ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಲು ನಿರಾಕರಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ!- ವೈರಲ್ ವಿಡಿಯೋ
Karnataka Rajyotsava: ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಲು ನಿರಾಕರಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯ ವರ್ತನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ. ಕೆಲವರು ತೀರಾ ಕೀಳುಮಟ್ಟದ ಪ್ರತಿಕ್ರಿಯೆ ನೀಡಿದ್ದಾರೆ. ಆದಾಗ್ಯೂ, ಪರ ವಿರೋಧದ ಚರ್ಚೆಗೆ ಸೂಕ್ತವೆನಿಸುವ ಅಂಶಗಳೂ ಇವೆ. ವೈರಲ್ ವಿಡಿಯೋ ಗಮನಿಸಿ.
ಬೆಂಗಳೂರು: ಕನ್ನಡ, ಕನ್ನಡಿಗರನ್ನು ಅವಮಾನಿಸಿದರೆ ಅದು ನಾಡದ್ರೋಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ರಾಜ್ಯೋತ್ಸವದ ಭಾಷಣದಲ್ಲಿ ಘೋಷಿಸಿದ್ದರು. ಆದರೆ, ಸರ್ಕಾರಿ ಕಾರ್ಯಕ್ರಮದಲ್ಲಿ ಚುನಾಯಿತ ಜನಪ್ರತಿನಿಧಿಯೊಬ್ಬರು ನಾಡದೇವಿಗೆ ಪುಷ್ಪಾರ್ಚನೆ ಮಾಡಲು ನಿರಾಕರಿಸಿದ ವಿಡಿಯೋ ಎಕ್ಸ್ ಖಾತೆಯಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ವಿಡಿಯೋ ನವೆಂಬರ್ 1 ರಂದು ರಾತ್ರಿ ಅಪ್ಲೋಡ್ ಆಗಿದ್ದು, 50ಸಾವಿರಕ್ಕೂ ಹೆಚ್ಚು ವೀಕ್ಷಣೆ ಹೊಂದಿದೆ, 100ಕ್ಕೂ ಹೆಚ್ಚು ಪ್ರತಿಕ್ರಿಯೆಗಳೂ ವ್ಯಕ್ತವಾಗಿದೆ. ಇದಲ್ಲದೆ ರೀಟ್ವೀಟ್, ಸಾವಿರಕ್ಕೂ ಹೆಚ್ಚು ಲೈಕ್ಸ್ ಅನ್ನು ಪಡೆದುಕೊಂಡಿದೆ. ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ. ಪಟ್ಟಣ ಪಂಚಾಯಿತಿ ಅಧ್ಯಕ್ಷೆಯ ನಡೆ ವಿಚಾರದಲ್ಲಿ ಪರ ವಿರೋಧ ಮಾತುಗಳು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಕಂಡುಬಂದಿವೆ.
ನಾಡದೇವಿಗೆ ಪುಷ್ಪ ನಮನ ಸಲ್ಲಿಸದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಯಾರು?
