ರಾಜಕೀಯ ವಿಶ್ಲೇಷಣೆ: 20 ಕ್ಷೇತ್ರಗಳಿಗೆ ಬಿಜೆಪಿ ಆಭ್ಯರ್ಥಿಗಳ ಘೋಷಣೆ, ಬಿಎಸ್‌ವೈ ಹೈಕಮಾಂಡ್‌ ಮೇಲುಗೈ, ಈ ರಾಜಕಾರಣಿಗಳಿಂದ ಬಂಡಾಯ ಸಾಧ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  ರಾಜಕೀಯ ವಿಶ್ಲೇಷಣೆ: 20 ಕ್ಷೇತ್ರಗಳಿಗೆ ಬಿಜೆಪಿ ಆಭ್ಯರ್ಥಿಗಳ ಘೋಷಣೆ, ಬಿಎಸ್‌ವೈ ಹೈಕಮಾಂಡ್‌ ಮೇಲುಗೈ, ಈ ರಾಜಕಾರಣಿಗಳಿಂದ ಬಂಡಾಯ ಸಾಧ್ಯತೆ

ರಾಜಕೀಯ ವಿಶ್ಲೇಷಣೆ: 20 ಕ್ಷೇತ್ರಗಳಿಗೆ ಬಿಜೆಪಿ ಆಭ್ಯರ್ಥಿಗಳ ಘೋಷಣೆ, ಬಿಎಸ್‌ವೈ ಹೈಕಮಾಂಡ್‌ ಮೇಲುಗೈ, ಈ ರಾಜಕಾರಣಿಗಳಿಂದ ಬಂಡಾಯ ಸಾಧ್ಯತೆ

ಲೋಕಸಭೆ ಚುನಾವಣೆಗಾಗಿ ಬಿಜೆಪಿ ಕರ್ನಾಟಕದಲ್ಲಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಪಕ್ಷದ ಬೇರು ಗಟ್ಟಿಯಾಗಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡಲಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಬಿ ಎಸ್ ವೈ ಮತ್ತು ಹೈಕಮಾಂಡ್ ಮೇಲುಗೈಯಾಗಿದೆ. ಕೆ.ಎಸ್.ಈಶ್ವರಪ್ಪ ಮತ್ತು ಸಂಗಣ್ಣ ಕರಡಿ ಬಂಡಾಯ ಸಾಧ್ಯತೆಯೂ ಇದೆ. (ವಿಶ್ಲೇಷಣೆ: ಎಚ್‌. ಮಾರುತಿ).

ರಾಜಕೀಯ ವಿಶ್ಲೇಷಣೆ: 20 ಕ್ಷೇತ್ರಗಳಿಗೆ ಬಿಜೆಪಿ ಆಭ್ಯರ್ಥಿಗಳ ಘೋಷಣೆ, ಬಿಎಸ್‌ವೈ ಹೈಕಮಾಂಡ್‌ ಮೇಲುಗೈ
ರಾಜಕೀಯ ವಿಶ್ಲೇಷಣೆ: 20 ಕ್ಷೇತ್ರಗಳಿಗೆ ಬಿಜೆಪಿ ಆಭ್ಯರ್ಥಿಗಳ ಘೋಷಣೆ, ಬಿಎಸ್‌ವೈ ಹೈಕಮಾಂಡ್‌ ಮೇಲುಗೈ

ಬಿಜೆಪಿ ಅಳೆದೂ ತೂಗಿ ಕರ್ನಾಟಕ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ರಾಜಕೀಯ ನಿವೃತಿ ಪಡೆಯುವುದಾಗಿ ಘೋಷಿಸಿದ್ದ ಮೂವರು ಸಂಸದರನ್ನು ಸೇರಿಸಿ 9 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ. ಕೆಲವು ಅಚ್ಚರಿಯ ಆಯ್ಕೆಗಳೂ ಇವೆ. ಈ ಪಟ್ಟಿಯನ್ನು ನೋಡಿದಾಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತೆ ಮೇಲುಗೈ ಸಾಧಿಸಿದ್ದಾರೆ. ಉಳಿದಂತೆ ಟಿಕೆಟ್ ಹಂಚಿಕೆಯಲ್ಲಿ ರಾಜ್ಯ ನಾಯಕರ ಪ್ರಭಾವ ಕಾಣುತ್ತಿಲ್ಲ. ಸಂಪೂರ್ಣವಾಗಿ ಹೈ ಕಮಾಂಡ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು ಎದ್ದು ಕಾಣಿಸುತ್ತಿದೆ. 20ರಲ್ಲಿ 8 ಲಿಂಗಾಯತ, ಒಕ್ಕಲಿಗ ಮತ್ತು ಬ್ರಾಹ್ಮಣ ತಲಾ 2, ಬಿಲ್ಲವ ಓಬಿಸಿ, ಎಸ್ ಟಿಗೆ ತಲಾ ಒಂದು ಟಿಕೆಟ್ ನೀಡಲಾಗಿದೆ.

