Bakrid 2023: ತ್ಯಾಗ ಹಾಗೂ ಹಂಚಿ ತಿನ್ನುವ ಮನೋಭಾವ ಕಲಿಸುವ ಕುರ್ಬಾನಿ
Eid-ul-adha: ಕುರ್ಬಾನಿ ತ್ಯಾಗ ಮನೋಭಾವದ ಜೊತೆಗೆ ಹಂಚಿ ತಿನ್ನುವ ಮನೋಭಾವ, ಬಡವರಿಗೆ ನೆರವಾಗುವ ಮನೋಭಾವ, ಸಂಬಂಧಿಕರು ಹಾಗೂ ನೆರೆಹೊರೆಯವರೊಂದಿಗೆ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ 'ಕುರ್ಬಾನಿ' ಒಂದು ಉತ್ತಮ ಧಾರ್ಮಿಕ ಪ್ರಕ್ರಿಯೆ ಆಗಿದೆ.
ವಿಜಯಪುರ: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕುರ್ಬಾನಿ ಪ್ರಾಮುಖ್ಯವಾದ ಸ್ಥಾನ ಪಡೆದಿದೆ. ಕುರ್ಬಾನಿ ಎಂದರೆ ತ್ಯಾಗ. ಹಬ್ಬದ ಶುಭ ಸಂದರ್ಭದಲ್ಲಿ ಆಡುಗಳನ್ನು ಬಲಿ ನೀಡಲಾಗುತ್ತದೆ. ಈ ಕುರ್ಬಾನಿ ಭಗವಂತನಿಗಾಗಿ ತ್ಯಾಗ ಮಾಡುವುದು. ಈ ಕುರ್ಬಾನಿ ನೀಡಲಾದ ಪ್ರಾಣಿಯ ಮಾಂಸವನ್ನು ಕೇವಲ ಸ್ವಾರ್ಥಕ್ಕಾಗಿ ಉಪಯೋಗಿಸದೇ ನೆರೆ ಹೊರೆ, ಸಂಬಂಧಿಕರು ಹಾಗೂ ಬಡವರಿಗೆ ಹಂಚಿ ತಿನ್ನಬೇಕು ಎಂಬ ಕಡ್ಡಾಯ ನಿಯಮವಿದೆ. ಹೀಗಾಗಿ ಕುರ್ಬಾನಿ ತ್ಯಾಗ ಮನೋಭಾವದ ಜೊತೆಗೆ ಹಂಚಿ ತಿನ್ನುವ ಮನೋಭಾವ, ಬಡವರಿಗೆ ನೆರವಾಗುವ ಮನೋಭಾವ, ಸಂಬಂಧಿಕರು ಹಾಗೂ ನೆರೆಹೊರೆಯವರೊಂದಿಗೆ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ 'ಕುರ್ಬಾನಿ' ಒಂದು ಉತ್ತಮ ಧಾರ್ಮಿಕ ಪ್ರಕ್ರಿಯೆ ಆಗಿದೆ.
ಅಲ್ಲಾಹನು ನಿರೀಕ್ಷಿಸುವ ಭಕ್ತಿ ಮತ್ತು ಸಲ್ಲಿಕೆ ಮಟ್ಟವನ್ನು ಪ್ರದರ್ಶಿಸಿದ ಇಬ್ರಾಹಿಂ (ಎಎಸ್) ಅವರು ಮಾಡಲು ಸಿದ್ಧಪಡಿಸಿದ ತ್ಯಾಗವನ್ನು ಮುಸ್ಲಿಮರು ಕುರ್ಬಾನಿ ಗೌರವಿಸುತ್ತಾರೆ. ವಿಧೇಯತೆಯ ಕ್ರಿಯೆಯ ಜೊತೆಗೆ, ಕುರ್ಬಾನಿಯು ದಾನದ ಕಾರ್ಯ ಹಾಗೂ ಇಸ್ಲಾಂ ಧರ್ಮದ ಕರ್ತವ್ಯಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅರ್ಪಣೆ ಮಾಡಲಾದ ಪ್ರಾಣಿಯ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಬೇಕು. ಮೊದಲ ಮೂರನೇ ಒಂದು ಪಾಲು ಕುಟುಂಬಕ್ಕೆ, ಎರಡನೆಯ ಪಾಲನ್ನು ಸಂಬಂಧಿಕರು, ನೆರೆಹೊರೆಯವರು ಮತ್ತು ಸ್ನೇಹಿತರಿಗೆ ಹಾಗೂ ಮೂರನೇ ಒಂದು ಭಾಗದಷ್ಟು ಪಾಲನ್ನು ನಿರ್ಗತಿಕರಿಗೆ ಮತ್ತು ಬಡವರಿಗೆ ಹಂಚಬೇಕು ಎಂಬ ನಿಯಮವಿದೆ. ಈ ನಿಯಮವೇ ಬಾಂಧವ್ಯ ಬೆಸೆಯುವ ಹಾಗೂ ಬಡವರಿಗೆ ನೆರವಾಗುವುದನ್ನು ಕಲಿಸುತ್ತದೆ.
