ಆರ್‌ಸಿಬಿ ಆಟಗಾರ್ತಿಯರ ಸಿಡಿಲಬ್ಬರ; ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20ಯಲ್ಲಿ ಭಾರತಕ್ಕೆ ಭರ್ಜರಿ ಜಯ; ಸರಣಿ ವಶ
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ ಆಟಗಾರ್ತಿಯರ ಸಿಡಿಲಬ್ಬರ; ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20ಯಲ್ಲಿ ಭಾರತಕ್ಕೆ ಭರ್ಜರಿ ಜಯ; ಸರಣಿ ವಶ

ಆರ್‌ಸಿಬಿ ಆಟಗಾರ್ತಿಯರ ಸಿಡಿಲಬ್ಬರ; ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20ಯಲ್ಲಿ ಭಾರತಕ್ಕೆ ಭರ್ಜರಿ ಜಯ; ಸರಣಿ ವಶ

ವೆಸ್ಟ್‌ ಇಂಡೀಸ್‌ ವನಿತೆಯರ ವಿರುದ್ಧದ ಟಿ20 ಸರಣಿಯನ್ನು ಭಾರತ ಮಹಿಳೆಯರ ತಂಡವು 2-1 ಅಂತರದಿಂದ ವಶಪಡಿಸಿಕೊಂಡಿದೆ. ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ರಿಚಾ ಘೋಷ್‌ ಹಾಗೂ ಸ್ಮೃತಿ ಮಂಧಾನ ಭರ್ಜರಿ ಅರ್ಧಶತಕದ ನೆರವಿನಿಂದ ತಂಡ ಸುಲಭ ಜಯ ಸಾಧಿಸಿತು.

ಆರ್‌ಸಿಬಿ ಆಟಗಾರ್ತಿಯರ ಅಬ್ಬರ; ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20ಯಲ್ಲಿ ಭಾರತಕ್ಕೆ ಜಯ
ಆರ್‌ಸಿಬಿ ಆಟಗಾರ್ತಿಯರ ಅಬ್ಬರ; ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20ಯಲ್ಲಿ ಭಾರತಕ್ಕೆ ಜಯ (PTI)

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ವನಿತೆಯರ ತಂಡವು  60 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ನವಿ ಮುಂಬೈನ ಡಿವೈ ಪಾಟೀಲ್‌ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ಹಲವು ದಾಖಲೆ ನಿರ್ಮಿಸಿತು. ಭಾರತ ವನಿತೆಯರು ನೀಡಿದ 218 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ ವಿಂಡೀಸ್‌ ಮಹಿಳೆಯರು 9 ವಿಕೆಟ್‌ ಕಳೆದುಕೊಂಡು 157 ರನ್‌ ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು. ಪಂದ್ಯದಲ್ಲಿ ಆರ್‌ಸಿಬಿ ವನಿತೆಯರ ತಂಡದ ಆಟಗಾರ್ತಿಯರಾದ ಸ್ಮೃತಿ ಮಂಧಾನ, ರಿಚಾ ಘೋಷ್‌ ಹಾಗೂ ಈ ಬಾರಿಯ ಹರಾಜಿನ ಹೊಸ ಖರೀದಿ ರಾಘವಿ ಬಿಶ್ತ್‌ ಅಬ್ಬರಿಸಿ ಗಮನ ಸೆಳೆದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ, ಆರ್‌ಸಿಬಿ ಆಟಗಾರ್ತಿಯರಾದ ರಿಚಾ ಘೋಷ್‌ ದಾಖಲೆಯ ಅರ್ಧಶತಕ, ಸ್ಮೃತಿ ಮಂಧಾನ ಅರ್ಧಶತಕ ಹಾಗೂ ರಾಘವಿ ಬಿಷ್ತ್‌ ಆಕರ್ಷಕ ಆಟದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ರಿಚಾ ಘೋಷ್‌ ಕೇವಲ 18 ಎಸೆತಗಳಿಂದ ಫಿಫ್ಟಿ ಬಾರಿಸಿದರು. ಮಹಿಳಾ ಟಿ20ಯಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ವಿಶ್ವದಾಖಲೆಯನ್ನು ರಿಚಾ ಘೋಷ್ (54) ಸರಿಗಟ್ಟಿದರು. ಇದೇ ವೇಳೆ ಭಾರತ ತಂಡ ಗಳಿಸಿದ 217 ರನ್‌, ಚುಟುಕು ಸ್ವರೂಪದಲ್ಲಿ ತಂಡದ ಈವರೆಗಿನ ಗರಿಷ್ಠ ಮೊತ್ತವಾಗಿದೆ.

