ಕೋರಮಂಗಲದ 3ನೇ ಬ್ಲಾಕ್ನಲ್ಲಿ ಚದರ ಅಡಿಗೆ 70 ಸಾವಿರ, ಅಂತಹ ಸವಲತ್ತು- ಸೌಲಭ್ಯಗಳು ಏನಿವೆ? ಇಲ್ಲಿ ವಾಸವಿರೋದು ಯಾರೆಲ್ಲಾ?
Bengaluru: ಕೋರಮಂಗಲದ 3ನೇ ಬ್ಲಾಕ್ನಲ್ಲಿ ಚದರ ಅಡಿಗೆ 70 ಸಾವಿರ ಇದೆ. ಅಂತಹ ಸವಲತ್ತು ಸೌಲಭ್ಯಗಳು ಏನೇನಿವೆ? ಈ ಪ್ರತಿಷ್ಠಿತ ಬಡಾವಣೆಯಲ್ಲಿ ಯಾರೆಲ್ಲಾ ವಾಸವಾಗಿದ್ದಾರೆ ? ಇಲ್ಲಿದೆ ಮಾಹಿತಿ. (ವರದಿ-ಎಚ್. ಮಾರುತಿ)
ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿಯೂ ಆಗಿರುವ ಬೆಂಗಳೂರಿನ ಕೋರಮಂಗಲದ 3ನೇ ಬ್ಲಾಕ್ ಅನ್ನು ಬಿಲೆನಿಯರ್ ಸ್ಟ್ರೀಟ್ ಎಂದೂ ಕರೆಯಲಾಗುತ್ತದೆ. ದೇಶದ ಪ್ರಖ್ಯಾತ ಉದ್ಯಮಿಗಳು, ಬಿಲೆನಿಯರ್ಗಳು, ಪ್ರತಿಷ್ಠಿತ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು, ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿಗಳು ಇಲ್ಲಿನ ನಿವಾಸಿಗಳಾಗಿದ್ದಾರೆ. ಇದೇ ಕಾರಣಕ್ಕೆ ಇಲ್ಲಿನ ಒಂದೊಂದು ಚದುರ ಅಡಿ ಭೂಮಿಯೂ ವಜ್ರಕ್ಕಿಂತ ಹೆಚ್ಚು ಬೆಲೆ ಬಾಳುತ್ತದೆ. ಈ ವರ್ಷದ ಆರಂಭದಲ್ಲಿ ಈ ಬಿಲೆನಿಯರ್ ರಸ್ತೆಯಲ್ಲಿ ಮಾರಾಟವಾದ ನಿವೇಶನವೊಂದರ ಬೆಲೆ ಇಡೀ ದೇಶದ ಗಮನ ಸೆಳೆದಿದ್ದಂತೂ ಸುಳ್ಳಲ್ಲ!
ರಿಯಲ್ ಎಸ್ಟೇಟ್ ಉದ್ಯಮಿಗಳೇ ಅಬ್ಬಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ಅಚರಿಪಟ್ಟಿದ್ದರು. ಖ್ವೆಸ್ ಕಾರ್ಪ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಐಸಾಕ್ ಅವರು ಬರೋಬ್ಬರಿ 67.5 ಕೋಟಿ ರೂಪಾಯಿ ಪಾವತಿಸಿ 10,000 ಚದರ ಅಡಿಯ ಅಪಾರ್ಟ್ ಮೆಂಟ್ ಖರೀದಿಸಿದ್ದರು. ಪ್ರತಿ ಚದುರ ಅಡಿಗೆ ಎಷ್ಟು ದರ ಎಂದು ನಿವೇ ಲೆಕ್ಕ ಹಾಕಿಕೊಂಡುಬಿಡಿ. ಈ ವ್ಯವಹಾರಕ್ಕೂ ಮುನ್ನ ಟಿವಿಎಸ್ ಮೋಟಾರ್ಸ್ ಸಂಸ್ಥೆಯು 9,488 ಚದುರ ಅಡಿ ವಿಸ್ತೀರ್ಣದ ಅಪಾರ್ಟ್ ಮೆಂಟ್ ಅನ್ನು ಪ್ರತಿ ಚದುರ ಅಡಿಗೆ 68,597 ರೂ. ತೆತ್ತು ಖರೀದಿಸಿದ್ದರು.
