ಕಲಬುರಗಿಯಲ್ಲಿ ಮೆಣಸಿನ ಬೆಳೆಗೆ ನೀರು ಹರಿಸಲು ರೈತರ ಆಗ್ರಹ, ತೀವ್ರ ಸ್ವರೂಪ ಪಡೆದ ಧರಣಿ; ವಿಷದ ಬಾಟಲಿ ಹಿಡಿದು ಪ್ರತಿಭಟನೆ
ಕನ್ನಡ ಸುದ್ದಿ  /  ಕರ್ನಾಟಕ  /  ಕಲಬುರಗಿಯಲ್ಲಿ ಮೆಣಸಿನ ಬೆಳೆಗೆ ನೀರು ಹರಿಸಲು ರೈತರ ಆಗ್ರಹ, ತೀವ್ರ ಸ್ವರೂಪ ಪಡೆದ ಧರಣಿ; ವಿಷದ ಬಾಟಲಿ ಹಿಡಿದು ಪ್ರತಿಭಟನೆ

ಕಲಬುರಗಿಯಲ್ಲಿ ಮೆಣಸಿನ ಬೆಳೆಗೆ ನೀರು ಹರಿಸಲು ರೈತರ ಆಗ್ರಹ, ತೀವ್ರ ಸ್ವರೂಪ ಪಡೆದ ಧರಣಿ; ವಿಷದ ಬಾಟಲಿ ಹಿಡಿದು ಪ್ರತಿಭಟನೆ

ಮೆಣಸಿನ ಕಾಯಿ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಿ ಕಳೆದ 18 ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇದೀಗ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಜೆಸಿಬಿ ಮೂಲಕ ಗುಂಡಿ ತೋಡಿ ಗುಂಡಿಯಲ್ಲಿ ಕೂತು, ಕೈಯಲ್ಲಿ ವಿಷದ ಬಾಟಲಿ ಹಿಡಿದು ರೈತರು ಪ್ರತಿಭಟಿಸುತ್ತಿದ್ದಾರೆ.

ಗುಂಡಿಯಲ್ಲಿ ಕೂತು ರೈತರ ಪ್ರತಿಭಟನೆ, ಜೆಸಿಬಿಯಿಂದ ಗುಂಡಿ ತೆಗೆಸುತ್ತಿರುವುದು
ಗುಂಡಿಯಲ್ಲಿ ಕೂತು ರೈತರ ಪ್ರತಿಭಟನೆ, ಜೆಸಿಬಿಯಿಂದ ಗುಂಡಿ ತೆಗೆಸುತ್ತಿರುವುದು

ಯಾದಗಿರಿ: ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆಗೆ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಸವ ಸಾಗರ ಡ್ಯಾಂನಿಂದ ಎಡದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ಕಳೆದ 18 ದಿನಗಳಿಂದ ನಡೆಸುತ್ತಿರುವ ರೈತರ ಹೋರಾಟ ಗುರುವಾರ ತೀವ್ರ ಸ್ವರೂಪ ಪಡೆದಿದೆ. ರೈತರು ಜೆಸಿಬಿಯಿಂದ ಗುಂಡಿ ತೊಡಿ ಅದರೊಳಗೆ ಕುಳಿತು ಧರಣಿ ನಡೆಸಿ ʼನೀರು ಬಿಡಿ, ಇಲ್ಲವೇ ನಮ್ಮನ್ನು ಮುಚ್ಚಿ ಬಿಡಿʼ ಎಂದು ಪಟ್ಟು ಹಿಡಿದ ಪ್ರಸಂಗ ನಡೆಯಿತು.

ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನಗುಡಿ ಬಳಿಯ ಕೆಬಿಜೆಎನ್ಎಲ್ ಕಚೇರಿ ಮುಂದೆ ನೀರು ಬಿಡುವಂತೆ ಆಗ್ರಹಿಸಿ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಅದರಂತೆ ಗುರುವಾರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ನೀರು ಬಿಡದೆ ಇದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ರೈತನೊಬ್ಬ ವಿಷದ ಬಾಟಲಿಯೊಂದಿಗೆ ಧರಣಿ ಸ್ಥಳಕ್ಕೆ ಧಾವಿಸಿ ವಿಷ ಕುಡಿಯಲು ಯತ್ನಿಸಿದ್ದು, ಇದನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟು ಕೊನೆಗೆ ವಿಷದ ಬಾಟಲಿ ವಶಕ್ಕೆ ಪಡೆದುಕೊಂಡರು.

