ಒಂದು ಕೈಲಿ ಬ್ಯಾಗು, ಇನ್ನೊಂದಲ್ಲಿ ತಿನಿಸು ಹಿಡ್ಕೊಂಡು ಬೆರಗಾಗುತ್ತ ಸುತ್ತಾಡಿಸೋ ಇದು ಕನ್ನಡ ಸಾಹಿತ್ಯ ಸಮ್ಮೇಳನವಲ್ಲ, ಕನ್ನಡಿಗರ ಹಬ್ಬ ಅಷ್ಟೆ
Mandya Sahitya Sammelana: ಜಾತ್ರೆಯುದ್ದಕ್ಕೂ ಒಂದು ಕೈಲಿ ಬ್ಯಾಗು ಇನ್ನೊಂದು ಕೈಲಿ ಹಾಳು ಮೂಳು ತಿಂದ್ಕೊಂಡು ತಿರಿಕ್ಕೊಂಡು ಬೆರಗಾಗುವಂತೆ ಮಾಡುತ್ತ ಸುತ್ತಾಡಿಸೋ ಇದು ಕನ್ನಡ ಸಾಹಿತ್ಯ ಸಮ್ಮೇಳನವಲ್ಲ, ಕನ್ನಡಿಗರ ಹಬ್ಬ ಅಷ್ಟೆ ಎನ್ನುತ್ತ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನದ ಅನುಭವವನ್ನು ಹಂಚಿಕೊಂಡಿದ್ದಾರೆ ಲೇಖಕ ಮಧು ವೈಎನ್.
Mandya Sahitya Sammelana: ಅದೇನು ಜನ ಯಪ್ಪಾ. ಸಂಜೆ ಏಳು ಗಂಟೆಯಾದರೂ ನದಿ ಥರ ಹರಿದು ಬರ‍್ತಾ ಇದಾರೆ. ಮೂರು ದಿವಸಗಳಲ್ಲಿ ಒಂದ್ಹತ್ತು ಲಕ್ಷ ಜನ ಬಂದು ಹೋಗಿರ‍್ತಾರೆ ಅಂತ ನನ್ನ ಲೆಕ್ಕಾಚಾರ. ಮತ್ತು ಎಲ್ಲರ ಮೊಗದಲ್ಲೂ ಸಂಭ್ರಮದ ಕಳೆ. ಇದು ನಿಜವಾಗಿಯೂ ಸಾಹಿತ್ಯ ಸಮ್ಮೇಳನವಲ್ಲ. ಕನ್ನಡಿಗರ ಹಬ್ಬ ಅಷ್ಟೇ. ದಸರಾಗೆ ಸಡ್ಡು ಹೊಡೆಯುತ್ತೇನೋ ಅನ್ನುವಷ್ಟು ಜನ, ಮಳಿಗೆಗಳು. ಮುಂಚಿಂದಲೂ ಸಾಹಿತ್ಯ ಆಂಕರ್ ಆಗಿದ್ದಿದ್ದರಿಂದ ಅದೇ ಮುಂದುವರೆದಿದೆ ಅನ್ಸುತ್ತೆ.
ಅಂದ್ರೇ ಏನೇನೋ ಇದೆ ಹೋಗತ್ಲಾಗೆ. ಜಗತ್ತಲ್ಲಿ ಇಂಥದೆಲ್ಲ ಇದ್ಯಾ ಅಂತ ನಂಗೆ ಆಶ್ಚರ್ಯ. ಎಳನೀರು ತೂತಿಡುವ ಮಶೀನು. ಸಹಕಾರಿ ಸಂಘದವರು ತಯಾರಿಸಿದ ತಿಂಡಿ, ಬನ್ನೂರು ಕುರಿ (ಜೀವಂತ! ಪ್ರದರ್ಶನಕ್ಕೆ. ಅವಕ್ಕೆ ಅಯ್ ನಮ್ಮನ್ನ ನೋಡಕ್ಕೆ ಎಷ್ಟೊಂದ್ ಜನ ಬಂದಿದಾರೆ ಅಂತ ಖುಷಿ), ಎಂಬ್ರಾಯ್ಡರಿ ಮಶೀನು, ಗುಲ್ಕನ್ ಡಬ್ಬಿ, ಕಲ್ಬುಗ್ರಿ ಚಪ್ಪಲಿ. ಇದೆಲ್ಲಾ ವಾಣಿಜ್ಯ ಮಳಿಗೆ ಆಯ್ತು.