3ನೇ ಬ್ಲಾಕ್ ಮಾತ್ರ ದುಬಾರಿ
ಪ್ರತಿಷ್ಠಿತ ಬಡಾವಣೆಗಳಲ್ಲಿ ನಿವೇಶನವಾಗಲೀ ವಸತಿ ಸಮುಚ್ಚಯವಾಗಲೀ ಮಾರಾಟಕ್ಕೆ ಅಲಭ್ಯ ಎಂದೇ ಹೇಳಬಹುದು. ಕೋರಮಂಗಲ ಮೂರನೇ ಹಂತದಂತಹ ಪ್ರತಿಷ್ಠಿತ ಪ್ರದೇಶಗಳಲ್ಲಿ ದುಪ್ಪಟ್ಟು ಬೆಲೆ ತೆತ್ತರೂ ಅಡಿ ಭೂಮಿಯೂ ಸಿಗುವುದಿಲ್ಲ. ಹಾಗಾಗಿ ಬೆಲೆ ಹೆಚ್ಚಳವಾಗುತ್ತದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಭಿಪ್ರಾಯಪಡುತ್ತಾರೆ. ಇದೇ ಮಾದರಿಯನ್ನು ಎಲ್ಲ ಏರಿಯಾಗಳಿಗೂ ಅನ್ವಯಿಸುವುದಿಲ್ಲ ಎಂದು ಹೇಳುತ್ತಾರೆ. ಕೋರಮಂಗಲದ ಆರು ಬ್ಲಾಕ್ಗಳಲ್ಲಿ 3ನೇ ಬ್ಲಾಕ್ ಮಾತ್ರ ದುಬಾರಿಯಾಗಿದೆ. ಇಲ್ಲಿ ವಿಸ್ತಾರವಾದ ಅಪಾರ್ಟ್ ಮೆಂಟ್ ಗಳು ಮತ್ತು ಸ್ವತಂತ್ರ ಮನಗಳೂ ವಿಸ್ತಾರವಾಗಿರುವುದು, ದುಬಾರಿಯಾಗಲು ಕಾರಣವಾಗಿದೆ. ಮಧ್ಯವರ್ತಿಗಳ ಪ್ರಕಾರ ಇಲ್ಲಿ 4000 ಅಡಿಗಿಂತಲೂ ಕಡಿಮೆ ಇರುವ ಬಂಗಲೆಗಳೇ ಇಲ್ಲವೇ ಇಲ್ಲ ಎಂದು ಹೇಳುತ್ತಾರೆ.
ದುಬಾರಿಯಾಗಲು ಇತರೆ ಕಾರಣಗಳು
ಇಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳು, ಶಿಕ್ಷಣ ಸಂಸ್ಥೆಗಳು, ಮಾಲ್ ಗಳು ಆಸ್ಪತ್ರೆಗಳು ಬೆಲೆ ಹೆಚ್ಚಳಕ್ಕೆ ಕಾರಣವಾಗಿವೆ. ಈ ಮೂರನೇ ಬ್ಲಾಕ್ ಅನೇಕ ಐಟಿಬಿಟಿ ಕಂಪನಿಗಳಿಗೆ ಹತ್ತಿರದಲ್ಲಿರುವುದೂ ಕಾರಣವಾಗಿದೆ. ಬನ್ನೇರುಘಟ್ಟ 6 ಕಿಮೀ, ಬೆಳ್ಳಂದೂರು 7 ಕಿಮೀ, ಸರ್ಜಪುರ ಮಾರತ್ತಹಳ್ಳಿ 6.5 ಕಿಮೀ ಮತ್ತು ಎಲೆಕ್ಟ್ರಾನಿಕ್ ಸಿಟಿ 13 ಕಿಮೀ ದೂರಲ್ಲಿದೆ. ಇಲ್ಲಿ ರಿಯಲ್ ಎಸ್ಟೇಟ್ ಬೆಲೆ ದುಬಾರಿಯಾಗಲು ಮತ್ತೇನು ಕಾರಣಗಳು ಬೇಕು? ಇಲ್ಲಿನ ಸೌಲಭ್ಯ ಸವಲತ್ತುಗಳು ಇಲ್ಲಿಗೆ ನಿಲ್ಲುವುದಿಲ್ಲ. ಕೋರಮಂಗಲ ಪ್ರಮುಖ ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಹಬ್ ಕೂಡಾ ಆಗಿದೆ.
