ಪುಸ್ತಕ ಸಂತೆ 2: ಒಳ್ಳೆಯ ಪುಸ್ತಕಗಳ ಪಟ್ಟಿ ಕೊಡಿ ಎನ್ನುವವರು ಈ 7 ಮಾನದಂಡಗಳ ಕಡೆಗೆ ಗಮನಕೊಡಿ; ಲೇಖಕ ಮಧು ವೈಎನ್‌ ಸಲಹೆ
ಕನ್ನಡ ಸುದ್ದಿ  /  ಕರ್ನಾಟಕ  /  ಪುಸ್ತಕ ಸಂತೆ 2: ಒಳ್ಳೆಯ ಪುಸ್ತಕಗಳ ಪಟ್ಟಿ ಕೊಡಿ ಎನ್ನುವವರು ಈ 7 ಮಾನದಂಡಗಳ ಕಡೆಗೆ ಗಮನಕೊಡಿ; ಲೇಖಕ ಮಧು ವೈಎನ್‌ ಸಲಹೆ

ಪುಸ್ತಕ ಸಂತೆ 2: ಒಳ್ಳೆಯ ಪುಸ್ತಕಗಳ ಪಟ್ಟಿ ಕೊಡಿ ಎನ್ನುವವರು ಈ 7 ಮಾನದಂಡಗಳ ಕಡೆಗೆ ಗಮನಕೊಡಿ; ಲೇಖಕ ಮಧು ವೈಎನ್‌ ಸಲಹೆ

ಬೆಂಗಳೂರಿನ ಜಯನಗರದಲ್ಲಿ ಈಗ ಪುಸ್ತಕ ಸಂತೆ 2 ನಡೆಯುತ್ತಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜೊತೆಯಾಗಿರುವ ಈ ಪುಸ್ತಕ ಸಂತೆಯಲ್ಲಿ ಪುಸ್ತಕ ಖರೀದಿಸುವುದು ಹೇಗೆ? ಒಳ್ಳೆಯ ಪುಸ್ತಕಗಳ ಪಟ್ಟಿ ಕೊಡಿ ಎನ್ನುವವರು ಈ 7 ಮಾನದಂಡಗಳ ಕಡೆಗೆ ಗಮನಕೊಡಿ ಎಂದು ಲೇಖಕ ಮಧು ವೈಎನ್‌ ಸಲಹೆ ನೀಡಿದ್ದಾರೆ.

ಪುಸ್ತಕ ಸಂತೆ 2: ಒಳ್ಳೆಯ ಪುಸ್ತಕಗಳ ಪಟ್ಟಿ ಕೊಡಿ ಎನ್ನುವವರು ಈ 7 ಮಾನದಂಡಗಳ ಕಡೆಗೆ ಗಮನಕೊಡಿ ಎಂದು ಲೇಖಕ ಮಧು ವೈಎನ್‌ ಸಲಹೆ ನೀಡಿದ್ದಾರೆ. (ಸಾಂಕೇತಿಕ ಚಿತ್ರ)
ಪುಸ್ತಕ ಸಂತೆ 2: ಒಳ್ಳೆಯ ಪುಸ್ತಕಗಳ ಪಟ್ಟಿ ಕೊಡಿ ಎನ್ನುವವರು ಈ 7 ಮಾನದಂಡಗಳ ಕಡೆಗೆ ಗಮನಕೊಡಿ ಎಂದು ಲೇಖಕ ಮಧು ವೈಎನ್‌ ಸಲಹೆ ನೀಡಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ತಿಂಗಳ ಸಂಭ್ರಮ. ತನ್ನಿಮಿತ್ತವಾಗಿ ಕನ್ನಡ ಪುಸ್ತಕ ಹಬ್ಬ, ಪುಸ್ತಕ ಸಂತೆ ಮುಂತಾದ ಹಲವು ಕಾರ್ಯಕ್ರಮಗಳು ಗಮನಸೆಳೆಯುತ್ತಿವೆ. ವೀರಲೋಕ ಬುಕ್ಸ್ ಆಯೋಜಿಸಿರುವ ಪುಸ್ತಕ ಸಂತೆ 2 ಬೆಂಗಳೂರಿನ ಜಯನಗರದಲ್ಲಿ ನವೆಂಬರ್ 15ಕ್ಕೆ ಶುರುವಾಗಿದ್ದು ನಾಳೆ ಸಂಪನ್ನಗೊಳ್ಳಲಿದೆ. ಈ ಪುಸ್ತಕ ಸಂತೆ ಕುರಿತಾಗಿ ಲೇಖಕ, ಕತೆಗಾರ, ಕಾದಂಬರಿಕಾರ ಮಧು ವೈ ಎನ್‌ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅದು ಹೀಗಿದೆ-

