಂದು ಕೇಳುತ್ತಾನೆ.

ಆಗ ನಡೆದ ಘಟನೆಯ ಹಿಂದೆ ಇದ್ದ ನಿಜಾಂಶವು ತಿಳಿಯುತ್ತದೆ. ಇದರಿಂದಾಗಿ ತಾಯಿಯ ಬಗ್ಗೆ ಭರತನಿಗೆ ಅಸಹ್ಯ ಉಂಟಾಗುತ್ತದೆ. ಸ್ವತಃ ಕೌಸಲ್ಯೆ ಮತ್ತು ಸುಮಿತ್ರೆಯರು ಭರತನನ್ನು ಸಮಾಧಾನಪಡಿಸುತ್ತಾರೆ. ಆಗ ಅಲ್ಲಿಗೆ ಬಂದ ಮಂಥರೆಯನ್ನು ಕಂಡು ಭರತ-ಶತ್ರುಘ್ನರು ಕತ್ತಿಯನ್ನು ಝಳಪಿಸುತ್ತಾ ಆಕೆಯನ್ನು ಕೊಲ್ಲಲು ಮುನ್ನುಗ್ಗುತ್ತಾರೆ. ಎಲ್ಲರೂ ಇವರಿಬ್ಬರನ್ನು ಸಮಾಧಾನದಿಂದ ಇರಲು ತಿಳಿಸುತ್ತಾರೆ. ಕೊನೆಗೆ ಹಿರಿಯರ ಆದೇಶದಂತೆ ತಂದೆಯ ಅಂತಿಮ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ಮುಗಿಸುತ್ತಾರೆ.

ರಾಜನಿಲ್ಲದ ರಾಜ್ಯ ಅನಾಥವಾಗಿದೆ

ರಾಜಸಭೆಯಲ್ಲಿ ವಸಿಷ್ಟರು ರಾಜ ನಿಲ್ಲದ ಈ ರಾಜ್ಯವು ಅನಾಥವಾಗಿದೆ. ಆದ್ದರಿಂದ ಈ ರಾಜ್ಯದ ಆಡಳಿತವನ್ನು ನೀನೇ ನಡೆಸು ಎಂದು ಭರತನಿಗೆ ತಿಳಿಸುತ್ತಾರೆ. ಇದರಿಂದ ಆಶ್ಚರ್ಯಗೊಂಡ ಭರತನು, ನಮ್ಮೆಲ್ಲರಿಗೂ ಶ್ರೀರಾಮನೇ ಹಿರಿಯ. ಆದ್ದರಿಂದ ಇದರ ಆಡಳಿತ ರಾಮನಿಗೆ ನೀಡಬೇಕು ಎಂದು ತಿಳಿಸುತ್ತಾನೆ. 14 ವರ್ಷಗಳ ಕಾಲ ವನವಾಸವಿದ್ದರೂ ಸಹ ರಾಮನ ಕಾಲಿಗೆ ಬಿದ್ದು ಅವನನ್ನು ಕರೆದುಕೊಂಡು ಬಂದು ರಾಜನನ್ನಾಗಿ ಮಾಡುತ್ತೇನೆ ಎಂದು ಹೇಳುತ್ತಾನೆ. ತನ್ನ ಆತ್ಮೀಯ ಜನರೊಂದಿಗೆ, ಶ್ರೀ ರಾಮನಿರುವ ಕಾಡಿನ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಭರದ್ವಾಜರ ಆಶ್ರಮದ ಹತ್ತಿರ ಬಂದಾಗ ಭರತನು ರಾಜನ ಪೋಷಾಕನ್ನು ತೆಗೆದು ಸಾಮಾನ್ಯ ಪಂಚೆಯನ್ನು ಉಟ್ಟು ಉತ್ತರಿಯವನ್ನು ಧರಿಸಿ ವಶಿಷ್ಠರ ಜೊತೆಗೂಡಿ ಭಾರದ್ವಾಜರ ಆಶ್ರಮಕ್ಕೆ ತೆರಳುತ್ತಾನೆ.

