ಕರ್ನಾಟಕ ಹವಾಮಾನ: ಬೆಂಗಳೂರಿನಲ್ಲಿ ತಗ್ಗಿದ ಚಳಿ; ಡಿಸೆಂಬರ್ 23ಕ್ಕೆ ಮೈಸೂರು ಸೇರಿ 4 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡಿಸೆಂಬರ್ 20ರ ಶುಕ್ರವಾರ ಚಳಿಯ ವಾತಾವರಣ ಕಡಿಮೆಯಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ಮಂಜು ಮತ್ತು ಚಳಿಯ ಪರಿಸ್ಥಿತಿ ಗಣನೀಯವಾಗಿ ಇಳಿಕೆಯಾಗಿದೆ. ಡಿಸೆಂಬರ್ 23ರ ಸೋಮವಾರ ನಾಲ್ಕು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
ಭಾರಿ ಚಳಿಯ ಪರಿಸ್ಥಿತಿಯನ್ನು ಎದುರಿಸಿದ್ದ ಕರ್ನಾಟಕದ ಕೆಲವು ಜಿಲ್ಲೆಗಳ ಜನರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇಂದು (ಡಿಸೆಂಬರ್ 20, ಶುಕ್ರವಾರ) ಮಂಜು ಮತ್ತು ಚಳಿಯ ವಾತಾವರಣ ಕಡಿಮೆಯಾಗಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಮಂಜಿನ ವಾತಾವರಣ ಇರಬಹುದು. ಆದರೆ ಉಳಿದಂತೆ ವಾತಾವರಣದಲ್ಲಿ ದೊಡ್ಡ ಬದಲಾಣೆಯಾಗಿಲ್ಲ. ಕೆಲವು ದಿನಗಳಿಂದ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಮೈಕೊರೆಯುವ ಚಳಿಯ ಹೊಡೆತಕ್ಕೆ ಜನರು ತತ್ತರಿಸಿ ಹೋಗಿದ್ದರು. ಮುಂಜಾನೆಯಿಂದಲೇ ಬೀದರ್, ವಿಜಯಪುರ, ಕಲಬುರಗಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಭಾರಿ ಚಳಿಯ ವಾತಾವರಣ ಇತ್ತು. ಈ ಭಾಗದಲ್ಲಿ ತಾಪಮಾನ 6 ರಿಂದ 7 ಡಿಗ್ರಿ ಸೆಲ್ಸಿಯಸ್ ಗೆ ತಲುಪಿತ್ತು. ಚಳಿಯಿಂದ ಪಾರಾಗಲು ಕೆಲವೆಡೆ ಜನರು ಫೈಯರ್ ಕ್ಯಾಂಪ್ ಗಳ ಮೊರೆ ಹೋಗಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಆದರೆ ವಾತಾವರಣದಲ್ಲಿ ಗಣನೀಯವಾಗಿ ಬದಲಾವಣೆಯಾಗಿದ್ದು ಮಂಜು ಮತ್ತು ಚಳಿ ಎರಡೂ ಕಡಿಮೆಯಾಗಿವೆ.
ಬೆಂಗಳೂರು ಹವಾಮಾನ ಕೇಂದ್ರದ ಪ್ರತಿನಿತ್ಯದ ವರದಿಯ ಪ್ರಕಾರ, ಡಿಸೆಂಬರ್ 19ರ ಗುರುವಾರ ರಾಜ್ಯದ ಯಾವುದೇ ಭಾಗದಲ್ಲಿ ಮಳೆಯಾಗಿಲ್ಲ. ಇಂದು (ಡಿಸೆಂಬರ್ 20, ಶುಕ್ರವಾರ) ಕೂಡ ಮಳೆಯ ಮುನ್ಸೂಚನೆಗಳು ಇಲ್ಲ. ಮುಂದಿನ ಎರಡು ದಿನಗಳ ಕಾಲ ಮಳೆ ಬರುವ ನಿರೀಕ್ಷೆಗಳು ಇಲ್ಲ. ಆದರೆ ಡಿಸೆಂಬರ್ 23ರ ಸೋಮವಾರ ರಾಮನಗರ, ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಡಿಸೆಂಬರ್ 24ರ ಮಂಗಳವಾರ ಉಡುಪಿ, ದಕ್ಷಿಣ ಕನ್ನಡ, ಕೊಡಗು, ರಾಮನಗರ, ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 25ರ ಬುಧವಾರ ಕೂಡ ಇದೇ ಜಿಲ್ಲೆಗಳಿಗೆ ಮಳೆ ಬರುವ ನಿರೀಕ್ಷೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ವರದಿಯಲ್ಲಿ ತಿಳಿಸಿದೆ.
ಎರಡು ದಿನಗಳ ಕಾಲ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಗಳು ಇರುವುದಿಲ್ಲ. ನಂತರ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇಲ್ಲ. ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ವಾತಾವರಣವನ್ನು ನೋಡುವುದಾದರೆ, ಭಾಗಶಃ ಮೋಡ ಕವಿದ ಆಕಾಶ ಇರುತ್ತದೆ. ಕೆಲವು ಕಡೆಗಳಲ್ಲಿ ಮಂಡು ಅಥವಾ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸಲ್ಸಿಯಸ್ ತಾಪಮಾನ ಇರುವ ನಿರೀಕ್ಷೆ ಇದೆ. ಎರಡ್ಮೂರು ದಿನಗಳಲ್ಲಿ ಈ ತಾಪಮಾನದಲ್ಲಿ ಸ್ವಲ್ಪ ಏರಿಳಿತವಾಗಬಹುದು.
ವಿಭಾಗ