ಈ ಕಡೆ ಸಾಹಿತ್ಯ ಮಳಿಗೆಯಲ್ಲೂ ಹಂಗೆ. ಬರೆದು ಅಳಿಸುವ ಮ್ಯಾಜಿಕ್ ನೋಟ್‌ಬುಕ್ಕು, ಕನ್ನಡ ಕರೆನ್ಸಿ ನೋಟು, ಕನ್ನಡ ಟೀಶರ್ಟು, ಕನ್ನಡ ಕ್ಯಾಲೆಂಡರು, ಇಸ್ಕಾನ್ ಪುಸ್ತಕಗಳು, ಅದರೆದ್ರಿಗೆ ಅಂಬೇಡ್ಕರ್ ಪುಸ್ತಕಗಳು. ವಿಶ್ವೇಶ್ವರ್ ಭಟ್ ಪುಸ್ತಕಗಳು ಅದರೆದ್ರಿಗೆ ಹಾರ್ಡ್ ಕೋರ್ ಲೆಫ್ಟಿಸ್ ಪುಸ್ತಕಗಳು. ಸ್ವಲ್ಪ ವಿಶ್ವಾತ್ಮಕವಾಗಿ ಹಬ್ಬಿದ್ದೆಂದರೆ ಕುವೆಂಪು ತೇಜಸ್ವಿ ಕಾರಂತರು ಮಾತ್ರ. ಆಲ್ಮೋಸ್ಟ್ ಎಲ್ಲಾ ಮಳಿಗೆಗಳಲ್ಲೂ ರಾರಾಜಿಸುತ್ತಿದ್ದರು.
ಮತ್ತು ನಮ್ಮ ಪೋಲೀಸರು. ಪಾಪಚಿ. ಹೆಂಗಿದ್ರೂ ಕನ್ನಡದ ಜನ ಅಲ್ವಾ ನಿರುಪದ್ರವಿಗಳು, ಏನೂ ತೊಂದ್ರೆ ಕೊಡಲ್ಲ ಅಂತೇನೋ. ಮಧ್ಯಾಹ್ನಕ್ಕೇ ಭರ್ತಿಯಾಗಿದ್ರು. (ಕೆಲವರು).
ಸಾಹಿತ್ಯ ಸಮ್ಮೇಳನವಲ್ಲ. ಕನ್ನಡಿಗರ ಹಬ್ಬ ಅಷ್ಟೇ
ನಾನೂ ಏನೇನೋ ತಗೊಂಡೆ. ಕರ‍್ಣಾಟ ಬಲ ಅಂತ ಟಿಶರ್ಟ್ ಅಂಗಡಿ. ಸಕತ್ತಾಗಿದ್ವು. ಮೂರು ಟಿಶರ್ಟ್ ಎತ್ತಾಕ್ಕೊಂಡೆ. ಟೊಟಲ್ ಕನ್ನಡದವರು ಕನ್ನಡ ಲಿಪಿಯಲ್ಲಿನ ಕ್ಯಾಲೆಂಡರ್ ಇಟ್ಟಿದ್ರು. ಒಳಗಾಕ್ಕೊಂಡೆ. ಇನ್ಯಾರೋ ಕನ್ನಡದಲ್ಲಿರುವ ಕರೆನ್ಸಿ ತಯಾರಿಸಿದ್ರು. ಸುಮ್ನೆ ಕಲ್ಪನೆಯದ್ದಲ್ಲ. ಮಾಹಿತಿಪೂರ್ಣ ನೋಟು. ಸಕ್ಕತ್ ಐಡಿಯಾ ಅದು. ಬೆಸಗರಳ್ಳಿ ರಾಮಣ್ಣನವರ ವೈಚಾರಿಕ ಲೇಖನಗಳ ಪುಸ್ತಕ ಕಾಣಿಸ್ತು. ಎತ್ಗೊಂಡೆ.
ಹಂಗೇ ಹೊರಗೆ ಬಂದು ಕ್ಯಾರೆಟ್ಟು ಸೌತೆಕಾಯಿ ತುರಿ ಖಾರ ಕಡ್ಲೆನೆಲ್ಲ ಜಾಸ್ತಿ ಜಾಸ್ತಿ ಹಾಕಿಸಿಕೊಂಡು ಭರ್ತಿ ಎರಡು ಚುರುಮುರಿ ಹೊಡೆದೆ. ಒಂದು ಕೋನ್ ಜೋಳ ತಿಂದೆ. ನಮ್ಮ ನಂದಿನಿ ಬ್ರಾಂಡಿನ ಕುಡಿಕೆಯಲ್ಲಿರೊ ಐಸ್ ಕ್ರೀಮ್ ಎಳ್ಕೊಂಡೆ. ಎರಡು ಲೋಟ ಮಂಡ್ಯದ ಕಬ್ಬಿನ ಹಾಲು.