21ರ ಹರೆಯದ ಘೋಷ್, ಕೇವಲ 21 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿಂದ ಸ್ಫೋಟಕ 54 ರನ್ ಗಳಿಸಿದರು. ಇದರೊಂದಿಗೆ ನ್ಯೂಜಿಲೆಂಡ್‌ನ ಸೋಫಿ ಡಿವೈನ್ ಮತ್ತು ಆಸ್ಟ್ರೇಲಿಯಾದ ಫೋಬ್ ಲಿಚ್‌ಫೀಲ್ಡ್ ಜತೆಗೆ ಜಂಟಿಯಾಗಿ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದರು.

ಸ್ಮೃತಿ ಮಂಧಾನ ದಾಖಲೆ

ಇದೇ ವೇಳೆ ಸ್ಮೃತಿ ಮಂಧಾನ 47 ಎಸೆತಗಳಲ್ಲಿ 77 ರನ್‌ ಗಳಿಸಿದರು. ಇದರೊಂದಿಗೆ ಈ ವರ್ಷ ಆಡಿದ 23 ಟಿ20 ಪಂದ್ಯಗಳಲ್ಲಿ 763 ರನ್ ಗಳಿಸುವ ಮೂಲಕ, ಈ ವರ್ಷ ಚುಟುಕು ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ಪ್ರಸಕ್ತ ಸರಣಿಯಲ್ಲಿ ಸತತ ಮೂರನೇ ಅರ್ಧಶತಕವಾಗಿದೆ.

ಪವರ್‌ಪ್ಲೇ ಒಳಗಡೆ ತಂಡವು ಉಮಾ ಚೆಟ್ರಿ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಆದರೆ, ಮಂಧನಾಗೆ ಸಾಥ್‌ ನೀಡಿದ ರೊಡ್ರಿಗಸ್ 39 ರನ್‌ ಸಿಡಿಸಿದರು. ಇವರಿಬ್ಬರೂ ಎರಡನೇ ವಿಕೆಟ್‌ಗೆ 55 ಎಸೆತಗಳಲ್ಲಿ 98 ರನ್ ಪೇರಿಸಿದರು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ವನಿತೆಯರ ತಂಡದ ಹೊಸ ಖರೀದಿ ರಾಘವಿ ಬಿಶ್ತ್, ಕೆಲವು ಆಕರ್ಷಕ ಹೊಡೆತಗಳನ್ನಾಡಿದರು. 22 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದರು.

ದಾಖಲೆ ಸಂಖ್ಯೆಯ ಅಭಿಮಾನಿಗಳಿಂದ ಪಂದ್ಯ ವೀಕ್ಷಣೆ

ಎರಡನೇ ಪಂದ್ಯದಲ್ಲಿ ಸಾಕಷ್ಟು ರನ್ ಗಳಿಸದೆ ಸೋಲು ಕಂಡಿದ್ದ ಭಾರತ, ಕೊನೆಯ ಪಂದ್ಯದಲ್ಲಿ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿತು. ಪ್ರತಿ ಓವರ್‌ಗೆ ಕನಿಷ್ಠ 10ರ ರನ್‌ರೇಟ್‌ನಲ್ಲಿ ರನ್ ಗಳಿಸಲು ಪ್ರಯತ್ನಿಸಿತು. ಭಾರತ ವನಿತೆಯರ ಪಂದ್ಯ ವೀಕ್ಷಿಸಲು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 40,000ಕ್ಕೂ ಹೆಚ್ಚು ಪ್ರೇಕ್ಷಕರು ಹಾಜರಿದ್ದರು.

Whats_app_banner