ಬೆಂಗಳೂರು ಎಚ್‌ಎಂಟಿ ಅರಣ್ಯ ಭೂ ವಿವಾದ; ಭಾರತದ ಜನರ ಕೈಗೆ ವಾಚು ಕೊಟ್ಟ ಸಂಸ್ಥೆಯ ಸಮಯವೇ ಸರಿಯಿಲ್ಲ, ಗದ್ದಲಕ್ಕೆ ರಿಯಲ್‌ ಕಾರಣ ಏನು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಎಚ್‌ಎಂಟಿ ಅರಣ್ಯ ಭೂ ವಿವಾದ; ಭಾರತದ ಜನರ ಕೈಗೆ ವಾಚು ಕೊಟ್ಟ ಸಂಸ್ಥೆಯ ಸಮಯವೇ ಸರಿಯಿಲ್ಲ, ಗದ್ದಲಕ್ಕೆ ರಿಯಲ್‌ ಕಾರಣ ಏನು

ಬೆಂಗಳೂರು ಎಚ್‌ಎಂಟಿ ಅರಣ್ಯ ಭೂ ವಿವಾದ; ಭಾರತದ ಜನರ ಕೈಗೆ ವಾಚು ಕೊಟ್ಟ ಸಂಸ್ಥೆಯ ಸಮಯವೇ ಸರಿಯಿಲ್ಲ, ಗದ್ದಲಕ್ಕೆ ರಿಯಲ್‌ ಕಾರಣ ಏನು

Bangalore HMT Forest Land ಬೆಂಗಳೂರಿನ ಎಚ್‌ಎಂಟಿ ಒಂದು ಕಾಲಕ್ಕೆ ಜನರಿಗೆ ಸರಿಯಾದ ಸಮಯ ತೋರಿದ ಪ್ರೀಮಿಯರ್‌ ಸಂಸ್ಥೆ. ಭೂವಿವಾದಲ್ಲಿ ಸಿಲುಕಿದ ಎಚ್‌ಎಂಟಿ ಕೇಂದ್ರ, ಕರ್ನಾಟಕ ಸರ್ಕಾರದ ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿದೆ. ಏನಿದು ಭೂವಿವಾದ, ಅರಣ್ಯ ಹಾಗೂ ಅಧಿನಿಯಮ, ಅಧಿಕಾರಿಗಳ ಪಾತ್ರ, ಸಂಘರ್ಷದ ಒಳನೋಟ ಇಲ್ಲಿದೆ.

ಬೆಂಗಳೂರಿನಲ್ಲಿರುವ ಕೇಂದ್ರ ಸ್ವಾಮ್ಯದ ಉದ್ಯಮ ಎಚ್‌ಎಂಟಿ ಭೂ ವಿವಾದ ತಾರಕಕ್ಕೇರಿದೆ. ಭೂ ಮಾರಾಟದ ಜತೆಗೆ ಅರಣ್ಯ ಹಾಳು ಮಾಡಿದ ಸದ್ದು ಜೋರಾಗಿದೆ.
ಬೆಂಗಳೂರಿನಲ್ಲಿರುವ ಕೇಂದ್ರ ಸ್ವಾಮ್ಯದ ಉದ್ಯಮ ಎಚ್‌ಎಂಟಿ ಭೂ ವಿವಾದ ತಾರಕಕ್ಕೇರಿದೆ. ಭೂ ಮಾರಾಟದ ಜತೆಗೆ ಅರಣ್ಯ ಹಾಳು ಮಾಡಿದ ಸದ್ದು ಜೋರಾಗಿದೆ.