ಈ ಜಾತ್ರೆಯಲ್ಲಿ ನಿಮಗೆ ಯಾರೂ ಪರಿಚಯದವರು ಸಿಗಲ್ಲ ಕಾಣ್ಸಲ್ಲ. ಅದೆಲ್ಲ ನಂಬ್ಕೆ ಇಟ್ಕೊಂಡು ಹೋಗಬಾರದು. ಬಟ್ ಅದೇ ಒಳ್ಳೇದು. ನನಗಂತೂ ಅಜ್ಞಾತನಾಗಿದ್ದುಕೊಂಡು ಜಾತ್ರೆಯುದ್ದಕ್ಕೂ ಒಂದು ಕೈಲಿ ಬ್ಯಾಗು ಇನ್ನೊಂದು ಕೈಲಿ ಹಾಳು ಮೂಳು ತಿಂದ್ಕೊಂಡು ತಿರಿಕ್ಕೊಂಡು ಬೆರಗಾಗಿ ನೋಡ್ಕೊಂಡು.. ಹಬ್ಬವೋ ಹಬ್ಬ.
ಈ ಜನ ಇದಾರಲ್ಲ- ಇವರು ಕನ್ನಡದ ಜನ. ಬರೀ ಬೆಂಗ್ಳೂರಲ್ಲಿರೋರಲ್ಲ. ಎಲ್ಲೆಲ್ಲಿಂದಲೋ ಬಸ್ ತುಂಬ್ಕೊಂಡು ಬಂದಿದ್ರು. ಕರಾವಳಿ ಬೆಲ್ಟಿನವರು ಮಾತ್ರ ಇರಲಿಲ್ಲ ಅನ್ಸುತ್ತೆ. ಯಾಕೊ ಗೊತ್ತಿಲ್ಲಪ್ಪ. ಕರ್ನಾಟಕ ಇರೋವರೆಗೂ ಈ ಹಬ್ಬ ಇರಬೇಕು. ಹೋಗ್ತಾ ಹೋಗ್ತಾ ಇನ್ನಷ್ಟು ರಂಗೇರಬೇಕು.
ಜಾತ್ರೆ ಅಂದ್ಮೇಲೆ ಕೇಳಬೇಕಾ ಅವ್ಯವಸ್ಥೆಗಳ ಅನುಭವವೂ ಇತ್ತು
ಅವ್ಯವಸ್ಥೆಗಳೂ.. ಎಂದಿನಂತೆ ಅವೂ ಇದ್ದವು. ಅಂದ್ರೆ ಜನಕ್ಕೆ ವೇದಿಕೆ ಕಂಡ್ರೆ ಅದೇನು ಖುಷಿನೋ ಹತ್ತಿ ನಿಂತ್ಗೊಂಬಿಡೋರು. ನಂಗೆ ಅದು ತುಂಬಾ ಕ್ಯೂಟ್ ಅನ್ಸೊದು. ಈ ಸಣ್ ಮಕ್ಕಳು ಯಾರನ್ನೂ ಹೇಳ್ದೆ ಕೇಳ್ದೆ ವೇದಿಕೆ ಹತ್ಬಿಡ್ತಾರಲ್ಲ ಹಂಗೆ. ಮತ್ತೂ ಕವಿತೆಗಳು. ಕವಿತೆಗಳೋ ಕವಿತೆಗಳು. ಅದೂ ಒಂಥರ ಕ್ಯೂಟ್ ಅನ್ಸೋದು. ಅಂದ್ರೇ ರಾಗವಾಗಿ ಶುರು ಮಾಡ್ತಾರೆ… ಅದೊಂದು ಟೋನ್ ಇದೆ ಕವಿಗಳದ್ದು. ಮೂಗಿಂದ ಹೊರಗೆ ಬರುತ್ತೆ ಕವನ. ಮತ್ ಮತ್ತೆ ಹೇಳ್ತಿರ‍್ತಾರೆ… ನಂಗೆ ಈಗೀಗ ಬಲೆ ಮಜಾ ಬರುತ್ತೆ. ಈ ಪೇದೆಗಳು ಅದಿಕ್ಕೆ ಟೈಟಾಗಿ ನಿಂತಿದ್ದು ಅನ್ಸುತ್ತೆ.
ಆಮೇಲೆ ಈ ಲೆಟ್ರಿನ್ನುಗಳು. ಅಬಬಬ ಏನ್ ತಲೆ ಏನ್ ತಲೆ. ಇನ್ನೇನಿಲ್ಲ. ಜಾತ್ರೆಯ ಅಂಚಿನಲ್ಲಿ ಗೆರೆ ಎಳೆದಂಗೆ ಗುಂಡಿ ಹೊಡೆದಿದಾರೆ. ಅದರ ಮೇಲೆ ಹಲಗೆ ಜೋಡ್ಸಿದಾರೆ. ಹಲಗೆ ಸುತ್ತ ಶೆಡ್ ಕಟ್ಟಿದಾರೆ. ಅರ್ಥಾತ್ ಹಲಗೆ ಮೇಲೆ ಕೂತ್ಗೊಂಡು ಗುಂಡಿಲಿ ಬೀಳ್ಸಿ ಎದ್ ಬರಬೇಕು. ನಾನು ಒಳಗೆ ಹೋಗಿರ‍್ಲಿಲ್ಲ ಆದ್ದರಿಂದ ತೊಳ್ಕೊಳಕೆ ಏನಿಟ್ಟಿದ್ರೊ ಗೊತ್ತಿಲ್ಲ. ಅದರ ಮೇಲೆ ಭರ್ತಿ ಡಿಡಿಟಿ ಪೌಡ್ರು ಹೊಡ್ದಿದಾರೆ. ಜಾತ್ರೆ ಮುಗಿದ್ ಕೂಡ್ಲೆ ಜೆಸಿಬಿ ತಂದು ಗುಂಡಿ ಮುಚ್ಚಿಸೋ ಸರಳ ಉಪಾಯ ಅಷ್ಟೇ.
ಆಮೇಲೆ ಆ ಸಮಾನಾಂತರ ವೇದಿಕೆಗಳು. ಅವು ಎಲ್ಲಿದಾವೆ ಅಂತಲೇ ಯಾರಿಗೂ ಗೊತ್ತಿಲ್ಲ. ಅದು ಗೊತ್ತಾಗಿಸುವ ಉದ್ದೇಶವೂ ಆಯೋಜಕರಿಗೆ ಇದ್ದಂತಿಲ್ಲ. ಮುಖ್ಯ ವೇದಿಕೆ ಒಂದು ಚನ್ನಾಗಿದ್ದರೆ ಸಾಕು. ಜನ ಅಲ್ಲಿಗೆ ಬಂದರೆ ಸಾಕು. ಸಂಪನ್ಮೂಲ ವ್ಯಕ್ತಿಗಳಿಗೆ ಒಂದು ಬ್ಯಾಡ್ಜು, ಒಂದು ಪಾಸು.. ಊಹ್ಞೂ.. ಅದೆಲ್ಲ ನಂಬ್ಕೆ ಇಟ್ಗೊಬೇಡಿ.
ನಂಗೊಂದು ಹೊಟೆಲ್ ರೂಂ ಬುಕ್ ಮಾಡಿದಾರೆ. ರಾಮನಗರದಲ್ಲಿ. ಇಲ್ಲಿ ಬಂದು ಕೇಳಿದರೆ ಹೊಟೆಲಿನವ ನಂಗೆ ಯಾರೂ ಅಡ್ವಾನ್ಸೇ ಕೊಟ್ಟಿಲ್ಲ. ನಿಮ್ಮನ್ನು ಯಾರು ಕಳಿಸಿದರೋ ಅವರನ್ನೇ ಹೋಗಿ ಕೇಳ್ಕೊಳಿ ಅಂತಾನೆ. ನನ್ನಂಗೇ ಇನ್ನೊಬ್ಬ ಹಿರಿಯ ಸಾಹಿತಿ, ಹೊಟೆಲ್ ರಿಸೆಪ್ಷನ್ನಲ್ಲಿ ನಿಂತುಗೊಂಡು. ಪಾಪ. ಆಮೇಲೆ ನೂರೆಂಟು ಕರೆಗಳು. ಹೆಂಗೋ ಅದು ಸಾಲ್ವ್ ಆಯ್ತು. ಜಗತ್ತಲ್ಲಿ ನೆಟ್ವರ್ಕಿಲ್ಲದ ಜಾಗವೇ ಇರಲ್ಲ ಅಂದ್ಕೊಂಡಿದ್ದೆ. ಇಲ್ಲೇ ಬೆಂಗ್ಳೂರು ಪಕ್ಕದಲ್ಲೇ ಈ ಥರದ ಜಾಗಗಳು ಇದಾವೆ!