ಒಳ್ಳೆಯ ಪುಸ್ತಕಗಳ ಪಟ್ಟಿ ಕೊಡಿ ಎನ್ನುವವರು ಈ ಮಾನದಂಡಗಳ ಕಡೆಗೆ ಗಮನಕೊಡಿ

ನಾನು ಪುಸ್ತಕಗಳ ಬಗ್ಗೆ ಒಳ್ಳೊಳ್ಳೆ ಮಾತುಗಳನ್ನು ಹೇಳುವುದು ಸ್ವತಃ ಲೇಖಕ ಎಂಬ ಕಾರಣಕ್ಕಲ್ಲ. ಅದು ಆಕಸ್ಮಿಕ ಮಾತ್ರ. ನನಗೆ ಪುಸ್ತಕಗಳಿಂದ ಬಹಳ ಸಹಾಯವಾಗಿದೆ. ನನ್ನ ಅನುಭವ ಎಲ್ಲರದೂ ಆಗಲಿ ಎಂಬ ಆಶಯದಿಂದ ಈ ಕೆಲವು ಮಾತು.

ಕೆಟ್ಟ ಪುಸ್ತಕಗಳು ಇದಾವೆ. ಇಲ್ಲಾಂತಲ್ಲ. ಬರವಣಿಗೆ ಕೆಟ್ಟದಿರಬಹುದು. ವಿಷಯ ಕೆಟ್ಟದಿರಬಹುದು. ಉದ್ದೇಶ ಕೆಟ್ಟದಿರಬಹುದು. ಇಂಥವನ್ನು ಬದಿಗಿಟ್ಟರೆ...

ಪುಸ್ತಕ ಲೋಕದಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ, ವಜ್ರ. ಕನಿಷ್ಠ ಕಂಚು. ತಗಡಲ್ಲೂ ಏನೋ ಒಂದು ಇರುತ್ತೆ. ಅದು ಬಿಡಿ,

ಪುಸ್ತಕಗಳು ಅಕ್ಷರಶಃ ಹೂವಿದ್ದಂತೆ. ಎಂದಾದರೂ ನಿಮಗೆ ನಿಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಅರಳುವ, ದಿನನಿತ್ಯ ಎದುರಾಗುವ ಹೂವೊಂದು ಕೆಡುಕು ಅನ್ನಿಸಿದ್ದಿದೆಯೇ?

ಹೂವು ಮುಡಿದರೆ ಸಿಂಗಾರ; ಮುಡಿಸಿದರೆ ಭಕ್ತಿ. ನೋಡಲು ಅಂದ. ಮೂಗಿಗೆ ಸುಗಂಧ. ಜಗತ್ತು ಸಹ್ಯವಾಗಿರುವುದೇ ಹೂಗಳಿಂದ. ಸುಮ್ಮನೆ ಒಂದು ಹೂವನ್ನು ಅರೆಗಳಿಗೆ ದಿಟ್ಟಿಸಿ ನೋಡಿ, ಅದು ನಿಮ್ಮನ್ನು ಸೌಮ್ಯಗೊಳಿಸುತ್ತದೆ. ನಿಮ್ಮೊಳಗಿರಬಹುದಾದ ಒಳ್ಳೆಯದನ್ನು ಉದ್ದೀಪಿಸುತ್ತದೆ. ಕೊಲೆಗಾರನೊಬ್ಬ, ಅತ್ಯಾಚಾರಿಯೊಬ್ಬ ಬೃಂದಾವನದಲ್ಲಿ ಅರ್ಧ ಗಂಟೆ ಕಾಲ ಕಳೆದರೆ ತನ್ನ ನಿರ್ಧಾರ ಬದಲಿಸುವ ಎಂಬ ಬಲವಾದ ನಂಬಿಕೆ ನನ್ನದು.