ಈ 20 ಅಭ್ಯರ್ಥಿಗಳ ಪಟ್ಟಿಯಲ್ಲಿ ಸಂಘಪರಿವಾರ ಮತ್ತು ಪಕ್ಷದ ಬೇರುಗಳು ಗಟ್ಟಿಯಾಗಿರುವ ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಹೊಸ ಪ್ರಯೋಗಳಿಗೆ ಮುಂದಾಗಿದೆ. ಆದರೆ ಜಾತಿ ಮತ್ತು ಸಂಘ ಪರಿವಾರದ ಹಿನ್ನೆಲೆ ಹೊಂದಿರದ ಅಭ್ಯರ್ಥಿಗಳ ಕ್ಷೇತ್ರದಲ್ಲಿ ಹೊಸ ಪ್ರಯೋಗಳಿಗೆ ಮುಂದಾಗಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಉದಾಹರಣೆಗೆ ಉಡುಪಿ ಚಿಕ್ಕಮಗಳೂರು,ದಕ್ಷಿಣ ಕನ್ನಡ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಿದೆ. ಈ ಎರಡೂ.ಕ್ಷೇತ್ರಗಳಲ್ಲಿ ಯಾರನ್ನೇ ಅಭ್ಯರ್ಥಿ ಮಾಡಿದರೂ ಕೆಲಸ ಮಾಡುವ ಕಾರ್ಯಕರ್ತರ ಪಡೆ ಇದೆ.

ಆದರೆ ಅಭ್ಯರ್ಥಿಗಳನ್ನು ಬದಲಾಯಿಸಲೇಬೇಕು ಎಂದು ಹಠ ಹಿಡಿದಿದ್ದ ಬೀದರ್, ದಾವಣಗೆರೆ, ಗುಲ್ಬರ್ಗ, ಬಿಜಾಪುರ ಬಾಗಲಕೋಟೆ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಪ್ರಯೋಗಳಿಗೆ ಮುಂದಾಗಿಲ್ಲ. ಬೀದರ್ ನಲ್ಲಿ ಸಚಿವ ಭಗವಂತ ಖೂಬಾ ಅವರನ್ನು ಬದಲಾಯಿಸಲೇಬೇಕು ಎಂದು.ಹಾಲಿ ಮಾಜಿ ಶಾಸಕರೆಲ್ಲರೂ ಒಕ್ಕೊರಲಿನಿಂದ ಒತ್ತಡ ಹೇರಿದ್ದರು. ಬಿಜಾಪುರದಲ್ಲಿ ರಮೇಶ್.ಜಿಗಜಿಣಗಿ ಅವರನ್ನೂ ಬದಲಾಯಿಸಬೇಕು ಎಂಬ ಕೂಗು ಎದ್ದಿತ್ತು. ಬಾಗಲಕೋಟೆಯಲ್ಲಿ ಗದ್ದಿಗೌಡರ್ ಅವರಿಗೆ ಟಿಕೆಟ್ ಕೊಟ್ಟರೆ ಕೆಲಸ ಮಾಡುವುದಿಲ್ಲ ಎಂದು ಕಾರ್ಯಕರ್ತರೇ ಎಚ್ಚರ ನೀಡಿದ್ದರು.

ಆದರೂ ಹೈಕಮಾಂಡ್ ಬೆದರಿಕೆಗಳಿಗೆ ಮಣಿದಿಲ್ಲ. ಏಕೆಂದರೆ ಮೊದಲನೆಯದಾಗಿ ಸಂಘ ಪರಿವಾರದ ಹಿನ್ನೆಲೆ ಹೊಂದಿರದ ಅನ್ಯ ಪಕ್ಷಗಳಿಂದ ವಲಸೆ ಬಂದಿದ್ದ ಇವರನ್ನು ಸೆಳೆಯಲು ಕಾಂಗ್ರೆಸ್ ಸಿದ್ದವಾಗಿತ್ತು. ಎರಡನೆಯದಾಗಿ ಈ ಅಭ್ಯರ್ಥಿಗಳ ಸಮುದಾಯಗಳೇ ಗೆಲುವಿನಲ್ಲಿ ನಿರ್ಣಾಯಕ ನಿರ್ಧಾರ ಹೊಂದಿರುವುದರಿಂದ ಸಾಹಸಕ್ಕೆ ಕೈ ಹಾಕಿಲ್ಲ ಎನ್ನುವುದು ಗೋಚರಿಸುತ್ತದೆ.

