‘ಗಡ್ಡ ಬೆಳೆಸಿದಷ್ಟು ಈಸಿ ಅಲ್ಲ ಗುರು ಮರ ಬೆಳೆಸೋದು’; ಸೋಷಿಯಲ್ ಮೀಡಿಯಾದಲ್ಲಿ ನಟ ಯಶ್ ಟ್ರೋಲ್
Yash: ಟಾಕ್ಸಿಕ್ ಸಿನಿಮಾ ತಂಡ ಶೂಟಿಂಗ್ ಸಲುವಾಗಿ ನೂರಾರು ಮರ ಕಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಈ ನಡುವೆ ಇದೇ ಚಿತ್ರದ ನಟ ಯಶ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಗಡ್ಡದ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ.
Yash Toxic Movie: ಟಾಕ್ಸಿಕ್ ಸಿನಿಮಾ ತಂಡದ ಮೇಲೀಗ ಕಾಡು ನಾಶದ ಗಂಭೀರ ಆರೋಪ ಕೇಳಿಬಂದಿದೆ. ಎಚ್ಎಂಟಿ ವತಿಯಿಂದ ಕೆನರಾ ಬ್ಯಾಂಕ್‌ಗೆ ಮಾರಾಟ ಮಾಡಲಾಗಿದೆ ಎನ್ನಲಾದ ಅರಣ್ಯ ಪ್ರದೇಶದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರದ ಶೂಟಿಂಗ್ ಸೆಟ್ ಹಾಕುವುದಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಸೆಟ್ ಹಾಕುವ ಭರದಲ್ಲಿ ಅಲ್ಲಿನ ಸಾಕಷ್ಟು ಮರಗಳನ್ನು ಕಡಿಯಲಾಗಿದೆ. ಅರಣ್ಯ ಜಾಗದಲ್ಲಿನ ಮರಗಳನ್ನು ಕಡಿದ ಹಿನ್ನೆಲೆಯಲ್ಲಿ, ಚಿತ್ರತಂಡದ ವಿರುದ್ಧ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರೇ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಇದೆಲ್ಲದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ನಟ ಯಶ್ ಟ್ರೋಲ್ ಆಗುತ್ತಿದ್ದಾರೆ.
ಅಷ್ಟಕ್ಕೂ ಮರ ಕಡಿಯುವುದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಆದರೆ, ಅದ್ಯಾವ ಪ್ರಕ್ರಿಯೆಯೂ ಇಲ್ಲಿ ನಡೆದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕೇಸ್ ದಾಖಲಿಸುವಂತೆಯೂ ಸಚಿವರಿಂದ ಅಧಿಕಾರಿಗಳಿಗೆ ಸೂಚನೆ ಹೋಗಿದೆ. ಈಗಾಗಲೇ ಕಳೆದ ಐದು ತಿಂಗಳಿಂದ ಸೆಟ್ ಕೆಲಸಗಳು ನಡೆದಿದ್ದು, ಬಹುತೇಕ ಪೂರ್ಣಗೊಂಡಿದೆ. ಇನ್ನೇಣು ಶೀಘ್ರದಲ್ಲಿಯೇ ಶೂಟಿಂಗ್ ಆರಂಭಿಸಬೇಕಿದ್ದ ತಂಡಕ್ಕೀಗ ಅರಣ್ಯ ಇಲಾಖೆ ಶಾಕ್ ನೀಡಿದೆ. ಈಗಾಗಲೇ ಚಿತ್ರತಂಡಕ್ಕೆ ನೋಟೀಸ್ ಸಹ ನೀಡಿದ್ದು, ಅಲ್ಲಿನ ಕೆಲಸಗಳಿಗೂ ಬ್ರೇಕ್ ಬಿದ್ದಿದೆ.
ನಟ ಯಶ್‌ಗೆ ಬಿಸಿ ಮುಟ್ಟಿಸಿದ ಟ್ರೋಲರ್ಸ್
ಇನ್ನು ಸಚಿವ ಈಶ್ವರ್ ಖಂಡ್ರೆ, ಟಾಕ್ಸಿಕ್ ಸಿನಿಮಾ ತಂಡದ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಅರಣ್ಯ ಪ್ರದೇಶದ ಸ್ಯಾಟಲೈಟ್ ಫೋಟೋ ಹಂಚಿಕೊಂಡಿದ್ದರು. ಒಂದರಲ್ಲಿ ಹಸಿರಾಗಿ ಇದ್ದ ಪ್ರದೇಶ, ಇನ್ನೊಂದು ಫೋಟೋದಲ್ಲಿ ಬರಡಾಗಿತ್ತು. ಇದು ವೈರಲ್ ಆಗುತ್ತಿದ್ದಂತೆ, ಪರಿಸರ ಪ್ರೇಮಿಗಳು, ನೆಟ್ಟಿಗರು ಚಿತ್ರತಂಡದ ವಿರುದ್ಧ ಕಿಡಿ ಕಾರುತ್ತಿದ್ದಾರೆ. "ಸಿನಿಮಾ ಶೂಟಿಂಗ್ ಸಲುವಾಗಿ ಕಾಡು ನಾಶ ಮಾಡುವುದು ಎಷ್ಟು ಸರಿ?" ಎಂದು ಕೊಂಚ ಗರಂ ಆಗಿದ್ದಾರೆ.
ಗಡ್ಡ ಬೆಳೆಸಿದಷ್ಟು ಸುಲಭ ಅಲ್ಲ..
ಇನ್ನು ಕೆಲವರು ನಟ ಯಶ್ ಅವರನ್ನೂ ಗುರಿಯಾಗಿಸಿಕೊಂಡು, ಕಾಮೆಂಟ್ ಮಾಡುತ್ತಿದ್ದಾರೆ. ‘ಗಡ್ಡ ಬೆಳೆಸಿದಷ್ಟು ಈಸಿ ಅಲ್ಲ ಗುರು ಮರ ಬೆಳೆಸೋದು’ ಎಂದೂ ನಟ ಯಶ್ ಅವರನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ಪ್ರಕರಣದಲ್ಲಿ ಇಡೀ ತಂಡವನ್ನೇ ಬಂಧಿಸಬೇಕು. ಕಡಿದಷ್ಟು ಮರವನ್ನೂ ನೆಡಬೇಕು ಎಂದೂ ಕಾಮೆಂಟ್ ಮಾಡುತ್ತಿದ್ದಾರೆ.
ಸಚಿವ ಈಶ್ವರ್ ಖಂಡ್ರೆ ಟ್ವಿಟ್
ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ನಮ್ಮ ಅರಣ್ಯ ಮತ್ತು ಪರಿಸರದ ರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆಗಾರಿಕೆ. ಅರಣ್ಯ ಭೂಮಿಯಲ್ಲಿ ಅಕ್ರಮ ಕೃತ್ಯಗಳು ಕಂಡುಬಂದಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ.