Hassan Sex Scandal: ಹಾಸನದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಪೆನ್‌ಡ್ರೈವ್ ಉರುಳು; ಎಸ್‌ಐಟಿ ತನಿಖೆಗೆ ಸರ್ಕಾರ ನಿರ್ಧಾರ
ಕನ್ನಡ ಸುದ್ದಿ  /  ಕರ್ನಾಟಕ  /  Hassan Sex Scandal: ಹಾಸನದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಪೆನ್‌ಡ್ರೈವ್ ಉರುಳು; ಎಸ್‌ಐಟಿ ತನಿಖೆಗೆ ಸರ್ಕಾರ ನಿರ್ಧಾರ

Hassan Sex Scandal: ಹಾಸನದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಪೆನ್‌ಡ್ರೈವ್ ಉರುಳು; ಎಸ್‌ಐಟಿ ತನಿಖೆಗೆ ಸರ್ಕಾರ ನಿರ್ಧಾರ

ಪ್ರಜ್ವಲ್‌ ರೇವಣ್ಣ ನೂರಾರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಲೈಂಗಿಕ ದೌರ್ಜನ್ಯ ನಡೆಸಿರುವ ವಿಡಿಯೊ ದೃಶ್ಯಾವಳಿ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದೀಗ ರಾಜ್ಯ ಸರ್ಕಾರವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಗೆ ಆದೇಶಿಸಿದೆ.

ಹಾಸನ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ
ಹಾಸನ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (ಸಂಗ್ರಹ ಚಿತ್ರ)

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ, ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರಜ್ವಲ್‌ ರೇವಣ್ಣ ನೂರಾರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಲೈಂಗಿಕ ದೌರ್ಜನ್ಯ ನಡೆಸಿರುವ ವಿಡಿಯೊ ದೃಶ್ಯಾವಳಿ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಈ ಹಗರಣ ಕುರಿತು ತನಿಖೆ ನಡೆಸಲು ಎಸ್‌ಐಟಿ ರಚಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಎಡಿಜಿಪಿ ಬಿ.ಕೆ.ಸಿಂಗ್ ತನಿಖೆಯ ನೇತೃತ್ವ ವಹಿಸಲಿದ್ದಾರೆ.

ಹಾಸನ ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ನಿರಂತರವಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸುವಂತೆ ಅವರು ಶಿಫಾರಸು ಮಾಡಿದ್ದರು. ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ವಿಡಿಯೊ ತುಣುಕುಗಳನ್ನು ಗಮನಿಸಿದರೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಕಾರಣದಿಂದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಏನಿದು ಪೆನ್ ಡ್ರೈವ್ ಕಥೆ?

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಎರಡು ದಿನಗಳು ಬಾಕಿ ಉಳಿದಿರುವಾಗ ಈ ವಿಡಿಯೊ ದೃಶ್ಯಾವಳಿಗಳ ತುಣುಕುಗಳ ಪೆನ್‌ಡ್ರೈವ್‌ಗಳು ಹಾಸನದಾದ್ಯಂತ ಹರಿದಾಡುತ್ತಿದ್ದವು. ಮತದಾನಕ್ಕೆ ಎರಡು ದಿನಗಳು ಬಾಕಿ ಉಳಿದಿರುವಾಗ ಯುವತಿಯರೊಂದಿಗೆ ಪ್ರಜ್ವಲ್ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ವಿಡಿಯೊ ಮತ್ತು ಚಿತ್ರಗಳ ಪೆನ್‌ಡ್ರೈವ್‌ಗಳು ಉದ್ಯಾನವನ ಮತ್ತು ಕ್ರೀಡಾಂಗಣಗಳ ದಾರಿಯುದ್ದಕ್ಕೂ ಸಾರ್ವಜನಿಕರ ಕೈಗೆ ಸಿಗುವಂತೆ ಎರಚಾಡಲಾಗಿತ್ತು ಎಂದು ಹೇಳಲಾಗುತ್ತಿದೆ.

ಇದರ ಮುನ್ಸೂಚನೆ ಇದ್ದ ಪ್ರಜ್ವಲ್ ಒಂದು ತಿಂಗಳ ಹಿಂದೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ತಮಗೆ ಸಂಬಂಧಿಸಿದ ಯಾವುದೇ ವಿಡಿಯೋಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದೆಂದು ತಡೆಯಾಜ್ಞೆ ತಂದಿದ್ದರು‌. ಚುನಾವಣೆಗೆ ಎರಡು ದಿನಗಳು ಬಾಕಿ ಇರುವಾಗಲೇ

ವಿಡಿಯೋಗಳು ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡುತ್ತಿದ್ದು, ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ ಎನ್ನುವುದು ದೇವೇಗೌಡರ ಕುಟುಂಬದ ಕುಡಿ ಪ್ರಜ್ವಲ್‌ಗೆ ಕಾಡುತ್ತಿದೆ. ಪ್ರಜ್ವಲ್ ಅವರ ಇಡೀ ಕುಟುಂಬ ಆತಂಕಕ್ಕೀಡಾಗಿದೆ.