ಮಹಾರಾಜರ ಮನೆತನಕ್ಕೆ ಟಿಕೆಟ್ ನೀಡಬೇಕೆಂಬ ಏಕೈಕ ಉದ್ದೇಶದಿಂದ ಕ್ರಿಯಾಶೀಲ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅವರಿಗೆ ಟಿಕೆಟ್ ನಿರಾಕರಿಸಲು ಯಾವುದೇ ಸಕಾರಣಗಳಿರಲಿಲ್ಲ. ಅವರ ಆರಂಭಿಕ ಪ್ರತಿಕ್ರಿಯೆ ನೋಡಿದರೆ ಬಂಡಾಯ ಏಳುವ ಸಾಧ್ಯತೆಗಳು ಕಡಿಮೆ ಎನ್ನಬಹುದು. ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಈಗಾಗಲೇ ಬಂಡಾಯದ ಕಹಳೆ ಊದಿದ್ದಾರೆ. ಹಾವೇರಿಯಲ್ಲಿ ತಮ್ಮ ಪುತ್ರ ಕಾಂತೇಶ್ ಗೆ ಟಿಕೆಟ್ ತಪ್ಪಿಸುವಲ್ಲಿ ಯಡಿಯೂರಪ್ಪ ಅವರೇ ಕಾರಣ ಎಂದು ಗುಡುಗಿದ್ದು, ಅಭಿಮಾನಿಗಳು ಶಿವಮೊಗ್ಗದಿಂದಲೇ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಯಡಿಯೂರಪ್ಪ ಅವರಿಗೆ ಬಿಸಿ.ಮುಟ್ಟಿಸುವ ಕೆಲಸ ಮಾಡಿದ್ದಾರೆ. ಶುಕ್ರವಾರ ಅಭಿಮಾನಿಗಳ ಸಭೆಯಲ್ಲಿ ನಿರ್ದಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಉಡುಪಿ ಚಿಕ್ಕಮಗಳೂರಿನಲ್ಲಿ ಕಾರ್ಯಕರ್ತರ ತೀವ್ರ ಕೆಂಗಣ್ಣಿಗೆ ಗುರಿಯಾಗಿದ್ದ ಕ್ಷೇತ್ರದತ್ತ ಮುಖ ಮಾಡದ ಶೋಭಾ ಕರಂದ್ಲಾಜೆ ಅವರ ವಿರುದ್ಧ ಗೋ ಬ್ಯಾಕ್ ಚಳವಳಿ ನಡೆದಿತ್ತು. ಕಾರ್ಯಕರ್ತರ ಬೆದರಿಕೆಗೆ ಮಣಿದ ಹೈ ಕಮಾಂಡ್ ಅವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿತ್ತಾದರೂ ಯಡಿಯೂರಪ್ಪ ಅವರು ಪಟ್ಟು ಹಿಡಿದು ಬೆಂಗಳೂರು ಉತ್ತರದಲ್ಲಿ ಟಿಕೆಟ್ ಕೊಡಿಸಿದ್ದಾರೆ. ಬೆಂಗಳೂರಿನ ಪಕ್ಷದ ಶಾಸಕರು ಶೋಭಾ ಅವರ ಪರವಾಗಿ ಮನಃಪೂರ್ವಕವಾಗಿ ಕೆಲಸ ಮಾಡುವ ಸಾಧ್ಯತೆಗಳು ಕಡಿಮೆ. ತುಮಕೂರಿನಲ್ಲಿ ವಿ.ಸೋಮಣ್ಣ ಅವರಿಗೂ ತೀವ್ರ ವಿರೋಧವಿದ್ದು, ಹೇಗೆ ಸಂಬಾಳಿಸುತ್ತಾರೆ ಕಾದು ನೋಡಬೇಕಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ.ಮಂಜುನಾಥ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಕ್ಷೇತ್ರದಲ್ಲಿ ಬೇರುಗಳು ಗಟ್ಟಿಯಾಗಿಲ್ಲದಿದ್ದರೂ.ಬಿಜೆಪಿಯಿಂದ ಟಿಕೆಟ್ ಏಕೆ ಕೊಡಿಸಿದ್ದಾರೆ ಎನ್ನುವುದು ನಿಗೂಢವಾಗಿದೆ. ಡಿಕೆಸಹೋದರರನ್ನು ಕಟ್ಟಿ ಹಾಕಲೆಂದೇ ಇವರನ್ನು ಕಣಕ್ಕಿಳಿಸಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.

(ರಾಜಕೀಯ ವಿಶ್ಲೇಷಣೆ: ಎಚ್‌. ಮಾರುತಿ, ಬೆಂಗಳೂರು).

Whats_app_banner