ಹಾಗೆಯೇ ಕೋರಮಂಗಲ ಬೆಂಗಳೂರಿನ ಸ್ಟಾರ್ಟ್ ಅಪ್ ಹಬ್ ಎಂದೂ ಹೆಸರಾಗಿದೆ. ಇಲ್ಲಿ ಯಾರೆಲ್ಲಾ ವಾಸಿಸುತ್ತಿರಬಹುದು ಎಂಬ ಕುತೂಹಲ ನಿಮ್ಮಲ್ಲಿ ಮನೆ ಮಾಡಿರಬಹುದು. ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್, ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಮತ್ತು ಕ್ರಿಸ್ ಗೋಪಾಲಕೃಷ್ಣನ್ ಮತ್ತು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿಶೆಟ್ಟಿ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪ್ರಮುಖರು.
ವಿನ್ಯಾಸ: ಇಲ್ಲಿ ಬಿಲೆನಿಯರ್ ಗಳೇ ವಾಸಿಸುತ್ತಿರುವುದರಿಂದ ಸಹಜವಾಗಿಯೇ ಐಷಾರಾಮಿ ಬಂಗಲೆಗಳು ಒಂದಕ್ಕಿಂತ ಒಂದು ಕಣ್ಣು ಕುಕ್ಕುವಂತಿವೆ. ಇಲ್ಲಿನ ಮನೆಗಳ ವಿನ್ಯಾಸ ಅದ್ಭುತ. ಹೆರಿಟೇಜ್ ವಿಲ್ಲಾಗಳಿಂದ ಹಿಡಿದು ಜಗತ್ತಿನ ಅದ್ಭುತ ವಿನ್ಯಾಸದ ಮನೆಗಳನ್ನೂ ಕಾಣಬಹುದು. ಇದು ಹೊರಗಡೆಯಿಂದ ಕಾಣುವ ದೃಶ್ಯಗಳಾದರೆ ಒಳಾಂಗಣದ ವಿನ್ಯಾಸ ಹೇಗಿರಬಹುದು ಎಂದು ಊಹಿಸಿಕೊಳ್ಳಿ. ಎತ್ತರದ ಗೇಟ್ ಗಳು, ಖಾಸಗಿ ಗಾರ್ಡನ್, ಈಜುಕೊಳ, ಜಿಮ್, ವಿಫುಲ ಕಾರ್ ಪಾರ್ಕಿಂಗ್, ಹಸಿರು ಇಂಧನ ಆಧಾರಿತ ಹಸಿರು ಕಟ್ಟಡಗಳು, ಮಳೆ ನೀರು ಕೊಯ್ಲಿನ ಮನೆಗಳನ್ನು ಕಾಣಬಹುದಾಗಿದೆ. ಇಲ್ಲಿ ಮನೆ ಹೊಂದುವುದು ಉಳ್ಳವರಿಗೆ ಪ್ರತಿಷ್ಠೆಯ ಸಂಕೇತವೂ ಹೌದು.