ವೈರಲ್ ವಿಡಿಯೋವನ್ನೂ ವೀಕ್ಷಿಸಿದರೆ, ಅದರಲ್ಲಿ ಉದ್ಘೋಷಕರು ಕನ್ನಡ ರಾಜೋತ್ಸವ ಕಾರ್ಯಕ್ರಮದ ಆರಂಭದಲ್ಲಿ ನಾಡದೇವಿ ಭುವನೇಶ್ವರಿ ಮಾತೆಯ ಫೋಟೋಕ್ಕೆ ಪುಷ್ಪಾರ್ಚನೆ ಮಾಡುವಂತೆ ಪ್ರತಿಯೊಬ್ಬ ಗಣ್ಯರ ಹೆಸರನ್ನೂ ಹೇಳುತ್ತಿರುವುದು ಕೇಳಿಸುತ್ತದೆ. ಈ ನಡುವೆ, ಎಲ್ಲರೂ ಪುಷ್ಪಾರ್ಚನೆಗೆ ಮುಂದಾದಾಗ ಅಲ್ಲಿ ಒಂಟಿಯಾಗಿ ಉಳಿದವರು ಜಾಲಿ ಪಟ್ಟಣ ಪಂಚಾಯಿ ಅಧ್ಯಕ್ಷೆ ಖಾಜಿಯಾ ಹಪ್ಸಾ ಹುಝೇಫಾ. ಅವರ ಹೆಸರನ್ನೂ ಉದ್ಘೋಷಕರು ಹೇಳುತ್ತಾರೆ. ಆದರೂ ಅವರು ನಿಂತಲ್ಲೇ ಇದ್ದರು. ಹೂವುಗಳನ್ನು ಕೈಗೆ ತಗೊಂಡ ಕಸಾಪ ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಅವರು ಪುಷ್ಪನಮನ ಸಲ್ಲಿಸಲು ಸ್ವಲ್ಪ ಹೂವನ್ನು ಜಾಲಿ ಪಟ್ಟಣ ಪಂಚಾಯಿ ಅಧ್ಯಕ್ಷೆ ಖಾಜಿಯಾ ಹಪ್ಸಾ ಹುಝೇಫಾ ಕೈಗೆ ನೀಡಲು ಮುಂದಾದರು. ಸಹಾಯಕ ಆಯುಕ್ತೆ ಡಾ. ನಯನಾ ಅವರು ಕೂಡ ಪುಷ್ಪಾರ್ಚನೆಗೆ ಬರುವಂತೆ ಆಹ್ವಾನಿಸಿದರು. ಆಗ ಖಾಜಿಯಾ ಹಪ್ಸಾ ಹುಝೇಫಾ ಕೈಯಲ್ಲೇ ಬೇಡ ಎಂದು ನಿರಾಕರಿಸಿದ್ದು ಕಂಡುಬಂತು. ಗಣ್ಯರು ಪುಷ್ಪಾರ್ಚನೆ ಮುಂದುವರಿಸಿದರು. ಜಾಲಿ ಪಟ್ಟಣ ಪಂಚಾಯಿ ಅಧ್ಯಕ್ಷೆ ಖಾಜಿಯಾ ಹಪ್ಸಾ ಹುಝೇಫಾ ಮಾತ್ರ ಅಲ್ಲಿ ಸುಮ್ಮನೇ ನಿಂತಿದ್ದ ದೃಶ್ಯ ಗಮನಸೆಳೆಯಿತು.
ಭಟ್ಕಳದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ (ನವೆಂಬರ್ 1) ನಡೆದ ಕಾರ್ಯಕ್ರಮ ಇದು. ಈ ವಿಡಿಯೋಕ್ಕೆ 100ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಸುಬ್ರಹ್ಮಣ್ಯ ಆಚಾರ್ಯ ಎಂಬುವವರು, “ಇನ್ನಾದ್ರೂ ಕನ್ನಡಿಗರು ಎಚ್ಚೆತ್ತುಕೊಳ್ಳಿ. ಎಲ್ಲರೂ ಒಂದೇ ಎನ್ನುವ ಭಾವ ಬಿಡಿ. ಅವರು ಯಾವಾಗಲೂ ಬೇರೇನೇ” ಎಂದು ಪ್ರತಿಕ್ರಿಯಿಸಿದ್ದಾರೆ.
ರಿಯಲ್ ಸಿಟಿಜೆನ್ ಎಂಬ ಎಕ್ಸ್ ಖಾತೆಯಿಂದ “ಮುಂದಿನ ವರ್ಷದಿಂದ ರಾಜ್ಯೋತ್ಸವ ಸಮಾರಂಭಗಳಲ್ಲಿ ನಾಡ ತಾಯಿ ಭುವನೇಶ್ವರಿ ದೇವಿ ಫೋಟೋ ಪೂಜೆ, ಪುಷ್ಪಾರ್ಪಣೆಯನ್ನು ನಿಷೇಧಿಸಿ ಆದೇಶ ಹೊರಡಿಸಬಹುದು” ಎಂಬ ಪ್ರತಿಕ್ರಿಯೆ ಬಂದಿದೆ.