ಆದರೆ ಶ್ರೀರಾಮನು ಅಲ್ಲಿರದ ಕಾರಣ ಭಾರದ್ವಾಜರ ಅಣತಿಯಂತೆ ಚಿತ್ರಕೂಟದ ಕಡೆ ಮುನ್ನಡೆಯುತ್ತಾನೆ. ಕಾಡಿನಲ್ಲಿ ಶ್ರೀರಾಮಚಂದ್ರನನ್ನು ಕಂಡು ಭರತನಿಗೆ ಸಂತೋಷ ಮತ್ತು ದುಃಖ ಒಮ್ಮೆಲೆ ಉಂಟಾಗುತ್ತದೆ. ಶ್ರೀರಾಮನ ಪಾದವನ್ನು ಸ್ಪರ್ಶಿಸಿ ಆಶೀರ್ವಾದವನ್ನು ಬೇಡುತ್ತಾನೆ. ಭರತನಿಂದ ದಶರಥನ ಸಾವಿನ ವಿಚಾರವನ್ನು ತಿಳಿದ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ಜ್ಞಾನ ತಪ್ಪಿ ಬೀಳುತ್ತಾರೆ. ಮರಳಿ ರಾಜ್ಯಕ್ಕೆ ಹೋಗಲು ಒಪ್ಪದೆ ಶ್ರೀರಾಮನು ಭರತನಿಗೆ ರಾಜಮಾರ್ಗದ ಬೋಧನೆಯನ್ನು ಮಾಡುತ್ತಾನೆ. ಅಣ್ಣನ ಮಾತಿಗೆ ಸೋತ ಭರತನು ಶ್ರೀರಾಮನ ಪಾದುಕೆಗಳನ್ನು ಪಡೆದು ರಾಜ್ಯಕ್ಕೆ ಮರಳುತ್ತಾನೆ.

ನಾನು ಏಕಪತ್ನಿವ್ರತಸ್ಥ, ಹೆಂಡತಿಗೆ ಎಂದಿಗೂ ಮೋಸ ಮಾಡಲಾರೆ

ಒಮ್ಮೆ ಎಲ್ಲರೂ ಪರ್ಣಕುಟಿಯಲ್ಲಿ ಕುಳಿತಿದ್ದಾಗ ಶೂರ್ಪನಖಿ ಎಂಬ ರಾಕ್ಷಸಿಯ ಆಗಮನವಾಗುತ್ತದೆ. ಲಂಕೆಯ ರಾಜನಾದ ರಾವಣನ ತಂಗಿಯೇ ಈ ಶೂರ್ಪನಖಿ. ಇವಳು ಅತ್ಯಂತ ಕ್ರೂರ ಸ್ವಭಾವವನ್ನು ಹೊಂದಿರುತ್ತಾಳೆ. ಅಲ್ಲದೆ ತನಗೆ ಇಷ್ಟವೆನಿಸುವ ರೂಪವನ್ನು ತಾಳಲು ಮಾಯಾವಿದ್ಯೆಯೂ ಇವಳಿಗೆ ತಿಳಿದಿರುತ್ತದೆ. ಶ್ರೀರಾಮಚಂದ್ರನನ್ನು ಕುರಿತು ಇವಳು, ನಿನ್ನ ಮೇಲೆ ನನಗೆ ಮೋಹವಾಗಿದೆ. ಆದ್ದರಿಂದ ನನ್ನನ್ನು ವಿವಾಹವಾಗು ಎಂದು ತಿಳಿಸುತ್ತಾಳೆ. ರಾಮಚಂದ್ರನು ತಾನು ಏಕಪತ್ನಿವ್ರತಸ್ಥ. ಯಾವುದೇ ಕಾರಣಕ್ಕೂ ನನ್ನ ಪತ್ನಿಗೆ ಮೋಸ ಮಾಡಲಾರೆ ಹೇಳುತ್ತಾನೆ. ಆಗ ಶೂರ್ಪನಖಿಯು ರಾಮಾ, ಸೀತೆ, ಲಕ್ಷ್ಮಣರನ್ನು ಕೊಲ್ಲಲು ಮುಂದಾಗುತ್ತಾಳೆ. ಸಿಟ್ಟಿಗೆದ್ದ ಲಕ್ಷ್ಮಣನು ಆಕೆಯ ಕಿವಿ ಮತ್ತು ಮೂಗುಗಳನ್ನು ಕತ್ತರಿಸುತ್ತಾನೆ. ಈಕೆಯ ಸೋದರರಾದ ಖರ ಮತ್ತು ದೂಷಣರ ಜೊತೆಯಲ್ಲಿ ಯುದ್ದ ಮಾಡುವ ಶ್ರೀರಾಮನು ಯುದ್ದದಲ್ಲಿ ಜಯಿಸುತ್ತಾನೆ. ಆಗ ಶ್ರೀ ರಾಮನನ್ನು ನ್ಯಾಯವಾದ ಮಾರ್ಗದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಯುತ್ತದೆ.

ರಾವಣನ ಮನಸ್ಸಿನಲ್ಲಿ ಮೊಳಕೆಯೊಡೆದ ಪಾಪದ ಬೀಜ

ಶೂರ್ಪನಖಿಯ ವಿಚಾರ ರಾವಣನವರೆಗೂ ಹೋಗುತ್ತದೆ. ಮಾರೀಚನಿಗೆ ಶ್ರೀ ರಾಮ-ಲಕ್ಷ್ಮಣರ ಶಕ್ತಿಯ ಬಗ್ಗೆ ಮೊದಲೇ ತಿಳಿದಿರುತ್ತದೆ. ಆದ್ದರಿಂದ ಮಾರೀಚನು ರಾಮನೊಂದಿಗೆ ಶತ್ರುತ್ವ ಬೇಡ ಎಂದು ಬುದ್ದಿವಾದ ಹೇಳುತ್ತಾನೆ. ಇವನ ಮಾತನ್ನು ಕೇಳಿದ ರಾವಣನು ಸೀತೆಯನ್ನು ಅಪಹರಿಸುವ ಯೋಚನೆ ಮರೆತುಬಿಡುತ್ತಾನೆ. ಆದರೆ ಶೂರ್ಪನಖಿಯ ರಾವಣನ ಎದುರು ಸೀತೆಯ ಸೌಂದರ್ಯ ವರ್ಣಿಸಿ, ಅವನನ್ನು ತಪ್ಪು ದಾರಿಗೆ ಎಳೆಯುತ್ತಾಳೆ. ಇದರಿಂದಾಗಿ ರಾವಣನು ಸೀತೆಯನ್ನು ಅಪಹರಿಸಲು ನಿರ್ಧರಿಸುತ್ತಾನೆ.

ಮಾರಿಚ ಮತ್ತು ರಾವಣರು ಪುಷ್ಪಕ ವಿಮಾನದಲ್ಲಿ ಅರಣ್ಯಕ್ಕೆ ಬರುತ್ತಾರೆ. ರಾವಣನ ಅಣತಿಯಂತೆ ಮಾರೀಚನು ಚಿನ್ನದ ಜಿಂಕೆಯಾಗಿ ಮಾರ್ಪಡುತ್ತಾನೆ. ಸೀತೆಗೆ ಈ ಜಿಂಕೆಯ ಮೇಲೆ ಆಸೆ ಹೆಚ್ಚುತ್ತದೆ. ಆದ್ದರಿಂದ ಶ್ರೀರಾಮನನ್ನು ಕುರಿತು ಆ ಜಿಂಕೆಯನ್ನು ತಂದು ಕೊಡು ಎಂದು ಕೇಳುತ್ತಾಳೆ. ಒಲ್ಲದ ಮನಸ್ಸಿನಿಂದ ರಾಮನು ಜಿಂಕೆಯ ಬೆನ್ನಟ್ಟುತ್ತಾನೆ. ಜಿಂಕೆ ಕಂಡ ತಕ್ಷಣ ಜಿಂಕೆಗೆ ಬಾಣವನ್ನು ಹೂಡುತ್ತಾನೆ. ಶ್ರೀರಾಮನು ಇದ್ದ ಆಶ್ರಮದ ಅಣತಿ ದೂರದಲ್ಲಿ ಮಾರಿಚನು ರಾಮನ ಧ್ವನಿಯಲ್ಲಿ 'ಹಾ ಸೀತಾ, ಹಾ ಲಕ್ಷ್ಮಣ, ಕಾಪಾಡಿ' ಎಂದು ಕಿರುಚುತ್ತಾ ಪ್ರಾಣ ಬಿಡುತ್ತಾನೆ.

ಸೀತೆಯ ಅಪಹರಣ

ಇದನ್ನು ಕೇಳಿದ ಸೀತೆಯು ಬಲವಂತವಾಗಿ ಲಕ್ಷ್ಮಣನನ್ನು ರಾಮನನ್ನು ಕಾಪಾಡಲು ಕಳುಹಿಸುತ್ತಾಳೆ. ಹೊರಡುವಾಗ ಮೂರು ರೇಖೆಗಳನ್ನು ಹಾಕಿ ಯಾವುದೇ ಕಾರಣಕ್ಕೂ ಇದನ್ನು ದಾಟಿ ಬರಬಾರದು ಎಂದು ತಿಳಿಸುತ್ತಾನೆ. ಇಂದಿಗೂ ಇದನ್ನು ಲಕ್ಷ್ಮಣ ರೇಖೆ ಎಂದೇ ಕರೆಯುತ್ತಾರೆ. ಈ ಸಂದರ್ಭವನ್ನು ಬಳಸಿಕೊಂಡು ರಾವಣನು ಕಾವಿ ಬಟ್ಟೆಯನ್ನು ಧರಿಸಿ ಸೀತೆಯ ಬಳಿ ಬಿಕ್ಷೆ ಕೇಳಲು ಬರುತ್ತಾನೆ. ಸೀತೆಯು ಮೂರು ರೇಖೆಗಳನ್ನು ದಾಟಿ ಬಿಕ್ಷೆ ನೀಡಲು ಬರುತ್ತಾಳೆ. ಆಗ ರಾವಣನು ತನ್ನ ದೈತ್ಯ ರೂಪವನ್ನು ತೋರಿಸಿ ಸೀತೆಯನ್ನು ಅಪಹರಿಸುತ್ತಾನೆ.

ರಾಮ-ಲಕ್ಷ್ಮಣರು ಮರಳಿ ಆಶ್ರಮಕ್ಕೆ ಬಂದಾಗ ಅಲ್ಲಿದ್ದ ಪರಿಚಾರಿಕೆಯಿಂದ ಈ ವಿಷಯವು ತಿಳಿಯುತ್ತದೆ. ಸೀತೆಯ ಅಪಹರಣ ಮಾಡುತ್ತಿದ್ದ ರಾವಣನಿಗೆ ಜಟಾಯು ಪಕ್ಷಿಯು ಎದುರಾಗುತ್ತದೆ. ಇವರಿಬ್ಬರ ನಡುವೆ ದೊಡ್ಡಯುದ್ದವೇ ನಡೆಯುತ್ತದೆ. ಜಟಾಯು ಕೊನೆಗೆ ರಾವಣನ ಆಯುಧಕ್ಕೆ ಬಲಿಯಾಗುತ್ತದೆ. ಆನಂತರ ಕೊಂಚವೂ ಭಯವಿಲ್ಲದೆ ರಾವಣನು ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ತೆರಳುತ್ತಾನೆ.