ಹಾಗೆ ಪುಸ್ತಕಗಳೂ ಸಹ. ಇದನ್ನೆಲ್ಲ ಬರೆಯುತ್ತಿರುವುದು ನನ್ನನ್ನು ಪದೇ ಪದೇ ʼಸಾರ್‌ ನಾನೂ ಪುಸ್ತಕ ಓದಬೇಕು, ನನ್ನ ಮಕ್ಕಳಿಗೂ ಓದಿಸಬೇಕು, ದಯಮಾಡಿ ಒಳ್ಳೆಯ ಪುಸ್ತಕಗಳ ಪಟ್ಟಿ ಕೊಡಿʼ ಎಂದು ಕೇಳುವವರಿಗೆ. ಇಂಥವರು ಬಹುಶಃ ಈ ಕೆಳಗಿನ ಕೆಲವು ಮಾನದಂಡಗಳನ್ನು ಇಟ್ಟುಕೊಳ್ಳಬಹುದು.

ಒಳ್ಳೆಯ ಪುಸ್ತಕಗಳ ಆಯ್ಕೆಗೆ 7 ಮಾನದಂಡಗಳು

೧. ಕೆಲವು ಪುಸ್ತಕಗಳಿರುತ್ತವೆ. ಅವು ನಿಮ್ಮನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯುತ್ತವೆ. ಬೆರಗುಗೊಳಿಸುತ್ತವೆ. ಅಲ್ಲಿ ಮನುಷ್ಯನ ಬದುಕು ಸಹನೀಯವಾಗಿರುತ್ತದೆ. ಸುಂದರವಾಗಿರುತ್ತದೆ. ಕಷ್ಟಗಳಿಗೆ ಪರಿಹಾರವಿರುತ್ತದೆ. ನೋವಿಗೆ ಸಾಂತ್ವನವಿರುತ್ತದೆ. ಅಲ್ಲೊಬ್ಬ ಒಳ್ಳೆಯವನು ಇರುತ್ತಾನೆ. ಕೆಟ್ಟವರ ವಿರುದ್ಧ ಹೋರಾಡಿ ಜಯಿಸುತ್ತಾನೆ. ನಿಮ್ಮನ್ನು ಕಾಪಾಡುತ್ತಾನೆ. ಇವು ಬಹಳ ಬಹಳ ಮುಖ್ಯ.

೨. ಇನ್ನು ಕೆಲವು ಪುಸ್ತಕಗಳು ನಿಮ್ಮನ್ನು ಇರುವ ಲೋಕದಲ್ಲೇ ಅಲೆದಾಡಿಸಿ ಕಷ್ಟಗಳನ್ನು ಒಡ್ಡಿ ಹಿಂಸಿಸುತ್ತವೆ. ಕ್ರಮೇಣ ನೀವೇ ಪರಿಹಾರಕ್ಕೆ ಹೋರಾಡುವಂತೆ ಮಾಡಿ ನಿಮ್ಮೊಳಗಿನ ಹೀರೋ ಅನ್ನು ಹೊರತರುತ್ತವೆ. ಇವೂ ಬಹಳ ಬಹಳ ಮುಖ್ಯ. ನಿಮ್ಮ ನಿಮ್ಮ ಬದುಕಿನಲ್ಲಿ ನೀವೇ ಹೀರೋ. ಇದು ಹೇಗೆಂದು ನಿಮಗೆ ಅರ್ಥವಾಗಬೇಕು.

