Wildlife News: ಹುಲಿ ಉಗುರು ಸಹಿತ ವನ್ಯಜೀವಿ ದೇಹದ ಭಾಗ ವಾಪಸ್‌, ಅರಣ್ಯ ಇಲಾಖೆ ಆದೇಶಕ್ಕೆ ಹೈಕೋರ್ಟ್‌ ತಡೆ
ಕನ್ನಡ ಸುದ್ದಿ  /  ಕರ್ನಾಟಕ  /  Wildlife News: ಹುಲಿ ಉಗುರು ಸಹಿತ ವನ್ಯಜೀವಿ ದೇಹದ ಭಾಗ ವಾಪಸ್‌, ಅರಣ್ಯ ಇಲಾಖೆ ಆದೇಶಕ್ಕೆ ಹೈಕೋರ್ಟ್‌ ತಡೆ

Wildlife News: ಹುಲಿ ಉಗುರು ಸಹಿತ ವನ್ಯಜೀವಿ ದೇಹದ ಭಾಗ ವಾಪಸ್‌, ಅರಣ್ಯ ಇಲಾಖೆ ಆದೇಶಕ್ಕೆ ಹೈಕೋರ್ಟ್‌ ತಡೆ

Tiger claw issue ವನ್ಯಜೀವಿಗಳ ದೇಹದ ಭಾಗಗಳನ್ನು ವಾಪಾಸ್‌ ಮಾಡುವಂತೆ ಕರ್ನಾಟಕ ಇಲಾಖೆ ಜಾರಿ ಮಾಡಿದ್ದ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ.

ಹುಲಿ ಉಗುರು ಸಹಿತ ಎಲ್ಲಾ ವಸ್ತುಗಳನ್ನು ಹಿಂದಿರುಗಿಸುವುದಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ.
ಹುಲಿ ಉಗುರು ಸಹಿತ ಎಲ್ಲಾ ವಸ್ತುಗಳನ್ನು ಹಿಂದಿರುಗಿಸುವುದಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ.

ಬೆಂಗಳೂರು: ಹುಲಿ ಉಗುರು ಧರಿಸಿದ ಪ್ರಕರಣದ ನಂತರ ಟ್ರೋಪಿಗಳು ಸೇರಿದಂತೆ ವನ್ಯಜೀವಿಗಳ ದೇಹದ ಭಾಗ ಅಥವಾ ವಸ್ತುಗಳನ್ನು ಇಟ್ಟುಕೊಳ್ಳುವಂತಿಲ್ಲ ಎನ್ನುವ ಕರ್ನಾಟಕ ಅರಣ್ಯ ಇಲಾಖೆಯ ಆದೇಶಕ್ಕೆ ಕರ್ನಾಟಕ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ಕರ್ನಾಟಕ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಏಳು ಜನರಿಗೆ ನೊಟೀಸ್‌ ಜಾರಿ ಮಾಡಿದೆ. ಈ ಕುರಿತಾದ ಪ್ರಕರಣದ ವಿಚಾರಣೆಯನ್ನು ಬರುವ ಮಾರ್ಚ್‌ 18ಕ್ಕೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ.

ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಕುರಿತಾದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡು ಈ ನಿರ್ದೇಶನವನ್ನು ನೀಡಿದೆ. ಇದರಿಂದ ಸದ್ಯಕ್ಕೆ ಅರಣ್ಯ ಇಲಾಖೆಗೆ ಮನೆಯಲ್ಲಿ ಹಿಂದಿನಿಂದಲೂ ಸಂಗ್ರಹಿಸಿಟ್ಟುಕೊಂಡು ಬಂದಿರುವ ವನ್ಯಜೀವಿಗಳ ದೇಹದ ಭಾಗ ಅಥವಾ ವಸ್ತುಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವುದಕ್ಕೆ ತಡೆ ಬಿದ್ದಿದೆ.

ಕೊಡಗಿನ ವಿರಾಜಪೇಟೆಯ ನಿವಾಸಿಯಾದ ಪಿ.ಎ.ರಂಜಿ ಪೂಣಚ್ಛ ಹಾಗೂ ನಾಪೋಕ್ಲುವಿನ ಕೆ.ಎ.ಕುಟ್ಟಪ್ಪ ಅವರು ನ್ಯಾಯಾಲಯದಲ್ಲಿ ಕೆಲ ದಿನಗಳ ಹಿಂದೆ ರಿಟ್‌ ಅರ್ಜಿಯನ್ನು ಸಲ್ಲಿಸಿದ್ದರು.