ಎಸ್‌ಐಟಿ ರಚನೆಗೆ ಮೊದಲೇ ಜರ್ಮನಿಗೆ ಹಾರಿದ ಪ್ರಜ್ವಲ್ ರೇವಣ್ಣ

ಕರ್ನಾಟಕ ಸರ್ಕಾರವು ತನಿಖೆಗೆ ಆದೇಶ ಹೊರಡಿಸುವುದಕ್ಕೂ ಮೊದಲೇ ಪ್ರಜ್ವಲ್‌ ರೇವಣ್ಣ ಜರ್ಮನಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂತಹ ಖಾಸಗಿ ಕ್ಷಣದ ವಿಡಿಯೋಗಳು ಹರಿದಾಡುತ್ತಿವೆ. ನೂರಾರು ಹೆಣ್ಣು ಮಕ್ಕಳ ಬಾಳು ಹಾಳಾಗಿದೆ. ಆದ್ದರಿಂದ ಹಾಸನದಲ್ಲಿ ಪ್ರಜ್ವಲ್ ಅವರಿಗೆ ಟಿಕೆಟ್ ನೀಡಬಾರದು ಎಂದು ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಹಿಂದೆಯೇ ಪತ್ರ ಬರೆದಿದ್ದರು ಎನ್ನುವ ಸಂಗತಿಯೂ ಇದೀಗ ಬಹಿರಂಗವಾಗಿದ್ದು, ಕರ್ನಾಟಕದ ಇತರ ಕ್ಷೇತ್ರಗಳಲ್ಲಿಯೂ ಬಿಜೆಪಿಯ ನಿರ್ಧಾರದ ಬಗ್ಗೆ ಅಸಹನೆ ವ್ಯಕ್ತವಾಗಿದೆ.

ಸ್ಥಳೀಯ ಸಂಘಸಂಸ್ಥೆಗಳು ಮಹಿಳಾ ಸಂಘಟನೆಗಳು ಸಹ ಪ್ರಜ್ವಲ್ ರೇವಣ್ಣ ವಿರುದ್ಧ ತನಿಖೆಗೆ ಆಗ್ರಹಿಸಿದ್ದವು. ಪ್ರಜ್ವಲ್ ರೇವಣ್ಣ ಮತ್ತು ಈ ಪೆನ್‌ಡ್ರೈವ್‌ಗಳನ್ನು ಹಂಚಿದವರನ್ನು ಬಂಧಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟ ನಾಳೆ (ಏ 29) ಪ್ರತಿಭಟನೆ ಹಮ್ಮಿಕೊಂಡಿದೆ. ಪೆನ್‌ಡ್ರೈವ್‌ಗಳಲ್ಲಿರುವ ದೃಶ್ಯಗಳು ನಕಲಿಯಾಗಿದ್ದು ಪ್ರಜ್ವಲ್ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಮಾರ್ಫ್‌ ಮಾಡಿದ ಅಶ್ಲೀಲ ವಿಡಿಯೋಗಳನ್ನು ಸೃಷ್ಟಿಸಲಾಗಿದೆ ಎಂದು ಪ್ರಜ್ವಲ್ ಆಪ್ತ ನವೀನ್ ಗೌಡ ಪ್ರತಿದೂರು ದಾಖಲಿಸಿದ್ದಾರೆ.

ಈ ಪ್ರಕರಣ ಬಿಜೆಪಿಗೂ ಇರಿಸುಮುರಿಸು ಉಂಟು ಮಾಡಿದೆ. ಈ ಪ್ರಕರಣ ಕುರಿತು ನಿಲುವನ್ನು ಸ್ಪಷ್ಟಪಡಿಸುವಂತೆ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಅಗ್ರಪಡಿಸುತ್ತಿದೆ. ಅದರೆ ಬಿಜೆಪಿ ಮುಖಂಡರು ತುಟಿ ಬಿಚ್ಚುತ್ತಿಲ್ಲ. ಈ ಪ್ರಕರಣವು ಇದೀಗ ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬ ತಲೆ ತಗ್ಗಿಸುವಂತೆ ಮಾಡಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಪ್ರಜ್ವಲ್ ಗೆದ್ದರೂ, ಸೋತರೂ ಈ ಪ್ರಕರಣದ ಕಾವು ಮತ್ತಷ್ಟು ಹೆಚ್ಚಾಗಲಿದೆ. ಹಾಸನದಲ್ಲಿ ತಮ್ಮ ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ಬಿಜೆಪಿಯ ಮಾಜಿ ಶಾಸಕರೊಬ್ಬರು ಈ ಪ್ರಕರಣ ಬಹಿರಂಗಪಡಿಸಿದ್ದಾರೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದೆ. ಆದರೆ ಇಂಥ ರಾಜಕಾರಿಣಿಗಳ ಚದುರಂಗದಾಟಕ್ಕೆ, ತೆವಲುಗಳಿಗೆ ಬಲಿಯಾದ ಹೆಣ್ಣುಮಕ್ಕಳ ಭವಿಷ್ಯ ಏನಾದೀತು? ಅವರು ತಲೆ ಎತ್ತಿ ಓಡಾಡುವುದಾದರೂ ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

Whats_app_banner