ನಾರಾಯಣಪುರ ಬಳಿ ಬಸವಸಾಗರ ಡ್ಯಾಂನಿಂದ ಎಡದಂಡೆ ಕಾಲುವೆಗೆ ನೀರು ಬಿಡುವಂತೆ 18 ದಿನಗಳಿಂದ ರೈತರು ಆಹೋರಾತ್ರಿ ಧರಣಿ ನಡೆಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ರೈತರು ಆರೋಪಿಸಿದರು.

ಕಳೆದ 18 ದಿನಗಳಿಂದ ಧರಣಿ ನಡೆಸುತ್ತಿರುವ ರೈತರು ಕಾಲುವೆ ಮೂಲಕ ನೀರು ಹರಿಸಿ ಬೆಳೆದು ನಿಂತ ಮೆಣಸಿನಕಾಯಿ ಬೆಳೆ ಉಳಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ರೈತರ ಹೋರಾಟಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸದ ಕಾರಣಕ್ಕೆ ಗುರುವಾರ ಕೆಬಿಜೆಎನ್ಎಲ್ ಕಚೇರಿಯ ಕಟ್ಟಡವೇರಿ ಆತ್ಮಹತ್ಯೆಗೆ ಯತ್ನಿಸಲು ರೈತರು ಮುಂದಾಗಿದ್ದರು.

ಆತ್ಮಹತ್ಯೆಗೆ ಯತ್ನಿಸಿದ ರೈತರಿಗೆ ತಡೆಯಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ಇನ್ನು ಮೇಲಿಂದ ಬಿದ್ದು ಸಾಯುತ್ತೇವೆ ಹೀಗಾಗಿ ನಮಗೆ ಇಲ್ಲೇ ಜೆಸಿಬಿಯಿಂದ ತಗ್ಗು ತೋಡಿ ಶವ ಸಂಸ್ಕಾರ ಮಾಡಿ ಎಂದು ಆಕ್ರೋಶ ವ್ಯಕ್ತ ಪಡಿಸಿ ಸ್ಥಳಕ್ಕೆ ರೈತರು ಜೆಸಿಬಿ ಕೂಡ ತರಿಸಿದ್ರು. ಇನ್ನು ಕೆಲವೊತ್ತು ಪೊಲೀಸರ ಜೊತೆ ರೈತರ ವಾಗ್ವಾದ ಕೂಡ ನಡೆಯಿತು. ವಾಗ್ವಾದದ ವೇಳೆ ಕುಸಿದು ಬಿದ್ದು ರೈತ ಮುಖಂಡನಿಗೆ ಸ್ಥಳದಲ್ಲೇ ಆರೋಗ್ಯ ತಪಾಸಣೆ ನಡೆಸಲಾಯಿತು. ಕೆಲ ರೈತರು ನೀರು ಬಿಟ್ಟಿಲ್ಲವೆಂದು ಕಣ್ಣೀರಿಟ್ಟಿರುವ ಘಟನೆ ಕೂಡ ನಡೆಯಿತು.

ಕರ್ನಾಟಕ ರಾಜ್ಯ ರೈತ ಸಂಘದ ಬೆಂಬಲದೊಂದಿಗೆ ಅನ್ನದಾತರು ಕಳೆದ 18 ದಿನಗಳಿಂದ ನಿರಂತರ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಈಗಾಗಲೇ ನೀರು ಹರಿಸುವುದನ್ನು ಸ್ಥಗಿತ ಮಾಡಿರುವ ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿ ನೀರು ಸ್ಥಗಿತ ಮಾಡಿರುವ ಪರಿಣಾಮ ಮೆಣಸಿನಕಾಯಿ ಹಾಗೂ ಇನ್ನಿತರ ಬೆಳೆ ಹಾಳಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದು, ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೀರು ಬಿಡದಿದ್ದರೆ ಬೆಳೆ ಹಾನಿಯಿಂದ ರೈತರು ನೊಂದು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿರುವ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಅವರು, ಬೆಳೆ ಹಾನಿಯಾದರೆ ಸರಕಾರವೇ ರೈತರಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.

Whats_app_banner