ಇಷ್ಟು ಕತೆ. ನಾಳೆ ಏನೇನೇನೇನೋ ಕೊಂಡ್ಕೊಂಡು ಚೀಲ್ದಲ್ಲಿ ಹಾಕ್ಕೊಂಡು ಹೋಗೋಣ ಅಂದ್ಕೊಂಡಿದೀನಿ.
ಈ ಥರದ ಹುಡುಗರು ಇಷ್ಟ. ಇವರ ಜೀವನೋತ್ಸಾಹ ಇಷ್ಟ
ಹಾ ಮರೆತೆ-
ಈ ಹುಡುಗ ಮೌನೇಶ್ ಅಂತ ಕಲ್ಬುರ್ಗಿಯವನು. ಒಂದಿನ ಅಣ್ಣ ನನಗೂ ಬುಕ್ ಬರೆದು ಪಬ್ಲಿಷ್ ಮಾಡಬೇಕು ಅಂತ ಆಸೆ ಎಂದು ಫೋನ್ ಮಾಡಿದ್ದ. ಒಟ್ಟು ಪ್ರೊಸೀಜರು ಹೇಳಿ ಒಂದಿಬ್ಬರ ನಂಬರ್ ಕೊಟ್ಟು ಇಲ್ಲಿ ಕವರ್ ಮಾಡಿಸು ಇಲ್ಲಿ ಪ್ರಿಂಟ್ ಮಾಡಿಸು ಎಂದೆಲ್ಲ ಹೇಳಿದ್ದೆ. ಸುಮ್ನಾಗ್ತಾನೆ ಅಂದ್ಕೊಂಡಿದ್ದೆ. ಬುಕ್ ಮಾಡೇ ಬಿಟ್ಟಿದಾನೆ. ಶಾಲಾ ಅನುಭವಗಳ ಲೇಖನಗಳು. ಅವನ ವಯಸ್ಸಿಗೆ ಚನ್ನಾಗಿ ಬರೆದಿದಾನೆ. ಫನ್ ಇದೆ. ಬುಕ್ಕು ನೀಟಾಗಿ ಬಂದಿದೆ. ನಿಜ ಓದಲು ಅರ್ಹವಾಗಿದೆ. ಅಣ್ಣ ಸಮ್ಮೇಳನಕ್ಕೂ ಬಂದು ಮಾರ್ತೀನಿ ಅಂದಿದ್ದ. ಸ್ಟಾಲ್ ಹಾಕದೆ ಹೆಂಗೆ ಮಾರ‍್ತೀಯ ಅಂತ ಕೇಳಿದ್ದೆ. ಇವತ್ತು ಅಚಾನಕ್ಕಾಗಿ ಎದುರಾಗಿ ಅವನೇ ಗುರುತು ಹಿಡಿದು ಮಾತಾಡಿಸ್ದ. ಒಂದಷ್ಟು ಕಾಪಿಗಳನ್ನು ಕೈಲಿ ಹಿಡ್ಕೊಂಡು ಆ ಸ್ಟಾಲುಗಳ ಉದ್ದಕ್ಕೂ ಅಡ್ಡಾಡ್ತಾನೆ. ಯಾರಾದರೂ ಆಸಕ್ತರು ಕಂಡರೆ ಅವರಿಗೆ ಪರಿಚಯಿಸಿ ಮಾರ್ತಾನೆ.
ಎಲ್ಲಿಂದ ಬರುತ್ತೆ ಈ ಹುಮ್ಮಸ್ಸು? ಬರೆಯುವ, ಮಾರುವ, ಓದಿಸುವ ಹಂಬಲ? ಕಿಂಚಿತ್ ಘನತೆಗೆ ಧಕ್ಕೆಯೇನಾದರೂ ಆಗಿದೆಯೇ? ನಂಗೆ ಈ ಥರದ ಹುಡುಗರು ಇಷ್ಟ. ಇವರ ಜೀವನೋತ್ಸಾಹ ಇಷ್ಟ. ಇಂಥೋರು ಸಿಕ್ಕಿದ್ರೆ ಹೋಗ್ರೋ ಜಗತ್ತನ್ನ ಗೆದ್ದುಕೊಂಡು ಬನ್ನಿ ಅಂತೀನಿ.
- ಮಧು ವೈನ್, ಲೇಖಕ-ಕತೆ, ಕಾದಂಬರಿ, ವಿಜ್ಞಾನ, ತಂತ್ರಜ್ಞಾನ