೩. ಕೆಲವು ಪುಸ್ತಕಗಳು ನಿಮಗೆ ಬದುಕುವ ಮಾರ್ಗ ಕಲಿಸಿಕೊಡುತ್ತವೆ. ನಿಮ್ಮ ತಂದೆತಾಯಿ ಅಶಿಕ್ಷಿತರಿರಬಹುದು, ಅಥವಾ ಶಿಕ್ಷಿತ ಹೆತ್ತವರು ಅಲ್ಪ ವ್ಯಕ್ತಿತ್ವದವರಾಗಿರಬಹುದು. ಶಾಲೆಯಲ್ಲಿ ಸರಿಯಾದ ಶಿಕ್ಷಕರು ಸಿಗದಿರಬಹುದು. ಈ ಕೊರತೆಯನ್ನು ಕೆಲವು ಪುಸ್ತಕಗಳು ನೇರವಾಗಿ ಅಥವಾ ಉಪಾಯವಾಗಿ ಚರ್ಚಿಸಿ ನೀಗಿಸುತ್ತವೆ. ನಿಮ್ಮನ್ನು ಕೈಹಿಡಿದು ನಡೆಸುತ್ತವೆ. ಇವು ಸಹ ಬಹಳಾನೆ ಮುಖ್ಯ.

. ಕೆಲವು ಪುಸ್ತಕಗಳು ನಿಮಗೆ ಪರಿಚಯವಿರದ ಜ್ಞಾನ ಒದಗಿಸುತ್ತವೆ. ಇವು ನಿಮ್ಮ ಬುದ್ಧಿಯನ್ನು ಹಿಗ್ಗಿಸುತ್ತವೆ. ಇಂತಹ ಪುಸ್ತಕಗಳನ್ನು ಓದುವುದರಿಂದ ನೀವು ಅನ್ಯರಿಗಿಂತ ಸದಾ ಒಂದು ಹೆಜ್ಜೆ ಮುಂದೆ ಇರುತ್ತೀರಿ. ಇವು ನಿಮಗೆ ಅಡ್ವಾಂಟೇಜನ್ನೂ ವಿನಯವನ್ನೂ ಒಟ್ಟಿಗೆ ಕಲಿಸುತ್ತವೆ.

೫. ಇವು ಬಹುಮುಖ್ಯವಾದವು. ನಮ್ಮದಲ್ಲದ ಭಿನ್ನ ಸಂಸ್ಕೃತಿಯನ್ನು ಪರಿಚಯಿಸುವ ಪುಸ್ತಕಗಳು. ದೇಶ ಸುತ್ತು, ಇಲ್ಲಾ ಕೋಶ ಓದು ಎಂಬ ಗಾದೆ ಬಂದಿರುವುದೇ ಇವುಗಳಿಂದ. ಬೇರೆ ಜನ, ಬೇರೆ ದೇಶ, ಬೇರೆ ಊಟ, ಬೇರೆ ತೊಡುಗೆ.. ಇಂಥದನ್ನು ಪರಿಚಯಿಸುವ ಪುಸ್ತಕಗಳು.

೬. ಆತ್ಮಕಥನಗಳು. ಒಳ್ಳೆಯ ಕೆಟ್ಟವ ಎಲ್ಲರ ಆತ್ಮಕಥನಗಳನ್ನೂ ಓದಿ. ಅವರು ತುಳಿದಿರುವ ಹಾದಿ ಬಗ್ಗೆ ತಿಳಿದುಕೊಂಡಾಗ ನಿಮಗೂ ನಿಮ್ಮ ಹಾದಿಯ ಬಗ್ಗೆ ಎಚ್ಚರ ಮೂಡುವುದು. ಕನಿಷ್ಟ ಇವು ನೀವಾಗೇ ತಪ್ಪು ಮಾಡಿ ತಿದ್ದಿಕೊಳ್ಳುವ ಪ್ರಮೇಯ ತಪ್ಪಿಸುತ್ತವೆ.

೭. ದೆವ್ವ, ಸಾಹಸ, ಆಧ್ಯಾತ್ಮಿಕ, ತತ್ವಜ್ಞಾನ, ಹಾಸ್ಯದ ಪುಸ್ತಕಗಳನ್ನು ಓದಿ. ಇದ್ಯಾವುದೂ ಕನಿಷ್ಟವಲ್ಲ. ಒಂದಲ್ಲಾ ಒಂದು ರೀತಿ ನಿಮ್ಮನ್ನು ಉದ್ದೀಪಿಸುತ್ತವೆ.

