ಭತ್ತ, ರಾಗಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ಎಷ್ಟು ದರ ಸಿಗಲಿದೆ; ರೈತರ ನೋಂದಣಿಗೆ ಏನೇನು ಪ್ರಕ್ರಿಯೆಗಳಿವೆ
ಕರ್ನಾಟಕದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಹಾಗೂ ರಾಗಿ ಖರೀದಿಗೆ ಬೆಲೆಯನ್ನು ನಿಗದಿಪಡಿಸಲಾಗಿದ್ದು, ಸದ್ಯವೇ ಪ್ರಕ್ರಿಯೆ ಶುರುವಾಗಲಿದೆ.
ಬೆಂಗಳೂರು: 2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ರೈತರಿಂದ ಎಫ್ಎಕ್ಯು ಗುಣಮಟ್ಟದ ರಾಗಿ, ಭತ್ತ, ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಸಾಮಾನ್ಯ ಭತ್ತ ಕ್ವಿಂಟಾಲ್ ಗೆ ರೂ.2300, ರಾಗಿ ಕ್ವಿಂಟಾಲ್ ಗೆ ರೂ. 4290 ಗಳನ್ನು ನಿಗದಿ ಮಾಡಲಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಆಯಾ ರಾಜ್ಯಗಳಲ್ಲಿ ಪ್ರಕ್ರಿಯೆ ಶುರುವಾಗಲಿದೆ. ಕರ್ನಾಟಕದಲ್ಲೂ ಇದೇ ದರದಲ್ಲಿ ರೈತರಿಂದ ಭತ್ತ ಹಾಗೂ ರಾಗಿ ಖರೀದಿಗೆ ವ್ಯವಸ್ಥೆ ಮಾಡಲು ಆಯಾ ಜಿಲ್ಲಾಡಳಿತಗಳು ಸಿದ್ದತೆ ಮಾಡಿಕೊಂಡಿವೆ. ಈ ಯೋಜನೆಯ ಲಾಭ ಪಡೆಯಲು ರೈತರು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ರೈತರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ.
ರೈತರಿಗೆ ಸೂಚನೆ ಏನು
ಸರ್ಕಾರದ ಮಾನದಂಡಗಳ ಅನ್ವಯ ಎಫ್ಎಕ್ಯು ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ಖರೀದಿ ಏಜೆನ್ಸಿಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು ಎನ್ನುವ ಸೂಚನೆಯನ್ನು ಕೃಷಿ ಮಾರುಕಟ್ಟೆ ಇಲಾಖೆಯ ಅಧಿಕಾರಿಗಳುಗೆ ಸೂಚನೆ ನೀಡಲಾಗಿದೆ.
ಸೂಕ್ತ ದಾಸ್ತಾನಿಗಾಗಿ ಭತ್ತ/ರಾಗಿ ಖರೀದಿ ಕೇಂದ್ರಗಳಲ್ಲಿ ಭತ್ತದ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್ಗಳನ್ನು ನಿಯೋಜಿಸುವಂತೆ ಹಾಗೂ ಖರೀದಿಸಿದ ಭತ್ತ/ರಾಗಿಯನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು ಅಗತ್ಯವಿರುವ ದಾಸ್ತಾನು ಕೇಂದ್ರಗಳನ್ನು ಗುರುತಿಸುವಂತೆ ನಿರ್ದೇಶನವನ್ನು ಅಧಿಕಾರಿಗಳಿಗೆ ಕೊಡಲಾಗಿದೆ
ಮೈಸೂರು ಜಿಲ್ಲೆಗೆ ಭತ್ತ ಮತ್ತು ರಾಗಿ ಖರೀದಿಸಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಯನ್ನು ಖರೀದಿ ಏಜೆನ್ಸಿ ಯನ್ನಾಗಿ ಸರಕಾರ ನೇಮಕ ಮಾಡಿದ್ದು ಖರೀದಿ ಪ್ರಕ್ರಿಯೆಯು ಇವರ ಮುಖಾಂತರ ನಡೆಯುತ್ತದೆ. ಇದೇ ರೀತಿ ಆಯಾ ಜಿಲ್ಲೆಗಳಲ್ಲೂ ಖರೀದಿಗೆ ಪ್ರಕ್ರಿಯೆಗೆ ನೋಡಲ್ ಏಜೆನ್ಸಿಗಳನ್ನು ಸರ್ಕಾರದ ವಿವಿಧ ಸಂಸ್ಥೆಗಳನ್ನು ನೇಮಿಸಲಾಗಿದೆ. ಆ ಸಂಸ್ಥೆಗಳು ಖರೀದಿಗೆ ಬೇಕಾದ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆಯನ್ನು ಆರಂಭಿಸಲಿವೆ.
ಫ್ರೂಟ್ಸ್ ತಂತ್ರಾಂಶ
ಭತ್ತ/ರಾಗಿ ಮಾರಾಟ ಮಾಡಬೇಕಾದ ರೈತರು ಈಗಾಗಲೇ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಒಂದು ವೇಳೆ ರೈತರು ನೋಂದಣಿ ಮಾಡದಿದ್ದಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ತಾವು ಬೆಳೆದ ಭತ್ತ/ರಾಗಿಯನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ.
ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ಭತ್ತ/ರಾಗಿ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ನೊಂದಣಿ ಕೇಂದ್ರದಲ್ಲಿ ರೈತರು ಪ್ರೂಟ್ ಐಡಿ, ಆಧಾರ್ ಸಂಖ್ಯೆಗೆ ಜೋಡಣೆಯಾದ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕಿದೆ ಎನ್ನುವುದು ಅಧಿಕಾರಿಗಳಿಗೆ ನೀಡಿರುವ ಸೂಚನೆ.
ಭತ್ತದ /ರಾಗಿ ಖರೀದಿ ನೋಂದಣಿ ಪ್ರಾರಂಭವಾಗುವ ದಿನಾಂಕ ಕುರಿತು ಗ್ರಾಮೀಣ ಭಾಗದಲ್ಲಿ ರೈತರಿಗೆ ಹಾಗೂ ರೈತ ಮುಖಂಡರಿಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ನೀಡುವಂತೆ ಹಾಗೂ ರೈತರ ನೊಂದಣಿ ಕೇಂದ್ರಗಳು ಹಾಗೂ ಭತ್ತ /ರಾಗಿ ಖರೀದಿ ಕೇಂದ್ರಗಳ ಕುರಿತು ವಿವರಗಳನ್ನು ನೀಡಬೇಕು.ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ವಹಿಸಬೇಕು ಎನ್ನುವುದು ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಸೂಚನೆ.
.
ವಿಭಾಗ