Cardamom Rate Hike: ಏಲಕ್ಕಿ ಬೆಳೆಗೆ ಬಂತು ಬಂಪರ್ ಬೆಲೆ, ಮಾರ್ಚ್ ಹೊತ್ತಿಗೆ ಕಿಲೋ ಗೆ 3500 ರೂ ತಲುಪುವ ನಿರೀಕ್ಷೆ
ಭಾರತದ ಅಡುಗೆ ಮನೆಯ ಸಾಂಬಾರ ಪದಾರ್ಥ ಏಲಕ್ಕಿ ದರದಲ್ಲಿ ಏರಿಕೆಯಾಗಿದೆ. ಗ್ವಾಟೆಮಾಲ(Guatemala)ದಲ್ಲಿನ ವೈಪರಿತ್ಯಗಳಿಂದ ನಮ್ಮಲ್ಲಿನ ಏಲಕ್ಕಿ(Cardamom)ಗೆ ಬೆಲೆ ಬಂದಿದೆ.
Cardamom Rate Hike: ಸಾಂಬಾರ ಪದಾರ್ಥಗಳ ರಾಣಿ ಎಂದೇ ಕರೆಯಲ್ಪಡುವ ಘಮ ಘಮಿಸುವ ಏಲಕ್ಕಿ ಯ ಬೆಲೆ ದಿನೇ ದಿನೇ ಏರುಮುಖವಾಗಿ ಸಾಗುತ್ತಿದೆ. ಕಳೆದ ಮೂರು ತಿಂಗಳಿನಲ್ಲಿ ಕಿಲೋಗೆ 500 ರೂಪಾಯಿ ಏರಿಕೆ ದಾಖಲಿಸಿರುವ ಏಲಕ್ಕಿ ಈಗ ದೇಶೀ ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯದಕ್ಕೆ ಕಿಲೋಗೆ 2500 ರೂಪಾಯಿಗಳಿಂದ 2800 ರೂಪಾಯಿಗಳವರೆಗೂ ಮಾರಾಟವಾಗುತ್ತಿದೆ.
ಆದರೆ ಈ ವರ್ಷ ವಿಶ್ವದ ಮೂರನೇ ಅತೀ ದೊಡ್ಡ ಏಲಕ್ಕಿ ಉತ್ಪಾದಕ ದೇಶ ಆಗಿರುವ ಗ್ವಾಟೆಮಾಲಾದಲ್ಲಿ ಪ್ರತೀಕೂಲ ಹವಾಮಾನದ ಕಾರಣದಿಂದಾಗಿ ಉತ್ಪಾದನೆ ಶೇಕಡಾ 40 ರಿಂದ 50 ರಷ್ಟು ಕುಸಿಯಲಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸರಬರಾಜಿನ ಕೊರತೆ ಇರುವುದರಿಂದ ಸಹಜವಾಗಿಯೇ ಏರಿಕೆ ಆಗುತಿದ್ದು ಜನವರಿ-ಮಾರ್ಚ್ ವೇಳೆಗೆ ಕಿಲೋಗೆ 3500 ಮೀರಲಿದೆ ಎಂದು ಮಾರುಕಟ್ಟೆ ತಜ್ಞರು ಆಭಿಪ್ರಾಯಿಸಿದ್ದಾರೆ.
ಭಾರತದಲ್ಲಿ ಉತ್ಪಾದನೆ ಹೇಗೆ
ವಿಶ್ವದ ಒಟ್ಟು ಏಲಕ್ಕಿ ಉತ್ಪಾದನೆ ಸುಮಾರು 1.90 ಲಕ್ಷ ಟನ್ ಗಳಷ್ಟಿದ್ದು ಭಾರತ ಏಲಕ್ಕಿ ಉತ್ಪಾದನೆಯಲ್ಲಿ (41,000 ಟನ್ ) ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಇದ್ದರೂ ರಫ್ತು ಮಾಡುತ್ತಿರುವುದು 11 ಸಾವಿರ ಟನ್ ಗಳಷ್ಟು ಮಾತ್ರ ಆಗಿದೆ. ಭಾರತದಲ್ಲಿ ದೇಶೀಯ ಬಳಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ.
ಇಂಡೋನೇಷ್ಯಾ ತನ್ನ 38 ಸಾವಿರ ಟನ್ ಉತ್ಪಾದನೆಯೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದು ಗ್ವಾಟೆಮಾಲ ಸುಮಾರು 37 ಸಾವಿರ ಟನ್ ಉತ್ಪಾದನೆಯೊಂದಿಗೆ ತೃತೀಯ ಸ್ಥಾನದಲ್ಲಿದೆ. ಭಾರತದ ಏಲಕ್ಕಿ ರಫ್ತಿಗೆ ಕೊಲ್ಲಿ ರಾಷ್ಟ್ರಗಳೇ ಪ್ರಮುಖ ಗ್ರಾಹಕರಾಗಿದ್ದು ಭಾರತೀಯ ಏಲಕ್ಕಿ ರಫ್ತುದಾರರು ಫೆಬ್ರವರಿ 2025 ರ ವೇಳೆಗೆ ರಂಜಾನ್ ಹಬ್ಬಕ್ಕೂ ಮುಂಚಿತವಾಗಿ ಗಲ್ಫ್ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಗಿಸುವ ಭರವಸೆಯನ್ನು ಹೊಂದಿದ್ದಾರೆ.