ಕೊನೆಯದಾಗಿ- ಪೊಯೆಟ್ರಿ, ಶಾಸ್ತ್ರೀಯ ಸಂಗೀತವಿದ್ದಂತೆ. ಆರಂಭದಲ್ಲಿ ಕಷ್ಟ, ಅರ್ಥ ಆಗುತ್ತೆ. ಸುಮ್ಮನೆ ಒಂದನ್ನು ಕೈಲಿ ಹಿಡಿದುಕೊಂಡು ಹೋಗಿ. ಯಾವಾಗಲಾದರೂ ತೆರದು ನೋಡುವಿರಂತೆ.

ಈ ಎಲ್ಲ ಪೈಕಿಗಳಲ್ಲೂ ಕೇವಲ ಒಂದೊಂದು ಪುಸ್ತಕ ಖರೀದಿಸಿ. ಶುರುನಲ್ಲಿ ಬಟ್ಟೆ ತಗೊಳ್ವಾಗ ಅರ್ಧಕ್ಕರ್ಧ ನಿಮಗೆ ಸೂಟಾಗದವನ್ನೇ ತಗೊಂಡಿರ್ತೀರ. ಇಲ್ಲೂ ಹಾಗೆ ಆಗುತ್ತೆ. ಸ್ವಲ್ಪ ಹಣ ವೇಸ್ಟ್‌ ಅನಿಸಬಹುದು. ಹೋಗ್ತಾ ಹೋಗ್ತಾ ಕಲಿತೀರಿ.

ನೋಡಿ, ನೀವು ಎಂಥಾ ಸಾಧಾರಣ ತಗಡು ಪಸ್ತಕ ಖರೀದಿಸಿದರೂ ಸರಿ ಅವು-

. ಬಡಕೊಳ್ಳುವ ಕನ್ನಡ ನ್ಯೂಸ್‌ ಚಾನೆಲ್ಲುಗಳಿಗಿಂತ ಉತ್ತಮ.

. ಮನೋರೋಗಿಗಳ ಬಿಗ್‌ ಬಾಸಿಗಿಂತ ಉತ್ತಮ.

೩. ಮನೆಮುರುಕ ಧಾರಾವಾಹಿಗಳಿಗಿಂತ ಉತ್ತಮ.

೪. ನಮ್ಮನ್ನು ಮಂಗ ಮಾಡುವ ರಾಜಕಾರಣಿಗಳಿಗಿಂತ ಅತ್ಯುತ್ತಮ.

೫. ಕತ್ಲೆ ಕತ್ಲೆ, ಧೂಳ್‌ ಧೂಳು, ಕಿವಿ ತಮಟೆ ಹರಿಯುವ ಸಿನಿಮಾಗಳಿಗಿಂತ ಉತ್ತಮ.

೬. ರೀಲುಗಳಷ್ಟು ಮನರಂಜನೆ ಕೊಡದಿರಬಹುದು. ಆದರೇ.. ರೀಲು ಮುವತ್ತು ಸೆಕೆಂಡಿನದು, ಮರ್ತೋಗುತ್ತೆ. ಯೂಜ್‌ ಇಲ್ಲ. ಓದಿದ್ದು ಜೀವನ ಪರ್ಯಂತ ಉಳಿಯುತ್ತೆ.

ನೀವು ಜಗತ್ತಿನ ಯಾವುದೇ ಕಂಪನಿಯ ಮುಖ್ಯಸ್ಥನ ಸಂದರ್ಶನ ಕೇಳಿ ನೋಡಿ. ಅವರೂ ಇದನ್ನೇ ಹೇಳ್ತಾರೆ

  • ಮಧು ವೈಎನ್, ಕತೆಗಾರ, ಕಾದಂಬರಿಕಾರ, ವಿಜ್ಞಾನ, ತಂತ್ರಜ್ಞಾನ ಲೇಖಕ

Whats_app_banner