ಜನರಿಗೆ ಸಮಯದ ಪ್ರಜ್ಞೆಯನ್ನು ಬೆಳೆಸಿದ ಬೆಂಗಳೂರಿನಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಭೂವಿವಾದಕ್ಕೆ ಸಿಲುಕಿದೆ. ಉಡುಗೊರೆಯಾಗಿ ನೀಡಿದ ಅರಣ್ಯ ಭೂಮಿ ಈಗ ವಹಿವಾಟಿನ ಭಾಗವಾಗಿದೆ. ಕೋಟ್ಯಂತರ ರೂ. ಬೆಲೆ ಬಾಳುವ 600 ಎಕರೆ ಭೂಮಿಯಲ್ಲಿ ಶೇ. 25 ರಷ್ಟು ಮಾರಾಟವೂ ಆಗಿದೆ. ಕರ್ನಾಟಕದವರೇ ಆದ ಎಚ್‌ಡಿಕುಮಾರಸ್ವಾಮಿ ಕೇಂದ್ರದಲ್ಲಿ ಕೈಗಾರಿಕಾ ಸಚಿವ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ನಡುವಿನ ಹೇಳಿಕೆಗಳು, ಸಂಘರ್ಷಗಳಿಂದ ಭೂ ವಿವಾದ ಏರ್ಪಟ್ಟಿದೆ. ಈಗ ಚಿತ್ರ ತಂಡವೂ ಅರಣ್ಯ ಭೂಮಿ ಹಾಳು ಮಾಡಿದ ಆರೋಪ ಕೇಳಿ ಬಂದಿದೆ. ಇದರ ಹಿನ್ನೆಲೆ, ಅರಣ್ಯ ಅಧಿನಿಮಯ, ಜಾರಿ, ನಿಯಮಗಳ ಕುರಿತ ಮಾಹಿತಿ ಇಲ್ಲಿದೆ.

ಎಚ್‌ಎಂಟಿ ಪ್ರಕರಣದ ಹಿನ್ನೆಲೆ, ಎಚ್‌ಡಿಕೆ vs ಖಂಡ್ರೆ ಏಕೆ

ಇಡೀ ದೇಶದ ಪ್ರತಿಯೊಬ್ಬರ ಕೈಯಲ್ಲೂ ಇದ್ದಂತಹ ವಾಚು ಯಾವುದು ಎಂದು ಕೇಳಿದರೆ ಎಚ್‌ಎಂಟಿ ಎನ್ನುವ ಆ ಕಾಲವಿತ್ತು. ಖಾಸಗಿ ಸ್ಪರ್ಧೆಯೇ ಇರದ ಸಮಯದಲ್ಲಿ ಎಚ್‌ಎಂಟಿ ವಾಚುಗಳ ಬಳಕೆ ಪ್ರತಿಷ್ಠೆಯೇ ಎನ್ನುವಂತಾಗಿತ್ತು. ಅದರ ಮೂಲ ಇದ್ದುದು ಬೆಂಗಳೂರಿನಲ್ಲಿ.

ಕೇಂದ್ರ ಸರ್ಕಾರದ ಕೈಗಾರಿಕಾ ಇಲಾಖೆಯಡಿಯಲ್ಲಿ ವಾಚು, ಗಡಿಯಾರದ ಉದ್ಯಮಕ್ಕೆ ಬೆಂಗಳೂರಿನಲ್ಲಿ 60ರ ದಶಕದಲ್ಲಿ ಸುಮಾರು 600 ಎಕರೆ ಭೂಮಿಯನ್ನು ಉಡುಗೊರೆಯಾಗಿ ಕರ್ನಾಟಕ ಸರ್ಕಾರ ನೀಡಿತ್ತು.ಆಗ ಅರಣ್ಯ ಭೂಮಿಯನ್ನು ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವೂ ಇತ್ತು. ಆಗಿನ ಆಶಯದಂತೆ ಉದ್ಯಮ ಬೆಳೆದು ಜಗತ್ತಿನ ಗಮನವನ್ನೂ ಸೆಳೆಯಿತು.

