Karnataka Weather: ಫೆಂಗಲ್ ಚಂಡಮಾರುತ ಎಫೆಕ್ಟ್; ಕರಾವಳಿ ಪ್ರದೇಶ ಸೇರಿ 10 ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ, ಬೆಂಗಳೂರಿಗೂ ಮುನ್ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಫೆಂಗಲ್ ಚಂಡಮಾರುತ ಎಫೆಕ್ಟ್; ಕರಾವಳಿ ಪ್ರದೇಶ ಸೇರಿ 10 ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ, ಬೆಂಗಳೂರಿಗೂ ಮುನ್ಸೂಚನೆ

Karnataka Weather: ಫೆಂಗಲ್ ಚಂಡಮಾರುತ ಎಫೆಕ್ಟ್; ಕರಾವಳಿ ಪ್ರದೇಶ ಸೇರಿ 10 ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ, ಬೆಂಗಳೂರಿಗೂ ಮುನ್ಸೂಚನೆ

ಕರ್ನಾಟಕ ಹವಾಮಾನ: ಫೆಂಗಲ್ ಚಂಡಮಾರುತ ಬೆಂಗಳೂರಿನಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ತುಮಕೂರು, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳತ್ತ ಸಾಗಿದ್ದು, ಈ ಭಾಗದಲ್ಲಿ ಮಳೆಯ ಮುನ್ಸೂಚನೆ ಇದೆ. ಡಿಸೆಂಬರ್ 3ರ ಮಂಗಳವಾರ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿನ ಹವಾಮಾನ ವರದಿ ಇಲ್ಲಿದೆ.

ಡಿಸೆಂಬರ್ 3ರ ಮಂಗಳವಾರ ಹವಾಮಾನ ವರದಿ
ಡಿಸೆಂಬರ್ 3ರ ಮಂಗಳವಾರ ಹವಾಮಾನ ವರದಿ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಫೆಂಗಲ್ ಚಂಡಮಾರುತ ಭಾರಿ ಪರಿಣಾಮ ಬೀರುತ್ತಿದೆ. ಇಂದು (ಡಿಸೆಂಬರ್ 3, ಮಂಗಳವಾರ) ಕೂಡ ಕರಾವಳಿ ಭಾಗದಲ್ಲಿ ಸೈಕ್ಲೋನ್ ಪರಿಸ್ಥಿತಿ ಮುಂದುವರಿದಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರು ಹವಾಮಾನ ಕೇಂದ್ರದ ಇತ್ತೀಚಿನ ವರದಿ ಪ್ರಕಾರ, ಕೊಡಗಿನಲ್ಲೂ ಧಾರಾಕಾರ ಮಳೆಯಾಗಲಿದೆ. ಇತ್ತ ರಾಜಧಾನಿ ಬೆಂಗಳೂರು ಪ್ರದೇಶದಲ್ಲಿ ಚಂಡಮಾರುತದ ಅಬ್ಬರ ಸ್ವಲ್ಪ ಕಡಿಮೆಯಾಗುತ್ತಿದ್ದು, ಬೆಂಗಳೂರು ಭಾಗದಿಂದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳತ್ತ ಸಾಗಿದೆ. ಹೀಗಾಗಿ ತುಮಕೂರು, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಡಿಸೆಂಬರ್ 3ರ ಮಂಗಳವಾರ ಮಳೆಯ ಮುನ್ಸೂಚನೆ ಇದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಚಾಮರಾಜನಗರ ಜಿಲ್ಲೆಯಲ್ಲಿ ಗರಿಷ್ಠ ಮಳೆ

ಬೆಂಗಳೂರು ಹವಾಮಾನ ಕೇಂದ್ರದಲ್ಲಿ ಡಿಸೆಂಬರ್ 2ರ ಸೋಮವಾರ ಸಂಜೆಯವರಿಗೆ ದಾಖಲಾಗಿರುವ ವರದಿಯ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ ಗರಿಷ್ಠ ಮಳೆಯಾಗಿದೆ. ಇಲ್ಲಿ 5 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ಬಂಡೀಪುರದಲ್ಲಿ 4 ಸೆಂಟಿ ಮೀಟರ್, ಕೋಲಾರ ಜಿಲ್ಲೆಯ ರಾಯಲ್ಪಾಡು 4, ಕೊಡಗು ಜಿಲ್ಲೆಯ ಭಾಗಮಂಡಲ 3, ಮಲೆಮಹದೇಶ್ವರ ಬೆಟ್ಟ 3, ಮಂಡ್ಯ 3, ಬೆಂಗಳೂರು ನಗರ 3, ಮೈಸೂರು ಜಿಲ್ಲೆಯ ನಂಜನಗೂಡು 3, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ 3 ಸೆಂಟಿ ಮೀಟರ್ ಮಳೆಯಾಗಿದೆ.

ಡಿಸೆಂಬರ್ 3ರ ಮಂಗಳವಾರ ಮಳೆಯ ಮುನ್ಸೂಚನೆ ಇರುವ ಜಿಲ್ಲೆಗಳು

ತಮಿಳುನಾಡಿನ ಕರಾವಳಿಗೆ ಅಪ್ಪಳಿಸಿದ್ದ ಫೆಂಗಲ್ ಚಂಡಮಾರುತವು ಕರ್ನಾಟಕ ಕರಾವಳಿ ಪ್ರದೇಶಕ್ಕೂ ಸಾಗಿರುವ ಪರಿಣಾಮವಾಗಿ ಡಿಸೆಂಬರ್ 3ರ ಮಂಗಳವಾರ ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಕೊಡಗು ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಅನೇಕ ಪ್ರದೇಶಗಳಲ್ಲಿ ಹಗುರದಿಂದ ಕೂಡಿ ಸಾಧಾರಣ ಮಳೆಯನ್ನು ನಿರೀಕ್ಷಿಸಲಾಗಿದೆ. ಮುಂದಿನ 5 ದಿನಗಳ ವರಿಗೆ ಇದೇ ರೀತಿಯ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಕೇಂದ್ರ ತನ್ನ ವರದಿಯಲ್ಲಿ ತಿಳಿಸಿದೆ.

ನೆರೆಯ ತಮಿಳುನಾಡಿನ ಚೆನ್ನೈ ಪ್ರದೇಶದಲ್ಲಿ ಫೆಂಗಲ್ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಕೋಲಾರ ಸೇರಿದಂತೆ ಕರ್ನಾಟಕ ಕೆಲವೊಂದು ಗಡಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಡಿಸೆಂಬರ್ 2 ರಂದು ಶಾಲಾ 2 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇದೀಗ ಭಾರಿ ಮಳೆಯ ಮುನ್ಸೂಚನೆ ಇರುವ ಕಾರಣ ಡಿಸೆಂಬರ್ 3ರ ಮಂಗಳವಾರವೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಬೆಂಗಳೂರಿನಲ್ಲೂ ಮಳೆಯಾಗುವ ಮುನ್ಸೂಚನೆ

ರಾಜಧಾನಿ ಬೆಂಗಳೂರಿನಲ್ಲೂ ಇಂದು (ಡಿಸೆಂಬರ್ 3, ಮಂಗಳವಾರ) ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಅಲ್ಲಲ್ಲಿ ಮಳೆಯಾಗುತ್ತಿದೆ. ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಸೋಮವಾರ ತಡರಾತ್ರಿ ನಗರದ ಹಲವೆಡೆ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ಹವಾಮಾನದ ವೈಪರೀತ್ಯದ ಹಿನ್ನೆಲೆಯಲ್ಲಿ ರಾಜ್ಯದ ಒಟ್ಟು 9 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

Whats_app_banner