ಕರ್ನಾಟಕ ಬಿಜೆಪಿಯಲ್ಲಿ ಹೆಚ್ಚಿದ ಗುಂಪುಗಾರಿಕೆ; ಯತ್ನಾಳ್‌ ಟೀಂಗೆ ಕಡಿವಾಣ ಹಾಕಲು ವಿಜಯೇಂದ್ರ ನಿಷ್ಠರ ಆಗ್ರಹ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಬಿಜೆಪಿಯಲ್ಲಿ ಹೆಚ್ಚಿದ ಗುಂಪುಗಾರಿಕೆ; ಯತ್ನಾಳ್‌ ಟೀಂಗೆ ಕಡಿವಾಣ ಹಾಕಲು ವಿಜಯೇಂದ್ರ ನಿಷ್ಠರ ಆಗ್ರಹ

ಕರ್ನಾಟಕ ಬಿಜೆಪಿಯಲ್ಲಿ ಹೆಚ್ಚಿದ ಗುಂಪುಗಾರಿಕೆ; ಯತ್ನಾಳ್‌ ಟೀಂಗೆ ಕಡಿವಾಣ ಹಾಕಲು ವಿಜಯೇಂದ್ರ ನಿಷ್ಠರ ಆಗ್ರಹ

ಕರ್ನಾಟಕ ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಿದ್ದು, ಬಸನಗೌಡ ಪಾಟೀಲ್‌ ಯತ್ನಾಳ್‌ ಟೀಂಗೆ ಕಡಿವಾಣ ಹಾಕಲು ಪಕ್ಷದ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ನಿಷ್ಠರು ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ (ನವೆಂಬರ್ 20) 17 ಕ್ಕೂ ಹೆಚ್ಚು ಹಾಲಿ ಮಾಜಿ ಶಾಸಕರು ಸಭೆ ಸೇರಿ ವರಿಷ್ಠರಿಗೆ ದೂರು ನೀಡಲು ಮುಂದಾಗಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಕರ್ನಾಟಕ ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಿದ್ದು, ಬಸನಗೌಡ ಪಾಟೀಲ್‌ ಯತ್ನಾಳ್‌ (ಎಡ ಚಿತ್ರ) ಟೀಂಗೆ ಕಡಿವಾಣ ಹಾಕಲು ಪಕ್ಷದ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ (ಬಲ ಚಿತ್ರ) ನಿಷ್ಠರ ಆಗ್ರಹ ವ್ಯಕ್ತವಾಗಿದೆ.
ಕರ್ನಾಟಕ ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಿದ್ದು, ಬಸನಗೌಡ ಪಾಟೀಲ್‌ ಯತ್ನಾಳ್‌ (ಎಡ ಚಿತ್ರ) ಟೀಂಗೆ ಕಡಿವಾಣ ಹಾಕಲು ಪಕ್ಷದ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ (ಬಲ ಚಿತ್ರ) ನಿಷ್ಠರ ಆಗ್ರಹ ವ್ಯಕ್ತವಾಗಿದೆ.

ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಭಿನ್ನಮತ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಂಡ್‌ ಟೀಂ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಬೆಂಗಳೂರಿನಲ್ಲಿ ಬುಧವಾರ (ನವೆಂಬರ್ 20) 17 ಕ್ಕೂ ಹೆಚ್ಚು ಹಾಲಿ ಮಾಜಿ ಶಾಸಕರು ಸಭೆ ಸೇರಿ ಚರ್ಚೆ ನಡೆಸಿ ಯತ್ನಾಳ್‌ ತಂಡದ ಗುಂಪಿನ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಹೈಕಮಾಂಡ್‌ ಗೆ ದೂರು ನೀಡಲು ನಿರ್ಧರಿಸಿದ್ದಾರೆ.