ಆದರೆ 1980 ಭಾರತೀಯ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬಂದ ನಂತರ ಅರಣ್ಯ ಭೂಮಿಯ ಪರಾಭಾರೆ, ಹಸ್ತಾಂತರ ಕಾನೂನುಗಳ ಚೌಕಟ್ಟು ಬಂತು. ಅಷ್ಟೇ ಅಲ್ಲದೇ ಅರಣ್ಯ ಭೂಮಿಯನ್ನು ಬಳಸುವ ಉದ್ದೇಶವೂ ನಿಗದಿಯಾಗಿ ಈಗ ಸಾಕಷ್ಟು ಬದಲಾಗಿದೆ. ಈ ಅಧಿನಿಯಮ ಜಾರಿಗೊಂಡ ಬಳಿಕ ಅರಣ್ಯ ಭೂಮಿಯನ್ನು ಅರಣ್ಯೇತರ ಎಂದು ಬದಲಾಯಿಸಿಕೊಳ್ಳಬೇಕಿತ್ತು. ಅದು ಆಗಲಿಲ್ಲ.

ಇನ್ನೊಂದು ಕಡೆ 90ರ ದಶಕದಲ್ಲಿ ಭಾರತವನ್ನು ಪ್ರಬಲವಾಗಿಯೇ ಪ್ರವೇಶಿಸಿದ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಪ್ರಭಾವ ಎಚ್‌ಎಂಟಿ ಮೇಲೂ ಆಯಿತು. ಭಾರತದ ಜತೆಗೆ ಹೊರ ದೇಶದ ವಾಚು ಕಂಪೆನಿಗಳು ಭಾರತಕ್ಕೆ ಲಗ್ಗೆ ಇಟ್ಟು ಎಚ್‌ಎಂಟಿ ತನ್ನ ವೈಭವ ಕಳೆದುಕೊಂಡಿತು.

ಹಾಗೆಂದು ಬೆಂಗಳೂರಿನಲ್ಲಿ ಸರ್ಕಾರ ನೀಡಿದ್ದ 600 ಎಕರೆಯ ಭೂಮಿಯಿತ್ತು. ಬೆಂಗಳೂರಿನಲ್ಲಿ ಭೂಮಿಗೆ ಚಿನ್ನದ ಬೆಲೆ. ಹಂತಹಂತವಾಗಿ ಭೂಮಿ ಮಾರಾಟವೂ ಸದ್ದಿಲ್ಲದೇ ನಡೆಯಿತು. ಬ್ಯಾಂಕ್‌ ಸಹಿತ ಪ್ರತಿಷ್ಠಿತ ಸಂಸ್ಥೆಗಳಿಗೂ ಭೂಮಿ ದೊರೆಯಿತು. ಅರಣ್ಯ ಭೂಮಿ ಎಂದಿದ್ದರೂ ಮಾರಾಟಕ್ಕೆ ಬೇಕಾದ ಭೂಪರಿವರ್ತನೆ ಪ್ರಕ್ರಿಯೆಗಳೂ ನಡೆದವು. ಇದರಿಂದ ಈಗಾಗಲೇ 150 ಎಕರೆಯಷ್ಟು ಭೂಮಿ ಮಾರಾಟವಾಗಿ ಅಲ್ಲಿ ಬಡಾವಣೆಗಳೇ ರಚನೆಯಾಗಿವೆ.

2015ರಲ್ಲೇ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ ಎಚ್‌ಎಂಟಿ ಭೂಮಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಕೂಡ ಸಲ್ಲಿಸಲಾಗಿದೆ. ಈಗ ಅರಣ್ಯದಿಂದ ಅರಣ್ಯೇತರ ಎಂದು ಬದಲಾಯಿಸುವ, ನಿರ್ದೇಶನ ನೀಡುವ ಅಧಿಕಾರ ಇರುವುದು ಸುಪ್ರೀಂಕೋರ್ಟ್‌ಗೆ ಮಾತ್ರ. ಪ್ರಕರಣ ಸುಪ್ರೀಂಕೋರ್ಟ್‌ ಅಂಗಳದಲ್ಲಿದೆ.