ಕುರ್ಬಾನಿ, ಹಜ್, ವಾಜಿಬ್ ನಮಾಜ್ ಹೀಗೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಈ ಆಚರಣೆಗೆ ತಮ್ಮದೇ ಆದ ಪ್ರಾಮುಖ್ಯತೆ ಪಡೆದುಕೊಂಡಿವೆ. ಕುರ್ಬಾನಿ ಹಾಗೂ ಹಜ್ ಎರಡು ಸಹ ಸ್ಥಿತಿವಂತರಿಗೆ ಸೀಮಿತವಾಗಿವೆ, ಆದರೆ ಕುರ್ಬಾನಿಯ ಒಂದು ಪಾಲು ಕಡ್ಡಾಯವಾಗಿ ಬಡವರಿಗೆ ಸೇರಬೇಕು.
ಕುರ್ಬಾನಿಗೆ ಹಲವು ನಿಯಮಗಳು
ಕುರ್ಬಾನಿಗೆ ಇವಷ್ಟೇ ಅಲ್ಲದೇ ಅನೇಕ ರೀತಿಯ ನಿಯಮ ಹಾಗೂ ನಿಬಂಧನೆಗಳು ಸಹ ಇವೆ, ಸಯೀ ಹದೀಸ್ ಮೊದಲಾದವುಗಳಲ್ಲಿಯೂ ಈ ನಿಯಮಗಳ ಬಗ್ಗೆ ಉಲ್ಲೇಖಗಳಿವೆ. ಅದರನ್ವಯ ತ್ಯಾಗಕ್ಕೆ ಆಯ್ಕೆ ಮಾಡಲಾದ ಪ್ರಾಣಿಯ ಮಾಂಸ, ಚರ್ಮ ಅಥವಾ ಕೊಬ್ಬು ಹೀಗೆ ಯಾವುದನ್ನು ಹಣಕ್ಕೆ ಮಾರಾಟ ಮಾಡುವ ಅವಕಾಶವೇ ಇಲ್ಲ, ಒಂದು ವೇಳೆ ಅದನ್ನು ಮಾರಿದರೆ ಅದು ತ್ಯಾಗ ಎನಿಸಿಕೊಳ್ಳುವುದಿಲ್ಲ, ಆದರೆ ಉಡುಗೊರೆ ರೂಪದಲ್ಲಿ ಇದನ್ನು ನೀಡಲು ಸ್ಪಷ್ಟ ಅವಕಾಶವಿದೆ.
ಕುರ್ಬಾನಿಗೆ ಟಗರು, ಒಂಟೆ, ಆಡು ಮೊದಲಾದ ಪ್ರಾಣಿಗಳ ಅವಕಾಶವಿದೆ, ಕುರ್ಬಾನಿಗಾಗಿ ಆಯ್ಕೆ ಮಾಡಲಾದ ಪ್ರಾಣಿಗಳು ಆರೋಗ್ಯವಾಗಿರಬೇಕು ಮತ್ತು ಉತ್ತಮ ಆಹಾರವಾಗಿರಬೇಕು.
ಪ್ರಾಣಿಗಳನ್ನು ಇತರೆ ಕೆಲಸಕ್ಕೆ ಬಳಸಬಾರದು ಅಥವಾ ಸವಾರಿ ಮಾಡಬಾರದು, ಅದನ್ನು ಅರ್ಪಣೆ ಮಾಡುವ ಸಂದರ್ಭದಲ್ಲಿಯೂ ಸಹ ವ್ಯವಸ್ಥಿತ ವಿಧಾನ (ಹಲಾಲ್) ಅನುಸರಿಸೇಕು, ಇದರಿಂದ ಪ್ರಾಣಿಗೂ ಯವ ರೀತಿಯ ನೋವಿನ ವೇದನೆ ಅನುಭವಿಸಬಾರದು ಎಂದು ಅರ್ಪಣೆ ಮಾಡಲಾಗುವ ಪ್ರಾಣಿಗಳ ಹಿತದ ಬಗ್ಗೆಯೂ ಉಲ್ಲೇಖವಿದೆ.