ವನ್ಯಜೀವಿಗಳಿಗೆ ಸಂಬಂಧಿಸಿದ ಮತ್ತು ಅವುಗಳ ದೇಹದ ಯಾವುದೇ ಭಾಗ ಅಥವಾ ವಸ್ತುಗಳ ಸಂಗ್ರಹ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಪ್ರಕಾರ ಶಿಕ್ಷಾರ್ಹ ಅಪರಾಧ. ಒಂದು ವೇಳೆ ತಮ್ಮ ಬಳಿ ವನ್ಯಜೀವಿಗಳ ದೇಹದ ಭಾಗಗಳನ್ನು ಒಳಗೊಂಡ ವಿಜಯ ಸಂಕೇತದ ಸ್ಮಾರಕಗಳು ಅಥವಾ ಸಂಸ್ಕರಣೆ ಮಾಡಿದ ಸ್ಮಾರಕಗಳು ಇದ್ದಲ್ಲಿ ಅವುಗಳನ್ನು ಸಮೀಪದ ಅರಣ್ಯಾಧಿಕಾರಿ ವಶಕ್ಕೆ ಒಪ್ಪಿಸಬೇಕು. ಇವುಗಳ ನಿಖರತೆ ಮತ್ತು ಕಾನೂನು ಬದ್ಧತೆಯನ್ನು ಪರಾಮರ್ಶಿಸಿ ಮುಂದಿನ ಕ್ರಮ ತಿಳಿಸಲಾಗುವುದು ಎಂದು ಕರ್ನಾಟಕ ಅರಣ್ಯ ಇಲಾಖೆಯು ಕಳೆದ ಜನವರಿ 10ರಂದು ಆದೇಶ ಜಾರಿಗೊಳಿಸಿತ್ತು. ಈ ಕುರಿತಂತೆ ಮಡಿಕೇರಿ ಅರಣ್ಯ ಅಧಿಕಾರಿಗಳು ನೊಟೀಸ್‌ ಕೂಡ ಜಾರಿ ಮಾಡಿದ್ದರು.

ನೀವು ಕುಟುಂಬದ ಸಮಾರಂಭಗಳಲ್ಲಿ ಬಳಸುವ ಸಾಂಪ್ರದಾಯಿಕ ಉಡುಗೆಯೊಂದಿಗೆ ಸಾಲು ಸಾಲು ಹುಲಿ ಉಗುರು ಹೊಂದಿರುವ ಕತ್ತಿಯನ್ನು ಇರಿಸಿಕೊಂಡಿದ್ದೀರಿ. ಈ ಕುರಿತಂತೆ ಸಾರ್ವಜನಿಕರಿಂದ ಇಲಾಖೆಗೆ ಈಗಾಗಲೇ ದೂರುಗಳು ಬಂದಿದೆ. ಇದಕ್ಕೆ ಪೂರಕವಾಗಿ ಇಲಾಖೆಯ ಬಳಿಯಲ್ಲಿ ಛಾಯಾಚಿತ್ರಗಳ ಸಾಕ್ಷ್ಯವೂ ಇವೆ. ನೀವು ಧರಿಸಿರುವ ಹುಲಿ ಉಗುರುಗಳನ್ನು ತಕ್ಷಣವೇ ಅರಣ್ಯ ಇಲಾಖೆ ಕಚೇರಿಗೆ ನೀಡಬೇಕು.. ನಿಮ್ಮ ಬಳಿ ಹುಲಿ ಉಗುರುಗಳು ಇಲ್ಲವೆಂಬುದೇ ನಿಮ್ಮ ನಿಲುವಾದಲ್ಲಿ ಕಚೇರಿಗೆ ಹಾಜರಾಗಿ ಛಾಯಾಚಿತ್ರಗಳ ಬಗ್ಗೆ ವಿವರಣೆ ಕೊಡಬೇಕು ಎಂದು ನೊಟೀಸ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಪಿ.ಎ.ರಂಜಿ ಪೂಣಚ್ಚ ಮತ್ತು ಕೆ.ಎ.ಕುಟ್ಟಪ್ಪ ಅವರು. ಈ ನೋಟಿಸ್‌ ಮತ್ತು ಸರ್ಕಾರ ಹೊರಡಿಸಿದ ಅಧಿಸೂಚನೆ ಸಂವಿಧಾನದ 14, 19 ಮತ್ತು 21ರ ಸ್ಪಷ್ಟ ಉಲ್ಲಂಘನೆ. ಅರಣ್ಯ ಇಲಾಖೆ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆಗೆ ಸೂಚಿಸಿದೆ.

Whats_app_banner