ಈಗ ಕರ್ನಾಟಕದವೇ ಆದ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಮ್ಮ ವ್ಯಾಪ್ತಿಯ ಸಂಸ್ಥೆ, ಭೂಮಿ ವಿಚಾರದಲ್ಲಿ ಮಾತನಾಡಿದರೆ, ಅರಣ್ಯ ಭೂಮಿ ಆಗಿರುವ ಕಾರಣದಿಂದ ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅದನ್ನು ಉಳಿಸಿಕೊಳ್ಳುವ, ಮಾರಾಟಕ್ಕೆ ಬೇಕಾದ ರೀತಿಯಲ್ಲಿ ಸಹಕರಿಸಿದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ. ಇದು ಬೆಂಗಳೂರಿನ ಅರಣ್ಯ ಭೂಮಿ "ರಿಯಲ್‌" ಉದ್ಯಮದ ಸ್ವರೂಪ ಪಡೆದಿದೆ.

ಅರಣ್ಯ ಉಳಿಸಿಕೊಳ್ಳಬೇಕಾದ ಇಲಾಖೆಯ ಉನ್ನತ ಅಧಿಕಾರಿಗಳೇ ಮಾರಾಟವಾದ ಭೂಮಿಯಲ್ಲಿನ ನಿವಾಸಿಗಳಾಗಿದ್ಧಾರೆ. ಅರಣ್ಯದ "ಲಾಭ" ಇನ್ನೂ ಯಾರು ಯಾರಿಗೆ ಸಿಗಲಿದೆ ಎನ್ನುವ ಚರ್ಚೆ ಮಾತ್ರ ನಿಂತಿಲ್ಲ.

ಅರಣ್ಯ ಅಪರಾಧ ಪ್ರಕರಣ ಎಂದರೇನು?

ಅರಣ್ಯವನ್ನು ದುರ್ಬಳಕೆ ಮಾಡುವುದು, ಹಸಿರು ಪ್ರದೇಶ ನಾಶ ಮಾಡುವುದು. ಅರಣ್ಯ ಎಂದು ಗುರುತಿಸಿದ ಪ್ರದೇಶದಲ್ಲಿ ವಾಣಿಜ್ಯ ಉದ್ದೇಶದ ಚಟುವಟಿಕೆ ಮಾಡುವುದು, ಅರಣ್ಯ ಭೂಮಿಯನ್ನು ಒತ್ತುವರಿ ಮಾಡುವುದು, ಮತ್ತೊಬ್ಬರಿಗೆ ಮಾರಾಟ ಮಾಡುವುದು, ಅಲ್ಲಿನ ಮರ ಅಥವಾ ಸಸ್ಯ ಸಂಪತ್ತನ್ನು ಹಾಳು ಮಾಡುವುದು, ಅನುಮತಿ ಇಲ್ಲದೆ ಮರ ಕಡಿಯುವುದು ಹಾಗೂ ಮರ ಸಾಗಣೆ ಮಾಡುವುದು ಅರಣ್ಯ ಅಪರಾಧದ ಅಡಿ ಬರುತ್ತದೆ. ಭಾರತದಲ್ಲಿ ಮೊದಲು ಅರಣ್ಯ ಸಂರಕ್ಷಣೆಗೆ ನಿರ್ದಿಷ್ಟ, ಕಠಿಣ ಕಾನೂನುಗಳು ಇರಲಿಲ್ಲ. ಮೊದಲು 1973ರಲ್ಲಿ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯಿದೆ ಬಂದಿತು. ಆನಂತರ 1980 ಭಾರತೀಯ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬಂದಿತು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಇಚ್ಛಾಶಕ್ತಿಯಿಂದಾಗಿ ಎರಡೂ ಅಧಿನಿಯಮಗಳು ಭಾರತದ ಅರಣ್ಯ ಹಾಗೂ ವನ್ಯಜೀವಿ ಉಳಿಸಿಕೊಳ್ಳಲು ಬಲ ತಂದವು. ಈಗಲೂ ಅರಣ್ಯ ಭೂಮಿಯ ದುರ್ಬಳಕೆ, ಅತಿಕ್ರಮ ಪ್ರವೇಶದಂತ ಚಟುವಟಿಕೆಗಳು ಇದರಡಿ ಬರುತ್ತದೆ. ಕರ್ನಾಟಕದಲ್ಲಿಯೇ ಅರಣ್ಯ ಇಲಾಖೆ ಅರಣ್ಯ ಅಪರಾಧದಡಿ ಸಹಸ್ರಾರು ಪ್ರಕರಣ ದಾಖಲಿಸಿದೆ.