ವಕ್ಫ್‌ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ವಿಜಯೇಂದ್ರ ಅವರು ಯೋಜನೆ ರೂಪಿಸಿದ್ದರೆ ಪಕ್ಷದ ಅಧ್ಯಕ್ಷರ ಆದೇಶಕ್ಕೆ ವಿರುದ್ಧವಾಗಿ ಯತ್ನಾಳ್‌ ತಂಡ ಪರ್ಯಾಯ ಪ್ರವಾಸ ಸಿದ್ದಪಡಿಸಿಕೊಂಡಿದೆ. ಇದು ವಿಜಯೇಂದ್ರ ನಾಯಕತ್ವಕ್ಕೆ ಸೆಡ್ಡು ಹೊಡೆದಂತಾಗಿದ್ದು, ಪಕ್ಷದ ಶಿಸ್ತನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ವಿಜಯೇಂದ್ರ ನಿಷ್ಠರು ಅಭಿಪ್ರಾಯಪಟ್ಟಿದ್ದಾರೆ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ 17 ಮಾಜಿ ಶಾಸಕರು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಸಭೆ ಸೇರಿ ಆಗುಹೋಗುಗಳನ್ನು ಕುರಿತು ಚರ್ಚೆ ನಡೆಸಿದ್ದಾರೆ. ಯತ್ನಾಳ್‌ ಅವರ ತಂಡದ ಅರವಿಂದ ಲಿಂಬಾವಳಿ, ಅರವಿಂದ ಬೆಲ್ಲದ, ಕುಮಾರ ಬಂಗಾರಪ್ಪ ಮೊದಲಾದ ನಾಯಕರ ವಿರುದ್ಧ ಹೈಕಮಾಂಡ್‌ಗೆ ದೂರು ಸಲ್ಲಿಸಲು ತೀರ್ಮಾನಿಸಿದ್ದಾರೆ.

ವಕ್ಫ್ ವಿರುದ್ಧ ನ.25 ರಂದ ಬೀದರ್‌ ನಿಂದ ಯತ್ನಾಳ್‌ ಅವರ ಪ್ರವಾಸಕ್ಕೆ ಬ್ರೇಕ್‌ ಹಾಕಬೇಕು ಎಂದು ಆಗ್ರಹಪಡಿಸಲು ನಿರ್ಧರಿಸಿದೆ. ವಕ್ಫ್‌ ಗೆ ಸಂಬಂಧಿಸಿದಂತೆ ರೈತರಿಗೆ ನೋಟಿಸ್‌ ನೀಡುತ್ತಿರುವುದು ಕಾಂಗ್ರೆಸ್‌ ಪಕ್ಷದ ವಿರುದ್ಧ ಜನಾಭಿಪ್ರಾಯ ರೂಪಿಸಲು ಉತ್ತಮ ವೇದಿಕೆಯಾಗಿದೆ. ಆದರೆ ಪಕ್ಷದ ಅಧಿಕೃತ ಹೋರಾಟಕ್ಕೆ ಯತ್ನಾಳ್‌ ಅವರು ಪರ್ಯಾಯ ಹೋರಾಟ ಅಡ್ಡಗಾಲು ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತಿದೆ ಎನ್ನುವುದು ಇವರ ಅಭಿಪ್ರಾಯವಾಗಿದೆ.

ಯಾವುದೇ ಹೋರಾಟವನ್ನು ಪಕ್ಷದ ಅಧ್ಯಕ್ಷರ ನಾಯಕತ್ವದಲ್ಲೇ ಹೋರಾಟ ನಡೆಸಬೇಕು. ಪ್ರತ್ಯೇಕ ಹೋರಾಟ ನಡೆಸುವುದರಿಂದ ಪಕ್ಷಕ್ಕೆ ಹಿನ್ನೆಡೆಯಾಗಲಿದೆ. ಯತ್ನಾಳ್‌ ಅವರು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದು ಪಕ್ಷದ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಕಿಡಿ ಕಾರಿದ್ದಾರೆ. ಬಿ.ಸಿ.ಪಾಟೀಲ್‌ ಪ್ರತಿಕ್ರಿಯಿಸಿ ಯತ್ನಾಳ್‌ ತಮ್ಮ ಪ್ರವಾಸವನ್ನು ರದ್ದುಗೊಳಿಸಿ ಪಕ್ಷದ ಅಧ್ಯಕ್ಷರು ರೂಪಿಸಿರುವ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು. ಹಿರಿಯ ನಾಯಕರಾಗಿರುವ ಅವರು ಈ ರೀತಿ ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.

ದಿನದಿಂದ ದಿನಕ್ಕೆ ವಿಜಯೇಂದ್ರ ಮತ್ತು ಯತ್ನಾಳ್‌ ನಡುವಿನ ಭಿನ್ನಮತ ಹೆಚ್ಚುತ್ತಲೇ ಇದೆ. ಪಕ್ಷದ ಅಧ್ಯಕ್ಷರ ಅನುಮತಿ ಇಲ್ಲದೇ ಯತ್ನಾಳ್‌ ಅವರು ರಾಜ್ಯ ಪ್ರವಾಸ ರೂಪಿಸಿದ್ದಾರೆ. ವಿಜಯೇಂದ್ರ ಅವರ ಅನುಮತಿ ಪಡೆಯದೆ ಹೋರಾಟ ರೂಪಿಸಿದ್ದಾರೆ. ಯತ್ನಾಳ್‌ ಅವರು ವಿಜಯೇಂದ್ರ ಅವರಿಗೆ ನೇರವಾಗಿ ಸವಾಲು ಹಾಕಿದ್ದಾರೆ. ಒಂದು ವೇಳೆ ಇವರ ಪ್ರವಾಸ ಮುಂದುವರೆದರೆ ಪಕ್ಷದ ಮೇಲೆ ವಿಜಯೇಂದ್ರ ಅವರ ಹಿಡಿತ ಸಡಿಲಗೊಳ್ಳಲಿದೆ ಎಂದು ಹಿರಿಯ ನಾಯಕರೊಬ್ಬರು ಅಭಿಪ್ರಾಯಪಡುತ್ತಾರೆ.

ವಿಜಯೇಂದ್ರ ಸುಮ್ಮನೆ ಕೈಕಟ್ಟಿ ಕುಳಿತಿಲ್ಲ. ಯತ್ನಾಳ್‌ ಅವರನ್ನು ನಿಯಂತ್ರಿಸುವಂತೆ ಅಮಿತ್‌ ಶಾ ಮತ್ತು ಜೆಪಿ ನಡ್ಡಾ ಅವರಿಗೆ ಮನವಿ ಮಾಡಿಕೊಳ್ಳುತ್ತಲೇ ಹೈಕಮಾಂಡ್‌ ಮೌನತಾಳಿದೆ. ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚುತ್ತಲೇ ಇದೆ. ಪಕ್ಷದ ಸಂಘಟನೆಗೆ ನಿಜಕ್ಕೂ ಇದು ಹಿನ್ನಡೆ ಉಂಟು ಮಾಡಲಿದೆ. ಅಕಸ್ಮಾತ್‌ ಉಪ ಚುನಾವಣೆಗಳ ಫಲಿತಾಂಶ ಬಿಜೆಪಿ ಪರವಾಗಿ ಇಲ್ಲದೆ ಹೋದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

ಯತ್ನಾಳ್‌ ಅವರು ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿದ್ದರೂ ಅವರ ವಿರುದ್ಧ ಒಂದು ಸಣ್ಣ ಕ್ರಮಕ್ಕೂ ಬಿಜೆಪಿ ಹೈ ಕಮಾಂಡ್‌ ಮುಂದಾಗಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಯತ್ನಾಳ್‌ ಅವರ ಬೆಂಬಲಕ್ಕೆ ಹೈಕಮಾಂಡ್‌ ನ ಒಂದು ಗುಂಪು ನಿಂತಿದೆ ಎಂಬ ಗುಮಾನಿ ಆರಂಭದಿಂದಲೂ ಇದೆ. ಇದೇ ಪರಿಸ್ಥಿತಿ ಮುಂದುವರೆದರೆ 100ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ಶಾಸಕರು ದೆಹಲಿಗೆ ತೆರಳಿ ಅಮಿತ್‌ ಶಾ ಮತ್ತು ಜೆಪಿ ನಡ್ಡಾ ವರಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ.

(ವರದಿ- ಎಚ್ ಮಾರುತಿ, ಬೆಂಗಳೂರು)

Whats_app_banner