ಕೇಂದ್ರ ವಿತ್ತ ಸಚಿವೆ ನಿರ್ಮಲಾ,ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧದ ಚುನಾವಣಾ ಬಾಂಡ್ ಎಫ್ಐಆರ್ ರದ್ದು; ಕರ್ನಾಟಕ ಹೈಕೋರ್ಟ್‌ ಆದೇಶ
ಕನ್ನಡ ಸುದ್ದಿ  /  ಕರ್ನಾಟಕ  /  ಕೇಂದ್ರ ವಿತ್ತ ಸಚಿವೆ ನಿರ್ಮಲಾ,ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧದ ಚುನಾವಣಾ ಬಾಂಡ್ ಎಫ್ಐಆರ್ ರದ್ದು; ಕರ್ನಾಟಕ ಹೈಕೋರ್ಟ್‌ ಆದೇಶ

ಕೇಂದ್ರ ವಿತ್ತ ಸಚಿವೆ ನಿರ್ಮಲಾ,ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧದ ಚುನಾವಣಾ ಬಾಂಡ್ ಎಫ್ಐಆರ್ ರದ್ದು; ಕರ್ನಾಟಕ ಹೈಕೋರ್ಟ್‌ ಆದೇಶ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಹಿತ ಮೂವರ ವಿರುದ್ದ ಚುನಾವಣಾ ಬಾಂಡ್‌ ಹೆಸರಿನಲ್ಲಿ ಹಣ ಸುಲಿಗೆ ಆರೋಪ ಕುರಿತಾದ ಎಫ್‌ಐಆರ್‌ ಅನ್ನು ರದ್ದುಪಡಿಸಿ ನ್ಯಾಯಾಲಯ ಆದೇಶಿಸಿದೆ.(ವರದಿ: ಎಚ್.ಮಾರುತಿ, ಬೆಂಗಳೂರು)

ಕರ್ನಾಟಕದಲ್ಲಿ ಚುನಾವಣೆ ಬಾಂಡ್‌ ವಿಚಾರದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಬಿ.ವೈ.ವಿಜಯೇಂದ್ರ ಹಾಗೂ ನಳಿನ್ ಕುಮಾರ್‌ ಕಟೀಲು ವಿರುದ್ದ ದಾಖಲಾಗಿದ್ದ ಎಫ್‌ಐಆರ್‌ ರದ್ದಾಗಿದೆ.
ಕರ್ನಾಟಕದಲ್ಲಿ ಚುನಾವಣೆ ಬಾಂಡ್‌ ವಿಚಾರದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಬಿ.ವೈ.ವಿಜಯೇಂದ್ರ ಹಾಗೂ ನಳಿನ್ ಕುಮಾರ್‌ ಕಟೀಲು ವಿರುದ್ದ ದಾಖಲಾಗಿದ್ದ ಎಫ್‌ಐಆರ್‌ ರದ್ದಾಗಿದೆ.

ಬೆಂಗಳೂರು: ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಒಂದಿಷ್ಟೂ ಅಪರಾಧಿಕ ಅಂಶಗಳನ್ನು ಒಳಗೊಳ್ಳದ ಅರ್ಥಹೀನ ಎನ್ನಿಸುವಂತಹ ಈ ಕ್ರಿಮಿನಲ್‌ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಅರ್ಜಿದಾರರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಚುನಾವಣಾ ಬಾಂಡ್‌ ಗಳ ಮೂಲಕ ನೂರಾರು ಕೋಟಿ ರೂ.ಗಳ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಾಜಿ ಲೋಕಸಭಾ ಸದಸ್ಯ ಕಟೀಲ್‌ ಸೇರಿದಂತೆ ಹಲವು ಬಿಜೆಪಿ ಮುಖಂಡರ ವಿರುದ್ಧ ಎಫ್‌ ಐಆರ್‌ ದಾಖಲಿಸಲಾಗಿತ್ತು.

ಏನಿದು ಪ್ರಕರಣ

ಈ ಪ್ರಕರಣದಲ್ಲಿ 1ನೇ ಆರೋಪಿಯಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, 2ನೇ ಆರೋಪಿಯಾಗಿ ಇಡಿ ಅಧಿಕಾರಿಗಳು, 3ನೇ ಆರೋಪಿಯಾಗಿ ಬಿಜೆಪಿ ಘಟಕದ ಪದಾಧಿಕಾರಿಗಳು, 4ನೇ ಆರೋಪಿಗಳಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೆಂದ್ರ ಮತ್ತಿತರರನ್ನು ಹೆಸರಿಸಲಾಗಿತ್ತು. ಇವರ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್‌ ಸಹ ಅಧ್ಯಕ್ಷ ಆದರ್ಶ್ ಅಯ್ಯರ್ ಎನ್ನುವರು ಮ್ಯಾಜಿಸ್ಟ್ರೇಟ್ ಕೋರ್ಟ್‌ ನಲ್ಲಿ ಖಾಸಗಿ ದೂರು ನೀಡಿದ್ದರು.