ನಿಯಮಗಳು ಏನು ಹೇಳುತ್ತವೆ?

ಕರ್ನಾಟಕದಲ್ಲೂ ಕರ್ನಾಟಕ ಅರಣ್ಯ ಅಧಿನಿಮಯ ಜಾರಿಯಲ್ಲಿದೆ. ಇದರ ಪ್ರಕಾರ ಯಾವುದೇ ವ್ಯಕ್ತಿ, ಸಂಸ್ಥೆಯಿಂದ ಅರಣ್ಯ ಭೂಮಿಯ ದುರ್ಬಳಕೆ ತಡೆಯುವ ಜತೆಗೆ ಸರ್ಕಾರದ ಸ್ವತ್ತಾಗಿರುವ ಅರಣ್ಯಗಳು ಹಾಗೂ ಅರಣ್ಯ ಭೂಮಿಗಳ ಮೇಲೆ ನಿಯಂತ್ರಣ ಹೊಂದುವುದನ್ನು ಈ ಅಧಿನಿಮಯದಲ್ಲಿ ಸೇರಿಸಲಾಗಿದೆ. ಅರಣ್ಯಗಳಲ್ಲೂ ವಿವಿಧ ಸ್ವರೂಪವಿದೆ. ಗ್ರಾಮ ಅರಣ್ಯ, ಜಿಲ್ಲಾ ಅರಣ್ಯ, ಮೀಸಲು ಅರಣ್ಯ, ಖಾಸಗಿ ಅರಣ್ಯಗಳ ರಕ್ಷಣೆಗೆ ಪೂರಕವಾದ ಅಂಶಗಳು ಇಲ್ಲಿವೆ. ಇದರಡಿ ಅರಣ್ಯ ಇಲಾಖೆಯ ಅಧಿಕಾರಿಗೆ ಪ್ರಕರಣ ದಾಖಲಿಸಲು ಅಧಿಕಾರವಿದೆ. ಕೆಲವು ಪ್ರಕರಣಗಳಲ್ಲಿ ತೀವ್ರತೆ ನೋಡಿಕೊಂಡು ದಂಡ ವಿಧಿಸಬಹುದು. ಗಂಭೀರ ಅಪರಾಧವಾಗಿದ್ದರೆ ಬಂಧಿಸಿ ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸಲು ಅವಕಾಶವಿದೆ. ಪೊಲೀಸ್‌ ಇಲಾಖೆಯಲ್ಲೂ ಪ್ರಕರಣ ದಾಖಲಿಸಬಹುದು. ಪ್ರಕರಣದ ತೀವ್ರತೆ ಮೇಲೆ ದಂಡದ ತೀರ್ಮಾನ ಮಾಡಲಾಗುತ್ತದೆ. ಇಲ್ಲದೇ ಇದ್ದರೆ ಶಿಕ್ಷೆಯೂ ಆಗಲಿದೆ. ಆರು ತಿಂಗಳದಿಂದ ಮೂರು ವರ್ಷದವರೆಗೂ ಜೈಲು ಶಿಕ್ಷೆ ಅರಣ್ಯ ಅಪರಾಧ ಪ್ರಕರಣದಡಿ ಆಗಬಹುದು. ಒಟ್ಟು 118 ನಿಯಮ ಹಾಗೂ ಉಪ ನಿಯಮಗಳನ್ನು ಪ್ರಕರಣದ ಹಿನ್ನೆಲೆ, ಕಾನೂನು ಕ್ರಮ, ದಂಡ ಅಥವಾ ಶಿಕ್ಷೆ ವ್ಯಾಪ್ತಿ, ಅರಣ್ಯ ಅಧಿಕಾರಿಗಳ ಕಾರ್ಯವ್ಯಾಪ್ತಿಯೊಂದಿಗೆ ಕರ್ನಾಟಕ ಅರಣ್ಯ ಸಂರಕ್ಷಣಾ ಅಧಿನಿಮಯ ರೂಪಿಸಲಾಗಿದೆ.