ಉತ್ಪಾದನೆ ಕುಸಿತದ ಆತಂಕ
ಗ್ವಾಟೆಮಾಲಾ 2024-25 ರ ಉತ್ಪಾದನೆಯು ಕಳೆದ ವರ್ಷಕ್ಕಿಂತ 44 ಪ್ರತಿಶತದಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ವರದಿಗಳನ್ನು ಉಲ್ಲೇಖಿಸಿ ರಫ್ತುದಾರರು ಹೇಳಿದ್ದಾರೆ. ಗ್ವಾಟೆಮಾಲಾದಲ್ಲಿ ಒಟ್ಟು ಉತ್ಪಾದನೆಯು 18,884 ಟನ್‌ಗಳಿಗೆ ಇಳಿದಿದೆ. ಗ್ವಾಟೆಮಾಲಾದಲ್ಲಿ ಮೊದಲ ಸುತ್ತಿನ ಕೊಯ್ಲು ಪೂರ್ಣಗೊಂಡಿದೆ.
ಈ ಋತುವಿನಲ್ಲಿ ಭಾರತದ ಬೆಳೆ ಕೂಡ ಹವಾಮಾನದ ವೈಪರೀತ್ಯದ ಕಾರಣದಿಂದಾಗಿ ಶೇ.50ರಷ್ಟು ಕಡಿಮೆಯಾಗಿದೆ. ಗ್ವಾಟೆಮಾಲಾ ಏಲಕ್ಕಿ ಬೆಲೆಯು ಭಾರತೀಯ ಏಲಕ್ಕಿಗಿಂತ ಶೇಕಡ 30 ರಷ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಗ್ವಾಟೆಮಾಲ ಉತ್ಪಾದನೆ ಕೊರತೆಯಿಂದ ಸೃಷ್ಟಿಯಾಗುವ ಖಾಲಿ ಸ್ಥಾನಕ್ಕೆ ಭಾರತದ ಏಲಕ್ಕಿ ಬೆಳೆ ಭರ್ತಿ ಆಗಲಿದೆ. ಇದರಿಂದ ಮುಂದಿನ ನಾಲ್ಕೈದು ತಿಂಗಳಲ್ಲಿ ಭಾರತೀಯ ಉತ್ಪನ್ನಗಳನ್ನು ಉತ್ತಮ ಪ್ರಮಾಣದಲ್ಲಿ ರಫ್ತು ಮಾಡಬಹುದಾಗಿದೆ. "2025 ರ ಜನವರಿಯಿಂದ ಮಾರ್ಚ್‌ನಲ್ಲಿ ಭಾರತೀಯ ಏಲಕ್ಕಿ ಬೆಲೆ ಪ್ರತಿ ಕೆಜಿಗೆ 3,500 ರೂ ತಲುಪುತ್ತದೆ ಎಂದು ನಾವು ನಿರೀಕ್ಷಿಸಬಹುದು" ಎನ್ನುತ್ತಾರೆ ತಜ್ಞರು.
ಕೇರಳದಲ್ಲಿ ಅತ್ಯಧಿಕ
ಭಾರತದಲ್ಲಿ ಕೇರಳ ರಾಜ್ಯವು ತನ್ನ ವಾರ್ಷಿಕ 20 ಸಾವಿರ ಟನ್ ಉತ್ಪಾದನೆಯೊಂದಿಗೆ ಮುಂಚೂಣಿಯಲ್ಲಿದೆ. ಕೇರಳ ಮಾರುಕಟ್ಟೆ ಅಧಿಕಾರಿಗಳ ಪ್ರಕಾರ ಗ್ವಾಟೆಮಾಲಾದಲ್ಲಿ ಮುಂದಿನ ಏಲಕ್ಕಿ ಉತ್ಪಾದನೆಯು ಸುಮಾರು 17,000 ರಿಂದ 20,000 ಟನ್‌ಗಳು ಎಂದು ಅಂದಾಜಿಸಲಾಗಿದೆ ಇದು ಕಳೆದ ಋತುವಿಗಿಂತ 40-50 ರಷ್ಟು ಕಡಿಮೆಯಾಗಿದೆ.