ಸಂದೀಪ್ ಎಂಬುವವರು, “ಶಿಕ್ಷಣ ಪಡೆದುಕೊಂಡಿದ್ರೂ ಎಷ್ಟು ಒಂದು ಧರ್ಮದ ಮೋಹ ಮತ್ತೆ ಅಮಲು ಇದೆ. ಸೆಕ್ಯುಲರಿಸಂ ಡ್ರಾಮಾ ಬೇರೆ ಅದೇ ಜಾಗದಲ್ಲಿ ಅಲ್ಲಿ ಹಿಂದು ಇರ್ತ ಇದ್ದರೆ ಇಷ್ಟು ಹೊತ್ತಿಗೆ ಬುದ್ಧಿ ಜೀವಿಗಳು ಮೀಡಿಯಾಗಳು ಬೊಬ್ಬೆ ಹೊಡೀತಾ ಇದ್ರು- ಸಂವಿಧಾನ ಅಪಾಯದಲ್ಲಿದೆ ಅಂತ. ದರ್ಮ ಮೊದಲು ದೇಶ ಸಂವಿಧಾನ ನಮಗಿರುವುದಲ್ಲ ಎಂಬುದಕ್ಕೆ ಇದು ಬೆಸ್ಟ್ ಉದಾಹರಣೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
“ಹಿಂದುಗಳಿಗೆ ಮಾತ್ರ ರಾಷ್ಟ್ರೀಯತೆ ಮುಸಲ್ಮಾನರಿಗೆ ಕಾನೂನು ರೀತ್ಯ ಪ್ರತ್ಯೇಕತೆ. ಇಂತಹ ಧರ್ಮಾಂಧತೆಗೆ ಧಿಕ್ಕಾರ” ಎಂದು ಮನೋಹರ ಜಿ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
ಶಿವರಂಜನ್ ಎಂಬುವವರು “ಕನ್ನಡ ಶಾಲು ತೊಟ್ಟಿದ್ದಾರೆ, ಕನ್ನಡ ಮಾತನಾಡ್ತಾರೆ ಅಷ್ಟು ಸಾಕು. ಅನ್ಯದೇವರ ಪೂಜೆ ಅವರ ಧರ್ಮದಲ್ಲಿ ನಿಷಿದ್ಧ .ಒತ್ತಾಯ ಯಾಕೆ?” ಎಂದು ಪ್ರತಿಕ್ರಿಯಿಸಿದ್ದಾರೆ.
“ಕನ್ನಡ ಮಾತೆಗೆ ಗೌರವ ಕೊಡುವುದು ಪೂಜೆ ಎಂದಲ್ಲ ಕಣೋ, ನಮ್ಮ ರಾಜ್ಯ , ಭಾಷೆ, ನೆಲ ,ಜಲ ಬಗ್ಗೆ ಗೌರವ ಕೊಡುವುದು ಮುಖ್ಯ, ನಮಗೆ ಕನ್ನಡವೇ ಮುಖ್ಯ ಕನ್ನಡವೇ ನಿತ್ಯ ಇದ್ದರೆ ಸಾಕು . ನಿನಲ್ಲಿ ಕರ್ನಾಟಕ ರಾಜ್ಯದ ಗೌರವ ಇಲ್ಲ, ಉತ್ತರ ಭಾರತೀಯರ ಅಭಿಮಾನ ಜಾಸ್ತಿ ಕಾಣುತ್ತದೆ” ಎಂಬ ಪ್ರತಿಕ್ರಿಯೆ ಪಯ್ಯಾ ಎಂಬ ಖಾತೆಯಿಂದ ಬಂದಿದೆ.