ಅಧಿಕಾರಿ ಅನುಮತಿ ಕೊಟ್ಟಿದ್ದರೆ ಅವರ ವಿರುದ್ಧ ಏನು ಕ್ರಮ ಆಗುತ್ತದೆ?

ಅರಣ್ಯವನ್ನು ಯಾವುದೇ ಉದ್ದೇಶವಿಲ್ಲದೇ ಪರಾಭಾರೆ ಮಾಡುವ ಹಾಗಿರಲಿಲ್ಲ. ಉದ್ದೇಶವನ್ನು ಉಲ್ಲೇಖಿಸಿಯೇ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಂತದಲ್ಲಿ ಅರಣ್ಯ ಭೂಮಿ ಮಂಜೂರು ಮಾಡಬಹುದಿತ್ತು. ಅವರೇ ಪ್ರಾಧಿಕಾರಿಯೂ ಆಗಿದ್ದರು. ಈಗ ಭಾರತೀಯ ಅರಣ್ಯ ಸಂರಕ್ಷಣಾ ಅಧಿನಿಯಮ ತಿದ್ದುಪಡಿ ಆದ ನಂತರ ಅರಣ್ಯ ಮಂಜೂರು ಮಾಡುವ ಹಕ್ಕು ಅರಣ್ಯ ಅಧಿಕಾರಿಗಳಿಗೆ ಇರುವುದಿಲ್ಲ. ಸುಪ್ರೀಂ ಕೋರ್ಟ್‌ ಈ ವಿಚಾರದಲ್ಲಿ ಸ್ಪಷ್ಟ ನಿರ್ದೇಶನ ನೀಡಿದೆ. ಅರಣ್ಯ ಭೂಮಿ ಎಂದು ಘೋಷಿತವಾಗಿದ್ದರೆ ಅದನ್ನು ಬದಲಿಸಲು ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಆದರೂ ಕಂದಾಯ ಇಲಾಖೆಯು ಭೂಮಿ ಮಂಜೂರು ಮಾಡುವಾಗ ಅರಣ್ಯ ಭೂಮಿಯನ್ನು ನೀಡಿರುವ ಉದಾಹರಣೆಗಳೂ ಸಾಕಷ್ಟಿವೆ. ಅಷ್ಟೇ ಅಲ್ಲದೇ ಅರಣ್ಯ ಭೂಮಿ ಪರಿವರ್ತನೆಯೂ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಇರುವುದರಿಂದ ಅಲ್ಲಿಯೂ ಒತ್ತಡ, ಪ್ರಭಾವದ ಮೇಲೆ ತೀರ್ಮಾನ ಆಗಿರುವ ಉದಾಹರಣೆಯೂ ಇದೆ.

ಇಂತಹ ಸಂದರ್ಭದಲ್ಲಿ ಕಂದಾಯ ಇಲ್ಲವೇ ಅರಣ್ಯ ಅಧಿಕಾರಿ ಭೂಮಿ ಪರಾಭಾರೆ ಇಲ್ಲವೇ ಅನ್ಯ ಉದ್ದೇಶ ಬಳಕೆಗೆ ಅನುಮತಿ ನೀಡಿದ್ದರೆ ಅಂತಹ ಅಧಿಕಾರಿಯನ್ನು ಅಮಾನತುಗೊಳಿಸುವ, ಸರ್ಕಾರಕ್ಕೆ ಹಾನಿ ಮಾಡಿರುವ ಪ್ರಮಾಣ ಅಧಿಕವಾಗಿದ್ದರೆ ವಜಾಗೊಳಿಸಲು ಅವಕಾಶವಿದೆ. ಅಂತವರ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಿ ಮೂರು ವರ್ಷದವರೆಗೂ ಜೈಲು ಶಿಕ್ಷೆಗೆ ಒಳಪಡಿಸುವ ಸಾಧ್ಯತೆಯೂ ಇದೆ. ಅರಣ್ಯ ಇಲಾಖೆಗೆ ಈ ವಿಚಾರದಲ್ಲಿ ಸೀಮಿತ ಅಧಿಕಾರ ಇರುವುದರಿಂದ ಕಂದಾಯ ಇಲಾಖೆಯ ಪಾತ್ರವೇ ಅಧಿಕ ಎನ್ನುವುದು ಅಧಿಕಾರಿಗಳ ವಿವರಣೆ.

ಅನುಮತಿ ಪಡೆಯದೆ ಅರಣ್ಯದಲ್ಲಿ ಮರ ಕಡಿದರೆ ಏನು ಶಿಕ್ಷೆ ಆಗುತ್ತದೆ?

ಅರಣ್ಯದಲ್ಲಿ ಯಾವುದೇ ಉತ್ಪನ್ನವನ್ನು ಸಾಗಿಸಲು ಅನುಮತಿಯೇ ಇಲ್ಲ. ಅರಣ್ಯದಲ್ಲಿ ಕಿರು ಉತ್ಪನ್ನಗಳ ಸಂಗ್ರಹಕ್ಕೆ ಸ್ಥಳೀಯರಿಗೆ ಅರಣ್ಯ ಇಲಾಖೆ ನೀಡಿರುವ ಅನುಮತಿ ಪತ್ರ ಆಧರಿಸಿ ಚಟುವಟಿಕೆಯನ್ನು ಸೀಮಿತ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದು. ಅದನ್ನು ಹೊರತುಪಡಿಸಿದರೆ ಅರಣ್ಯ ಪ್ರದೇಶ ಎಂದು ಘೋಷಿಸಲ್ಪಟ್ಟ ಜಾಗದಲ್ಲಿ ಯಾವುದೇ ಮರ ಕಡಿಯುವ ಹಾಗಿಲ್ಲ. ಕಡಿದರೆ ಅದು ಅರಣ್ಯ ಅಪರಾಧದ ಪಟ್ಟಿಗೆ ಸೇರುತ್ತದೆ. ಮರ ಕಡಿಯುವುದು, ಸಾಗಿಸುವುದನ್ನು ಪತ್ತೆ ಹಚ್ಚಿ ಆಯಾ ಪ್ರದೇಶದ ವಲಯ ಅರಣ್ಯಾಧಿಕಾರಿ ಪ್ರಕರಣವನ್ನು ದಾಖಲಿಸುತ್ತಾರೆ. ಯಾವ ಮರ, ಎಷ್ಟು ಮರ, ಉದ್ದೇಶ ಗಮನಿಸಿಕೊಂಡು ಅರಣ್ಯ ಅಧಿನಿಯಮದ ಅಡಿ ದಂಡ ಬೀಳಲಿದೆ. ದಂಡವೂ ಒಂದು ಸಾವಿರದಿಂದ 25 ಸಾವಿರ ರೂ. ವರೆಗೂ ಇರಲಿದೆ. ಇಲ್ಲವೇ ಮೂರು ತಿಂಗಳಿನಿಂದ ಎರಡು ವರ್ಷದವರೆಗೂ ಜೈಲು ಶಿಕ್ಷೆಯೂ ಆಗಬಹುದು.

Whats_app_banner