ಜನಪ್ರತಿನಿಧಿಗಳ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್‌ ಆದೇಶದ ಮೇರೆಗೆ ತಿಲಕ್‌ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಕೋರ್ಟ್ ಸೂಚನೆ ಮೇರೆಗೆ ತಿಲಕ್‌ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಈ ದೂರನ್ನು ರದ್ದುಪಡಿಸಿವಂತೆ ಕಟೀಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಿಜೆಪಿ ನಾಯಕರ ಪರವಾಗಿ ಹಿರಿಯ ವಕೀಲ ಕೆ.ಜಿ.ರಾಘವನ್ ವಾದ ಮಂಡಿಸಿದ್ದರು. ಆದರ್ಶ್ ಅಯ್ಯರ್ ಪರವಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ ಶಾಸಕರು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಬಲವಂತದ ಕ್ರಮಕೈಗೊಳ್ಳದಂತೆ ಆದೇಶ ಹೊರಡಿಸಿ ಡಿ. 3 ಕ್ಕೆ ತೀರ್ಪು ಕಾಯ್ದಿರಿಸಿತ್ತು. ಮಂಗಳವಾರ ಎಫ್ಐಆರ್ ರದ್ದುಪಡಿಸಿ ಆದೇಶ ಹೊರಡಿಸಿದರು.

ದೂರುದಾರರ ಆರೋಪವೇನು?

ಜಾರಿ ನಿರ್ದೇಶನಾಲಯದ ಮೂಲಕ ದಾಳಿ ಮಾಡಿಸುವುದಾಗಿ ಬೆದರಿಕೆಯೊಡ್ಡಿ ಪ್ರತಿಷ್ಠಿತ ಕಂಪನಿಗಳಿಂದ ಸುಮಾರು 8 ಸಾವಿರ ಕೋಟಿ ರೂ. ಹಣವನ್ನು ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಮಾಡಲಾಗಿದೆ ಎಂದು ಅಯ್ಯರ್‌ ಆರೋಪಿಸಿದ್ದರು

ನಿರ್ಮಲಾ ಸೀತಾರಾಮನ್‌ ಹಾಗೂ ಜಾರಿ ನಿರ್ದೇನಾಲಯದ ಅಧಿಕಾರಿಗಳು 2019 ರಿಂದ 2023 ರ ನವೆಂಬರ್‌ ಅವಧಿಯಲ್ಲಿ ಸಾಂವಿಧಾನಿಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಇತರೆ ಆರೋಪಿಗಳ ಜತೆ ಒಳಸಂಚು ನಡೆಸಿ ಬಹುರಾಷ್ಟ್ರೀಯ ಹಾಗೂ ಕಾರ್ಪೋರೇಟ್‌ ಕಂಪನಿಗಳನ್ನು ಬೆದರಿಸಿ ಚುನಾವಣಾ ಬಾಂಡ್‌ ಹೆಸರಿನಲ್ಲಿ ಸುಮಾರು 8,000 ಕೋಟಿ ರೂ.ಗಳನ್ನು ಬಲವಂತವಾಗಿ ಸುಲಿಗೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.

ಸಚಿವೆ ನಿರ್ಮಲಾ ಸೀತಾರಾಮನ್‌ ಸೂಚನೆಯಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಾರ್ಪೊರೇಟ್‌ ಕಂಪೆನಿಗಳ ಮೇಲೆ ದಾಳಿ ನಡೆಸಿ ಹಲವು ಮುಖ್ಯಸ್ಥರನ್ನು ಬಂಧಿಸಿದ್ದರು. ಈ ದಾಳಿಗಳಿಗೆ ಹೆದರಿದ ಕಂಪನಿಗಳ ಮುಖ್ಯಸ್ಥರು ನೂರಾರು ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿ ಮಾಡಿದ್ದರು. ಈ ಮೂಲಕ ಬಿಜೆಪಿ ರಾಷ್ಟ್ರ ಘಟಕ ಹಾಗೂ ರಾಜ್ಯ ಘಟಕ ಲಾಭ ಪಡೆದಿದೆ ಎಂದು ಆರೋಪಿಸಲಾಗಿತ್ತು.

(ವರದಿ: ಎಚ್.ಮಾರುತಿ, ಬೆಂಗಳೂರು)

Whats_app_banner