ಕೇರಳದ ಬೋಡದಿ ನಾಯಕನೂರಿನ ಏಲಕ್ಕಿ ರಫ್ತುದಾರರಾದ ಎಸ್‌ಕೆಎಂ ಧನವಂತನ್ ಮಾತನಾಡಿ, ರಂಜಾನ್ ಮಾರಾಟ ಇನ್ನೂ ಪ್ರಾರಂಭವಾಗಿಲ್ಲ , ಮತ್ತು ಭಾರತ ಮತ್ತು ಗ್ವಾಟೆಮಾಲಾ ಎರಡರಲ್ಲೂ ಬಿಗಿಯಾದ ಬೆಳೆ ಪರಿಸ್ಥಿತಿಯನ್ನು ಗಮನಿಸಿದರೆ, ಬೆಲೆ ಮತ್ತು ಪ್ರಮಾಣದಲ್ಲಿ ಬೇಡಿಕೆಯನ್ನು ಪೂರೈಸುವುದು ಸವಾಲಿನ ಸಂಗತಿಯಾಗಿದೆ. ಪ್ರಸ್ತುತ ಹೆಚ್ಚಿನ ಬೆಲೆಗಳು ನಿಯಮಿತ ಚಿಲ್ಲರೆ ಮಾರಾಟಕ್ಕೆ ಸರಿಹೊಂದುತ್ತವೆ ಮತ್ತು ಮುಂಬರುವ ತಿಂಗಳುಗಳಲ್ಲಿ ದೇಶೀಯ ಅಗತ್ಯಗಳನ್ನು ಪೂರೈಸಬಹುದು, ಅತಿಯಾದ ಬೆಲೆ ಏರಿಕೆಯು ಉದ್ಯಮವನ್ನು ಅಡ್ಡಿಪಡಿಸಬಹುದು, ರಫ್ತು ಪ್ರಮಾಣವನ್ನು ತೀವ್ರವಾಗಿ ಸೀಮಿತಗೊಳಿಸುತ್ತದೆ ಎಂದು ಅವರು ಹೇಳಿದರು.
ಭಾರತದ ಪರಿಮಳಕ್ಕೆ ಬೆಲೆ
ಭಾರತದಲ್ಲಿ ಉತ್ಪಾದನೆಯಾಗುವ ಏಲಕ್ಕಿಯು ಗಾತ್ರದಲ್ಲಿ ಸಣ್ಣದಾಗಿದ್ದು ಗುಣಮಟ್ಟದಲ್ಲಿ ಉತ್ತಮವಾಗಿದೆ. ಇದರ ಪರಿಮಳವೂ ಹೆಚ್ಚು. ಗ್ವಾಟೆಮಾಲ ಹಾಗೂ ಇಂಡೋನೇಷ್ಯಾದಲ್ಲಿ ಉತ್ಪತ್ತಿ ಆಗುವ ಏಲಕ್ಕಿಯ ಕಾಯಿ ಗಾತ್ರದಲ್ಲಿ ದೊಡ್ಡದಿರುತ್ತದೆ. ಅಲ್ಲಿ ಕಡಿಮೆ ದರ್ಜೆಯ ಏಲಕ್ಕಿಯನ್ನೂ ಉತ್ಪಾದಿಸಲಾಗುತ್ತಿದೆ.
ಭಾರತದಲ್ಲಿ ಕಡಿಮೆ ದರ್ಜೆಯ ಏಲಕ್ಕಿ ಬಳಕೆದಾರರಿಗೆ ಸರಬರಾಜು ಮಾಡಲು ಗ್ವಾಟೆಮಾಲದ ಏಲಕ್ಕಿಯನ್ನೂ ಆಮದು ಮಾಡಿಕೊಳ್ಳಲಾಗುತ್ತಿದೆ. ಆಮದು ನೀತಿಯ ಪ್ರಕಾರ ಈ ಏಲಕ್ಕಿ ಬೆಲೆಯು ಕಿಲೋ ಗ್ರಾಂ ಗೆ 500 ರೂಪಾಯಿಗಳಿಗಿಂತ ಹೆಚ್ಚಾಗಿರಬೇಕು ಮತ್ತು ಇದಕ್ಕೆ ಶೇಕಡಾ 70 ರಷ್ಟು ಆಮದು ಶುಲ್ಕ ವಿಧಿಸಲಾಗುತ್ತಿದೆ.
ಈಗ ಗ್ವಾಟೆಮಾಲದಲ್ಲಿಯೇ ಉತ್ಪಾದನೆ ಕೊರತೆ ಆಗಿರುವುದರಿಂದ ಆಮದೂ ಕೂಡ ಕಡಿಮೆಯಾಗಿ ಭಾರತೀಯ ಮಾರುಕಟ್ಟೆಯಲ್ಲಿ ಭಾರತದ ಏಲಕ್ಕಿ ಮಾರಾಟ ಮತ್ತಷ್ಟು ಹೆಚ್ಚಾಗಲಿದೆ ಇದು ಬೆಲೆ ಗಗನಮುಖಿ ಆಗಲು ಕಾರಣವಾಗಲಿದೆ.
(ವಿಶೇಷ ಲೇಖನ: ಕೋವರಕೊಲ್ಲಿ ಇಂದ್ರೇಶ್, ಮಡಿಕೇರಿ)
ವಿಭಾಗ