ಕುರಿ ಮತ್ತು ಮೇಕೆಗಳಿಗೆ ಒಂದು ವರ್ಷದ ವಯಸ್ಸಿನಲ್ಲಿ (ಒಬ್ಬ ವ್ಯಕ್ತಿಯ ಕುರ್ಬಾನಿ ಹಂಚಿಕೆಗೆ ಸಮನಾಗಿರುತ್ತದೆ), ಹಸುಗಳು ಮತ್ತು ಎಮ್ಮೆಗಳಿಗೆ ಎರಡು ವರ್ಷ ವಯಸ್ಸು (ಏಳು ಜನರ ಕುರ್ಬಾನಿ ಹಂಚಿಕೆಗೆ ಸಮ), ಒಂಟೆಗಳಿಗೆ ಐದು ವರ್ಷ ವಯಸ್ಸು (ಏಳು ವ್ಯಕ್ತಿಗಳ ಕುರ್ಬಾನಿ ಹಂಚಿಕೆಗೆ ಸಮಾನವಾಗಿದೆ) ಎಂಬ ನಿಯಮಗಳು ಸಹ ರೂಪಿತವಾಗಿವೆ, ತ್ಯಾಗಕ್ಕಾಗಿ ಆಯ್ಕೆಮಾಡಿದ ಯಾವುದೇ ಪ್ರಾಣಿಯು ಉತ್ತಮ ಆರೋಗ್ಯವನ್ನು ಹೊಂದಿರಬೇಕು ಮತ್ತು ಯಾವುದೇ ಕಾಯಿಲೆ ಅಥವಾ ರೋಗವನ್ನು ಹೊಂದಿರುವದನ್ನು ಕಡ್ಡಾಯವಾಗಿ ನೋಡಿಕೊಳ್ಳಬೇಕು, ಪ್ರಾಣಿಗಳ ಕೊಂಬುಗಳನ್ನು ಮುರಿದು ಹಿಂಸೆ ಮಾಡುವುದಕ್ಕೆ ಅವಕಾಶವಿಲ್ಲ, ಅವರು ಕನಿಷ್ಠ ಅರ್ಧದಷ್ಟು ಹಲ್ಲುಗಳನ್ನು ಹೊಂದಿರಬೇಕು, ತ್ಯಾಗ ಮಾಡುವ ಪ್ರಾಣಿಗಳ ಆರೋಗ್ಯ, ಆಹಾರದ ಬಗ್ಗೆಯೂ ಯೋಚಿಸಬೇಕು ಎಂದು ಹೇಳಲಾಗಿದೆ. ಅರ್ಪಣೆಗೆ ತರಲಾದ ಪ್ರಾಣಿಗಳಿಗೆ ಚೆನ್ನಾಗಿ ತಿನ್ನಿಸದೇ ಇದ್ದರೆ, ಅದನ್ನು ಚೆನ್ನಾಗಿ ಪೋಷಿಸದೇ ಇದ್ದರೆ ಅಥವಾ ಆರೋಗ್ಯ ಕೈಕೊಟ್ಟಾಗ ಚೆನ್ನಾಗಿ ಆರೈಕೆ ಮಾಡದೇ ಹೋದರೆ ಅದು ಸಹ ಕುರ್ಬಾನಿ ಎನಿಸುವುದಿಲ್ಲ. ಅರ್ಪಣೆ ಮಾಡುವ ಪ್ರಾಣಿಯನ್ನು ಅತ್ಯಂತ ಜತನದಿಂಧ ನೋಡಿಕೊಳ್ಳಬೇಕು ಎಂಬ ನಿಯಮವೂ ಸಹ ಇದೆ.
ಕುರ್ಬಾನಿಯನ್ನು ಅಲ್ಲಾಹನ ಸ್ವೀಕಾರವನ್ನು ತಲುಪುವ ರೀತಿಯಲ್ಲಿ ಮಾಡಬೇಕು. ಉದಾಹರಣೆಗೆ, ಒಬ್ಬ ವ್ಯಕ್ತಿಯು ತಮ್ಮ ಕುರ್ಬಾನಿಗಾಗಿ ಒಂದು ಕುರಿಯನ್ನು ಮಾತ್ರ ಖರೀದಿಸಲು ಶಕ್ತರಾಗಿದ್ದರೆ, ಅವರು ಒಂದೇ ಬಾರಿಗೆ ಎರಡು ಅಥವಾ ಹೆಚ್ಚಿನ ಕುರಿಗಳ ಬಲಿ ಮಾಡಬಾರದು.
ಈದ್-ಉಲ್-ಅದಾ ಎಂದು ಕರೆಯಿಸಿಕೊಳ್ಳುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಹೊಸ ಬಟ್ಟೆ ತೊಟ್ಟು ವಾಜಿಬ್ ನಮಾಜ್ ಸಲ್ಲಿಸುತ್ತಾರೆ. ಅರ್ಪಣೆ ಮಾಡಲಾಗಿರುವ ಪ್ರಾಣಿಯ ಮಾಂಸವನ್ನು ವ್ಯವಸ್ಥಿತವಾಗಿ ಪ್ಯಾಕ್ ಮಾಡಿ ಹಂಚುವ ಕಾರ್ಯದಲ್ಲಿ ಮಗ್ನರಾಗುತ್ತಾರೆ. ಬಡವರು ಸಹ ಈ ಮಾಂಸವನ್ನು ಕೃತಾರ್ಥ ಭಾವದಿಂಧ ಸ್ವೀಕರಿಸಿ ಭಕ್ಷ್ಯ ಭೋಜನಗಳನ್ನು ಮಾಡಿ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಾರೆ.